ಬೆಳ್ತಂಗಡಿ: ಅರ್ಜಿ ಆಹ್ವಾನ
Published Date: 07-Aug-2026
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜೈನ ಧರ್ಮಿಯ ವಿದ್ಯಾರ್ಥಿಗಳಿಗೆ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ (ರಿ) ಬೆಳ್ತಂಗಡಿ ಹಾಗೂ ಶ್ರಾವಕ/ ಶ್ರಾವಿಕೆಯರ ಸಹಕಾರದಿಂದ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಕಳೆದ ಹಲವಾರು ವರ್ಷಗಳಿಂದ ನೀಡುತ್ತಾ ಬರಲಾಗುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನವನ್ನು ನೀಡಲಾಗುತ್ತಿದೆ. ಅದೇ ರೀತಿ 2026-27 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಜೈನ ಧರ್ಮೀಯ ವಿದ್ಯಾರ್ಥಿಗಳನ್ನು 2026ರ ಸೆಪ್ಟೆಂಬರ್ 21ರಂದು ಶ್ರೀ ಕ್ಷೇತ್ರ ಹೊಂಬುಜ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ಶ್ರೀಮದ್ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಗಿಂತ ಮೇಲ್ಪಟ್ಟು ಪಿಯುಸಿ, ಪದವಿ, ಐಟಿಐ, ಪಾಲಿಟೆಕ್ನಿಕ್, ಬಿಬಿಎಂ, ಇಂಜಿನಿಯರಿಂಗ್, ವೈದ್ಯಕೀಯ ಇನ್ನಿತರ ವ್ಯಾಸಂಗವನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳು ಮಾತ್ರ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಕಚೇರಿಯಲ್ಲಿ ಪಡೆದುಕೊಳ್ಳುವುದು ಮತ್ತು ಅರ್ಜಿಯೊಂದಿಗೆ ಪ್ರಸ್ತುತ ಕಲಿಯುತ್ತಿರುವ ಸಂಸ್ಥೆಯಿಂದ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಕಳೆದ ವರ್ಷ ಕಲಿತು ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿಯ ಯಥಾಪ್ರತಿ, ವಿದ್ಯಾರ್ಥಿಯ ಖಾಯಂ ವಿಳಾಸ, ವಿದ್ಯಾರ್ಥಿಯ ಆಧಾರ್ ಪ್ರತಿ, ಸಂಪರ್ಕ ಸಂಖ್ಯೆ, ತಂದೆ ಮತ್ತು ತಾಯಿಯ ಹೆಸರು ನಮೂದಿಸಿ ಅವರಿಬ್ಬರಲ್ಲಿ ಒಬ್ಬರ ಸಹಿಯನ್ನು ಕಡ್ಡಾಯವಾಗಿ ಮಾಡಿ ಆಗಸ್ಟ್ 31ರ ಒಳಗೆ ಕೆ. ಜಯವರ್ಮರಾಜ ಬಳ್ಳಾಲ್, ಮ್ಯಾನೇಜಿಂಗ್ ಟ್ರಸ್ಟಿ, ಕೆಲಗುತ್ತು ಸಬ್ರಬ್ಯೆಲು ದಿ. ಕಿನ್ಯಮ್ಮ ಯಾನೆ ಗುಣವತಿಯಮ್ಮ ಮೆಮೋರಿಯಲ್ ಟ್ರಸ್ಟ್ ,(ರಿ), ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ, ಜೈನ್ ಪೇಟೆ, ಬೆಳ್ತಂಗಡಿ-574214 ದಕ್ಷಿಣ ಕನ್ನಡ ಈ ವಿಳಾಸಕ್ಕೆ ತಲುಪುವಂತೆ ಕಳುಹಿಸತಕ್ಕದ್ದು. ಅದೇ ರೀತಿ ಉಭಯ ಜಿಲ್ಲೆಗಳಲ್ಲಿ ಕ್ಯಾನ್ಸರ್, ಕಿಡ್ನಿ, ಹೃದಯ ಸಂಬಂಧಿ ಇನ್ನಿತರ ತೀವ್ರತರದ ಕಾಯಿಲೆಗಳಿಂದ ಬಳಲುತ್ತಿರುವ ಸಮಾಜದ ಅರ್ಹ ಬಂಧುಗಳು ಕೂಡ ಈ ಬಗ್ಗೆ ಈ ಮೇಲಿನ ವಿಳಾಸದಾರರನ್ನು ಸಂಪರ್ಕಿಸಿದಲ್ಲಿ ಪರಿಶೀಲಿಸಿ ಅಗತ್ಯ ನೆರವು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9448180439 ಈ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮ್ಯಾನೇಜಿಂಗ್ ಟ್ರಸ್ಟಿ ಕೆ. ಜಯವರ್ಮರಾಜ ಬಳ್ಳಾಲ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.