Article Image

ನಾರಾವಿ: ಉಚಿತ ನೇತ್ರ ತಪಾಸಣಾ ಶಿಬಿರ

Article Image

ನಾರಾವಿ: ಉಚಿತ ನೇತ್ರ ತಪಾಸಣಾ ಶಿಬಿರ

ನಾರಾವಿ ಮಾಗಣೆ ಭ। ಧರ್ಮನಾಥ ಸ್ವಾಮಿ ಬಸದಿಯ ಶ್ರೀ ಅನಂತನೋಂಪಿಯ ವ್ರತಧಾರಿಗಳ ಮುಂದಾಳತ್ವದಲ್ಲಿ 15ನೇ ವರ್ಷದ ಶ್ರೀ ಅನಂತನೋಂಪಿ ಆರಾಧನಾ ಪ್ರಯುಕ್ತ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಸ್ಟ್ ಆಸ್ಪತ್ರೆ ಮಂಗಳೂರು - ಮೂಡಬಿದ್ರೆ ಮತ್ತು ನವಜ್ಯೋತಿ ಚಾರಿಟೇಬಲ್ ಟ್ರಸ್ಟ್ ಡಾ| ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ.), ಸೆಂಚೂರಿ ಗ್ರೂಪ್, ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವರಣಾ ವಿಭಾಗ) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ದಿನಾಂಕ 23-08-2026ನೇ ರವಿವಾರದಂದು ಧರ್ಮಶ್ರೀ ಸಭಾಭವನದಲ್ಲಿ ಬೆಳಿಗ್ಗೆ ಗಂ. 9-00ರಿಂದ ಮಧ್ಯಾಹ್ನ ಗಂ. 1-00ರವರೆಗೆ ನಡೆಯಲಿದೆ. ಶಿಖರದ ವಿಶೇಷತೆ: ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು. ಅಗತ್ಯವುಳ್ಳವರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಯಶಸ್ವಿನಿ, ಸಂಪೂರ್ಣ ಸುರಕ್ಷಾ, E.S.I. ಮತ್ತು ಎಲ್ಲಾ ನಗದು ರಹಿತ ಯೋಜನೆಗಳು ಲಭ್ಯ. ತಮ್ಮ ಕಣ್ಣಿನ ಹಾಗೂ ಇತರ ಆರೋಗ್ಯ ಸಮಸ್ಯೆಯನ್ನು ತಪಾಸಣಾ ಸಮಯದಲ್ಲಿ ವೈದ್ಯರಿಗೆ ತಿಳಿಸತಕ್ಕದ್ದು. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತುಪಡಿಸಿದ ದಿನಾಂಕದಂದು ಮಂಗಳೂರು ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ವಾಹನದಲ್ಲಿ ಕರೆದುಕೊಂಡು ಹೋಗಿ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿ ವಾಪಾಸು ಕರೆದು ತಂದು ಬಿಡಲಾಗುವುದು. ಅಗತ್ಯವುಳ್ಳವರಿಗೆ ರಿಯಾಯಿತಿ ದರದಲ್ಲಿ ಕನ್ನಡಕವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ಶಿಶುಪಾಲ್ ಜೈನ್-9449449967, ಅಶೋಕ್ ಕುಮಾರ್ - 6361293020, ಜಯವರ್ಮ ಜೈನ್- 9902213650, ಹರ್ಷೇಂದ್ರ ಕುಮಾರ್ - 9901862308, ಶೀತಲ್ ಕುಮಾರ್- 9901296744, ಯಶೋಧರ ಜೈನ್- 9900902239 ಮಧುಕರ್ ಕನ್ನಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ಪ್ರಸಾದ್ ನೇತ್ರಾಲಯ ಉಡುಪಿ- 9844761421 ವಿಶೇಷ ಸೂಚನೆ :- ಹೆಸರು ನೋಂದಾವಣೆಯು ಬೆಳಗ್ಗೆ ಗಂ. 8-45ಕ್ಕೆ ಆರಂಭವಾಗುತ್ತದೆ. 15 ನಿಮಿಷ ಮುಂಚಿತವಾಗಿ ಆಗಮಿಸುವುದು.

ಜೈನ್ ಮಿಲನ್ ಮಾಸಿಕ ಸಭೆ

Article Image

ಜೈನ್ ಮಿಲನ್ ಮಾಸಿಕ ಸಭೆ

ಕಾರ್ಕಳ: ಭಾರತೀಯ ಜೈನ್ ಮಿಲನ್ ಇದರ ಆಗಸ್ಟ್ ತಿಂಗಳ ಮಾಸಿಕ ಸಭೆಯು ತ್ಯಾಗಿ ಭವನದಲ್ಲಿ ಏಲಾಚಾರ್ಯ 108 ಪ್ರಸಂಗ ಸಾಗರ ಮಹಾರಾಜರ ಮತ್ತು ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಇವರ ಪಾವನ ಸಾನ್ನಿಧ್ಯದೊಂದಿಗೆ ನೆರವೇರಿತು. ಅತಿಥಿಗಳಾಗಿ ಆಗಮಿಸಿದ ವಲಯ 8 ರ ನಿರ್ದೇಶಕರಾದ ಶ್ವೇತಾ ಜೈನ್ ವಕೀಲರು, ಮೂಡಬಿದ್ರೆ ಇವರು ಮುನಿಧರ್ಮ ಮತ್ತು ಶ್ರಾವಕ ಧರ್ಮದ ಬಗ್ಗೆ ಮಾತನಾಡುತ್ತಾ ಮುನಿ ಪರಂಪರೆ ಶ್ರೇಷ್ಠವಾದದ್ದು, ಶ್ರಾವಕರಾದವರು ಮುನಿಗಳ ಸೇವೆಯಲ್ಲಿ ತೊಡಗಿ ಪುಣ್ಯ ಸಂಪಾದನೆ ಮಾಡಬೇಕು ಎಂದು ಹೇಳಿದರು. ನಂತರ ನೂತನ ವಲಯ ನಿರ್ದೇಶಕರಾದ ಎನ್ ಪ್ರಭಾತ್ ಕುಮಾರ್ ಇವರಿಗೆ ಅಧ್ಯಕ್ಷರು ಶಾಲು ಹೊದಿಸಿ ಗೌರವಿಸಿದರು. ಆಗಸ್ಟ್ ತಿಂಗಳಲ್ಲಿ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದವರಿಗೆ ಶುಭಾಶಯ ಕೋರಲಾಯಿತು. ಅಶೋಕ್ ಎಚ್ ಎಂ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ನಂತರ ಮುನಿ ಮಹಾರಾಜರಿಗೆ ಮತ್ತು ಸ್ವಾಮೀಜಿಯವರಿಗೆ ಪಾದ ಪೂಜೆಯೊಂದಿಗೆ ಜಿನಾವಾಣಿಯನ್ನು ಸಮರ್ಪಿಸಲಾಯಿತು. ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಪಂಚಮ ಕಾಲದಲ್ಲಿ ನಿರ್ಗ್ರಂಥ ಮುನಿಗಳು ನಮ್ಮ ಊರಿಗೆ ಬಂದು ಚಾತುರ್ಮಾಸ ಮಾಡುವುದು ಸೌಭಾಗ್ಯವೇ ಸರಿ. ತಾವೆಲ್ಲ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು. ನಂತರ ಪರಮಪೂಜ್ಯ ಪ್ರಸಂಗ ಸಾಗರ ಮುನಿ ಮಹಾರಾಜರ ಧಾರ್ಮಿಕ ಪ್ರವಚನ ನಡೆಯಿತು. ವೀಕ್ಷಿತ ಏ ಜೈನ್ ಹಾಗೂ ರಿಧಿ ಜೈನ್ ಪ್ರಾರ್ಥಿಸಿದರು. ಕಾರ್ಯದರ್ಶಿಯಾದ ವಸಂತ್ ಕುಮಾರ್ ಬಂಗ ರವರು ಸ್ವಾಗತಿಸಿದರು.

ವೇಣೂರು: ಕರಾವಳಿ ಮಿಲನೋತ್ಸವ

Article Image

ವೇಣೂರು: ಕರಾವಳಿ ಮಿಲನೋತ್ಸವ

ಉಜಿರೆ: ಜೈನರು ಅಲ್ಪಸಂಖ್ಯಾತರಾದರೂ, ಸತ್ಯ, ಧರ್ಮ ಮತ್ತು ಅಹಿಂಸೆಯ ಪರಿಪಾಲನೆಯೊಂದಿಗೆ ದಕ್ಷನಾಯಕತ್ವ, ಆದರ್ಶ ಆಹಾರ-ವಿಹಾರ, ಆಚಾರ-ವಿಚಾರಗಳೊಂದಿಗೆ ಉತ್ತಮ ಜೀವನಶೈಲಿ, ಎಲ್ಲರೊಂದಿಗೂ ಪ್ರೀತಿ-ವಿಶ್ವಾಸದಿಂದ ಹೃದಯ ಶ್ರೀಮಂತಿಕೆಯೊಂದಿಗೆ ಮುಕ್ತವಾಗಿ ಬೆರೆತು, ಸಾಮಾಜಿಕ ಬದ್ಧತೆ ಮತ್ತು ಸೇವಾಕಳಕಳಿಂದಾಗಿ ಉತ್ತಮ ಸ್ಥಾನ-ಮಾನ ಹೊಂದಿದ್ದಾರೆ. ಎಲ್ಲರಿಂದಲೂ ಗೌರವ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ ಎಂದು ಭಾರತೀಯ ಜೈನ್‌ಮಿಲನ್ ವಲಯ-8ರ ಉಪಾಧ್ಯಕ್ಷರಾದ ಸುದರ್ಶನ್ ಜೈನ್ ಬಂಟ್ವಾಳ ಹೇಳಿದರು. ಅವರು ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಬೆಳ್ತಂಗಡಿ ಜೈನ್‌ಮಿಲನ್ ಆಶ್ರಯದಲ್ಲಿ ಆಯೋಜಿಸಿದ ಮಾಸಿಕ ಸಭೆ ಮತ್ತು ಆಹಾರೋತ್ಸವ ಉದ್ಘಾಟಿಸಿ ಜೈನ ಸಮುದಾಯದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಕೃತಿಯ ಮಡಿಲಲ್ಲಿ ಹೇರಳವಾಗಿ ದೊರಕುವ ನೆಲ್ಲಿಕಾಯಿ, ಕೆಸು, ನುಗ್ಗೆ, ಹರಿವೆಸೊಪ್ಪು, ಮಾವು ಮೊದಲಾದ ಪೌಷ್ಠಿಕ ವಸ್ತುಗಳ ಬಳಕೆ ಮತ್ತು ಮಹತ್ವದ ಬಗ್ಗೆ ಅರಿವು, ಜಾಗೃತಿ, ಮೂಡಿಸುವುದೇ ಆಹಾರೋತ್ಸವದ ಉದ್ದೇಶವಾಗಿದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಸೇವಾಸಂಸ್ಥೆಯಾದ ಭಾರತೀಯ ಜೈನ್‌ಮಿಲನ್ ಆಶ್ರಯದಲ್ಲಿ ಅಲ್ಲಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಿನಭಜನಾ ಸ್ಪರ್ಧೆ ಆಯೋಜಿಸಿ ಸಮಾಜದ ಸಂಘಟನೆಯೊಂದಿಗೆ. ಪರಸ್ಪರ ಪ್ರೀತಿ-ವಿಶ್ವಾಸ ಬೆಳೆಯುತ್ತಿದೆ. 2027ರ ಫೆಬ್ರವರಿಯಲ್ಲಿ ಕಾರ್ಕಳದಲ್ಲಿ ಜರುಗಲಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಫೆ. 13 ಮತ್ತು 14 ರಂದು ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆ ನಡೆಯಲಿದೆ ಎಂದು ಅವರು ಪ್ರಕಟಿಸಿದರು. ಇದೇ ಅಕ್ಟೋಬರ್ 25ರಂದು ವೇಣೂರಿನಲ್ಲಿ “ಕರಾವಳಿ ಮಿಲನೋತ್ಸವ” ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೈನ ಸಮಾಜದ ಸಂಘಟನೆ ಮತ್ತು ಬಲವರ್ಧನೆಗಾಗಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದು ಎಲ್ಲರೂ ಸಕ್ರಿಯ ಸಹಕಾರ ನೀಡಬೇಕೆಂದು ಅವರು ಕೋರಿದರು. ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಪ್ರಮೋದ್ ಕುಮಾರ್ ಮಾತನಾಡಿ ಜೈನ್‌ಮಿಲನ್ ಸದಸ್ಯರು ಸಮಾಜಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕರಿಸಬೇಕೆಂದು ಕೋರಿದರು. ಭಾರತೀಯ ಜೈನ್‌ಮಿಲನ್ ವಲಯ -8ರ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ ಶುಭಾಶಂಸನೆ ಮಾಡಿ ಸ್ಥಳೀಯ ಜೈನ್‌ಮಿಲನ್‌ಗಳ ಮೂಲಕ ಆಯಾ ಊರಿನಲ್ಲಿ ಎಲ್ಲರೂ ಸ್ವಯಂಪ್ರೇರಿತರಾಗಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕೆಂದು ಸಲಹೆ ನೀಡಿದರು. ಕಕ್ಕಿಂಜೆಯ ಪಾಕಶಾಸ್ತ್ರ ಪ್ರವೀಣರಾದ ಅಶೋಕ ಕುಮಾರ್ ಜೈನ್ ಅವರನ್ನು ಗೌರವಿಸಲಾಯಿತು. ಅರ್ಪಣಾ ರವೀಶ್ ವರದಿ ಸಾದರಪಡಿಸಿದರು. ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಡಾ. ಸನ್ಮತಿಕುಮಾರ್ ಸ್ವಾಗತಿಸಿದರು. ಎಸ್.ಡಿ.ಎಂ. ಪ್ರೌಢಶಾಲೆಯ ಶಿಕ್ಷಕ ರವೀಶ್ ಕುಮಾರ್ ಧನ್ಯವಾದವಿತ್ತರು. ಸಂಪತ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಆರಂಭಿಸಿ, ಕೊನೆಯಲ್ಲಿ ಶಾಂತಿಮಂತ್ರ ಪಠಣದೊಂದಿಗೆ ಸಮಾಪನಗೊಳಿಸಲಾಯಿತು.

ಜೈನ ಸಾಹಿತ್ಯ ಸಿರಿ ಕಾರ್ಯಕ್ರಮ

Article Image

ಜೈನ ಸಾಹಿತ್ಯ ಸಿರಿ ಕಾರ್ಯಕ್ರಮ

ಬೆಂಗಳೂರು, ಆ.9- ರಾಮಾಯಣ ಕಾವ್ಯ ಭಾರತೀಯರಿಗೆ ಮಹತ್ವದ ಸಾಹಿತ್ಯ ಪರಂಪರೆಯಾಗಿದ್ದು, ಜೈನರಾಮಾಯಣವು ವೈದಿಕ ರಾಮಾಯಣಕ್ಕಿಂತ ಭಿನ್ನವಾದ ದೃಷ್ಟಿಕೋನವನ್ನು ಹೊಂದಿದೆ ಎಂದು ಪ್ರೊ. ಜಿ. ಅಶ್ವತ್ಥನಾರಾಯಣ ಹೇಳಿದರು. ಜೈನ ಮಿಲನ್ ಸೆಂಟ್ರಲ್ ಬೆಂಗಳೂರು ಹಾಗೂ ಜಯನಗರದ ಶ್ರೀಚಕ್ರೇಶ್ವರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಜೈನ ಸಾಹಿತ್ಯ ಸಿರಿ ಕಾರ್ಯಕ್ರಮದಲ್ಲಿ ಪ್ರೊ. ಜೀವಂಧರಕುಮಾರ ಹೋತಪೇಟಿ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಆಧ್ಯಾತ್ಮ ಯೋಗಿ ರಾಮ್‌ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಜೈನ ರಾಮಾಯಣಗಳಲ್ಲಿ ಪ್ರತಿನಾಯಕ ರಾವಣನನ್ನು ನೋಡುವ ವಿಭಿನ್ನ ದೃಷ್ಟಿಕೋನ ದೊರೆಯುತ್ತದೆ. ಶಾಸ್ತ್ರ ಮತ್ತು ಕಾವ್ಯವನ್ನು ಒಳಗೊಂಡಿರುವ ಆಧ್ಯಾತ್ಮಯೋಗಿ ರಾಮ ಕೃತಿಯ ಪುಟಪುಟಗಳಲ್ಲೂ ಜೈನಧರ್ಮದ ಶಾಸ್ತ್ರದ ತಿಳಿವಳಿಕೆ ಕಾಣಬಹುದು. ಮೂಲ ಕೃತಿಕಾರ ರವಿಶೇಷಣರು ರಚಿಸಿರುವ 18 ಸಾವಿರ ಶ್ಲೋಕಗಳ ಕೃತಿಯನ್ನು ಪ್ರೊ. ಜೀವಂಧರಕುಮಾರ ಹೋತಪೇಟೆ ಅಪೂರ್ವವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ಎಂದು ಹೇಳಿದರು. ಪ್ರೊ. ಜೀವಂಧರಕುಮಾರ ಮಾತನಾಡಿ, ಪ್ರತಿಯೊಬ್ಬ ಮನುಷ್ಯನೂ ತನ್ನ ಭವಿಷ್ಯದ ರೂವಾರಿಯಾಗಿದ್ದು, ಮಾನವ ಆತ್ಮ ಪರಮಾತ್ಮನಾಗುವ ಸಾಧ್ಯತೆ ಹೊಂದಿದೆ. ಸಂಸಾರ ಬಂಧನದಿಂದ ಮುಕ್ತರಾಗಲು ಮನುಷ್ಯ ಪ್ರಯತ್ನಿಸಬೇಕು ಎಂದರು. ಅನಿತಾ ಸುರೇಂದ್ರ ಕುಮಾರ ಮಾತನಾಡಿ, ಜೈನ ಸಾಹಿತ್ಯ ಸಿರಿ ಮೂಲಕ ಜನಸಾಮಾನ್ಯರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುತ್ತಿದೆ ಎಂದರು. ಡಾ. ನಲ್ಲೂರು ಪ್ರಸಾದ್‌, ಮಮತ ಕಾಂತರಾಜ್, ನಾಗಶ್ರೀ ಮುಪ್ಪಾನೆ, ಡಾ. ಪದ್ಮನಿ ನಾಗರಾಜು, ಬ್ರಾಹ್ಮಲ ಮದನಕುಮಾರ, ದೀಪಾಂಜಲಿ ಗೌರಾಜ್ ಉಪಸ್ಥಿತರಿದ್ದರು. ದಿಶಾ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.

ಬೆಳ್ತಂಗಡಿ: ಅರ್ಜಿ ಆಹ್ವಾನ

Article Image

ಬೆಳ್ತಂಗಡಿ: ಅರ್ಜಿ ಆಹ್ವಾನ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜೈನ ಧರ್ಮಿಯ ವಿದ್ಯಾರ್ಥಿಗಳಿಗೆ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ (ರಿ) ಬೆಳ್ತಂಗಡಿ ಹಾಗೂ ಶ್ರಾವಕ/ ಶ್ರಾವಿಕೆಯರ ಸಹಕಾರದಿಂದ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಕಳೆದ ಹಲವಾರು ವರ್ಷಗಳಿಂದ ನೀಡುತ್ತಾ ಬರಲಾಗುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನವನ್ನು ನೀಡಲಾಗುತ್ತಿದೆ. ಅದೇ ರೀತಿ 2026-27 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಜೈನ ಧರ್ಮೀಯ ವಿದ್ಯಾರ್ಥಿಗಳನ್ನು 2026ರ ಸೆಪ್ಟೆಂಬರ್ 21ರಂದು ಶ್ರೀ ಕ್ಷೇತ್ರ ಹೊಂಬುಜ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ಶ್ರೀಮದ್ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಗಿಂತ ಮೇಲ್ಪಟ್ಟು ಪಿಯುಸಿ, ಪದವಿ, ಐಟಿಐ, ಪಾಲಿಟೆಕ್ನಿಕ್, ಬಿಬಿಎಂ, ಇಂಜಿನಿಯರಿಂಗ್, ವೈದ್ಯಕೀಯ ಇನ್ನಿತರ ವ್ಯಾಸಂಗವನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳು ಮಾತ್ರ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಕಚೇರಿಯಲ್ಲಿ ಪಡೆದುಕೊಳ್ಳುವುದು ಮತ್ತು ಅರ್ಜಿಯೊಂದಿಗೆ ಪ್ರಸ್ತುತ ಕಲಿಯುತ್ತಿರುವ ಸಂಸ್ಥೆಯಿಂದ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಕಳೆದ ವರ್ಷ ಕಲಿತು ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿಯ ಯಥಾಪ್ರತಿ, ವಿದ್ಯಾರ್ಥಿಯ ಖಾಯಂ ವಿಳಾಸ, ವಿದ್ಯಾರ್ಥಿಯ ಆಧಾರ್ ಪ್ರತಿ, ಸಂಪರ್ಕ ಸಂಖ್ಯೆ, ತಂದೆ ಮತ್ತು ತಾಯಿಯ ಹೆಸರು ನಮೂದಿಸಿ ಅವರಿಬ್ಬರಲ್ಲಿ ಒಬ್ಬರ ಸಹಿಯನ್ನು ಕಡ್ಡಾಯವಾಗಿ ಮಾಡಿ ಆಗಸ್ಟ್ 31ರ ಒಳಗೆ ಕೆ. ಜಯವರ್ಮರಾಜ ಬಳ್ಳಾಲ್, ಮ್ಯಾನೇಜಿಂಗ್ ಟ್ರಸ್ಟಿ, ಕೆಲಗುತ್ತು ಸಬ್ರಬ್ಯೆಲು ದಿ. ಕಿನ್ಯಮ್ಮ ಯಾನೆ ಗುಣವತಿಯಮ್ಮ ಮೆಮೋರಿಯಲ್ ಟ್ರಸ್ಟ್ ,(ರಿ), ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ, ಜೈನ್ ಪೇಟೆ, ಬೆಳ್ತಂಗಡಿ-574214 ದಕ್ಷಿಣ ಕನ್ನಡ ಈ ವಿಳಾಸಕ್ಕೆ ತಲುಪುವಂತೆ ಕಳುಹಿಸತಕ್ಕದ್ದು. ಅದೇ ರೀತಿ ಉಭಯ ಜಿಲ್ಲೆಗಳಲ್ಲಿ ಕ್ಯಾನ್ಸರ್, ಕಿಡ್ನಿ, ಹೃದಯ ಸಂಬಂಧಿ ಇನ್ನಿತರ ತೀವ್ರತರದ ಕಾಯಿಲೆಗಳಿಂದ ಬಳಲುತ್ತಿರುವ ಸಮಾಜದ ಅರ್ಹ ಬಂಧುಗಳು ಕೂಡ ಈ ಬಗ್ಗೆ ಈ ಮೇಲಿನ ವಿಳಾಸದಾರರನ್ನು ಸಂಪರ್ಕಿಸಿದಲ್ಲಿ ಪರಿಶೀಲಿಸಿ ಅಗತ್ಯ ನೆರವು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9448180439 ಈ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮ್ಯಾನೇಜಿಂಗ್ ಟ್ರಸ್ಟಿ ಕೆ. ಜಯವರ್ಮರಾಜ ಬಳ್ಳಾಲ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಸಂಪತ್ತು ಶ್ರಾವಣ ಶುಕ್ರವಾರ ವಿಶೇಷ ಪೂಜೆ

Article Image

ಸಂಪತ್ತು ಶ್ರಾವಣ ಶುಕ್ರವಾರ ವಿಶೇಷ ಪೂಜೆ

ನಾರಾವಿ ಮಾಗಣೆ ಭ| 1008 ಶ್ರೀ ಧರ್ಮನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ಕಳ ಶ್ರೀ ಜೈನಮಠದ ಪೂಜ್ಯ ರಾಜಗುರು, ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳವರ ಶುಭಾಶೀರ್ವಾದಗಳೊಂದಿಗೆ ಶ್ರಾವಣ (ಸೋಣ) ತಿಂಗಳ ಸಂಪತ್ತು ಶ್ರಾವಣ ಶುಕ್ರವಾರದ ವಿಶೇಷ ಪೂಜೆಯು ದಿನಾಂಕ 21/08/2026 ರಿಂದ 11/09/2026 ರ ಪರ್ಯಂತ ಜರಗಲಿರುವುದು. ವಿ.ಸೂ: ಶ್ರಾವಣ ಶುಕ್ರವಾರದಂದು ಪ್ರತಿ ದಿನ ಬೆಳಗ್ಗೆ ಗಂಟೆ 9-00ರಿಂದ ಧಾರ್ಮಿಕ ಪೂಜಾ ಕಾರ್ಯಕ್ರಮ ಮತ್ತು ಮಹಾಮಾತೆ ಶ್ರೀ ಪದ್ಮಾವತೀ ಅಮ್ಮನವರ ಸಹಸ್ರನಾಮ ಕುಂಕುಮಾರ್ಚನೆ ನಡೆಯಲಿರುವುದು. ಕುಂಕುಮಾರ್ಚನೆ ಮಾಡಲು ಇಚ್ಛೆ ಉಳ್ಳವರು 10 ನಿಮಿಷ ಮುಂಚಿತವಾಗಿ ಬರುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಶ್ರೀ ಶಾಂತಿರಾಜ ಮುದ್ಯ, ವ್ಯವಸ್ಥಾಪಕರು ಮೊ: 9902469108, ಶ್ರೀ ಹರ್ಷಿತ್ ಇಂದ್ರ, ಪುರೋಹಿತರು ಮೊ: 9901630039

ಚಾತುರ್ಮಾಸ ಮಂಗಳ ಕಳಸ ಸ್ಥಾಪನೆ

Article Image

ಚಾತುರ್ಮಾಸ ಮಂಗಳ ಕಳಸ ಸ್ಥಾಪನೆ

ಸಾಲಿಗ್ರಾಮ: ಪ. ಪೂಜ್ಯ ಸಂತಶಿರೋಮಣಿ ಆಚಾರ್ಯಶ್ರೀ 108 ವಿದ್ಯಾಸಾಗರಜೀ ಮಹಾರಾಜರ ಶಿಷ್ಯರಾದ ಹಾಗೂ ನೂತನ ಪ. ಪೂಜ್ಯ ಆಚಾರ್ಯ ಶ್ರೀ 108 ಸಮಯ ಸಾಗರಜೀ ಮಹಾರಾಜರ ಅಜ್ಞಾನುವರ್ತಿ ಶಿಷ್ಯರಾದ ಪ. ಪೂಜ್ಯ ಮುನಿಶ್ರೀ 108 ಪಾಯಸಾಗರಜೀ ಮಹಾರಾಜರ ರವರ ಪಾವನ ವರ್ಷಾಯೋಗದ ಚಾತುರ್ಮಾಸ ಮಂಗಳ ಕಳಸ ಸ್ಥಾಪನೆ ಕಾರ್ಯಕ್ರಮವು ದಿನಾಂಕ 9/8/2026 ರಂದು ನಡೆಯಲಿರುವುದು. ವಿ.ಸೂ: ಪ್ರತಿ ದಿನ ತ್ಯಾಗಿ ನಿವಾಸದಲ್ಲಿ ಬೆಳಗ್ಗೆ 6:00 ಗಂಟೆಗೆ ಭಗವಂತರಿಗೆ ಅಭಿಷೇಕ ಮತ್ತು ಪೂಜೆ ಸಂಜೆ 05:45 ಗಂಟೆಗೆ ಭಕ್ತಿ. ಆರತಿ ಮತ್ತು ಪ್ರವಚನ ನೆರವೇರಲಿದೆ.

ವಿಶ್ವ ಸ್ತನ್ಯಪಾನ ಸಪ್ತಾಹ 2026

Article Image

ವಿಶ್ವ ಸ್ತನ್ಯಪಾನ ಸಪ್ತಾಹ 2026

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸ್ತನ್ಯಪಾನದ ಮಹತ್ವ: ಎಸ್‌ಡಿಎಂನ “ಮಾತೃಸ್ಪರ್ಶ” ಮಾದರಿ ಪ್ರತಿ ವರ್ಷ ಆಗಸ್ಟ್ 1 ರಿಂದ 7ರವರೆಗೆ ವಿಶ್ವದಾದ್ಯಂತ ವಿಶ್ವ ಸ್ತನ್ಯಪಾನ ಸಪ್ತಾಹ (World Breastfeeding Week) ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ತಾಯಿಯ ಹಾಲಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ತಾಯಂದಿರಿಗೆ ಬೆಂಬಲ ನೀಡುವುದು ಹಾಗೂ ಪ್ರತಿಯೊಂದು ಮಗುವಿಗೂ ಜೀವನದ ಅತ್ಯುತ್ತಮ ಆರಂಭವನ್ನು ಕಲ್ಪಿಸುವುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಯುನಿಸೆಫ್ (UNICEF) ಜನನದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಲು, ಮೊದಲ ಆರು ತಿಂಗಳು ಮಗುವಿಗೆ ಕೇವಲ ತಾಯಿಯ ಹಾಲನ್ನೇ ನೀಡಲು ಹಾಗೂ ನಂತರ ಸೂಕ್ತ ಪೂರಕ ಆಹಾರದೊಂದಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸ್ತನ್ಯಪಾನ ಮುಂದುವರಿಸಲು ಶಿಫಾರಸು ಮಾಡಿವೆ. ತಾಯಿಯ ಹಾಲು ಮಗುವಿನ ಮೊದಲ ಲಸಿಕೆ ಎಂಬುದು ವೈದ್ಯಕೀಯವಾಗಿ ಸಾಬೀತಾಗಿದೆ. ಇದು ಮಗುವಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಸೋಂಕುಗಳಿಂದ ರಕ್ಷಿಸುತ್ತದೆ, ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ ಮತ್ತು ಭವಿಷ್ಯದಲ್ಲಿ ಮಧುಮೇಹ, ಸ್ಥೂಲಕಾಯ ಹಾಗೂ ಹಲವು ದೀರ್ಘಕಾಲೀನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದೇ ರೀತಿ ತಾಯಂದಿರಲ್ಲಿ ಹೆರಿಗೆಯ ನಂತರದ ರಕ್ತಸ್ರಾವ ಕಡಿಮೆಯಾಗಲು, ಗರ್ಭಾಶಯ ಶೀಘ್ರವಾಗಿ ತನ್ನ ಸಹಜ ಸ್ಥಿತಿಗೆ ಮರಳಲು ಹಾಗೂ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‌ನ ಅಪಾಯ ಕಡಿಮೆಯಾಗಲು ಸಹಕಾರಿಯಾಗಿದೆ. ಇಂದಿನ ಸಮಾಜದಲ್ಲಿ ಉದ್ಯೋಗ, ಕುಟುಂಬದ ಬದಲಾದ ಜೀವನಶೈಲಿ, ತಪ್ಪು ಕಲ್ಪನೆಗಳು, ಸರಿಯಾದ ಮಾರ್ಗದರ್ಶನದ ಕೊರತೆ ಹಾಗೂ ಹೆರಿಗೆಯ ನಂತರ ಸಮರ್ಪಕ ಸಮಾಲೋಚನೆಯ ಅಭಾವದಿಂದ ಅನೇಕ ತಾಯಂದಿರು ಸ್ತನ್ಯಪಾನದಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಮೊದಲ ಬಾರಿ ತಾಯಿಯಾಗುವ ಮಹಿಳೆಯರಿಗೆ ಮಗುವನ್ನು ಸರಿಯಾಗಿ ಹಾಲುಣಿಸಲು ಹಿಡಿಯುವುದು (Latching), ಮಗುವಿಗೆ ಸಾಕಷ್ಟು ಹಾಲು ಸಾಕಾಗುತ್ತಿಲ್ಲ ಎಂಬ ಆತಂಕ, ಸ್ತನದ ತೊಟ್ಟುಗಳ ನೋವಿನ ಸಮಸ್ಯೆ ಹಾಗೂ ಅವಧಿಪೂರ್ವ ಶಿಶುಗಳಿಗೆ ಹಾಲುಣಿಸುವ ತೊಂದರೆಗಳು ಸಾಮಾನ್ಯವಾಗಿವೆ. ಈ ಸವಾಲುಗಳನ್ನು ಮನಗಂಡು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಧಾರವಾಡದಲ್ಲಿ “ಮಾತೃಸ್ಪರ್ಶ” (Maatru Sparsha) – Breastfeeding Support and Latching Counselling Unit ಎಂಬ ವಿನೂತನ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಘಟಕವು ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಮಕ್ಕಳ ವಿಭಾಗ ಹಾಗೂ ಎಸ್.ಡಿ.ಎಂ. ನರ್ಸಿಂಗ್ ವಿಜ್ಞಾನಗಳ ಸಂಸ್ಥೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಯಂದಿರಿಗೆ ವೈಜ್ಞಾನಿಕ ಹಾಗೂ ಪ್ರಾಯೋಗಿಕ ಸ್ತನ್ಯಪಾನ ಮಾರ್ಗದರ್ಶನವನ್ನು ಉಚಿತವಾಗಿ ಒದಗಿಸುತ್ತಿದೆ. “ಮಾತೃಸ್ಪರ್ಶ” ಘಟಕದ ಪ್ರಮುಖ ಸೇವೆಗಳು: 1. ಹೆರಿಗೆಯ ನಂತರ ಮೊದಲ ಗಂಟೆಯಲ್ಲಿಯೇ ಸ್ತನ್ಯಪಾನ ಆರಂಭಿಸಲು ನೆರವು. 2. ಸರಿಯಾದ ಲ್ಯಾಚಿಂಗ್ (Latch) ಮತ್ತು ಸ್ತನ್ಯಪಾನ ಭಂಗಿಗಳ ಪ್ರದರ್ಶನ. 3. ಮೊದಲ ಬಾರಿಗೆ ತಾಯಿಯಾದ ಮಹಿಳೆಯರಿಗೆ ವೈಯಕ್ತಿಕ ಸಮಾಲೋಚನೆ. 4. ಕಡಿಮೆ ತೂಕದ ಹಾಗೂ ಅವಧಿಪೂರ್ವ ಶಿಶುಗಳ ತಾಯಂದಿರಿಗೆ ವಿಶೇಷ ಮಾರ್ಗದರ್ಶನ. 5. ಹಾಲಿನ ಕೊರತೆ, ಸ್ತನದ ಉಬ್ಬರ, ತೊಟ್ಟು ನೋವು ಮುಂತಾದ ಸಮಸ್ಯೆಗಳ ನಿರ್ವಹಣೆ. 6. ಕುಟುಂಬ ಸದಸ್ಯರಿಗೆ ಸ್ತನ್ಯಪಾನದ ಬಗ್ಗೆ ಅರಿವು ಮತ್ತು ಬೆಂಬಲದ ಮಹತ್ವ ತಿಳಿಸುವುದು. 7. ಮಗುವಿನ ಬೆಳವಣಿಗೆಯನ್ನು ಅನುಸರಿಸಿ ನಿರಂತರ ಸಲಹೆ ಮತ್ತು ಫಾಲೋ-ಅಪ್ ಸೇವೆ. ವಿಶೇಷವಾಗಿ ಸೀಳು ತುಟಿ ಮತ್ತು ಸೀಳು ಅಂಗುಳ (Cleft Lip and Palate) ಹೊಂದಿರುವ ಮಕ್ಕಳ ತಾಯಂದಿರಿಗೂ ವಿಶೇಷ ಸ್ತನ್ಯಪಾನ ಮಾರ್ಗದರ್ಶನವನ್ನು ಈ ಘಟಕದ ಮೂಲಕ ನೀಡಲಾಗುತ್ತಿದ್ದು, ಬಹುಶಿಸ್ತೀಯ (Multidisciplinary) ಆರೋಗ್ಯ ಸೇವೆಯ ಉತ್ತಮ ಮಾದರಿಯಾಗಿ ಇದು ಬೆಳೆಯುತ್ತಿದೆ. “ಮಾತೃಸ್ಪರ್ಶ” ಘಟಕದ ಮೂಲಕ ಇದುವರೆಗೆ ಅನೇಕ ತಾಯಂದಿರು ಆತ್ಮವಿಶ್ವಾಸದಿಂದ ಮಗುವಿಗೆ ಯಶಸ್ವಿಯಾಗಿ ಸ್ತನ್ಯಪಾನ ಮಾಡುತ್ತಿದ್ದು, ಆಸ್ಪತ್ರೆಯಲ್ಲಿ ಜನಿಸಿದ ಶಿಶುಗಳಲ್ಲಿ ಆರಂಭಿಕ ಸ್ತನ್ಯಪಾನದ ಪ್ರಮಾಣವನ್ನು ಹೆಚ್ಚಿಸಲು ಈ ಸೇವೆ ಮಹತ್ವದ ಪಾತ್ರ ವಹಿಸಿದೆ. ವೈದ್ಯರು, ಶುಶ್ರೂಷಕರು ಹಾಗೂ ಸ್ತನ್ಯಪಾನ ಸಲಹೆಗಾರರು ಒಗ್ಗೂಡಿ ಕಾರ್ಯನಿರ್ವಹಿಸುವ ಈ ಮಾದರಿ ತಾಯಿ ಮತ್ತು ಮಗುವಿನ ಆರೋಗ್ಯ ಸುಧಾರಣೆಗೆ ಹೊಸ ದಾರಿಯನ್ನು ತೆರೆದಿದೆ. ಸ್ತನ್ಯಪಾನವು ಕೇವಲ ತಾಯಿ ಮತ್ತು ಮಗುವಿನ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದಷ್ಟೇ ಅಲ್ಲ, ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ. ಪರಿಸರ ಸ್ನೇಹಿಯಾಗಿದೆ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿದೆ. ಆದ್ದರಿಂದ ಪ್ರತಿಯೊಬ್ಬ ತಾಯಿ, ಕುಟುಂಬ ಹಾಗೂ ಸಮಾಜ ಸ್ತನ್ಯಪಾನವನ್ನು ಬೆಂಬಲಿಸುವುದು ಕಾಲದ ಅಗತ್ಯವಾಗಿದೆ. ವಿಶ್ವ ಸ್ತನ್ಯಪಾನ ಸಪ್ತಾಹದ ಸಂದರ್ಭದಲ್ಲಿ, ಪ್ರತಿಯೊಬ್ಬ ಆರೋಗ್ಯ ವೃತ್ತಿಪರರು, ಕುಟುಂಬ ಸದಸ್ಯರು ಹಾಗೂ ಸಮಾಜದ ಎಲ್ಲರೂ “ಪ್ರತಿ ಮಗುವಿಗೂ ತಾಯಿಯ ಹಾಲು – ಪ್ರತಿಯೊಂದು ತಾಯಿಗೂ ನಮ್ಮ ಬೆಂಬಲ” ಎಂಬ ಸಂಕಲ್ಪದೊಂದಿಗೆ ಮುಂದೆ ಬರಬೇಕಾಗಿದೆ. ಆರೋಗ್ಯವಂತ ತಾಯಿ, ಆರೋಗ್ಯವಂತ ಮಗು ಮತ್ತು ಆರೋಗ್ಯವಂತ ರಾಷ್ಟ್ರ ನಿರ್ಮಾಣದತ್ತ “ಮಾತೃಸ್ಪರ್ಶ”ದಂತಹ ಉಪಕ್ರಮಗಳು ದೇಶದಾದ್ಯಂತ ವಿಸ್ತರಿಸಲಿ. ಡಾ. ರಂಗಪ್ಪ ಎಸ್. ಅಶಿ ಪ್ರಾಧ್ಯಾಪಕರು ಹಾಗೂ ಉಪಪ್ರಾಂಶುಪಾಲರು ಎಸ್.ಡಿ.ಎಂ. ನರ್ಸಿಂಗ್ ವಿಜ್ಞಾನಗಳ ಸಂಸ್ಥೆ, ಎಸ್.ಡಿ.ಎಂ. ವಿಶ್ವವಿದ್ಯಾಲಯ, ಧಾರವಾಡ.

ಮಂಗಳೂರು: ಆಟಿಡೊಂಜಿ ದಿನ ಕಾರ್ಯಕ್ರಮ

Article Image

ಮಂಗಳೂರು: ಆಟಿಡೊಂಜಿ ದಿನ ಕಾರ್ಯಕ್ರಮ

ದಿನಾಂಕ 02.08.2026ರಂದು ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘ ಇದರ 'ಆಟಿಡೊಂಜಿ ದಿನ' ಅತ್ಯಂತ ಯಶಸ್ವಿಯಾಗಿ ಎಸ್‌.ಡಿ.ಎಂ.ಲಾ ಕಾಲೇಜು ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಮಹಿಳಾ ಸಂಘದ ಅಧ್ಯಕ್ಷರಾದ ಸುಮನ ಪೂವಣಿ ವಹಿಸಿದ್ದರು. ಪ್ರಸನ್ನ ವಿನಯ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸದಸ್ಯೆಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿಗಳಾದ ಶಿಲ್ಪಾ ಸಂದೀಪ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು. ಸುಮಾರು 65ಕ್ಕೂ ಮಿಕ್ಕಿ ಖಾದ್ಯಗಳನ್ನು ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದಿದ್ದರು.

ಮುಡಾರು: ವಿಶೇಷ ಪೂಜಾ ಕಾರ್ಯಕ್ರಮಗಳು

Article Image

ಮುಡಾರು: ವಿಶೇಷ ಪೂಜಾ ಕಾರ್ಯಕ್ರಮಗಳು

ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ, ಬಜಗೋಳಿ, ಮುಡಾರು ಅಪ್ಪಾಯಿ ಬಸದಿ ಶ್ರೀ ಅನಂತನಾಥ ಸ್ವಾಮಿ ಹಾಗೂ ಶ್ರೀ ಪದ್ಮಾವತೀ ದೇವೀ ಸನ್ನಿಧಿಯಲ್ಲಿ ಶ್ರಾವಣ ಸಿಂಹ (ಸೋಣ) ಮಾಸದ ಪ್ರತಿ ಶುಕ್ರವಾರ ವಿಶೇಷ ಪೂಜೆ, ಸಾಮೂಹಿಕ ಅನಂತನೋಂಪಿ ವಿಧಾನ ಮತ್ತು ನವರಾತ್ರಿಯ ಶುಭದಿನಗಳಂದು ವಿಶೇಷ ಪೂಜಾ ಕಾರ್ಯಕ್ರಮಗಳು ಕಾರ್ಕಳ ಶ್ರೀ ಜೈನಮಠದ ಪರಮ ಪೂಜ್ಯ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ ಹಾಗೂ ಪಾವನ ಸಾನಿಧ್ಯದಲ್ಲಿ ಆ. 21ರಿಂದ ಸೆ. 11ರವರೆಗೆ ನೆರವೇರಲಿರುವುದು. ದಿನಾಂಕ 24-09-2026 ರಿಂದ ದಿನಾಂಕ 26-09-2026ರ ತನಕ ಶ್ರೀ ಅನಂತನೋಂಪಿ ವಿಧಾನ ನಡೆಯಲಿದೆ.

ಧಾರವಾಡ: ಸನ್ಮತಿ ಸೇವಾ ಸಮಾಜ ಆಯೋಜಿಸಿದ ಚಾತುರ್ಮಾಸದ ಯಾತ್ರೆ

Article Image

ಧಾರವಾಡ: ಸನ್ಮತಿ ಸೇವಾ ಸಮಾಜ ಆಯೋಜಿಸಿದ ಚಾತುರ್ಮಾಸದ ಯಾತ್ರೆ

ಧಾರವಾಡ ಸನ್ಮತಿ ಸೇವಾ ಸಮಾಜದ ವತಿಯಿಂದ ಚಾತುರ್ಮಾಸದ ನಿಮಿತ್ಯವಾಗಿ ಆಗಸ್ಟ್ 2 ರಂದು ಒಂದು ದಿನದ ಧಾರ್ಮಿಕ ಪ್ರವಾಸವನ್ನು ಕೆ. ಜೆ. ರಪಾಟಿ ಇವರ ಉಸ್ತುವಾರಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆಗೊಂಡಿತು. ಈ ಗುಂಪಿನಲ್ಲಿ ಅತ್ಯಂತ ಆಸಕ್ತಿ ಭಕ್ತಿಯಿಂದ ದೇವ, ಗುರು, ಶಾಸ್ತ್ರ ನಿತ್ಯ ಆಚರಣೆಯಲ್ಲಿರುವ ಇಪ್ಪತ್ತು ಜನ ಧರ್ಮಾನುರಾಗಿಗಳು ಭಾಗಿಯಾಗಿದ್ದರು. ಮುಂಜಾನೆ 9 ಗಂಟೆಗೆ ಸನ್ಮತಿ ಜಿನ ಮಂದಿರದಿಂದ ಭಗವಂತನ ದರ್ಶನದೊಂದಿಗೆ ಪ್ರವಾಸ ಪ್ರಾರಂಭಿಸಲಾಯಿತು. ಛೆಬ್ಬಿ ಗ್ರಾಮದಲ್ಲಿರುವ ಭ| ಶಾಂತಿನಾಥ ತೀರ್ಥಂಕರ ಜಿನ ಮಂದಿರಕ್ಕೆ ಹೋಗಿ ದರ್ಶನ ಮಾಡಿಕೊಂಡು ಹಾಗೇ ವರ್ಷಾಯೋಗ ಅನುಷ್ಠಾನದಲ್ಲಿರುವ ಬಾಲಾಚಾರ್ಯ ಮುನಿಶ್ರೀ ಸಿದ್ಧಸೇನ ಮಹಾರಾಜರ ದರ್ಶನಮಾಡಿ ಆಶೀರ್ವಾದ ಪಡೆದುಕೊಂಡು ನೇರವಾಗಿ ವರೂರು ಕ್ಷೇತ್ರಕ್ಕೆ ಹೋಗಿ ಅಲ್ಲಿ ದರ್ಶನದನಂತರ ಪರಮ ಪೂಜ್ಯ ಆಚಾರ್ಯ ಗುಣದರನಂದಿ ಮಹಾರಾಜರ ಆಶೀರ್ವಾದ ಪಡೆದು ಅರಟಾಳ ಕ್ಷೇತ್ರದತ್ತ ಪಯಣ ಮುಂದುವರೆಸಲಾಯಿತು. ಅರಟಾಳ ಕ್ಷೇತ್ರದಲ್ಲಿ ಪರಮ ಪೂಜ್ಯ ಆಚಾರ್ಯ ಪುಣ್ಯಸಾಗರ ಮಹಾರಾಜರ ಮುನಿಶ್ರೀ ಪುರಾಣ ಸಾಗರ ಮುನಿಮಹಾರಾಜರ ಮತ್ತು ಬಾಲ ಬ್ರಹ್ಮಚಾರಿ ಪೂಜ್ಯ ಶ್ರೀ ಸೋಮದೇವ ಬೈಯಾಜಿ ಇವರ ಉಪಸ್ಥಿತಿಯಲ್ಲಿ ಚಾತುರ್ಮಾಸ ಅನುಷ್ಠಾನ ಕಳಸಸ್ಥಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಪ್ರವಾಸದ ಮುಖ್ಯ ಉದ್ದೇಶದಂತೆ ಇಡೀ ಕಾರ್ಯಕ್ರಮವನ್ನು ಅತ್ಯಂತ ಭಕ್ತಿಯಿಂದ ಭಾಗವಹಿಸಿ ಸಂಭ್ರಮಿಸಲಾಯಿತು. ಕುಟುಂಬ ಪರಿವಾರ ಜೊತೆ ಮಾಡಿರುವ ಪ್ರವಾಸಕ್ಕಿಂತ ಸಮಾನ ಮನಸ್ಕ ಶ್ರಾವಕ ಶ್ರಾವಕಿಯರ ಪರಿವಾರದೊಂದಿಗೆ ಮಾಡಿದ ಪ್ರವಾಸವು ವಿಭಿನ್ನವಾಗಿರುತ್ತದೆ ಎನ್ನುವದ ಅನುಭವದ ಮಾತು. ಏಕೆಂದರೆ ಇಲ್ಲಿ ಸೇರಿರುವರೆಲ್ಲ ಒಂದೇ ಕುಟುಂಬದ ಸದಸ್ಯರಂತೆ ಅನಿಸಿತು. ಪ್ರವಾಸ ಎಂದರೆ ಕೇವಲ ಹೊಸ ಹೊಸ ಸ್ಥಳಗಳನ್ನು ವಿಕ್ಸಿಸುವುದಷ್ಟೇ ಅಲ್ಲ , ಬದಲಿಗೆ ಅದೊಂದು ರೋಮಾಂಚನಕಾರಿ ಕಲಿಕೆಯ ಅನುಭವ. ಇದು ದೈನಂದಿನ ದಿನಚರಿಯಿಂದ ಮುಕ್ತಿ ನೀಡಿ, ಹಲವಾರು ಮಾನಸಿಕ ಒತ್ತಡ ಮರೆತು ದೇವರ ಸನ್ನಿದಿಯಲ್ಲಿ ಮುನಿ ಮಹಾರಾಜರ ಮತ್ತು ಬಟ್ಟಾರಕ ಸ್ವಾಮೀಜಿಯವರ ದರ್ಶನದಿಂದ ಮನಸ್ಸಿಗೆ ಒಂದು ಹೊಸ ಚೈತನ್ಯ ಉಂಟಾಗುತ್ತದೆ. ಸಾಂಸ್ಕೃತಿಕ, ಜೈನ ಇತಿಹಾಸ ಹಾಗೂ ಪರಂಪರೆಯ ಕುರಿತಾದ ಸಮಗ್ರ ಮಾಹಿತಿ ತಿಳಿದುಕೊಳ್ಳುವ ಅವಕಾಶಗಳು ಇಂತಹ ಪ್ರವಾಸದಿಂದ ಸಿಗುತ್ತದೆ, ಅಷ್ಟೇ ಅಲ್ಲ ನಮ್ಮ ಜೀವನದಲ್ಲಿ ಎಂತಹ ಬದಲಾವಣೆಗಳನ್ನು ತರುತ್ತವೆ ಎಂದರೆ ನಮಗೆ ತಿಳಿಯದಿರುವ ಸಣ್ಣ ಪುಟ್ಟ ವಿಷಯಗಳನ್ನು ಆಳವಾಗಿ ತಿಳಿದುಕೊಳ್ಳುವ ಅವಕಾಶ ಸಿಗುತ್ತದೆ ಎನ್ನಬಹುದು. ಪ್ರವಾಸವು ಮನಸ್ಸಿಗೆ ಶಾಂತಿ ಜೀವನಕ್ಕೆ ಹೊಸ ಚೈತನ್ಯ ಮತ್ತು ಮನಸ್ಸಿಗೆ ವಿಭಿನ್ನ ಅನುಭವ ನೀಡುವ ಮಾರ್ಗ ಎಂದರೂ ತಪ್ಪಾಗುವದಿಲ್ಲ. ಸಂಪ್ರದಾಯಗಳನ್ನು ಕಲಿಯುವುದು ನಮ್ಮ ಜ್ಞಾನವನ್ನು ವಿಸ್ತರಿಕೊಳ್ಳುವದು ಅದರಲ್ಲೂ ಮುಖ್ಯವಾಗಿ ಶ್ರಾವಕರ ಶ್ರಾವಕಿಯರ ಮತ್ತು ಆತ್ಮೀಯರ ಜೊತೆಗಿನ ಪ್ರವಾಸವು ನಮ್ಮ ಸಾಮಾಜಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಎಲ್ಲರಿಗೂ ಅತ್ಯಂತ ಖುಷಿ ನೀಡಿದ ಹಾಗೂ ಯಶಸ್ವಿ ಪ್ರವಾಸಕ್ಕೆ ಕಾರಣರಾದ ಪ್ರತಿಯೊಬ್ಬರೂ ಅಭಿನಂದನಾರ್ಹರು. ವರದಿ: ಶಾಂತರಾಜ ಮಲ್ಲಸಮುದ್ರ

ಅರಟಾಳ ಕ್ಷೇತ್ರದ ಕುರಿತು ಒಂದು ಕಿರುನೋಟ

Article Image

ಅರಟಾಳ ಕ್ಷೇತ್ರದ ಕುರಿತು ಒಂದು ಕಿರುನೋಟ

ಈ ಭಾಗದಲ್ಲಿ ಮಹಾಮಂಡಲೀಕ ತೈಲಪದೇವನ ಆಳ್ವಿಕೆಯ ಸಂದರ್ಭದಲ್ಲಿ ಈ ಅರಟಾಳ ಪ್ರದೇಶದಲ್ಲಿ ಪಾರ್ಶ್ವನಾಥ ಜಿನಾಲಯವು ಕ್ರಿ.ಶ 1122 ಪುಷ್ಯಮಾಸ ಆದಿತ್ಯವಾರ ಅಮವಾಸಿ ಡಿಸೇಂಬರ್ 30 ಸೂರ್ಯಗ್ರಹಣದ ದಿನ ಪ್ರತಿಷ್ಠಾಪನೆಯಾಗಿದೆ ಎಂದು ಶಾಸನದಲ್ಲಿ ಉಲ್ಲೇಖವಿದೆ. ಇಲ್ಲಿ ಗಮನಿಸಬೇಕಾಗಿದ್ದು ಏನೆಂದರೆ ರವಿವಾರ ಅಮವಾಸಿ ಸೂರ್ಯಗ್ರಹಣದ ಅತ್ಯಂತ ವಿಶೇಷ ಮತ್ತು ಅಪರೂಪದ ದಿನದಂದು ಪ್ರತಿಷ್ಠಾಪನೆಗೊಂಡಿರುವುದರಿಂದ ಇದು ಬಹಳ ಪ್ರಾಮುಖ್ಯತೆ ಪಡೆದಿದೆ ಮತ್ತು ನಮ್ಮ ಭಾಗದಲ್ಲಿ ಅತ್ಯಂತ ಅತಿಶಯವೂ, ಜಾಗ್ರತೆ ಸ್ಥಾನವೂ ಆಗಿದೆ. ಇಂತಹ ಐತಿಹಾಸಿಕ ಮಹತ್ವವನ್ನು ಹೊಂದಿದ ಈ ಕ್ಷೇತ್ರವು ಕಾಲಾನಂತರ ಭೂಮಿಯಲ್ಲಿ ಹುದುಗಿ ಅಗೋಚರವಾಗಿ ಭೂಗತ ದೇವಸ್ಥಾನವಾಗಿತ್ತು. ಪುಣ್ಯಭೂಮಿಯಾಗಿ ಪರಿವರ್ತನೆ:- ಇಲ್ಲಿ ದೊರೆತ ಶೀಲಾಶಾಸನಗಳಿಂದ ಈ ಸ್ಥಾನದ ಮಹಿಮೆಯನ್ನು ತಿಳಿದುಕೊಂಡು ಸುಮಾರು 17 ವರ್ಷಗಳ ಹಿಂದೆ ಅಂದರೆ 27-12-2009 ರಂದು ಉತ್ತರ ಕರ್ನಾಟಕದ ಪ್ರಭಾವಿ ಜ್ಞಾನಿಗಳು, ನಡೆದಾಡುವ ತೀರ್ಥoಕರ ಸ್ವರೂಪರೂ ಆದ ಜ್ಞಾನ ಭಾಸ್ಕರ ಸರಳ ಶೃತ ಪರಮ ಪೂಜ್ಯ ಆಚಾರ್ಯಶ್ರೀ ಪುಣ್ಯಸಾಗರ ಮಹಾರಾಜರು ಈ ಪ್ರದೇಶವನ್ನು ಸಮಗ್ರ ಅಭಿವೃದ್ಧಿ ಮತ್ತು ಬಸದಿಯನ್ನು ಜೀರ್ಣೋದ್ದಾರ ಮಾಡುವ ಸಂಕಲ್ಪದೊಂದಿಗೆ ಕಾರ್ಯಾರಂಭ ಮಾಡಿದರು. ಕಳೆದ 17 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಆಗುತ್ತಿದೆ. ಪೂಜ್ಯ ಮುನಿ ಮಹಾರಾಜರ ಆಶೀರ್ವಾದ ಪ್ರೇರಣೆ, ಪೂಜ್ಯ ಭಟ್ಟಾರಕರ ಮಾರ್ಗದರ್ಶನ ಹಲವಾರು ದಾನಿಗಳ ಇಚ್ಚಾಶಕ್ತಿ, ಸಮಾಜದ ಸಹಕಾರ ಹಾಗೂ ಭಕ್ತರ ಅಚಲ ಭಕ್ತಿಯಿಂದ ಭವ್ಯ ಧಾರ್ಮಿಕ ಕ್ಷೇತ್ರವಾಗಿ ರೂಪುಗೊಂಡಿದೆ. ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಯೂ ಸೇರಿ 24 ತೀರ್ಥoಕರರ ಪ್ರತಿಮೆ ಸ್ಥಾಪಿಲಾಗಿದೆ, ಗೋಶಾಲೆ, ಶೈಕ್ಷಣಿಕ ಸಂಸ್ಥೆ ಇತ್ಯಾದಿ ಅಭಿವೃದ್ಧಿ ಕೆಲಸಗಳು ಆಗಿವೆ. ನಡೆದ 17 ವರ್ಷಗಳ ಪಯಣವು ಕೇವಲ ಕಟ್ಟಡಗಳ ನಿರ್ಮಾಣವಲ್ಲ ಅದು ಭಕ್ತಿ, ತ್ಯಾಗ, ಸೇವೆ ಮತ್ತು ಸಮರ್ಪಣೆಯ ಜೀವಂತ ಇತಿಹಾಸವಾಗಿದೆ. ಈ ಅದ್ಭುತ ಬೆಳವಣಿಗೆಯನ್ನು ನಾವೆಲ್ಲರೂ ಕಣ್ತುಂಬಿಕೊಂಡಿದ್ದೇವೆ. ಅದರ ಸಂತೋಷ, ಹೆಮ್ಮೆ ಮತ್ತು ಧನ್ಯತೆಯ ಅನುಭವವನ್ನು ನಮ್ಮ ಹೃದಯದಲ್ಲಿ ತುಂಬಿಕೊಂಡಿದ್ದೇವೆ. ವಿಶೇಷವೆಂದರೆ ಆಚಾರ್ಯಶ್ರೀ ಪೂಜ್ಯ ಪುಣ್ಯಸಾಗರ ಮಹಾರಾಜರು ಇಲ್ಲಿ ಒಟ್ಟು ಐದು ಚತುರ್ಮಾಸ ಆಚರಣೆ ಮಾಡಿದ್ದಾರೆ. ಚತುರ್ಮಾಸ 2026 ಇದು ಆರನೇದ್ದಾಗಿದೆ. ವಿಶೇಷವೆಂದರೆ ಅಮವಾಸಿ ದಿನ ಇಲ್ಲಿ ಪೂಜೆ ಸಲ್ಲಿಸಿದರೆ ಸಕಲ ದೋಷಗಳು ಪರಿಹಾರವಾಗುತ್ತದೆ ಎನ್ನುವ ಪ್ರತೀತಿ ಇದೆ. ನಮ್ಮ ಹತ್ತಿರವೇ ಇರುವ ಈ ಅದ್ಭುತವಾದ ಜಾಗ್ರತ ಕ್ಷೇತ್ರದ ದರ್ಶನವನ್ನು ಕನಿಷ್ಠ ಪ್ರತಿ ಅಮವಾಸಿ ದಿನದಲ್ಲಿಯಾದರೂ ಮಾಡುವುದರೊಂದಿಗೆ ತಮ್ಮ ಇಷ್ಟಾರ್ಥ ಸಿದ್ಧಿ ಮಾಡಿಕೊಂಡು ಪುಣ್ಯ ಸಂಪಾದನೆ ಮಾಡಿಕೊಳ್ಳುವ ಸಂಕಲ್ಪವನ್ನು ಅನೇಕರು ಮಾಡಿಕೊಳ್ಳುತ್ತಿದ್ದಾರೆ. ಇಂದು ಮತ್ತೊಂದು ಹೊಸ ಅದ್ಯಾಯ :- ಪವಿತ್ರ ಸುಕ್ಷೇತ್ರ ಆರಟಾಳದ ಇತಿಹಾಸದಲ್ಲಿ ಇಂದು ಮತ್ತೊಂದು ಐತಿಹಾಸಿಕ ದಾಖಲೆಯಾಯಿತು, ಪರಮ ಪೂಜ್ಯ ಆಚಾರ್ಯಶ್ರೀ ಪುಣ್ಯಸಾಗರ ಮಹಾರಾಜರ ಪಾವನ ಸಾನಿಧ್ಯ ಮತ್ತು ಮುನಿಶ್ರೀ ಪುರಾಣ ಸಾಗರ ಮುನಿಮಹಾರಾಜರ ಮತ್ತು ಬಾಲ ಬ್ರಹ್ಮಚಾರಿ ಪೂಜ್ಯ ಶ್ರೀ ಸೋಮದೇವ ಬೈಯಾಜಿ ಇವರ ಉಪಸ್ಥಿತಿಯಲ್ಲಿ ಇಂದು ದಿನಾಂಕ 02-08-2026, ಭಾನುವಾರ ಮಂಗಳ ಕಲಶ ಸ್ಥಾಪನೆ ಕಾರ್ಯಕ್ರಮವನ್ನು ಬಾಗಲಕೋಟ ಜಿಲ್ಲಾ ನ್ಯಾಯಾಧೀಶರೂ ಆಚಾರ್ಯ ಪುಣ್ಯಸಾಗರ ಮುನಿ ಮಹಾರಾಜರ ಪರಮ ಶಿಷ್ಯರಾದ ರಾಜಶೇಖರ ತಿಲಗುಂಜಿ ದಂಪತಿಗಳು ಉದ್ಘಾಟಿಸಿದರು. ಗಣ್ಯ ಅತಿಥಿಗಳು, ಧರ್ಮಾಭಿಮಾನಿಗಳು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಈ ಸಮಾರಂಭ ನೆರವೇರಿತು. ಶಾಂತರಾಜ ಮಲ್ಲಸಮುದ್ರ

ಕ್ಷಮಿತ ಜೈನ್- ಪ್ರಥಮ ಸ್ಥಾನ

Article Image

ಕ್ಷಮಿತ ಜೈನ್- ಪ್ರಥಮ ಸ್ಥಾನ

ಮಂಗಳೂರಿನ ರಾಜ್ಯ ಸಾಹಿತ್ಯ ಚಿಗುರು ಬಳಗದ ವತಿಯಿಂದ ಬಳಗದ ಸದಸ್ಯರಿಗೆ ರಾಜ್ಯಮಟ್ಟದ ಚಿತ್ರ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಕ್ಷಮಿತ ಜೈನ್ ರವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಇವರು ಕೊಪ್ಪ ತಾಲೂಕಿನ ಬಿ.ಎ. ವರ್ಧಮಾನ ಮತ್ತು ಪದ್ಮಲತಾ ದಂಪತಿಗಳ ಪುತ್ರಿ. ಪ್ರಸ್ತುತ ಇವರು ಬೆಂಗಳೂರಿನ ಶ್ರೀ ಶ್ರೀ ಕಾಲೇಜಿನಲ್ಲಿ ಇಎನ್‌ಟಿ ವಿಭಾಗದಲ್ಲಿ ಎಂ.ಎಸ್ (ಮಾಸ್ಟರ್ ಆಫ್ ಸರ್ಜರಿ) ಅಂತಿಮ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ.

ವರ್ಷಾಯೋಗ ಚಾತುರ್ಮಾಸ

Article Image

ವರ್ಷಾಯೋಗ ಚಾತುರ್ಮಾಸ

'ಚಾತುರ್ಮಾಸ' ಎಂದರೆ ಅಕ್ಷರಶಃ 'ನಾಲ್ಕು ತಿಂಗಳುಗಳು'. ಇದು ಹಿಂದೂ ಕ್ಯಾಲೆಂಡರ್‌ನ ನಾಲ್ಕು ತಿಂಗಳುಗಳಾದ ಶ್ರಾವಣ, ಭಾದ್ರಪದ, ಅಶ್ವಿಜ ಮತ್ತು ಕಾರ್ತಿಕಗಳನ್ನು ಒಳಗೊಂಡಿರುವ ಪವಿತ್ರ ಅವಧಿಯಾಗಿದೆ. ಇದು ಆಷಾಢ ಮಾಸದ ಶುಕ್ಲ ಪಕ್ಷದ ಅಷ್ಟಮಿಯಿಂದ ಪ್ರಾರಂಭವಾಗುತ್ತದೆ ಮತ್ತು ಕಾರ್ತಿಕ ಮಾಸದ ಹುಣ್ಣಮೆಯವರೆಗಿನ ಪವಿತ್ರ ನಾಲ್ಕು ತಿಂಗಳುಗಳಾಗಿದ್ದು, ಚಾತುರ್ಮಾಸದಲ್ಲಿ 'ಭಗವಾನ್ ಸೋಯೆ ಹೈ, ದೇವರು ನಿದ್ರಿಸುತ್ತಾರೆ ಎನ್ನಲಾಗಿದೆ. ಚಾತುರ್ಮಾಸದ ಉಲ್ಲೇಖದಲ್ಲಿಯ ಪ್ರಕಾರ ಈ ಅವಧಿಯಲ್ಲಿ ವಿಷ್ಣು ಕ್ಷೀರ ಸಾಗರ ಸರೋವರವನ್ನು ಮೋಡಿ ಮಾಡುವಾಗ ಯೋಗ ನಿದ್ರೆಗೆ ಜಾರುತ್ತಾನೆ ಎಂದು ಹಿಂದೂ ಸಂಪ್ರದಾಯದಲ್ಲಿ ಹೇಳಲಾಗುತ್ತದೆ. ಅದಕ್ಕಾಗಿಯೇ ಚಾತುರ್ಮಾಸದ ಆರಂಭದಲ್ಲಿ ಬರುವ ಏಕಾದಶಿಯನ್ನು ದೇವಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಚಾತುರ್ಮಾಸದ ಅಂತ್ಯದಲ್ಲಿ ಬರುವ ಏಕಾದಶಿಯನ್ನು ದೇವ ಉಥಾನಿ ಏಕಾದಶಿ ಎಂದು ಕರೆಯಲಾಗುತ್ತದೆ, ಏಕೆಂದರೆ ಇದು ವಿಷ್ಣು ನಿದ್ರೆಯಿಂದ ಹೊರಬರುವ ಸಮಯ. ಈ ನಾಲ್ಕು ತಿಂಗಳುಗಳಲ್ಲಿ ವಿಷ್ಣು ನಿದ್ರಿಸುತ್ತಿರುವುದರಿಂದ, ಜನರು ಈ ಅವಧಿಯಲ್ಲಿ ಯಾವುದೇ ಧಾರ್ಮಿಕ ಅಥವಾ ಶುಭ ಚಟುವಟಿಕೆಗಳನ್ನು ಕೈಗೊಳ್ಳುವುದಿಲ್ಲ. ಚಾತುರ್ಮಾಸದ ಮಹತ್ವ: ಚಾತುರ್ಮಾಸವು ಮಳೆಗಾಲದ ತಿಂಗಳುಗಳಲ್ಲಿ ಬರುತ್ತದೆ. ಆದ್ದರಿಂದ, ವಾತಾವರಣವು ತುಂಬಾ ಭಿನ್ನವಾಗಿರುತ್ತದೆ. ಮಳೆಗಾಲವು ತಪಸ್ವಿಗಳಿಗೆ ಪ್ರಯಾಣಿಸಲು ಕಷ್ಟಕರವಾಗುತ್ತದೆ. ಆದ್ದರಿಂದ ಅವರು ಒಂದೇ ಸ್ಥಳದಲ್ಲಿ ಇದ್ದು ತಪಸ್ವಿ ಕೆಲಸ ಮತ್ತು ವ್ರತವನ್ನು ಮಾಡಲು ಬಯಸುತ್ತಾರೆ. ಮಳೆಗಾಲ ಬಂದಿರುವುದರಿಂದ, ಹಲವಾರು ಸಣ್ಣ ಕೀಟಗಳು ಹೊರಬಂದು ನಮ್ಮ ಪಾದಗಳ ಅಡಿಗೆ ಬೀಳುತ್ತದೆ. ಆದ್ದರಿಂದ ತಪಸ್ವಿಗಳು ತಮ್ಮ ಅಹಿಂಸಾ ವೃತ ಭಂಗವಾಗುತ್ತದೆ ಎಂದು ತಿರುಗಾಡುವುದನ್ನು ನಿಲ್ಲಿಸಿ ಒಂದು ಕಡೆ ನೆಲೆನಿಲ್ಲುತ್ತಾರೆ. ಋತುಮಾನ ಬದಲಾದಂತೆ ಮತ್ತು ನಮ್ಮ ಮಾನಸಿಕ ಸ್ಥಿತಿಯೂ ಬದಲಾವಣೆಗೆ ಒಳಗಾಗುತ್ತದೆ. ನಮ್ಮ ದೇಹವು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆಯು ಬದಲಾವಣೆಗಳನ್ನು ಅನುಭವಿಸುತ್ತದೆ. ಆದ್ದರಿಂದ, ಈ ಸಮಯದಲ್ಲಿ ಸರಳ ಆಹಾರವನ್ನು ಸೇವಿಸುವುದು ಒಳ್ಳೆಯದು. ಜೀರ್ಣಾಂಗ ವ್ಯವಸ್ಥೆಯ ಹೊರತಾಗಿ, ಮಹಿಳೆಯರ ಗರ್ಭಾಶಯವು ಪರಿಣಾಮ ಬೀರುತ್ತದೆ ಮತ್ತು ಈ ಅವಧಿಯಲ್ಲಿ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ ಜನರು ಬೆಲ್ಲ, ಹಾಲು ಉತ್ಪನ್ನಗಳು, ಮಸಾಲೆಯುಕ್ತ ಆಹಾರ, ಎಲೆ ತರಕಾರಿಗಳು, ಪಾನ್, ಸುಪಾರಿ, ತಂಬಾಕು, ಇತ್ಯಾದಿಗಳನ್ನು ತಿನ್ನುವುದನ್ನು ವರ್ಜ್ಯ ಮಾಡುವುದು ಒಳಿತು. ಮಳೆಗಾಲ ಇರುವುದರಿಂದ ರೋಗಗಳ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ ನಮ್ಮ ದೇಹಕ್ಕೆ ವಿಶ್ರಾಂತಿ ನೀಡಲು ಸಾಂದರ್ಭಿಕ ಉಪವಾಸಗಳು ಮತ್ತು ಸಾತ್ವಿಕ ಆಹಾರವನ್ನು ಸೇವಿಸುವುದು ಮುಖ್ಯವಾಗುತ್ತದೆ. ಹೊರಗಿನ ಆಹಾರವನ್ನು ಸೇವಿಸುವುದಕ್ಕೆ ನಿರ್ಬಂದಿಸಬೇಕು. ಮಳೆಗಾಲವಾದ್ದರಿಂದ, ಸೂರ್ಯನ ಬೆಳಕು ಕಡಿಮೆಯಾಗುವುದರಿಂದ ತಮ ಅಂಶ ಹೆಚ್ಚಾಗುತ್ತದೆ, ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ ಆ ತಮ ಅಂಶವನ್ನು ನಿಯಂತ್ರಿಸಲು, ನಾವು ಸಾತ್ವಿಕ ಆಹಾರವನ್ನು ಸೇವಿಸುವ ಮೂಲಕ ನಮ್ಮ ದೇಹವನ್ನು ಶುದ್ಧೀಕರಿಸಬೇಕು. ಇದರಿಂದಾಗಿ, ಸತ್ವ ಅಂಶ ಹೆಚ್ಚಾಗುತ್ತದೆ ಮತ್ತು ನಮ್ಮ ದೇಹವು ತಮ ಅಂಶವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ಅನೇಕ ಹಬ್ಬಗಳು ಬರುತ್ತವೆ, ಇದು ಸತ್ವ ಅಂಶವನ್ನು ಹೆಚ್ಚಿಸುತ್ತದೆ. ಜನರು ಉಪವಾಸ ಮಾಡುತ್ತಾರೆ ಮತ್ತು ದೇಹವು ಶುದ್ಧವಾಗುತ್ತದೆ. ಆದರೆ ಈ ಅವಧಿಯಲ್ಲಿ ಯಾವುದೇ ಶುಭ ಸಮಾರಂಭಗಳನ್ನು ಮಾಡಲಾಗುವುದಿಲ್ಲ. ಆಯುರ್ವೇದದ ಪ್ರಕಾರ ಚಾತುರ್ಮಾಸ್: ಈ ತಿಂಗಳುಗಳಲ್ಲಿ, ಮೊಳಕೆಯೊಡೆದ ಧಾನ್ಯಗಳನ್ನು ಸೇವಿಸಬೇಕಾಗುತ್ತದೆ.ಥಂಡಿ ಹೆಚ್ಚಾದಂತೆ ಮೊಸರು ಸೇವಿಸಬಾರದು ಎಂದು ಸಲಹೆ ನೀಡುತ್ತಾರೆ ಏಕೆಂದರೆ ಅದರ ಸೇವನೆಯು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆಯುರ್ವೇದದ ಪ್ರಕಾರ, ಹಾಲಿನ ಉತ್ಪನ್ನಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ಸಮಸ್ಯೆಗಳು ಉಂಟಾಗಬಹುದು, ಆದ್ದರಿಂದ ಈ ಸಮಯದಲ್ಲಿ ಅವುಗಳನ್ನು ತ್ಯಜಿಸಬೇಕು. ಜೈನ ಚಾತುರ್ಮಾಸದ ಆಚರಣೆ: ಚಾತುರ್ಮಾಸದ ಸಮಯದಲ್ಲಿ ಜೈನ ಮುನಿಗಳು ವರ್ಷಯೋಗವನ್ನು ಆಚರಿಸುತ್ತಾರೆ. ಈ ಅವಧಿಯಲ್ಲಿ ಅವರು ವ್ರತ, ಉಪವಾಸ, ಮೌನ ವ್ರತ ಇತ್ಯಾದಿಗಳನ್ನು ಮಾಡುತ್ತಾರೆ. ಮುನಿಗಳು, ಮಠಾದೀಶರು ಒಂದೇ ಸ್ಥಳದಲ್ಲಿದ್ದು ಧರ್ಮ ಪ್ರಭಾವನೆಯ ಕಾರ್ಯ ಮತ್ತು ಧರ್ಮೋಪದೇಶಗಳನ್ನು ಮಾಡುತ್ತಾರೆ. ನಮ್ಮ ದೇಹವನ್ನು ಶುದ್ಧೀಕರಿಸಿ ಮೋಕ್ಷದತ್ತ ಹೃದಯವನ್ನು ಕೊಂಡೊಯ್ಯಲು ನಮ್ಮ ಹೃದಯವನ್ನು ಶುದ್ಧೀಕರಿಸಿ ಸರಳ ಜೀವನ ವಿಧಾನಗಳನ್ನು ಅಳವಡಿಸಿಕೊಳ್ಳಲು ಮತ್ತು ದೇವರನ್ನು ಆರಾಧಿಸಲು ಚಾತುರ್ಮಾಸ ಆಚರಣೆ ಅಗತ್ಯವಾಗಿದೆ. ಚಾತುರ್ಮಾಸವು ಜೈನಧರ್ಮದಲ್ಲಿ ನಾಲ್ಕು ತಿಂಗಳ ಒಂದು ಮಹತ್ವದ ಪವಿತ್ರ ಅವಧಿಯಾಗಿದೆ. ಈ ಅವಧಿಯಲ್ಲಿ ಜೈನರು ತಪಸ್ಸು, ಉಪವಾಸ, ದಾನ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಹೆಚ್ಚಾಗಿ ಆಚರಿಸುತ್ತಾರೆ. ಚಾತುರ್ಮಾಸವು ಆಷಾಢ ಶುದ್ಧ ಅಷ್ಟಮಿಯಿಂದ ಕಾರ್ತಿಕ ಮಾಸದ ಹುಣ್ಣಿಮೆಯವರೆಗೆ ನಡೆಯುತ್ತದೆ. ಚಾತುರ್ಮಾಸದ ಮಹತ್ವ: ತಪಸ್ಸು ಮತ್ತು ಧಾರ್ಮಿಕ ಚಟುವಟಿಕೆಗಳು: ಚಾತುರ್ಮಾಸವು ಜೈನರ ತಪಸ್ಸು, ಉಪವಾಸ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗೆ ಮೀಸಲಾದ ಅವಧಿಯಾಗಿದೆ. ನಡಿಗೆಯನ್ನು ನಿಲ್ಲಿಸುವುದು: ಜೈನ ಸನ್ಯಾಸಿಗಳು ಈ ಅವಧಿಯಲ್ಲಿ ನಡಿಗೆಯನ್ನು ನಿಲ್ಲಿಸಿ, ಒಂದು ನಿರ್ದಿಷ್ಟ ಸ್ಥಳದಲ್ಲಿ ವಾಸಿಸುತ್ತಾರೆ ಮತ್ತು ಉಪನ್ಯಾಸಗಳನ್ನು ನೀಡುತ್ತಾರೆ. ಪಶ್ಚಾತ್ತಾಪ ಮತ್ತು ಕ್ಷಮೆ: ಚಾತುರ್ಮಾಸವು ಪಶ್ಚಾತ್ತಾಪ ಮತ್ತು ಕ್ಷಮೆಯ ಹಬ್ಬವಾಗಿದೆ. ಜೈನರು ಹಿಂದಿನ ವರ್ಷದ ಯಾವುದೇ ಕೃತ್ಯಗಳಿಗೆ ಕ್ಷಮೆ ಕೇಳುತ್ತಾರೆ. ಧಾರ್ಮಿಕ ಚಟುವಟಿಕೆಗಳು: ಚಾತುರ್ಮಾಸದಲ್ಲಿ, ಜೈನರು ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ, ಉದಾಹರಣೆಗೆ ದಾನ, ಉಪವಾಸ, ಪೂಜೆ ಇತ್ಯಾದಿ. ಜೀವದಯಾಷ್ಟಮಿ: ಚಾತುರ್ಮಾಸದಲ್ಲಿ ಜೀವದಯಾಷ್ಟಮಿ, ದಶಲಕ್ಷಣ ಮತ್ತು ಅನಂತ ಚತುರ್ದಶಿ ಸೇರಿದಂತೆ ಅನೇಕ ಹಬ್ಬಗಳು ಸೇರಿವೆ. ಚಾತುರ್ಮಾಸವು ಜೈನರಿಗೆ ಆಧ್ಯಾತ್ಮಿಕವಾಗಿ ಮತ್ತು ದೈಹಿಕವಾಗಿ ಸ್ವಚ್ಛಗೊಳಿಸಲು ಒಂದು ಉತ್ತಮ ಅವಕಾಶವಾಗಿದೆ. ಈ ಸಮಯದಲ್ಲಿ, ಜೈನರು ತಮ್ಮ ಕರ್ಮಗಳನ್ನು ಕಡಿಮೆ ಮಾಡಲು ಮತ್ತು ಆಧ್ಯಾತ್ಮಿಕ ಪ್ರಗತಿ ಸಾಧಿಸಲು ಪ್ರಯತ್ನಿಸುತ್ತಾರೆ. ಪ್ರೊ. ಅಕ್ಷಯ ಕುಮಾರ್,ಮಳಲಿ.

ಕಾರ್ಕಳ: ಜೈನ್ ಮಿಲನ್ ಮಾಸಿಕ ಸಭೆ

Article Image

ಕಾರ್ಕಳ: ಜೈನ್ ಮಿಲನ್ ಮಾಸಿಕ ಸಭೆ

ಭಾರತೀಯ ಜೈನ್ ಮಿಲನ್ ಇದರ ಜುಲೈ ತಿಂಗಳ ಮಾಸಿಕ ಸಭೆ ಮತ್ತು ಆಹಾರೋತ್ಸವ ಕಾರ್ಯಕ್ರಮವು ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ಅಶೋಕ್ ಎಚ್ ಎಂ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಾಮೂಹಿಕ ಪಂಚ ನಮಸ್ಕಾರ ಮಂತ್ರದೊಂದಿಗೆ ಸಭೆ ಆರಂಭಗೊಂಡಿತು. ಪ್ರಣಮ್ಯ ಅಶ್ವಿನ್ ಕುಮಾರ್ ಇವರು ಜೂನ್ ತಿಂಗಳ ಮಾಸಿಕ ಸಭೆಯ ವರದಿ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಜೈನ್ ಮಿಲನ್ ವಲಯ 8 ಇದರ ಮಂಗಳೂರು ವಿಭಾಗದ ನಿರ್ದೇಶಕರಾದ ಸುಕುಮಾರ್ ಬಲ್ಲಾಳ್ ಇವರು ಅನೇಕ ದೃಷ್ಟಾಂತಗಳ ಮೂಲಕ ಎಲ್ಲರ ಮನ ಮುಟ್ಟುವಂತೆ ಜೈನ ಧರ್ಮದ ತತ್ವಗಳ ಬಗ್ಗೆ ಮಾತನಾಡಿದರು. ಜುಲೈ ತಿಂಗಳಲ್ಲಿ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದವರಿಗೆ ಶುಭಾಶಯ ಕೋರಲಾಯಿತು. ಅದೃಷ್ಟಶಾಲಿ ವ್ಯಕ್ತಿ ಮತ್ತು ಅದೃಷ್ಟಶಾಲಿ ದಂಪತಿಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ ನೆನಪಿನ ಕಾಣಿಕೆ ವಿತರಿಸಲಾಯಿತು. ನಿರ್ದೇಶಕರಾದ ಯುವರಾಜ್ ಬಲಿಪ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆಹಾರೋತ್ಸವದಲ್ಲಿ 33 ಬಗೆಯ ತಿಂಡಿಗಳ ವ್ಯವಸ್ಥೆ ಮಾಡಲಾಗಿತ್ತು. ಅಧ್ಯಕ್ಷರಾದ ಅಶೋಕ್ ಎಚ್ ಎಂ ಅಧ್ಯಕ್ಷೀಯ ಭಾಷಣದಲ್ಲಿ ಕಾರ್ಯಕ್ರಮದ ಯಶಸ್ಸಿಗೆ ದುಡಿದವರಿಗೆ ಅಭಿನಂದಿಸಿದರು. ನಂತರ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೀಕ್ಷಿತ ಏ ಜೈನ್, ಪ್ರಖ್ಯ ಜೈನ್, ಮತ್ತು ರಿಧಿ ಜೈನ ರವರು ಪ್ರಾರ್ಥಿಸಿದರು. ಮಿಲನ್ ಕಾರ್ಯದರ್ಶಿ ವಸಂತ್ ಕುಮಾರ್ ಬಂಗ ರವರು ಸ್ವಾಗತಿಸಿ ಆಷಾಢ ಮಾಸದಲ್ಲಿ ಆಹಾರೋತ್ಸವದ ಪ್ರಾಮುಖ್ಯತೆ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುರೇಶ್ ಇಂದ್ರ ರವರು ವಂದಿಸಿದರು. ವೀರೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಾಮೂಹಿಕ ಶಾಂತಿ ಮಂತ್ರದೊಂದಿಗೆ ಸಭೆಯು ಮುಕ್ತಾಯಗೊಂಡಿತು.

ಮಲೆನಾಡ ಜೈನ ಅಡುಗೆ ಹಬ್ಬ

Article Image

ಮಲೆನಾಡ ಜೈನ ಅಡುಗೆ ಹಬ್ಬ

ಶಿವಮೊಗ್ಗ: ವೀರರಾಣಿ ಚನ್ನಭೈರಾದೇವಿ ಜಿಲ್ಲಾ ಜೈನ ಮಹಿಳಾ ಸಂಘಟನೆ ಇವರ ಆಯೋಜನೆಯಲ್ಲಿ ಆಷಾಢದಲ್ಲಿ ಒಂದು ದಿನ ಮಲೆನಾಡ ಜೈನ ಅಡುಗೆ ಹಬ್ಬ ಸಾಂಪ್ರದಾಯಿಕ ಮಲೆನಾಡ ಜೈನ ಆಹಾರ ಮಹೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮವನ್ನು ವಳಗೆರೆ ಪಂಚಕೂಟ ಬಸದಿ ಸಭಾಭವನದಲ್ಲಿ ಆಗಸ್ಟ್ 2ರಂದು ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ- ಸಮಾಲೋಚನಾ ಸಭೆ

Article Image

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ- ಸಮಾಲೋಚನಾ ಸಭೆ

ಬೆಂಗಳೂರು ಕೇಂದ್ರ ಕಚೇರಿಯಲ್ಲಿ ರಾಜ್ಯದ ಜೈನ ಸಮುದಾಯದ ಕುಂದು ಕೊರತೆಗಳ ಬಗ್ಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ನಿಸಾರ್ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳಜೈನ್ ರವರ ನೇತ್ರತ್ವದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶೇಕ್ ಲತಿಫ್ ರವರ ಉಪಸ್ಥಿತಿಯಲ್ಲಿ ಇಂದು (ಜು. 21) ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ಸಮಾಜದ ಪ್ರಮುಖರು ಹಾಗೂ ಡಾ. ಕೆ ಜಯಕೀರ್ತಿ ಜೈನ್ ಧರ್ಮಸ್ಥಳ, ಧನ ಕೀರ್ತಿ ಶೆಟ್ಟಿ ಧರ್ಮಸ್ಥಳ, ಮಹಾವೀರ್ ಜೈನ್ ದೆಪ್ಪುನಿ ಮುಂತಾದವರು ಭಾಗವಹಿಸಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಪ್ರಮುಖವಾಗಿ ತಸ್ತಿಕ್ ಕೊಡುತ್ತಿರುವ ಬಸದಿಗಳಿಗೆ ಸಹಾಯಕ ಪುರೋಹಿತರಿಗೂ ಗೌರವಧನ ನೀಡಬೇಕು, ಸ್ತ್ರೀ ಶಕ್ತಿ ಗುಂಪುಗಳಿಗೆ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ಕೊಡಬೇಕು, ಆಯೋಗದ ಕಚೇರಿಗಳಲ್ಲಿ ಸಮಾಜದವರಿಗೆ ಉದ್ಯೋಗ ಅವಕಾಶಗಳನ್ನು ನೀಡಬೇಕು, ಬಸದಿಗಳ ದಾಖಲೆಗಳನ್ನು ಸರಿಪಡಿಸಲು ಸಹಕರಿಸಬೇಕು, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮುಂತಾದ ಹಲವಾರು ವಿಷಯಗಳನ್ನು ಅಧ್ಯಕ್ಷರ ಗಮನಕ್ಕೆ ತಂದು ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಸಲ್ಲಿಸಲಾಯಿತು.

ಹೇಮಾವತಿ ವೀ. ಹೆಗ್ಗಡೆಯವರಿಗೆÀ ಗೌರವ ಡಾಕ್ಟರೇಟ್ ಪ್ರದಾನ

Article Image

ಹೇಮಾವತಿ ವೀ. ಹೆಗ್ಗಡೆಯವರಿಗೆÀ ಗೌರವ ಡಾಕ್ಟರೇಟ್ ಪ್ರದಾನ

ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಜ್ಞಾನವಿಕಾಸ’ ಕಾರ್ಯಕ್ರಮದ ಅಧ್ಯಕ್ಷರಾಗಿ ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸೇವಾ ಚಟುವಟಿಕೆಗಳಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಜಾಗತಿಕ ಮನ್ನಣೆ ಪಡೆದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಯಾದ ‘ಸ್ವಿಟ್ಜರ್ಲೆಂಡ್‌ನ ಪ್ರತಿಷ್ಠಿತ ಡನ್‌ಸ್ಟರ್ ಬ್ಯುಸಿನೆಸ್ ಸ್ಕೂಲ್’ ಇವರು ‘ಗೌರವ ಡಾಕ್ಟರೇಟ್’ ಪದವಿಯನ್ನು ನೀಡಿ ಗೌರವಿಸಿದರು. ಡನ್‌ಸ್ಟರ್ ಬಿಸಿನೆಸ್ ಸ್ಕೂಲ್ ಇದೊಂದು ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ರಾಜ್ಯಮಟ್ಟದ ಪುನಶ್ಚೇತನಾ ಕಾರ್ಯಾಗಾರದಲ್ಲಿ ಡನ್‌ಸ್ಟರ್ ಬಿಸಿನೆಸ್ ಸ್ಕೂಲ್‌ನ ಅಧ್ಯಕ್ಷರಾದ ಫಿಲಿಪ್ ಥೆವೆನೋಟ್‌ರವರು ಆನ್‌ಲೈನ್ ಮೂಲಕ ಪದವಿಯನ್ನು ಪ್ರಕಟಿಸಿದರು. ಡನ್‌ಸ್ಟರ್ ಬಿಸಿನೆಸ್ ಸ್ಕೂಲ್‌ನ ಪರವಾಗಿ ಅವಿನಾಶ್ ಗುಪ್ತಾರವರು ಗೌರವ ಡಾಕ್ಟರೇಟ್ ಪದವಿಯನ್ನು ಧರ್ಮಸ್ಥಳದಲ್ಲಿ ಪ್ರದಾನಿಸಿದರು. ಈ ಸಂದರ್ಭದಲ್ಲಿ ಅವಿನಾಶ್ ಗುಪ್ತಾರವರು ಮಾತಾನಾಡುತ್ತಾ ‘ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರನ್ನು ಗೌರವಿಸುವ ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳುವುದು ನಮ್ಮ ಸಂಸ್ಥೆಗೆ ಹೆಮ್ಮೆ ಹಾಗೂ ಧನ್ಯತೆಯ ಕ್ಷಣವಾಗಿದೆ. ನಾವಿಲ್ಲಿ ಕೇವಲ ಒಬ್ಬ ವ್ಯಕ್ತಿಯನ್ನು ಗೌರವಿಸುತ್ತಿಲ್ಲ. ಬದಲಾಗಿ ಅಸಂಖ್ಯಾತ ಜನರ ಬದುಕಿನಲ್ಲಿ ಬೆಳಕಾಗಿ, ಅವರ ಜೀವನವನ್ನೇ ಧನ್ಯಗೊಳಿಸಿದ ಮಹೋನ್ನತ ಚೇತನವೊಂದರ ಸಾಧನೆಯನ್ನು ಸಂಭ್ರಮಿಸುತ್ತಿದ್ದೇವೆ. ಅಪರೂಪಕ್ಕೊಮ್ಮೆ ನಮಗೆ ಇಂತಹ ಅಸಾಧಾರಣ ವ್ಯಕ್ತಿಗಳು ಸಿಗುತ್ತಾರೆ. ಇವರು ನಮಗೆ ಅತ್ಯುನ್ನತವಾದ ಜ್ಞಾನ ಅಂದರೆ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲ, ಬದಲಾಗಿ ಮಾನವನ ಬದುಕನ್ನು ಸುಧಾರಿಸುವ ಶಕ್ತಿ ಇದೆ ಎಂಬುದನ್ನು ನೆನಪಿಸುತ್ತಾರೆ. ಅಂತಹ ಅಸಾಧಾರಣ ವ್ಯಕ್ತಿತ್ವವೇ ಹೇಮಾವತಿ ವೀ. ಹೆಗ್ಗಡೆಯವರು. ಕಳೆದ ನಾಲ್ಕು ದಶಕಗಳಿಂದ ಗ್ರಾಮೀಣ ಮಟ್ಟದಲ್ಲಿ ಸುಸ್ಥಿರವಾದ ಸಾಮಾಜಿಕ ಪರಿವರ್ತನೆಯನ್ನು ನಿರಂತರವಾಗಿ ಹೇಗೆ ತರಬಹುದು ಎಂಬುವುದನ್ನು ಮಾತೃಶ್ರೀಯವರು ಅತ್ಯಂತ ಯಶಸ್ವಿಯಾಗಿ ತೋರಿಸಿಕೊಟ್ಟಿದ್ದಾರೆ. ಜಗತ್ತು ಮಹಿಳಾ ಸಬಲೀಕರಣ, ಆರ್ಥಿಕತೆ, ಸಾಮಾಜಿಕ ಉದ್ಯಮಶೀಲತೆ ಮತ್ತು ಸಮಗ್ರ ಅಭಿವೃದ್ಧಿಯಂತಹ ಪರಿಕಲ್ಪನೆಗಳನ್ನು ಒಪ್ಪಿಕೊಳ್ಳುವುದಕ್ಕಿಂತ ದಶಕಗಳ ಹಿಂದೆಯೆ ರಾಜ್ಯದಾದ್ಯಂತ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಇವರು ಕೆಲಸವನ್ನು ಮಾಡಿದ್ದಾರೆ. ಇವರ ಉದಾತ್ತ ಆದರ್ಶಗಳಿಗೆ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಸಾಕ್ಷಿಯಾಗಿದೆ. ಗ್ರಾಮೀಣ ಮಹಿಳೆಯರು ಎದುರಿಸುತ್ತಿದ್ದ ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರವಾಗಿ ನಾಲ್ಕು ದಶಕಗಳ ಹಿಂದೆ ‘ಜ್ಞಾನವಿಕಾಸ’ ಎಂಬ ಕಾರ್ಯಕ್ರಮವನ್ನು ಆರಂಭಿಸಿದರು. ಅದು ಇಂದು ಹೆಮ್ಮರವಾಗಿ ಬೆಳೆದು ವಾತ್ಸಲ್ಯ, ಮಾಸಾಶನ ಮುಂತಾದ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದೆ. ಜ್ಞಾನವಿಕಾಸದಿಂದಾಗಿ ಹಳ್ಳಿಯ ಮಹಿಳೆಯರಲ್ಲಿ ಮಹತ್ತರ ಬದಲಾವಣೆಯಾಗಿದೆ. ಆತ್ಮವಿಶ್ವಾಸ, ಸ್ವಾಭಿಮಾನದಿಂದ ಬದುಕು ಸಾಗಿಸಲು ಸಾಧ್ಯವಾಗಿದೆ. ಸಿರಿ ಗ್ರಾಮೋದ್ಯೋಗ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿದೆ. ಪರಿಸರ, ಜಲ ಸಂರಕ್ಷಣೆಯ ನಿಟ್ಟಿನಲ್ಲೂ ಕೆಲಸ ಮಾಡಿದ್ದಾರೆ. ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಇವರ ಕೊಡುಗೆ ಅಪೂರ್ವವಾದುದು. ಮಾತೃಶ್ರೀಯವರು ಸರ್ವ ಆದರ್ಶಗಳಿಗೆ ಮಾದರಿಯಾಗಿದ್ದಾರೆ. ಮಹಿಳಾ ಸಬಲೀಕರಣ, ಗ್ರಾಮಾಭಿವೃದ್ಧಿ ಸಮುದಾಯದ ನಾಯಕತ್ವ ಮತ್ತು ಮಾನವೀಯ ಸೇವೆಗೆ ಇವರು ನೀಡಿರುವ ಅಸಾಧಾರಣ ಕೊಡುಗೆಗಳನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಲಾಗಿದೆ’ ಎಂದರು. ಹೆಗ್ಗಡೆಯವರು, ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಡಾ. ಹರೀಶ್ ಕೃಷ್ಣ ಸ್ವಾಮಿ, ಉದಯಕುಮಾರ್ ಶೆಟ್ಟಿ, ಸಂಪತ್ ಸಾಮ್ರಾಜ್ಯ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದÀ ಅನಿಲ್ ಕುಮಾರ್ ಎಸ್.ಎಸ್., ಯೋಜನೆಯ ಹಣಕಾಸು ಅಧಿಕಾರಿಗಳಾದ ಶಾಂತಾರಾಮ್ ಆರ್. ಪೈ., ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಪ್ರಾದೇಶಿಕ ನಿರ್ದೇಶಕರು, ನಿರ್ದೇಶಕರುಗಳು, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. 1972 ಡಿಸೆಂಬರ್ 27ರಂದು ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿಯಾದ ಹೇಮಾವತಿ ವೀ. ಹೆಗ್ಗಡೆಯವರು ಮಹಿಳಾ ಸಬಲೀಕರಣಕ್ಕಾಗಿ, ಸಮಾಜದ ಅಸಹಾಯಕರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೈಗೊಂಡ ಕೆಲಸಗಳ ಪಟ್ಟಿ ಬಹುದೊಡ್ಡದು. ಧರ್ಮಸ್ಥಳದ ಯುವತಿಯರನ್ನೇ ಸೇರಿಸಿಕೊಂಡು ಆರಂಭಿಸಿದ ‘ಕನ್ಯಾಕುಮಾರಿ ಯುವತಿ ಮಂಡಲ ಮುಂದೆ ಅವರ ಸಮಾಜಸೇವೆಗೆ ಮುನ್ನುಡಿ ಬರೆಯಿತು. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರನ್ನು ಸ್ವಉದ್ಯೋಗಿಗಳನ್ನಾಗಿಸುವ ನಿಟ್ಟಿನಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಆರಂಭ, ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ‘ಗೆಳತಿ ಕೌಟುಂಬಿಕ ಸಲಹಾ ಕೇಂದ್ರ’ ಗ್ರಾಮೀಣ ಮಹಿಳೆಯರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸುವ, ಬೆಳೆಸುವ ನಿಟ್ಟಿನಲ್ಲಿ ಜ್ಞಾನವಿಕಾಸ ಕೇಂದ್ರಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ, ಮಹಿಳೆಯರು ನೀರಿಗಾಗಿ ಪಡುತ್ತಿರುವ ಬವಣೆಯನ್ನು ನೀಗಿಸಲು ರಾಜ್ಯದ ಕೆರೆಗಳನ್ನು ಹೂಳೆತ್ತುವ ಕಾರ್ಯಕ್ರಮ, ರಾಜ್ಯದಲ್ಲಿರುವ ಅಸಹಾಯಕರಿಗೆ ನೆರವು ನೀಡುವ ನಿಟ್ಟಿನಲ್ಲಿ ‘ವಾತ್ಸಲ್ಯ’, ‘ಮಾಸಾಶನ’ ಕಾರ್ಯಕ್ರಮ ಹೀಗೆ ಅವರು ಕೈಗೊಂಡ ಕಾರ್ಯಕ್ರಮಗಳು ಒಂದೆರಡಲ್ಲ. ಇವರು ಕಲಾಪ್ರಿಯರೂ ಹೌದು. ಧರ್ಮಸ್ಥಳದ ಸಿಬ್ಬಂದಿಗಳನ್ನು ಸೇರಿಸಿ ಕಟ್ಟಿದ ‘ರಂಗಶಿವ ಕಲಾ ಬಳಗ’ ಈಗಾಗಲೇ ಹಲವಾರು ನಾಟಕಗಳನ್ನು ಪ್ರದರ್ಶಿಸಿ ಕಲಾಭಿಮಾನಿಗಳ ಮನೆಗೆದ್ದಿದೆ. ಹಾಗೆಯೇ ಉಜಿರೆಯಲ್ಲಿ ‘ಸಮೂಹ’ ಸಾಂಸ್ಕೃತಿಕ ಕೇಂದ್ರ ವನ್ನು ಸ್ಥಾಪಿಸುವ ಮೂಲಕ ಉಜಿರೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕಾರಣೀಕರ್ತರಾಗಿದ್ದಾರೆ. ಓದು ಇವರ ಹವ್ಯಾಸಗಳಲ್ಲೊಂದು. ನಿರಂತರದ ‘ಗೆಳತಿ’, ಮಂಜುವಾಣಿಯ ‘ಮಗಳಿಗೊಂದು ಪತ್ರ’ ಅಂಕಣದ ಮೂಲಕವೂ ಇವರು ಚಿರಪರಿಚಿತರು. ಇವರು ಕೈಗೊಂಡಿರುವ ಕೆಲಸ ಕಾರ್ಯಗಳು, ಸೇವೆಗಳು ನಾಡಿಗೆ ಮಾದರಿಯಾಗಿದೆ.

ಕಾರ್ಕಳ: ಮಹಾಮಸ್ತಕಾಭಿಷೇಕ ಸಮಿತಿ ವತಿಯಿಂದ ಪೂಜ್ಯ ಯುಗಲ ಮುನಿ ಮಹಾರಾಜರ ಬೇಟಿ

Article Image

ಕಾರ್ಕಳ: ಮಹಾಮಸ್ತಕಾಭಿಷೇಕ ಸಮಿತಿ ವತಿಯಿಂದ ಪೂಜ್ಯ ಯುಗಲ ಮುನಿ ಮಹಾರಾಜರ ಬೇಟಿ

2027ರ ಫೆಬ್ರವರಿಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನ, ಸಮಿತಿಯ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಎಂ ಏನ್ ರಾಜೇಂದ್ರ ಕುಮಾರ್ ರವರ ಮುಂದಾಳತ್ವದಲ್ಲಿ ನಡೆಯುವ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ 2027 ರ ಮಹಾಮಸ್ತಕಾಭಿಷೇಕ ಮಹೋತ್ಸವ ಪ್ರಯುಕ್ತ ಮುಂಬೈಯ ಧುಲೆ ಎಂಬಲ್ಲಿ ವಿಹಾರ ಇರುವ ಪೂಜ್ಯ ಯುಗಲ ಮುನಿ ಮಹಾರಾಜರನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಪುಷ್ಪರಾಜ್ ಜೈನ್ ಮಂಗಳೂರು, ಕಾರ್ಯದರ್ಶಿಗಳಾದ ಭರತ್ ಕುಮಾರ್ ಜೈನ್ ಇರ್ವತ್ತೂರು, ಶೀತಲ್ ಜೈನ್ ಶಿರ್ಲಾಲು, ಹಿರಿಯರಾದ ಶ್ರೀವರ್ಮ ಜೈನ್, ರಘುಚಂದ್ರ ಜೈನ್, ಮಾಲತಿ ವಸಂತರಾಜ್, ವಿಜಯಲಕ್ಷ್ಮಿ ಹೇಮಚಂದ್ರ ಜೈನ್, ಮೋಹಿನಿ ವರ್ಧಮಾನ್, ಅಭೀಷ್ಟ ಕುಮಾರ್ ರವರು ಬೇಟಿ ನೀಡಿ ಪೂಜ್ಯ ಯುಗಲ ಮುನಿಮಹಾರಾಜರಿಂದ ಆಶೀರ್ವಾದ ಪಡೆಯಲಾಯಿತು.

ಪದ್ಮಾಂಬ ಮಹಿಳಾ ಸಮಾಜ: ಮಾಸಿಕ ಸಭೆ

Article Image

ಪದ್ಮಾಂಬ ಮಹಿಳಾ ಸಮಾಜ: ಮಾಸಿಕ ಸಭೆ

ದಾವಣಗೆರೆ: ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ, ಶ್ರೀ 1008 ಪಾರ್ಶ್ಶ್ವನಾಥ ಜಿನಮಂದಿರದ ಆವರಣದಲ್ಲಿ, ನಡೆದ ಸಮಾರಂಭದಲ್ಲಿ D.R.M. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರೂಪಶ್ರೀರವರು ದಾವಣಗೆರೆಯಲ್ಲಿ ಪ್ರಾಧ್ಯಾಪಕರಾಗಿ,ವಿಭಾಗ ಮುಖ್ಯಸ್ಥರಾಗಿ, ಪ್ರಾಶುಂಪಾಲರಾಗಿ ಅತ್ಯುತ್ತಮ ಸೇವೆ ಮತ್ತು ದಾವಣಗೆರೆಯ ಜೈನ ಸಮಾಜದ ಜೊತೆ ನಿಕಟ ಬಾಂಧವ್ಯವನ್ನು ಹೊಂದಿರುವುದನ್ನು ಗಮನಿಸಿ "ಪದ್ಮಾಂಬ ಮಹಿಳಾ ಸಾಧನಾ ಪ್ರಶಸ್ತಿ"ಯನ್ನು ನೀಡಿ ಗೌರವಿಸಲಾಯಿತು. ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು ಮಹಿಳೆಯರ ಸಬಲೀಕರಣ ಮತ್ತು ಮಹಿಳಾ ಸಮಾಜಕ್ಕೆ ಮಹಿಳೆಯರ ಕೊಡುಗೆ ಇದರ ಬಗ್ಗೆ ತುಂಬಾ ವಿವರವಾಗಿ ಚೆನ್ನಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪದ್ಮಾಂಬ ಮಹಿಳಾ ಸಮಾಜದ ಅಧ್ಯಕ್ಷರಾದ ವರ್ಷ ಸುಧೀರ್, ಕಾರ್ಯದರ್ಶಿಯಾದ ಸುಹಾಸಿನಿ ದೀಪಕ್, ಖಜಾಂಚಿಯಾದ ಚೇತನ ಪದ್ಮರಾಜ್ ಹಾಗೂ ಗೌರವಾಧ್ಯಕ್ಷರಾದ ಸರಸ್ವತಮ್ಮ ಬೆತುರ, ಸಂಸ್ಥಾಪಕರಾದ ಉಷಾ ಜಯಪ್ರಕಾಶ್ ಮತ್ತು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಪದ್ಮ ಪ್ರಕಾಶ್ ಹಾಗೂ ಕಾರ್ಯದರ್ಶಿಯಾದ ಹರ್ಷ ನಾಗರಾಜ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯೆಯರು ಉಪಸ್ಥಿತರಿದ್ದರು.

ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಮೂರ್ತಿಗಳು, ಶಾಸನಗಳು ಪತ್ತೆ

Article Image

ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಮೂರ್ತಿಗಳು, ಶಾಸನಗಳು ಪತ್ತೆ

ಮೈಸೂರಿನ ಬಳಿ ಇರುವ ಕುಮಾರ ಬೀಡು ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ಜೈನ ಬಸದಿಯು ಈಗ ಶಿಥಿಲವಾಗಿ ಪಾಳು ಬಿದ್ದಿರುವುದು ಪತ್ತೆಯಾಗಿದೆ. ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಎರಡು ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಗಳು ಎರಡು ಶಾಸನಗಳು ಮತ್ತು ಅನೇಕ ಜಿನ ಬಿಂಬಗಳು ಸ್ಥಳದಲ್ಲಿವೆ. ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸೂಚನೆಯಂತೆ ಜಿ ಡಿ ಪಾರ್ಶ್ವನಾಥ್ ಮತ್ತು ವೀರೇಂದ್ರ ಬೇಗೂರ್ ರವರು ಸ್ಥಳ ಪರಿಶೀಲನೆಗಾಗಿ ಇತ್ತೀಚೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಕುಮಾರಬೀಡು ಅಭಿವೃದ್ಧಿಗಾಗಿ ರಚಿಸಿರುವ ಟ್ರಸ್ಟಿನ ಅಧ್ಯಕ್ಷರಾದ ಮಿತ್ರಸೇನ ಜೈನ್ ಉಪಾಧ್ಯಕ್ಷ ಚಂದ್ರಶೇಖರ್ ಅರಿಗ ಕಾರ್ಯದರ್ಶಿ ಮಹಾವೀರ ಗೋಗಿ ಸಹಕಾರ್ಯದರ್ಶಿ ವಾಗೀಶ್ವರಿ ಪ್ರಕಾಶ್ ಸಂಘಟನಾ ಕಾರ್ಯದರ್ಶಿ ನವೀನ್ ಬಸ್ತಿ ಮತ್ತು ಟ್ರಸ್ಟಿಯಾದ ಶಾಂತಪ್ಪ ಮೈಸೂರು ಜೈನ ಸಮಾಜದ ಅಧ್ಯಕ್ಷರಾದ ಸುನಿಲ್ ಕುಮಾರ್ ತೀರ್ಥಕ್ಷೇತ್ರ ಕಮಿಟಿಯ ಕರ್ನಾಟಕ ಅಧ್ಯಕ್ಷರಾದ ವಿನೋದ್ ಕುಮಾರ್ ಬಾಕ್ಲೀವಾಲ್ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಎನ್ ಪ್ರಸನ್ನ ಕುಮಾರ್ ವರ್ಧಮಾನ ಜೈನ್ ಮಿಲನ್ ಉಪಾಧ್ಯಕ್ಷರಾದ ನಾಗರತ್ನ ಮತ್ತು ಚಂದ್ರಿಕಾ ರವರು ಕುಮಾರಬೀಡು ಉಪಸ್ಥಿತರಿದ್ದರು.

ಸರಣಿ ಉಪನ್ಯಾಸ ಕಾರ್ಯಕ್ರಮ

Article Image

ಸರಣಿ ಉಪನ್ಯಾಸ ಕಾರ್ಯಕ್ರಮ

ಉಜಿರೆ: ಶ್ರವಣಬೆಳಗೊಳದ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಇತ್ತೀಚೆಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕರಾದ ಬಿ. ಸೋಮಶೇಖರ ಶೆಟ್ಟಿ ರವರು ಜೀವನ ಮೌಲ್ಯ ಹಾಗೂ ಉತ್ತಮ ಆರೋಗ್ಯ ಕಾಪಾಡುವಲ್ಲಿ ವಿಧ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಗಳ ವತಿಯಿಂದ ಸಂಪನ್ಮೂಲ ವ್ಯಕ್ತಿಯಾದ ಬಿ.ಸೋಮಶೇಖರ ಶೆಟ್ಟಿ ಇವರನ್ನು ಗೌರವಿಸಲಾಯಿತು, ಶ್ರೀ ಕ್ಷೇತ್ರದ ವತಿಯಿಂದ ನಡೆಸಲ್ಪಡುವ ಪಿಯು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶೃತಕೀರ್ತಿ ರಾಜ್ ಉಪಸ್ಥಿತರಿದ್ದರು.

ಮೂಡುಬಿದಿರೆ: ಕಸ ವಿಲೇವಾರಿ ಪ್ರಾತ್ಯಕ್ಷಿಕೆ

Article Image

ಮೂಡುಬಿದಿರೆ: ಕಸ ವಿಲೇವಾರಿ ಪ್ರಾತ್ಯಕ್ಷಿಕೆ

ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಸಹಕಾರದಿಂದ ಕಾಲೇಜಿನ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಹಾಗೂ ಮೂಡುಬಿದಿರೆ ಪುರಸಭೆಯ ಸಹಯೋಗದೊಂದಿಗೆ ಕಸ ವಿಲೇವಾರಿ ಪ್ರಾತ್ಯಕ್ಷಿಕೆ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ‍್ಯಕ್ರಮದಲ್ಲಿ ಕಾಲೇಜಿನ ಸ್ಥಾಪಕ ಅಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ‍್ಯ ಪಂಡಿತಾಚಾರ‍್ಯವರ‍್ಯ ಮಹಾಸ್ವಾಮೀಜಿ ಪಾವನ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡುತ್ತ ನಮ್ಮ ಊರಿನ ಪರಿಸರದ ಸ್ವಚ್ಛ ಸುಂದರವಾಗಿಸಿ ಕಸ ಇಲ್ಲದಂತೆ ನೋಡುದು ನಮ್ಮೆಲ್ಲರ ಜವಾಬ್ದಾರಿ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿದಾಗ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರುತ್ತದೆ ಎಂದರು. ಕಾರ‍್ಯಕ್ರಮದಲ್ಲಿ ಮೂಡುಬಿದಿರೆ ಪುರಸಭೆಯ ಮುಖ್ಯ ಅಧಿಕಾರಿ ಇಂದೂರವರು ಹಾಗೂ, ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಉಪಸ್ಥಿತರಿದ್ದರು ಇವರನ್ನು ಸ್ವಸ್ತಿಶ್ರೀ ಪೂಜ್ಯ ಸ್ವಾಮೀಜಿಯವರು ಸನ್ಮಾನಿಸಿ ಅಭಿನಂದಿಸಿದರು. ಶಿಲ್ಪಾರವರು ಕಸ ವಿಲೇವಾರಿಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಯಾವ ಯಾವ ರೀತಿಯ ಕಸವನ್ನು ಯಾವ್ಯಾವ ರೀತಿ ವಿಲೇವಾರಿ ಮಾಡಬೇಕು ಎನ್ನುವ ವಿಷಯವನ್ನು ಮನವರಿಕೆ ಮಾಡಿಕೊಟ್ಟರು. ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಜ್ವಲ್ ಶೆಣೈ ಇವರು ಉಪಸ್ಥಿತರಿದ್ದರು. ಇವರು ಕಸ ವಿಲೇವಾರಿ ಮಾದರಿಗಳ ಮುಖಾಂತರ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಕಾರ‍್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಶ್ವೇತಾ ಜೈನ್ ನೋಟರಿ ಹಾಗೂ ನ್ಯಾಯವಾದಿಗಳು ಮೂಡುಬಿದಿರೆ ಇವರು ಉಪಸ್ಥಿತರಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಬಟ್ಟೆ ಚೀಲ ಉಚಿತವಾಗಿ ನೀಡಿದರು. ಮಧ್ಯಾಹ್ನ ನಡೆದ ಈ ಸುಂದರ ಸಮಾರಂಭದಲ್ಲಿ ಕಾಲೇಜಿನ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕಿ ಸರಸ್ವತಿ ವಂದಿಸಿದರು.

ಹುಬ್ಬಳ್ಳಿಯ ಬ್ರಹ್ಮಕುಮಾರ ಬೀಳಗಿರವರಿಗೆ ಚಾಣಕ್ಯಶ್ರೀ ಪುರಸ್ಕಾರ

Article Image

ಹುಬ್ಬಳ್ಳಿಯ ಬ್ರಹ್ಮಕುಮಾರ ಬೀಳಗಿರವರಿಗೆ ಚಾಣಕ್ಯಶ್ರೀ ಪುರಸ್ಕಾರ

ಹುಬ್ಬಳಿಯ ಹೆಸರಾಂತ ವ್ಯಾಪಾರೋಧ್ಯಮಿ, ಸರಳ ಸಜ್ಜನಿಕೆಯ ಸ್ನೇಹಜೀವಿ, ಅಜಾತ ಶತ್ರು ಹಾಗೂ ಜೈನ ಸಮಾಜದ ಗಣ್ಯರು, ಸಕ್ರಿಯ ಸಮಾಜಸೇವೆಯಲ್ಲಿ ಕ್ರೀಯಾಶೀಲರಾದ 80 ರ ಹರೆಯದ ಬ್ರಹ್ಮಕುಮಾರ ಬೀಳಗಿ ಇವರ ಸಹಸ್ರ ಚಂದ್ರದರ್ಶನ ಅಭಿಮಾನೋತ್ಸವ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮ ವೈಭವದಿಂದ ಮಾತ್ರ ಕೂಡಿರಲಿಲ್ಲ ಇದು ಇತರರಿಗೂ ಒಂದು ಅನುಕರಣಿಯ ಆದರ್ಶದ ಪಾಠ ಎನ್ನುವ ರೀತಿಯಲ್ಲಿ ಪರೋಕ್ಷವಾಗಿ ಸಂದೇಶ ರವಾನಿಸಿದಂತಿತ್ತು ಯಾಕಂದರೆ ಬ್ರಹ್ಮಕುಮಾರ ಬೀಳಗಿ ಇವರು 80 ರ ಹರೆಯದಲ್ಲೂ ಅವರ ಜೀವನ ಶೈಲಿ, ಯುವಕರನ್ನು ನಾಚಿಸುವ ಜೀವನೋತ್ಸಾಹ, ಕ್ರಮಬದ್ಧ ಶಿಸ್ತಿನ ದಿನಚರಿ, ಆರೋಗ್ಯ ಭಾಗ್ಯ ಇವೆಲ್ಲಕ್ಕಿಂತಲೂ ಮುಖ್ಯವಾಗಿ ಇವರ ಸಮಾಜಮುಖಿ ಕಲ್ಯಾಣ ಕಾರ್ಯಗಳು ನಿಜಕ್ಕೂ ಮೆಚ್ಚಬೇಕು. ಈ ಇಳಿ ವಯಸ್ಸಿನಲ್ಲೂ ನಿಮ್ಮ ಉತ್ಸಾಹಕ್ಕೆ ಚಿರಯೌವನ ಮತ್ತು ಆರೋಗ್ಯದ ಗುಟ್ಟೇನು? ಎಂದು ಯಾರಾದರೂ ಕೇಳಿದರೆ ಅದಕ್ಕೆ ಅವರು ಕೊಡುವ ಉತ್ತರ - ನಾನು ಎಲ್ಲರನ್ನೂ ಆತ್ಮೀಯವಾಗಿ ಪ್ರೀತಿಸುತ್ತೇನೆ ಯಾರನ್ನೂ ದ್ವೇಷಿಸುವದಿಲ್ಲ ಪ್ರತಿಯೊಬ್ಬರೂ ಒಳ್ಳೆಯವರೇ ಅವರಲ್ಲಿರುವ ಒಳ್ಳೆಯ ಗುಣಗಳನ್ನು ಸ್ವೀಕರಿಸುತ್ತೇನೆ, ಯಾರನ್ನೂ ನಿಂದಿಸುವದಿಲ್ಲ, ಸಹಾಯ, ಸಹಕಾರ, ಪರೋಪಕಾರ ದಾನ ಧರ್ಮ, ಮಾಡುವ ಮನೋಭಾವನೆ ಧಾರ್ಮಿಕ ಚಿಂತನೆ ಮೂಲಕ ಸಮಾಜದ ಕೆಲಸದಲ್ಲಿ ದೇವರನ್ನು ಕಾಣುವ ಪ್ರವೃತ್ತಿಯನ್ನು ಅಳವಡಿಸಿಕೊಂಡಿದ್ದೇನೆ ಪ್ರತಿಯೊಂದು ಕೆಲಸವನ್ನು ಇಷ್ಟಪಟ್ಟು ಮಾಡುತ್ತೇನೆ " ಎನ್ನುತ್ತಾರೆ. ಇದೇ ಇವರ ದೀರ್ಘ ಜೀವನೋತ್ಸಾಹದ ಸೂತ್ರ. ಇತ್ತೀಚಿನ ಆಧುನಿಕ ಪರಿಸರದಲ್ಲಿ ನಿತ್ಯ ಒತ್ತಡದ ಬದುಕು ಮತ್ತು ಅನಾರೋಗ್ಯ ಜೀವನಶೈಲಿ ಮಧ್ಯದಲ್ಲೂ ನಾವು ಹೇಗೆ ಉತ್ಸಾಹದಿಂದ ಬದುಕಬೇಕು ಎನ್ನುವದನ್ನು ಮೌಲ್ಯಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವದನ್ನು ಇವರಿಂದ ಕಲಿಯಬೇಕು ಎಂದು ಅನೇಕರು ಅಂದುಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಶ್ರೀ ಶಾಂತಿನಾಥ ತೀರ್ಥಂಕರ ದಿಗಂಬರ ಜೈನ ಬಸದಿ ಟ್ರಸ್ಟ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಮಹಾವೀರ ಗೊಂಗಡಿ ಸೇರಿ ಪದಾಧಿಕಾರಿಗಳು ಇವರ ಸಮಾಜ ಸೇವೆಯನ್ನು ಗುರುತಿಸಿ "ಚಾಣಕ್ಯಶ್ರೀ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಿದರು. ಮಾಜಿ ಮುಖ್ಯಮಂತ್ರಿ, ಸಂಸದರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ ಬೆಲ್ಲದ ರಾಜಕೀಯ ಮುಖಂಡರಾದ ಮಹೇಶ್ ತೆಂಗಿನಕಾಯಿ,ಶಂಕರಣ್ಣ ಮುನವಳ್ಳಿ, ಮೋಹನ್ ಲಿಂಬಿಕಾಯಿ, ಖ್ಯಾತ ಪತ್ರಕರ್ತ ಅಜಿತ್ ಹನಮಕ್ಕನವರ ಮುಂತಾದವರು ಭಾಗವಹಿಸಿ ಶುಭಕೋರಿ ಅಭಿನಂದಿಸಿದರು. ಎನ್ ಆರ್ ಪುರ ಜೈನ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮಿಗಳು, ಹೊಂಬುಜದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಸೇರಿದಂತೆ ಎಲ್ಲಾ ಜೈನ ಮಠಗಳ ಸ್ವಾಮೀಜಿಯವರು ಮತ್ತು ಮಾಜಿ ಮುಖ್ಯಮಂತ್ರಿ ಯಡೆಯೂರಪ್ಪ ಸೇರಿ ಹಲವು ರಾಜಕೀಯ ಗಣ್ಯರು ಶುಭ ಸಂದೇಶ ಕಳಿಸುವ ಮೂಲಕ ಶುಭಾಶಯ ತಿಳಿಸಿದ್ದಾರೆ. ವರದಿ : ಎಸ್ ಆರ್ ಮಲ್ಲಸಮುದ್ರ

ಸುಕೇಶ್‌ ಕುಮಾರ್ ಜೈನ್ ರವರಿಗೆ- ಆರೋಗ್ಯ ಸೇವಾ ರತ್ನ ಪ್ರಶಸ್ತಿ

Article Image

ಸುಕೇಶ್‌ ಕುಮಾರ್ ಜೈನ್ ರವರಿಗೆ- ಆರೋಗ್ಯ ಸೇವಾ ರತ್ನ ಪ್ರಶಸ್ತಿ

ಬೆಳ್ತಂಗಡಿ: ಬಸವ ಅಕ್ಯೂ ಅಕಾಡೆಮಿ, ಬೆಂಗಳೂರು ವತಿಯಿಂದ ಆಯೋಜಿಸಲಾದ ಅಕ್ಯುಪ್ರೆಶರ್ ಹಾಗೂ ಮರ್ಮಬಿಂದು ಕಾರ್ಯಾಗಾರದಲ್ಲಿ ಔಷಧ ರಹಿತ ಚಿಕಿತ್ಸಾ ಸೇವೆಯಲ್ಲಿ ಸಲ್ಲಿಸಿರುವ ಗಮನಾರ್ಹ ಕೊಡುಗೆಗಾಗಿ ಅಳದಂಗಡಿಯ ಕಲ‌ ಥೆರಪಿಸ್ಟ್ ಸುಕೇಶ್ ಕುಮಾರ್ ಜೈನ್ ಅವರಿಗೆ “ಆರೋಗ್ಯ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರಲ್ಲಿ ಕಲರ್ ಥೆರಪಿ, ಅಕ್ಯುಪ್ರೆಶರ್, ಮರ್ಮ ಪಾಯಿಂಟ್ ಥೆರಪಿ, ಸೀಡ್ ಥೆರಪಿ, ರೇಖೆ ಹೀಲಿಂಗ್ ಸೇರಿದಂತೆ ವಿವಿಧ ಪರ್ಯಾಯ ಚಿಕಿತ್ಸೆಗಳು ಲಭ್ಯವಿದ್ದು, ಆರೋಗ್ಯ ಜಾಗೃತಿ ಮತ್ತು ಸೇವೆಯ ಮೂಲಕ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು, ಸುಕೇಶ್ ಕುಮಾರ್‌ ಜೈನ್‌ ಅವರ ಸೇವಾ ಮನೋಭಾವವನ್ನು ಶ್ಲಾಘಿಸಿ ಅಭಿನಂದಿಸಿದರು.

ಗದಗ:- ಶ್ರೀ ಶಾಂತಿನಾಥ ವಿಧಾನ

Article Image

ಗದಗ:- ಶ್ರೀ ಶಾಂತಿನಾಥ ವಿಧಾನ

ಜೈನ ವಿಧಿವಿಧಾನಗಳು ಆತ್ಮದ ಶುದ್ಧೀಕರಣ ಮತ್ತು ಕರ್ಮಗಳ ವಿನಾಶಕ್ಕೆ ಅತ್ಯಂತ ಮಹತ್ವದ ಸಾಧನಗಳಾಗಿದ್ದು, ‘ಶಾಂತಿನಾಥ ವಿಧಾನ’ವು ಅತ್ಯಂತ ಪವಿತ್ರ ಮತ್ತು ಪ್ರಭಾವಶಾಲಿ ಪೂಜಾ ಆಚರಣೆಯಾಗಿದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ ವಿದಿತಸಾಗರ ಮಹಾರಾಜರು ಉಪದೇಶಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ಹುಡ್ಕೋ ಕಾಲೋನಿಯ ಸಚ್ಚಿದಾನಂದ ಮಠದ ಭವನದಲ್ಲಿ ಆಯೋಜಿಸಿದ್ದ ‘ಶ್ರೀ ಶಾಂತಿನಾಥ ವಿಧಾನ’ದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುತ್ತ, ಜೈನ ಪರಂಪರೆಯಲ್ಲಿ 16ನೆಯ ತೀರ್ಥಂಕರ ಶಾಂತಿನಾಥರನ್ನು ‘ಶಾಂತಿಯ ಅಧಿದೇವತೆ’ ಎಂದು ಆರಾಧಿಸಲಾಗುತ್ತದೆ. ಈ ವಿಧಾನವನ್ನು ಮಾಡುವುದರಿಂದ ಮನಸ್ಸಿನಲ್ಲಿರುವ ಒತ್ತಡ, ಕೋಪ, ಕ್ರೌರ್ಯಗಳು ದೂರವಾಗಿ ಇಡೀ ವಿಶ್ವದಲ್ಲಿ ಅಹಿಂಸೆ ಮತ್ತು ಶಾಂತಿ ನೆಲೆಸುತ್ತದೆ. ವ್ಯಾಪಾರ, ಉದ್ಯೋಗ, ಶಿಕ್ಷಣ, ಕುಟುಂಬದಲ್ಲಿ ಎದುರಾಗುವ ಕಷ್ಟಗಳು, ವಿಘ್ನಗಳು ಮತ್ತು ಪ್ರಾಕೃತಿಕ ವಿಕೋಪಗಳು ನಿವಾರಣೆಯಾಗುತ್ತವೆ. ಈ ವಿಧಿಯಲ್ಲಿ ಜಲ, ಚಂದನ, ಅಕ್ಷತೆ, ಪುಷ್ಪ, ದೀಪ, ಧೂಪ, ಫಲ, ಅರ್ಘ್ಯ ಎಂಬ ಅಷ್ಟದ್ರವ್ಯಗಳನ್ನು ಮಂತ್ರಘೋಷಗಳೊಂದಿಗೆ ಶಾಂತಿನಾಥ ತೀರ್ಥಂಕರರಿಗೆ ಸಮರ್ಪಿಸಲಾಗುತ್ತದೆ. ಈ ವಿಧಾನದಲ್ಲಿ ಭಾಗಿಯಾಗಿರುವ ತಾವೆಲ್ಲರೂ ಪುಣ್ಯಶಾಲಿಗಳಾಗಿದ್ದು, ಈ ಪರಂಪರೆಯನ್ನು ನಿರಂತರವಾಗಿ ಮುಂದುವರೆಸಲು ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಶ್ರಾವಕರು ನಗರದಲ್ಲಿ ಬಸದಿ, ಸಭಾಭವನ ನಿರ್ಮಿಸಲು ಉದಾರವಾಗಿ ಸಹಾಯ-ಸಹಕಾರ ನೀಡಬೇಕೆಂದು ಕೋರಿದರು. ಸಂಘದ ಗೌರವಾಧ್ಯಕ್ಷ ಡಾ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಗದಗ ಜಿಲ್ಲೆಯ ಪ್ರದೇಶದಲ್ಲಿ 7ನೆಯ ಶತಮಾನದಿಂದಲೂ ಅನೇಕ ಜೈನ ಮುನಿಗಳು, ಆರ್ಯಿಕೆಯರು ವಿಹಾರ ಕೈಗೊಂಡು ಧರ್ಮಪ್ರಭಾವನೆ ಮೂಲಕ ಲೋಕಕಲ್ಯಾಣ ಚಟುವಟಿಕೆಗಳನ್ನು ಕೈಗೊಳ್ಳುತ್ತ ಬಂದಿದ್ದು, ಆ ಪರಂಪರೆ ಮುನಿಶ್ರೀ ವಿದಿತಸಾಗರ ಮಹಾರಾಜರಿಂದಲೂ ಮುಂದುವರೆದಿರುವುದು ಇಲ್ಲಿಯ ಜೈನ ಸಮಾಜದ ಸೌಭಾಗ್ಯವಾಗಿದೆ ಎಂದು ಹೇಳಿದರು. ವಿಧಾನದಲ್ಲಿ ಪ್ರಕಾಶ ಮುತ್ತಿನ, ಸಂಕಪ್ಪ ನಾವಳ್ಳಿ, ಎಂ.ಟಿ. ಕಬ್ಬಿಣ, ಟಿವಿ-9 ವರದಿಗಾರ ಸಂಜಯ ಪಾಂಡ್ರೆ, ಎ.ಎನ್. ಬಸ್ತಿ, ನಾಗರಾಜ ತುಕೋಳ, ಯಶವಂತ ಸಿದ್ದಣ್ಣವರ, ಸುಭಾಸ ಅಂಗಡಿ, ಅನಂತರಾಜ ಬಸ್ತಿ, ರವಿ ಮುತ್ತಿನ, ಎ.ವಾಯ್. ಇಂಚಲ, ಹನಮಂತಗೌಡ ಮತಗಟ್ಟಿ, ಬಿ.ಎಸ್. ನಾವಳ್ಳಿ, ಪರಿಮಳಾ ಕುಲಕರ್ಣಿ, ಸಹನಾ ಹಂಜೆ, ಸುಮನ ಮುತ್ತಿನ, ಶೋಭಕ್ಕ ಇಂಚಲ, ವಸಂತಮಾಲಾ ದೇಸಾಯಿ, ಅನಂತಮತಿ ಬಸ್ತಿ, ಸುಪ್ರಿಯಾ ನಾವಳ್ಳಿ, ಮಧುಮತಿ ಕಬ್ಬಿಣ ಸೇರಿದಂತೆ ಜಿಲ್ಲೆಯ ಹಿರಿಯರು, ಶ್ರಾವಕ- ಶ್ರಾವಿಕೆಯರು ಭಾಗವಹಿಸಿ ಅಷ್ಟದ್ರವ್ಯಗಳಿಂದ ಪೂಜೆ ಸಲ್ಲಿಸಿ ಕೃತಾರ್ಥರಾದರು. ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಅವರು ಅಧ್ಯಕ್ಷೀಯ ನುಡಿಗಳಲ್ಲಿ ಮುನಿಶ್ರೀ ಅವರು ಗದಗ ನಗರಕ್ಕೆ ಆಗಮಿಸಿ ಧರ್ಮಪ್ರಭಾವನೆ ಕೈಗೊಂಡು ಶಾಂತಿನಾಥ ವಿಧಾನ ಆಚರಣೆಗೆ ಮಾರ್ಗದರ್ಶನದೊಂದಿಗೆ ಸಾನ್ನಿಧ್ಯ ವಹಿಸಿರುವುದು ಸದಾಕಾಲ ಸ್ಮರಣೀಯವಾಗಿದ್ದು, ಎಚ್.ಕೆ. ಪಾಟೀಲ ಅವರು ನಗರಾಭಿವೃದ್ಧಿ ಇಲಾಖೆಯಿಂದ ಬಸದಿ ಮತ್ತು ಸಭಾಭವನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿಕೊಡುವುದಾಗಿ ಜಿಲ್ಲೆಯ ಜೈನ ಸಮಾಜಕ್ಕೆ ಭರವಸೆ ನೀಡಿದ್ದಾರೆ. ಅವರ ಸಹಾಯ-ಸಹಕಾರದಿಂದ ನಗರದಲ್ಲಿ ಬಸದಿ ನಿರ್ಮಿಸಿ ಲೋಕಕಲ್ಯಾಣ ಚಟುವಟಿಕೆಗಳನ್ನು ಸಾಂಗವಾಗಿ ಮುಂದುವರೆಸಲಾಗುವುದೆಂದು ಹೇಳಿದರು. ಡಾ| ಅಪ್ಪಣ್ಣ ಹಂಜೆರವರು ಸ್ವಾಗತಿಸಿದರು. ಪ್ರಕಾಶ ಮುತ್ತಿನ ವಂದಾರ್ಪಣೆಗೈದರು. ಶಾಂತಿನಾಥ ತೀರ್ಥಂಕರರಿಗೆ ಆರತಿ ಮಾಡುವುದರೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

ತುಮಕೂರು: ಮುನಿ ಮಹಾರಾಜರುಗಳ ಆಗಮನ

Article Image

ತುಮಕೂರು: ಮುನಿ ಮಹಾರಾಜರುಗಳ ಆಗಮನ

ತುಮಕೂರು ನಗರದಲ್ಲಿ 2026 ರ ಚಾತುರ್ಮಾಸವನ್ನು ಆಚರಿಸಲು ದಿಗಂಬರ ಜೈನಾಚಾರ್ಯ 108 ಶ್ರೀ ಪ್ರಮುಖ ಸಾಗರ್ ಜೀ ಮಹಾರಾಜ್ ಮತ್ತು ಅವರ ಮುನಿ ಸಂಘ ದಿನಾಂಕ 6-7-2026 ಸೋಮವಾರ ತುಮಕೂರು ತಾಲ್ಲೂಕು ಪಂಡಿತನ ಹಳ್ಳಿ ಬಳಿ ಇರುವ ಮಂದಾರ ಗಿರಿ ಅತಿಶಯ ಕ್ಷೇತ್ರಕ್ಕೆ ಆಗಮಿಸಿದರು. ಜೈನ ಸಮಾಜದ ಅಧ್ಯಕ್ಷರಾದ ಟಿ ಡಿ ಬಾಹುಬಲಿ ಬಾಬು, ಪದಾಧಿಕಾರಿಗಳು ಮತ್ತು ತುಮಕೂರು ನಗರದ ಶ್ರಾವಕ -ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ತುಮಕೂರು: ವಿಶೇಷ ಕಾರ್ಯಾಗಾರ

Article Image

ತುಮಕೂರು: ವಿಶೇಷ ಕಾರ್ಯಾಗಾರ

ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಜೈನ ಅಧ್ಯಯನ ವಿಭಾಗದ ವತಿಯಿಂದ "ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ" ಎಂಬ ವಿಷಯದ ಕುರಿತು ಎರಡು ದಿನಗಳ ವಿಶೇಷ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಜೈನ ಸಂಶೋಧಕರು ಹಾಗೂ ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ (www.jainheritagecentres.com) ಅಂತರ್ಜಾಲತಾಣದ ಸಂಸ್ಥಾಪಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಬೆಂಗಳೂರಿನ ನಿತಿನ್ ಹೆಚ್.ಪಿ. ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, "ಜೈನಧರ್ಮದ ಇತಿಹಾಸ, ತತ್ವಶಾಸ್ತ್ರ, ಕಲೆ ಮತ್ತು ಪರಂಪರೆಯ ಕುರಿತು ಇದುವರೆಗೆ ನಡೆದಿರುವ ದಾಖಲೀಕರಣ ಹಾಗೂ ಸಂಶೋಧನೆಯ ಫಲವಾಗಿಯೇ ಜೈನಧರ್ಮವು ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ. ಜೈನಧರ್ಮದ ಮಹತ್ವ ಮತ್ತು ಅದರ ಅಮೂಲ್ಯ ಕೊಡುಗೆಗಳು ಮುಂದಿನ ಪೀಳಿಗೆಗೆ ಪರಿಣಾಮಕಾರಿಯಾಗಿ ತಲುಪಬೇಕಾದರೆ, ಜೈನ ಅಧ್ಯಯನವು ಶೈಕ್ಷಣಿಕವಾಗಿ ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ಜೈನ ಅಧ್ಯಯನ ಮತ್ತು ಸಂಶೋಧನೆಯ ವ್ಯಾಪ್ತಿಯನ್ನು ವಿಸ್ತರಿಸುವುದು ಇಂದಿನ ಅಗತ್ಯವಾಗಿದೆ" ಎಂದು ಅಭಿಪ್ರಾಯಪಟ್ಟರು. "ಭಾರತವನ್ನು ಬಿಟ್ಟು ಜೈನಧರ್ಮವಿಲ್ಲ, ಜೈನಧರ್ಮವನ್ನು ಬಿಟ್ಟು ಭಾರತವಿಲ್ಲ ಎನ್ನುವಷ್ಟು ಆಳವಾಗಿ ಜೈನಧರ್ಮವು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದ ನಾವು ದಿಗಂಬರ ಮತ್ತು ಶ್ವೇತಾಂಬರ ಎಂಬ ಪಂಥೀಯ ಭೇದಗಳನ್ನು ಮೀರಿ, ಜೈನಧರ್ಮವನ್ನು ಮುಕ್ತ ಮನಸ್ಸಿನಿಂದ ಅಧ್ಯಯನ ಮಾಡುವ ಅಗತ್ಯವಿದೆ" ಎಂದು ತಿಳಿಸಿದರು. ಬಳಿಕ ಇವರು ಭಾರತದಲ್ಲಿ ಜೈನ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಪರಂಪರೆ, ಭಾರತದಲ್ಲಿನ ಜೈನ ಗುಹೆಗಳ ವೈಶಿಷ್ಟತೆಗಳು, ಜೈನ ಪ್ರತಿಮಾಶಾಸ್ತ್ರ ಮತ್ತು ಅದರ ವಿಶಿಷ್ಟ ವಿನ್ಯಾಸಗಳು, ಜೈನ ಜಿನಾಲಯಗಳ ವಾಸ್ತುಶಿಲ್ಪ ಮತ್ತು ಅದರ ವಿಶೇಷತೆಗಳು. ಈ ಉಪನ್ಯಾಸಗಳು ಜೈನ ಕಲೆ, ವಾಸ್ತುಶಿಲ್ಪ, ಇತಿಹಾಸ ಮತ್ತು ಪರಂಪರೆಯ ವಿವಿಧ ಆಯಾಮಗಳನ್ನು ಒಳಗೊಂಡಿದ್ದು, ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಂದ ಉತ್ತಮ ಪ್ರತಿಕ್ರಿಯೆ ಪಡೆದವು. ನಾಡಿನ ಹಿರಿಯ ಜೈನ ವಿದ್ವಾಂಸರು ಮತ್ತು ಸಂಶೋಧಕರಾದ ಡಾ. ಎಸ್.ಪಿ. ಪದ್ಮಪ್ರಸಾದ್ ಅವರ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ಈ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಅವರ ಮಾರ್ಗದರ್ಶನವು ಕಾರ್ಯಕ್ರಮದ ಯಶಸ್ಸಿಗೆ ಮಹತ್ವದ ಕೊಡುಗೆಯಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪ್ರಾಧ್ಯಾಪಕರಾದ ಪ್ರೊ. ಶೇಟ್ ಪ್ರಕಾಶ್ ಅವರು ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ವೆಂಕಟರಾಮ ರೆಡ್ಡಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಎಂ. ಕೊಟ್ರೇಶ್ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ತುಮಕೂರು ವಿಶ್ವವಿದ್ಯಾಲಯದ ಜೈನಧರ್ಮ ಸ್ನಾತಕೋತ್ತರ ಡಿಪ್ಲೋಮಾ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು, ಕಾರ್ಯಕ್ರಮದ ಆಯೋಜನೆ ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜೊತೆಗೆ, ತುಮಕೂರು ನಗರದ ಶ್ರಾವಕ ಸಮುದಾಯದ ಸದಸ್ಯರು, ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಖ್ಯಾತ ವಿದ್ವಾಂಸರು, ಸಂಶೋಧಕರು ಹಾಗೂ ಶಿಕ್ಷಣ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಮಚಂದ್ರ ಕಿಲ್ಲೇದಾರರಿಗೆ ಪಿ.ಎಚ್.ಡಿ. ಪ್ರದಾನ

Article Image

ರಾಮಚಂದ್ರ ಕಿಲ್ಲೇದಾರರಿಗೆ ಪಿ.ಎಚ್.ಡಿ. ಪ್ರದಾನ

ಬೆಳಗಾವಿ: ಕಾಗವಾಡ ತಾಲೂಕಿನ ಉಗಾರಖುರ್ದ ಪಟ್ಟಣದ ಪೀಪಲ್ಸ್ ಎಜ್ಯುಕೇಶನ್ ಸೊಸೈಟಿಯ ಪ್ರಾಚಾರ್ಯರು ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಗೌರವಾನ್ವಿತ ಸಿಂಡಿಕೇಟ್ ಸದಸ್ಯರಾದ ರಾಮಚಂದ್ರ ಕಿಲ್ಲೇದಾರ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿ.ಎಚ್.ಡಿ. (ಡಾಕ್ಟರ್ ಆಫ್ ಫಿಲಾಸಫಿ) ಪದವಿಯನ್ನು ಅಧಿಕೃತವಾಗಿ ಪ್ರದಾನ ಮಾಡಿದೆ. ವಿಶ್ವ ವಿದ್ಯಾಲಯದ ವಾಣಿಜ್ಯ ನಿಕಾಯದ ವ್ಯವಹಾರ ನಿರ್ವಹಣೆ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮಾರ್ಗದರ್ಶಕರಾದ ಪ್ರೊ. ಎಸ್.ಸಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಇವರು ತಮ್ಮ ಸಂಶೋಧನಾ ಮಹಾಪ್ರಬಂಧವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇವರು ಉಗಾರ ಖುರ್ದದ ಹೆಸರಾಂತ ಶೈಕ್ಷಣಿಕ ಸಂಸ್ಥೆಯಾದ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2008 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಅವರ ನೇತೃತ್ವದಲ್ಲಿ ಒಂದರಿಂದ ಎಂಟನೆ ತರಗತಿಯ ಇಂಗ್ಲಿಷ್ ಮಾಧ್ಯಮಶಾಲೆ, ಪಿಯುಸಿ (ಕಲಾ ಮತ್ತು ವಾಣಿಜ್ಯ) ಹಾಗೂ ಬಿ.ಬಿ.ಎ., ಬಿ.ಸಿ.ಎ. ಮತ್ತು ಬಿ.ಕಾಂ. ಪದವಿ ಕಾಲೇಜುಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಗ್ರಾಮೀಣ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಮಹತ್ವದ ನೀಡುತ್ತಿದೆ.

ಸುಧೀರ್ ಕುಮಾರ್- ಅಧ್ಯಕ್ಷರಾಗಿ ಆಯ್ಕೆ

Article Image

ಸುಧೀರ್ ಕುಮಾರ್- ಅಧ್ಯಕ್ಷರಾಗಿ ಆಯ್ಕೆ

ಮೂಡುಬಿದಿರೆ ರೋಟರಿ ಇಂಗ್ಲೀಷ್ ಮೀಡಿಯಂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವೇಣೂರಿನ ಸುಧೀರ್ ಕುಮಾರ್ ರವರು ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

First Previous

Showing 1 of 23 pages

Next Last