ವಿಶ್ವ ಸ್ತನ್ಯಪಾನ ಸಪ್ತಾಹ 2026
Published Date: 05-Aug-2026
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸ್ತನ್ಯಪಾನದ ಮಹತ್ವ: ಎಸ್‌ಡಿಎಂನ “ಮಾತೃಸ್ಪರ್ಶ” ಮಾದರಿ ಪ್ರತಿ ವರ್ಷ ಆಗಸ್ಟ್ 1 ರಿಂದ 7ರವರೆಗೆ ವಿಶ್ವದಾದ್ಯಂತ ವಿಶ್ವ ಸ್ತನ್ಯಪಾನ ಸಪ್ತಾಹ (World Breastfeeding Week) ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ತಾಯಿಯ ಹಾಲಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ತಾಯಂದಿರಿಗೆ ಬೆಂಬಲ ನೀಡುವುದು ಹಾಗೂ ಪ್ರತಿಯೊಂದು ಮಗುವಿಗೂ ಜೀವನದ ಅತ್ಯುತ್ತಮ ಆರಂಭವನ್ನು ಕಲ್ಪಿಸುವುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಯುನಿಸೆಫ್ (UNICEF) ಜನನದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಲು, ಮೊದಲ ಆರು ತಿಂಗಳು ಮಗುವಿಗೆ ಕೇವಲ ತಾಯಿಯ ಹಾಲನ್ನೇ ನೀಡಲು ಹಾಗೂ ನಂತರ ಸೂಕ್ತ ಪೂರಕ ಆಹಾರದೊಂದಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸ್ತನ್ಯಪಾನ ಮುಂದುವರಿಸಲು ಶಿಫಾರಸು ಮಾಡಿವೆ. ತಾಯಿಯ ಹಾಲು ಮಗುವಿನ ಮೊದಲ ಲಸಿಕೆ ಎಂಬುದು ವೈದ್ಯಕೀಯವಾಗಿ ಸಾಬೀತಾಗಿದೆ. ಇದು ಮಗುವಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಸೋಂಕುಗಳಿಂದ ರಕ್ಷಿಸುತ್ತದೆ, ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ ಮತ್ತು ಭವಿಷ್ಯದಲ್ಲಿ ಮಧುಮೇಹ, ಸ್ಥೂಲಕಾಯ ಹಾಗೂ ಹಲವು ದೀರ್ಘಕಾಲೀನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದೇ ರೀತಿ ತಾಯಂದಿರಲ್ಲಿ ಹೆರಿಗೆಯ ನಂತರದ ರಕ್ತಸ್ರಾವ ಕಡಿಮೆಯಾಗಲು, ಗರ್ಭಾಶಯ ಶೀಘ್ರವಾಗಿ ತನ್ನ ಸಹಜ ಸ್ಥಿತಿಗೆ ಮರಳಲು ಹಾಗೂ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‌ನ ಅಪಾಯ ಕಡಿಮೆಯಾಗಲು ಸಹಕಾರಿಯಾಗಿದೆ. ಇಂದಿನ ಸಮಾಜದಲ್ಲಿ ಉದ್ಯೋಗ, ಕುಟುಂಬದ ಬದಲಾದ ಜೀವನಶೈಲಿ, ತಪ್ಪು ಕಲ್ಪನೆಗಳು, ಸರಿಯಾದ ಮಾರ್ಗದರ್ಶನದ ಕೊರತೆ ಹಾಗೂ ಹೆರಿಗೆಯ ನಂತರ ಸಮರ್ಪಕ ಸಮಾಲೋಚನೆಯ ಅಭಾವದಿಂದ ಅನೇಕ ತಾಯಂದಿರು ಸ್ತನ್ಯಪಾನದಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಮೊದಲ ಬಾರಿ ತಾಯಿಯಾಗುವ ಮಹಿಳೆಯರಿಗೆ ಮಗುವನ್ನು ಸರಿಯಾಗಿ ಹಾಲುಣಿಸಲು ಹಿಡಿಯುವುದು (Latching), ಮಗುವಿಗೆ ಸಾಕಷ್ಟು ಹಾಲು ಸಾಕಾಗುತ್ತಿಲ್ಲ ಎಂಬ ಆತಂಕ, ಸ್ತನದ ತೊಟ್ಟುಗಳ ನೋವಿನ ಸಮಸ್ಯೆ ಹಾಗೂ ಅವಧಿಪೂರ್ವ ಶಿಶುಗಳಿಗೆ ಹಾಲುಣಿಸುವ ತೊಂದರೆಗಳು ಸಾಮಾನ್ಯವಾಗಿವೆ. ಈ ಸವಾಲುಗಳನ್ನು ಮನಗಂಡು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಧಾರವಾಡದಲ್ಲಿ “ಮಾತೃಸ್ಪರ್ಶ” (Maatru Sparsha) – Breastfeeding Support and Latching Counselling Unit ಎಂಬ ವಿನೂತನ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಘಟಕವು ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಮಕ್ಕಳ ವಿಭಾಗ ಹಾಗೂ ಎಸ್.ಡಿ.ಎಂ. ನರ್ಸಿಂಗ್ ವಿಜ್ಞಾನಗಳ ಸಂಸ್ಥೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಯಂದಿರಿಗೆ ವೈಜ್ಞಾನಿಕ ಹಾಗೂ ಪ್ರಾಯೋಗಿಕ ಸ್ತನ್ಯಪಾನ ಮಾರ್ಗದರ್ಶನವನ್ನು ಉಚಿತವಾಗಿ ಒದಗಿಸುತ್ತಿದೆ. “ಮಾತೃಸ್ಪರ್ಶ” ಘಟಕದ ಪ್ರಮುಖ ಸೇವೆಗಳು: 1. ಹೆರಿಗೆಯ ನಂತರ ಮೊದಲ ಗಂಟೆಯಲ್ಲಿಯೇ ಸ್ತನ್ಯಪಾನ ಆರಂಭಿಸಲು ನೆರವು. 2. ಸರಿಯಾದ ಲ್ಯಾಚಿಂಗ್ (Latch) ಮತ್ತು ಸ್ತನ್ಯಪಾನ ಭಂಗಿಗಳ ಪ್ರದರ್ಶನ. 3. ಮೊದಲ ಬಾರಿಗೆ ತಾಯಿಯಾದ ಮಹಿಳೆಯರಿಗೆ ವೈಯಕ್ತಿಕ ಸಮಾಲೋಚನೆ. 4. ಕಡಿಮೆ ತೂಕದ ಹಾಗೂ ಅವಧಿಪೂರ್ವ ಶಿಶುಗಳ ತಾಯಂದಿರಿಗೆ ವಿಶೇಷ ಮಾರ್ಗದರ್ಶನ. 5. ಹಾಲಿನ ಕೊರತೆ, ಸ್ತನದ ಉಬ್ಬರ, ತೊಟ್ಟು ನೋವು ಮುಂತಾದ ಸಮಸ್ಯೆಗಳ ನಿರ್ವಹಣೆ. 6. ಕುಟುಂಬ ಸದಸ್ಯರಿಗೆ ಸ್ತನ್ಯಪಾನದ ಬಗ್ಗೆ ಅರಿವು ಮತ್ತು ಬೆಂಬಲದ ಮಹತ್ವ ತಿಳಿಸುವುದು. 7. ಮಗುವಿನ ಬೆಳವಣಿಗೆಯನ್ನು ಅನುಸರಿಸಿ ನಿರಂತರ ಸಲಹೆ ಮತ್ತು ಫಾಲೋ-ಅಪ್ ಸೇವೆ. ವಿಶೇಷವಾಗಿ ಸೀಳು ತುಟಿ ಮತ್ತು ಸೀಳು ಅಂಗುಳ (Cleft Lip and Palate) ಹೊಂದಿರುವ ಮಕ್ಕಳ ತಾಯಂದಿರಿಗೂ ವಿಶೇಷ ಸ್ತನ್ಯಪಾನ ಮಾರ್ಗದರ್ಶನವನ್ನು ಈ ಘಟಕದ ಮೂಲಕ ನೀಡಲಾಗುತ್ತಿದ್ದು, ಬಹುಶಿಸ್ತೀಯ (Multidisciplinary) ಆರೋಗ್ಯ ಸೇವೆಯ ಉತ್ತಮ ಮಾದರಿಯಾಗಿ ಇದು ಬೆಳೆಯುತ್ತಿದೆ. “ಮಾತೃಸ್ಪರ್ಶ” ಘಟಕದ ಮೂಲಕ ಇದುವರೆಗೆ ಅನೇಕ ತಾಯಂದಿರು ಆತ್ಮವಿಶ್ವಾಸದಿಂದ ಮಗುವಿಗೆ ಯಶಸ್ವಿಯಾಗಿ ಸ್ತನ್ಯಪಾನ ಮಾಡುತ್ತಿದ್ದು, ಆಸ್ಪತ್ರೆಯಲ್ಲಿ ಜನಿಸಿದ ಶಿಶುಗಳಲ್ಲಿ ಆರಂಭಿಕ ಸ್ತನ್ಯಪಾನದ ಪ್ರಮಾಣವನ್ನು ಹೆಚ್ಚಿಸಲು ಈ ಸೇವೆ ಮಹತ್ವದ ಪಾತ್ರ ವಹಿಸಿದೆ. ವೈದ್ಯರು, ಶುಶ್ರೂಷಕರು ಹಾಗೂ ಸ್ತನ್ಯಪಾನ ಸಲಹೆಗಾರರು ಒಗ್ಗೂಡಿ ಕಾರ್ಯನಿರ್ವಹಿಸುವ ಈ ಮಾದರಿ ತಾಯಿ ಮತ್ತು ಮಗುವಿನ ಆರೋಗ್ಯ ಸುಧಾರಣೆಗೆ ಹೊಸ ದಾರಿಯನ್ನು ತೆರೆದಿದೆ. ಸ್ತನ್ಯಪಾನವು ಕೇವಲ ತಾಯಿ ಮತ್ತು ಮಗುವಿನ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದಷ್ಟೇ ಅಲ್ಲ, ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ. ಪರಿಸರ ಸ್ನೇಹಿಯಾಗಿದೆ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿದೆ. ಆದ್ದರಿಂದ ಪ್ರತಿಯೊಬ್ಬ ತಾಯಿ, ಕುಟುಂಬ ಹಾಗೂ ಸಮಾಜ ಸ್ತನ್ಯಪಾನವನ್ನು ಬೆಂಬಲಿಸುವುದು ಕಾಲದ ಅಗತ್ಯವಾಗಿದೆ. ವಿಶ್ವ ಸ್ತನ್ಯಪಾನ ಸಪ್ತಾಹದ ಸಂದರ್ಭದಲ್ಲಿ, ಪ್ರತಿಯೊಬ್ಬ ಆರೋಗ್ಯ ವೃತ್ತಿಪರರು, ಕುಟುಂಬ ಸದಸ್ಯರು ಹಾಗೂ ಸಮಾಜದ ಎಲ್ಲರೂ “ಪ್ರತಿ ಮಗುವಿಗೂ ತಾಯಿಯ ಹಾಲು – ಪ್ರತಿಯೊಂದು ತಾಯಿಗೂ ನಮ್ಮ ಬೆಂಬಲ” ಎಂಬ ಸಂಕಲ್ಪದೊಂದಿಗೆ ಮುಂದೆ ಬರಬೇಕಾಗಿದೆ. ಆರೋಗ್ಯವಂತ ತಾಯಿ, ಆರೋಗ್ಯವಂತ ಮಗು ಮತ್ತು ಆರೋಗ್ಯವಂತ ರಾಷ್ಟ್ರ ನಿರ್ಮಾಣದತ್ತ “ಮಾತೃಸ್ಪರ್ಶ”ದಂತಹ ಉಪಕ್ರಮಗಳು ದೇಶದಾದ್ಯಂತ ವಿಸ್ತರಿಸಲಿ. ಡಾ. ರಂಗಪ್ಪ ಎಸ್. ಅಶಿ ಪ್ರಾಧ್ಯಾಪಕರು ಹಾಗೂ ಉಪಪ್ರಾಂಶುಪಾಲರು ಎಸ್.ಡಿ.ಎಂ. ನರ್ಸಿಂಗ್ ವಿಜ್ಞಾನಗಳ ಸಂಸ್ಥೆ, ಎಸ್.ಡಿ.ಎಂ. ವಿಶ್ವವಿದ್ಯಾಲಯ, ಧಾರವಾಡ.