ಜೈನ ಸಾಹಿತ್ಯ ಸಿರಿ ಕಾರ್ಯಕ್ರಮ
Published Date: 09-Aug-2026
ಬೆಂಗಳೂರು, ಆ.9- ರಾಮಾಯಣ ಕಾವ್ಯ ಭಾರತೀಯರಿಗೆ ಮಹತ್ವದ ಸಾಹಿತ್ಯ ಪರಂಪರೆಯಾಗಿದ್ದು, ಜೈನರಾಮಾಯಣವು ವೈದಿಕ ರಾಮಾಯಣಕ್ಕಿಂತ ಭಿನ್ನವಾದ ದೃಷ್ಟಿಕೋನವನ್ನು ಹೊಂದಿದೆ ಎಂದು ಪ್ರೊ. ಜಿ. ಅಶ್ವತ್ಥನಾರಾಯಣ ಹೇಳಿದರು. ಜೈನ ಮಿಲನ್ ಸೆಂಟ್ರಲ್ ಬೆಂಗಳೂರು ಹಾಗೂ ಜಯನಗರದ ಶ್ರೀಚಕ್ರೇಶ್ವರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಜೈನ ಸಾಹಿತ್ಯ ಸಿರಿ ಕಾರ್ಯಕ್ರಮದಲ್ಲಿ ಪ್ರೊ. ಜೀವಂಧರಕುಮಾರ ಹೋತಪೇಟಿ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಆಧ್ಯಾತ್ಮ ಯೋಗಿ ರಾಮ್ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಜೈನ ರಾಮಾಯಣಗಳಲ್ಲಿ ಪ್ರತಿನಾಯಕ ರಾವಣನನ್ನು ನೋಡುವ ವಿಭಿನ್ನ ದೃಷ್ಟಿಕೋನ ದೊರೆಯುತ್ತದೆ. ಶಾಸ್ತ್ರ ಮತ್ತು ಕಾವ್ಯವನ್ನು ಒಳಗೊಂಡಿರುವ ಆಧ್ಯಾತ್ಮಯೋಗಿ ರಾಮ ಕೃತಿಯ ಪುಟಪುಟಗಳಲ್ಲೂ ಜೈನಧರ್ಮದ ಶಾಸ್ತ್ರದ ತಿಳಿವಳಿಕೆ ಕಾಣಬಹುದು. ಮೂಲ ಕೃತಿಕಾರ ರವಿಶೇಷಣರು ರಚಿಸಿರುವ 18 ಸಾವಿರ ಶ್ಲೋಕಗಳ ಕೃತಿಯನ್ನು ಪ್ರೊ. ಜೀವಂಧರಕುಮಾರ ಹೋತಪೇಟೆ ಅಪೂರ್ವವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ಎಂದು ಹೇಳಿದರು. ಪ್ರೊ. ಜೀವಂಧರಕುಮಾರ ಮಾತನಾಡಿ, ಪ್ರತಿಯೊಬ್ಬ ಮನುಷ್ಯನೂ ತನ್ನ ಭವಿಷ್ಯದ ರೂವಾರಿಯಾಗಿದ್ದು, ಮಾನವ ಆತ್ಮ ಪರಮಾತ್ಮನಾಗುವ ಸಾಧ್ಯತೆ ಹೊಂದಿದೆ. ಸಂಸಾರ ಬಂಧನದಿಂದ ಮುಕ್ತರಾಗಲು ಮನುಷ್ಯ ಪ್ರಯತ್ನಿಸಬೇಕು ಎಂದರು. ಅನಿತಾ ಸುರೇಂದ್ರ ಕುಮಾರ ಮಾತನಾಡಿ, ಜೈನ ಸಾಹಿತ್ಯ ಸಿರಿ ಮೂಲಕ ಜನಸಾಮಾನ್ಯರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುತ್ತಿದೆ ಎಂದರು. ಡಾ. ನಲ್ಲೂರು ಪ್ರಸಾದ್, ಮಮತ ಕಾಂತರಾಜ್, ನಾಗಶ್ರೀ ಮುಪ್ಪಾನೆ, ಡಾ. ಪದ್ಮನಿ ನಾಗರಾಜು, ಬ್ರಾಹ್ಮಲ ಮದನಕುಮಾರ, ದೀಪಾಂಜಲಿ ಗೌರಾಜ್ ಉಪಸ್ಥಿತರಿದ್ದರು. ದಿಶಾ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.