ಶ್ರುತ ಪಂಚಮಿ- ಜೇಷ್ಠ ಶುದ್ಧ ಪಂಚಮಿ
ಭರತ ಭೂಮಿಯಲ್ಲಿ ಜೈನ ಧರ್ಮವು ಅತ್ಯಂತ ಪುರಾತನ ಧರ್ಮವಾಗಿದೆ.ಅಹಿಂಸಾಧಾರಿತ ಜೈನ ಧರ್ಮಕ್ಕೆ ತನ್ನದೇ ಆದ ಇತಿಹಾಸವಿದೆ.ಈ ಧರ್ಮದಲ್ಲಿ ಆಚರಿಸುವ ಹಬ್ಬಗಳು ಕೆಲವೊಂದು ರೀತಿಯಲ್ಲಿ ಭಿನ್ನವಾಗಿವೆ.ಆಚರಣೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿದ್ದರೂ ಅದರ ಉದ್ದೇಶ ಮತ್ತು ಸಾಫಲ್ಯತೆಯಲ್ಲಿ ಭಿನ್ನತೆಯಿಲ್ಲ. ಜೈನ ಸಂಪ್ರದಾಯದ ಎಲ್ಲಾ ಹಬ್ಬಗಳೂ ಆತ್ಮಶುದ್ಧಿ ಮತ್ತು ಆತ್ಮಕಲ್ಯಾಣಕ್ಕಾಗಿ ಇವೆ. ಶ್ರುತ ಎಂದರೆ ಸಂಸ್ಕೃತದಲ್ಲಿ ಕೇಳಿದ್ದು ಅಥವಾ ಕೇಳಿಸಿಕೊಂಡಿರುವ ಎಂದರ್ಥ. ಪಂಚಮಿ ಎಂದರೆ ಪ್ರತೀ ಚಾಂದ್ರಮಾನ ಮಾಸದ ಶುಕ್ಲ ಅಥವಾ ಕೃಷ್ಣ ಪಕ್ಷದ ಐದನೇ ದಿನ ( ತಿಥಿ).ಈ ದಿನವು ಅತ್ಯಂತ ಮಂಗಳಕರವಾಗಿದ್ದು, ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ. ಶ್ರುತ ಎಂದರೆ ಇನ್ನೊಂದು ಅರ್ಥ ಶಾಸ್ತ್ರ ಶ್ರುತ ಪಂಚಮಿಯು ಜೈನರಿಗೆ ಮಹತ್ವದ ಹಬ್ಬವಾಗಿದ್ದು, ಇದನ್ನು ಜೇಷ್ಠ ಶುದ್ಧ ಪಂಚಮಿಯಂದು ಆಚರಿಸುತ್ತಾರೆ. ಆ ದಿನ ಜಿನ ಮಂದಿರಗಳಲ್ಲಿ ಸರಸ್ವತಿ ಮಾತೆಯ ಪೂಜೆಯನ್ನೂ , ಶಾಸ್ತ್ರ ಗ್ರಂಥಗಳ ಪೂಜೆಯನ್ನೂ ಮಾಡುತ್ತಾರೆ. ತೀರ್ಥಂಕರರ ವಾಣಿಯೇ ಸರಸ್ವತಿ,ಎಂಬುವುದು ಜೈನರ ಸಿದ್ಧಾಂತ.ಈ ದೃಷ್ಟಿಯಿಂದ ಶ್ರುತ ಪಂಚಮಿಯ ಆರಾಧನೆಯೆಂದರೆ, ಜೈನರಿಗೆ ಜ್ಞಾನದ ಆರಾಧನೆಯೇ ಆಗಿದೆಯೆನ್ನಬಹುದು.ಈ ಜ್ಞಾನದ ಅಥವಾ ಶಾಸ್ತ್ರದ ಮೂಲ ಪುರುಷರು ತೀರ್ಥಂಕರರು.ಅವರ ದಿವ್ಯ ಧ್ವನಿಯ ಸಾರವೇ ಶ್ರುತ. ಈ ಭರತ ಕ್ಷೇತ್ರದಲ್ಲಿ ಜೈನ ಶಾಸ್ತ್ರಕ್ಕೆ ಮೂಲ ಪುರುಷರಾದ ವೃಷಭ ಮೊದಲಾದ ಇಪ್ಪತ್ತನಾಲ್ಕು ತೀರ್ಥಂಕರರು ಯಥಾಕ್ರಮವಾಗಿ ತಮ್ಮ ತಮ್ಮ ಕಾಲದಲ್ಲಿ ಶಾಸ್ತ್ರದ ಉಪದೇಶ ಮಾಡಿ ಜೈನ ಮತವನ್ನು ಪ್ರಕಾಶಪಡಿಸಿದರು. ವರ್ತಮಾನ ಕಾಲದ ಕೊನೆಯ ತೀರ್ಥಂಕರರಾದ ವರ್ಧಮಾನ ಮಹಾವೀರರು ಕ್ರಿ.ಪೂ.569 ರಲ್ಲಿ ಜನಿಸಿ,ಬಾಲ್ಯ ಕಾಲವನ್ನು ಕಳೆದ ನಂತರ ವೈಭವವನ್ನು ತೊರೆದು ಮುನಿ ದೀಕ್ಷೆಯನ್ನು ಹೊಂದಿ ತಪಸ್ಸಿನಲ್ಲಿ ತೊಡಗಿದರು.ಹನ್ನೆರಡು ವರ್ಷಗಳವರೆಗೆ ಅಖಂಡ ತಪಸ್ಸನ್ನು ಆಚರಿಸಿ,ಘಾತಿಕರ್ಮಗಳನ್ನು ಕೆಡಿಸಿ,ಕೇವಲ ಜ್ಞಾನವನ್ನು ಪಡೆದರು. ದಿವ್ಯ ಸಮವಸರಣದಲ್ಲಿ ವಿರಾಜಮಾನರಾದ ಭಗವಂತನ ಮುಖ ಕಮಲದಲ್ಲಿ ಓಂ ಕಾರ ದಿವ್ಯಧ್ವನಿ ಹೊರಟು ದ್ವಾದಶಾಂಗ ಚತುರ್ದಶ ಪೂರ್ವ ಶಾಸ್ತ್ರರೂಪಿ ಉಪದೇಶವನ್ನು ಆಚಾರ್ಯ ಪರಂಪರೆಯು ನಾಲ್ಕು ಅನುಯೋಗ ಗ್ರಂಥಗಳಲ್ಲಿ ಹಿಡಿದಿಟ್ಟಿತು. ಅವು ಈ ಕೆಳಗಿನಂತಿವೆ-; ಪ್ರಥಮಾನುಯೋಗ;- ಕೋಟ್ಯಾನುಕೋಟಿ ವರುಷಗಳಿಂದ ಹಿಡಿದು ಆ ಕಾಲದವರೆಗಿನ ಪುಣ್ಯ ಪುರುಷರ ಚರಿತ್ರೆಯೇ ಪ್ರಥಮಾನುಯೋಗ. 2.ಕರಣಾನುಯೋಗ;- ಇದು ಯುಗ ಪರಿವರ್ತನೆ,ಲೋಕಾ ಲೋಕಾ ವಿಭಾಗ,ನರಕ ಚತುರ್ಗತಿಯನ್ನು ತಿಳಿಸುವುದು. 3.ಚರಣಾನುಯೋಗ-; ಗೃಹಸ್ಥ ಮತ್ತು ತ್ಯಾಗಿಗಳ ಆಚರಣೆಯನ್ನು ತಿಳಿಸುವುದೇ ಚರಣಾನುಯೋಗ. 4.ದ್ರವ್ಯಾನುಯೋಗ-; ಜೀವಾದಿ ಪದಾರ್ಥಗಳ ಬಗ್ಗೆ ತಿಳಿಸುವ ವೇದವೇ ದ್ರವ್ಯಾನುಯೋಗ. ಈ ನಾಲ್ಕು ಅಂಗಗಳನ್ನು ಹನ್ನೆರಡು ವಿಭಾಗಗಳನ್ನಾಗಿ ಮಾಡಲಾಗಿದೆ.ಈ ಎಲ್ಲಾ ವಿಭಾಗಗಳನ್ನು ಸೇರಿಸಿ,ಜೈನರ ಪವಿತ್ರ ಗ್ರಂಥ ದ್ವಾದಶಾಂಗ ಎಂದು ಕರೆಯಲಾಗಿದೆ. ಹನ್ನೆರಡು ಅಂಗಗಳು ಈ ಕೆಳಗಿನಂತಿವೆ -; ಆಚಾರಾಂಗ, ಸೂತ್ರ ಕೃತಾಂಗ,ಸ್ಥಾನಾಂಗ,ಸಮವಾಯಾಂಗ,ವ್ಯಾಖ್ಯಾಪ್ರಜ್ಞಪ್ತಂಗ,ಜ್ಞಾತೃಕೃಥಾಂಗ,ಉಪಾಸಕಾಧ್ಯಯನಾಂಗ,ಅಂತಕೃದ್ದಶಾಂಗ,ಅನುತ್ತರೌಪ ಪಾದಿಕದಶಾಂಗ,ಪ್ರಶ್ನಾ ವ್ಯಾಕರಣಾಂಗ,ವಿಪಾಕಸೂತ್ರಾಂಗ, ದೃಷ್ಟಿವಾದಾಂಗ.ಭ.ಮಹಾವೀರರು ಈ ವೇದ ಶಾಸ್ತ್ರವನ್ನು ದಿವ್ಯಧ್ವನಿ ಮೂಲಕ ಸಮವಸರಣದಲ್ಲಿ ಉಪದೇಶ ಮಾಡಿ ಕ್ರಿ.ಪೂ.569 ರಲ್ಲಿ ನಿರ್ವಾಣ ಹೊಂದಿದರು.ಆ ನಂತರ ಗೌತಮ ಗಣಧರರು, ಆಚಾರ್ಯರು, ದಿವ್ಯಧ್ವನಿಯನ್ನು ಧಾರಣೆ ಮಾಡಿ ಇದನ್ನು ಉಪದೇಶ ಮಾಡುತ್ತಾ ಬಂದರು.ಈ ವೇದ ಶಾಸ್ತ್ರಗಳನ್ನು,ಅಪಾರವಾದ ಶಬ್ದ ರಾಶಿಯನ್ನು ಬರೆಯುವ ಪದ್ಧತಿ ಇರಲಿಲ್ಲ.ಸಾಧ್ಯವೂ ಇರಲಿಲ್ಲ.ಹೀಗೆ ಮಹಾವೀರ ಭಗವಂತರ ನಿರ್ವಾಣದ ಬಳಿಕ ಒಬ್ಬರ ನಂತರ ಒಬ್ಬರಾಗಿ 33 ಜನ ಆಚಾರ್ಯರು ನಿರಂತರ ಉಪದೇಶವನ್ನು ನೀಡಿದರು. ಆ ಕಾಲದವರೆಗೆ ವೇದಶಾಸ್ತ್ರ ತಿಳಿದ ಕುಶಾಗ್ರ ಬುದ್ಧಿಯ ಮುನಿಗಳು ತಮ್ಮ ಧಾರಣಾ ಶಕ್ತಿಯಿಂದ ಗ್ರಹಣ ಮಾಡುತ್ತಾ ಬಂದರಲ್ಲದೆ ಬರೆದಿಡುವ ಪದ್ಧತಿ ಇರಲಿಲ್ಲ.ಅಂದರೆ ಶಾಸ್ತ್ರವು ಶ್ರುತ ರೂಪದಲ್ಲಿಯೇ ಇತ್ತು,ಅದು ಲಿಪಿಬದ್ಧಗೊಂಡಿರಲಿಲ್ಲ. ಆ ಅವಸರ್ಪಿಣಿ ಕಾಲದಲ್ಲಿ ( ಋದ್ಧಿ ಹೀನ ಕಾಲ) ಮನುಷ್ಯನ ಶರೀರ ಪ್ರಮಾಣ, ಆಯುಷ್ಯ ಪ್ರಮಾಣ,ಬುದ್ಧಿ ಶಕ್ತಿ....ಎಲ್ಲವೂ ಕುಂದುತ್ತಾ ಬರುವುದು ಸ್ವಾಭಾವಿಕವಾದುದರಿಂದ ಗುರು ಪರಂಪರೆಯ ಧಾರಣಾ ಶಕ್ತಿ ( ನೆನಪಿನ ಶಕ್ತಿ) ಕಡಿಮೆಯಾಗುತ್ತಾ ಬಂತು.ಕ್ರಿ.ಶ.156 ನೇ ವರ್ಷದ ಕಾಲಕ್ಕೆ ಅಹಿಬಲ್ಯಾಚಾರ್ಯ ಮೊದಲಾದ ಆಚಾರ್ಯರಲ್ಲಿ ಕೇವಲ ಒಂದು ಅಂಗದ ಜ್ಞಾನ ಮಾತ್ರ ಉಳಿದಿತ್ತು.ಜೈನ ಪುರಾಣದ ಉಲ್ಲೇಖದ ಪ್ರಕಾರ ಶಾಸ್ತ್ರವು ಲಿಪಿಬದ್ಧಗೊಂಡ ಹಿನ್ನೆಲೆ ಈ ರೀತಿಯಾಗಿದೆ-;....ಈ ಸಮಯದಲ್ಲಿ ಜೈನ ಮಹಾಮುನಿ ಧರಸೇನಾಚಾರ್ಯರು ಎಂದಿನಂತೆ ಪ್ರವಚನ ಮಾಡುವಾಗ ಅವರು ಹೇಳಿದ ವಚನವನ್ನು ಪುನಃ ಹೇಳಿ ಎಂದು ನೆರೆದ ಭಕ್ತರು ಒಬ್ಬರು ಹೇಳಿದರಂತೆ.ಆಗ ಆಚಾರ್ಯರಿಗೆ ಮನುಷ್ಯರ ಸ್ಮರಣ ಶಕ್ತಿ ಕಡಿಮೆಯಾಗುತ್ತಾ ಇದೆ,ಅಲ್ಲದೆ ಪ್ರವಚನ ಕೇಳುವವರು ಕೂಡಾ ಕಡಿಮೆ ಜನರು ಎಂದು ತಿಳಿಯಿತು.ಆಗ ಅವರು ಜೈನರ ತೀರ್ಥ ಕ್ಷೇತ್ರವಾದ ಗಿರ್ನಾರ್ ನಲ್ಲಿ ಧ್ಯಾನ ಮಗ್ನರಾಗಿದ್ದರು.ಹೇಗಾದರೂ ಮಾಡಿ ಪರಮ ಪವಿತ್ರ ಶ್ರುತ ವಾಣಿಯ ರಕ್ಷಣೆ ಮಾಡಬೇಕೆನ್ನುವ ಸಂಕಲ್ಪ ಕೈಗೊಂಡರು. ಮುಂದಿನ ಕ್ರಮವಾಗಿ ದಕ್ಷಿಣ ಭಾರತದಿಂದ ಯೋಗ್ಯ ಶಿಷ್ಯರನ್ನು ಕಳುಹಿಸಬೇಕೆಂದು ಆಚಾರ್ಯರಿಗೆ ತಿಳಿಸಿದರು.ಆ ಪ್ರಕಾರ ಆಚಾರ್ಯರು ಇಬ್ಬರು ಅತ್ಯಂತ ಯೋಗ್ಯ ಶಿಷ್ಯರನ್ನು ಗಿರ್ ನಾರ್ ಗೆ ಕಳುಹಿಸಿದರು.ಅದೇ ದಿನ ರಾತ್ರಿ ಧರಸೇನಾಚಾರ್ಯರಿಗೆ ಒಂದು ಶುಭ ಸ್ವಪ್ನ ಬಿತ್ತು.ಆ ಸ್ವಪ್ನದಲ್ಲಿ ಎರಡು ಶ್ವೇತ ವರ್ಣದ ಎತ್ತುಗಳನ್ನು ಕಂಡರು.ಈ ಸ್ವಪ್ನದ ಫಲವನ್ನು ತಿಳಿದ ಧರಸೇನಾಚಾರ್ಯರು ಇಲ್ಲಿಗೆ ಬರುವ ಶಿಷ್ಯರು ಸಮರ್ಥರೂ ಅತೀ ವಿನಯಿಗಳೂ ಎಂದು ತಿಳಿದರು.ಮರುದಿನವೇ ಇಬ್ಬರು ಶಿಷ್ಯರು ಗಿರ್ ನಾರ್ ಗೆ ಬಂದು ಧರಸೇನಾಚಾರ್ಯರ ಚರಣ ಕಮಲಗಳಿಗೆ ಭಕ್ತಿ ಪೂರ್ವಕ ನಮಸ್ಕಾರ ಮಾಡಿದರು.ಆಚಾರ್ಯರು ಅವರ ಪಾಂಡಿತ್ಯ ಪರೀಕ್ಷೆ ಮಾಡಲು ಬಯಸಿದರು.ಅದಕ್ಕಾಗಿ ಒಬ್ಬರಿಗೆ ಒಂದು ಅಕ್ಷರ ಕಡಿಮೆ ಇರುವ ವಿದ್ಯಾಮಂತ್ರವನ್ನೂ, ಇನ್ನೊಬ್ಬರಿಗೆ ಒಂದು ಅಕ್ಷರ ಹೆಚ್ಚು ಇರುವ ವಿದ್ಯಾ ಮಂತ್ರವನ್ನು ನೀಡಿದರು.ಉಪವಾಸ ವ್ರತಾದಿಗಳನ್ನು ಮಾಡಿ ನಿಯತ್ತಿನಲ್ಲಿ ಗ್ರಂಥ ರಚನೆ ಮಾಡಲು ಆದೇಶಿಸಿದರು. ಶಿಷ್ಯರು ವಿದ್ಯಾದೇವಿಯನ್ನು ಭಕ್ತಿಯಿಂದ ಸ್ಮರಿಸಿದಾಗ ಅವರ ಎದುರು ಎರಡು ದೇವಿಯರು ಪ್ರತ್ಯಕ್ಷರಾದರು.ಆ ದೇವಿಯರು ಹೇಗಿದ್ದರು....? ಒಂದು ದೇವಿಗೆ ಒಂದೇ ಕಣ್ಣು.ಇನ್ನೊಂದು ದೇವಿಗೆ ಅಧಿಕ ಹಲ್ಲು ಇತ್ತು.ಒಟ್ಟಿನಲ್ಲಿ ವಿಕಾರ ರೂಪದ ದೇವಿಯರು ಪ್ರತ್ಯಕ್ಷವಾಗಿದ್ದರು.( ಈ ದೇವಿಯರ ವಿಗ್ರಹಗಳು ಶ್ರೀ ಕ್ಷೇತ್ರ ಕಂಬದಹಳ್ಳಿಯಲ್ಲಿದೆ ). ಇದನ್ನು ತಿಳಿದ ಶಿಷ್ಯರು ಗುರುಗಳು ಕೊಟ್ಟಿದ್ದ ವಿದ್ಯಾ ಮಂತ್ರದಲ್ಲಿ ಕಡಿಮೆ ಮತ್ತು ಅಧಿಕ ಅಕ್ಷರಗಳಿದ್ದುದನ್ನು ಗಮನಿಸಿ ಅದನ್ನು ಸರಿಪಡಿಸಿದರು.ಆಗ ಎರಡು ಕಣ್ಣುಗಳಿರುವ,ಸುಂದರವಾದ ದಂತಪಂಕ್ತಿಯುಳ್ಳ ಸುಂದರವಾದ ವಿದ್ಯಾದೇವತೆಗಳು ಪ್ರತ್ಯಕ್ಷರಾದರು. "ನಾವು ಏನು ಮಾಡಬೇಕು, ಆಜ್ಞೆ ಕೊಡಿ" ಎಂದರು.ಆಗ ಮುನಿ ಶ್ರೀಯವರು "ನೀವು ಏನೂ ಮಾಡಬೇಕಾಗಿಲ್ಲ, ನಾವು ಗುರುಗಳ ಆಜ್ಞೆಯನ್ನು ಪಾಲಿಸಲು ವಿದ್ಯಾದೇವಿಯ ಆರಾಧನೆಯನ್ನು ಮಾಡಿದೆವು",ಎಂದರು.ಅದನ್ನು ಕೇಳಿ ದೇವಿಯರು ಅವರವರ ಸ್ಥಾನಕ್ಕೆ ಹೋದರು.ಧರಸೇನಾಚಾರ್ಯರ ಪದತಲದಲ್ಲಿ ಈ ಮುನಿಗಳಿಬ್ಬರೂ ಷಟ್ಖಂಡಾಗಮದ ಗಂಭೀರ ಅಧ್ಯಯನ ಮಾಡಿದರು.ಗುರುಗಳು ತನ್ನ ಮೃತ್ಯು ಸಮೀಪಿಸಿದುದನ್ನು ತಿಳಿದು ಶಿಷ್ಯರನ್ನು ವಿಹಾರಕ್ಕೆ ಕಳುಹಿಸಿದರು.ಪುಷ್ಪದಂತರು ಬನವಾಸಿಗೂ,ಭೂತಬಲಿ ಮಥುರಾ ನಗರಕ್ಕೂ ಬಂದರು.ಪುಷ್ಪದಂತರು ಷಟ್ಖಂಡಾಗಮವನ್ನು ಲಿಪಿಬದ್ಧ ಗೊಳಿಸಲು ಆರಂಭಿಸಿದರು.ಇವರು ಪ್ರಥಮ ಖಂಡದ 177 ಸೂತ್ರಗಳನ್ನು ಮಾತ್ರ ಪೂರ್ಣಗೊಳಿಸಿದರು.ನಂತರ ತನ್ನ ಅಲ್ಪ ಆಯುವಿನ ಅರಿವಾಗಿ ಅದನ್ನು ಪೂರ್ಣಗೊಳಿಸಲು ಭೂತಬಲಿ ಮಹಾರಾಜರಿಗೆ ರವಾನಿಸಿದರು. ಭೂತಬಲಿ ಮಹಾರಾಜರು ಪ್ರಥಮ ಖಂಡದ ಶೇಷ ಭಾಗವನ್ನೂ ಮತ್ತು ಉಳಿದ ಐದು ಖಂಡಗಳನ್ನೂ ಸಂಪೂರ್ಣ ಮಾಡಿದರು.ಹೀಗೆ ಜಿನೇಂದ್ರ ಭಗವಂತರು ಪ್ರತಿಪಾದಿಸಿದ ಮೌಲ್ಯಗಳು ಆಚಾರ್ಯ ಧರಸೇನರ ನಿಮಿತ್ತದಿಂದ ಆಚಾರ್ಯ ಪುಷ್ಪದಂತ, ಮತ್ತು ಆಚಾರ್ಯ ಭೂತಬಲಿಮಹಾರಾಜರ ಬರವಣಿಗೆಯಿಂದ ಪರಮ ಪವಿತ್ರ ಷಟ್ಖಂಡಾಗಮ ಜೇಷ್ಠ ಶುದ್ಧ ಪಂಚಮಿಯಂದು ಲಿಪಿ ಬದ್ಧವಾಗಿ ರೂಪುಗೊಂಡಿತು. ಈ ಗ್ರಂಥ ಮುಂದೆ ಮುಸ್ಲಿಮರ ಆಕ್ರಮಣ ಆದಾಗ ಆ ಗ್ರಂಥಗಳನ್ನು ಶ್ರವಣಬೆಳಗೊಳದ ಮಹಾ ಸ್ವಾಮೀಜಿಯವರಿಗೆ ಒಪ್ಪಿಸಿದ ದಿನ ಕೂಡಾ ಜೇಷ್ಠ ಶುದ್ಧ ಪಂಚಮಿ. ಕಾಲಾಂತರದಲ್ಲಿ ಹೊಯ್ಸಳ ದೊರೆ ಬಿಟ್ಟಿದೇವ ವಿಷ್ಣುವರ್ಧನ ನಾದಾಗ ಜೈನ ಬಸದಿಗಳನ್ನು ಕೆಡವಿದಾಗ ಶಾಸನ ಗ್ರಂಥದಲ್ಲಿ ಇವೇ ಗ್ರಂಥಗಳನ್ನು ಮೂಡುಬಿದಿರೆ ಭಟ್ಟಾರಕರು ಇವರಿಗೆ ಐದು ಜನ ಸ್ಥಳೀಯ ಶೆಟ್ಟರ ಸಮ್ಮುಖದಲ್ಲಿ ಒಪ್ಪಿಸಲಾಯಿತಂತೆ.ಆ ದಿನ ಸಹಾ ಜೇಷ್ಠ ಶುದ್ಧ ಪಂಚಮಿ. ಮುಂದೆ 1999 ರ ನಂತರ ಶ್ರವಣಬೆಳಗೊಳದ ಧರ್ಮ ಯೋಗಿ, ಕರ್ಮಯೋಗಿ,ಭಟ್ಟಾರಕ ಮಹಾ ಶ್ರೀ ಚಾರುಕೀರ್ತಿ ಸ್ವಾಮೀಜಿ ಯವರು ಈ ಮೂರು ಗ್ರಂಥಗಳನ್ನು ವಿದ್ವಾಂಸರ ಸಹಾಯದಿಂದ ಕನ್ನಡ ಭಾಷೆಗೆ ಭಾಷಾಂತರ ಮಾಡಿ ಬಿಡುಗಡೆ ಮಾಡಿದ ದಿನ ಕೂಡಾ ಜೇಷ್ಠ ಶುದ್ಧ ಪಂಚಮಿ. (ಆದುದರಿಂದ ಶ್ರವಣಬೆಳಗೊಳದಲ್ಲಿ ಶ್ರುತ ಪಂಚಮಿ ಹಬ್ಬ ವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ). ಈ ಎಲ್ಲಾ ಕಾರಣಗಳಿಂದ ಶ್ರುತ ಪಂಚಮಿ ಜೈನ ಶಾಸ್ತ್ರದ ಶ್ರೇಷ್ಠತೆಯನ್ನು ಅರ್ಥೈಸುವ ಪವಿತ್ರ ಹಬ್ಬವಾಗಿದೆ. ಲಿಪಿಬದ್ಧವಾಗಿ ರೂಪುಗೊಂಡ ಗ್ರಂಥವನ್ನು ಜೇಷ್ಠ ಶುದ್ಧ ಪಂಚಮಿಯಂದು ಮುನಿ,ಆರ್ಯಿಕಾ,ಶ್ರಾವಕ ಶ್ರಾವಿಕೆಯರೆಂಬ ಚತು:ಸ್ಸಂಗ ಸೇರಿಸಿ ಆ ಗ್ರಂಥಗಳನ್ನೆಲ್ಲಾ ಪೂಜಿಸಿದರು.ಅಂದಿನಿಂದ ಜೈನರಿಗೆ ಜೇಷ್ಠ ಶುದ್ಧ ಪಂಚಮಿ ಎಂಬ ಪವಿತ್ರ ಪರ್ವ ತಿಥಿಯಾಗಿರುವುದು.ಈ ಪರ್ವವನ್ನು ನಾವು ಭಕ್ತಿ ಪೂರ್ವಕವಾಗಿ ಆಚರಿಸುತ್ತಿದ್ದೇವೆ. ಅದೇ ಶ್ರುತ ಪಂಚಮಿ ಜೈನಾಗಮ ನಮ್ಮ ಏಳಿಗೆಗೆ ಕಾರಣ.ಇವುಗಳನ್ನು ಉಳಿಸಿ, ಬೆಳೆಸಿದ ಗಣಧರಾದಿ ಆಚಾರ್ಯ ಪರಂಪರೆಗೆ ಕೃತಜ್ಞತೆ ವ್ಯಕ್ತಪಡಿಸುವುದೇ ಶ್ರುತ ಪಂಚಮಿಯ ಆಚರಣೆಯ ಹಿಂದಿನ ಉದ್ದೇಶ. ಶಾಸ್ತ್ರ, ಗ್ರಂಥಗಳನ್ನು ದಿನದಲ್ಲಿ ಕನಿಷ್ಠ ಹತ್ತು ನಿಮಿಷ ಆದರೂ ಓದಿ, ನಮ್ಮ ಜ್ಞಾನವನ್ನು ಇನ್ನೊಬ್ಬರಿಗೂ ಹಂಚಿಕೊಂಡು ಜಿನವಾಣಿಯ ಸೇವೆ ಮಾಡೋಣ..ಎಂಬ ಶುಭ ಸಂಕಲ್ಪವನ್ನು ಈ ಶುಭ ದಿನದಂದು ಮಾಡೋಣ. ಮಾಲತಿ ವಸಂತರಾಜ್, ಕಾರ್ಕಳ.
