Article Image

ವಿಶ್ವಶಾಂತಿ ಯುವಸೇವಾ ಸಮಿತಿ (ರಿ) ಬೆಂಗಳೂರು ಶ್ರೀ ಆದಿನಾಥ ವೈಭವ ಕಾರ್ಯಕ್ರಮ

Article Image

ವಿಶ್ವಶಾಂತಿ ಯುವಸೇವಾ ಸಮಿತಿ (ರಿ) ಬೆಂಗಳೂರು ಶ್ರೀ ಆದಿನಾಥ ವೈಭವ ಕಾರ್ಯಕ್ರಮ

ವಿಶ್ವಶಾಂತಿ ಯುವಸೇವಾ ಸಮಿತಿ (ರಿ) ಬೆಂಗಳೂರು “ಶ್ರೀ ಆದಿನಾಥ ವೈಭವ” ವಿಶ್ವದ ಮೊದಲ ಬೃಹತ್ ಜಿನಸಹಸ್ರನಾಮ ಸ್ತುತಿ ವಿಶ್ವ ದಾಖಲೆ ಕಾರ್ಯಕ್ರಮವು ಸಾವಿರಕಂಬ ಬಸದಿಯಲ್ಲಿ ಪೂಜ್ಯ ಸ್ವಾಮೀಜಿಯವರ ಚಾಲನೆ ಮೂಲಕ ಸೆ. 22ರಂದು ಪ್ರಾತಃಕಾಲ 3.15ಕ್ಕೆ ನಡೆಯಲಿದೆ. ಕಾರ್ಯಕ್ರಮದ ಸಮಾರೋಪ ಸಮಾರಂಭವು ಮೂಡುಬಿದಿರೆ ಶ್ರೀ ಜೈನ ಮಠದ ಭಾರತಭೂಷಣ ಜಗದ್ಗುರು ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ, ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನಲ್ಲಿ ಸಂಜೆ 6.15ರಿಂದ ನಡೆಯಲಿದ್ದು, ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಗೌರವ ಅಧ್ಯಕ್ಷತೆಯಲ್ಲಿ, ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರೀಯಾ ಹರ್ಷೇಂದ್ರ ಕುಮಾರ್ ಇವರ ಗೌರವ ಅತಿಥೇಯದಲ್ಲಿ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಮತ್ತು ಕಾರ್ಯದರ್ಶೀಯಾದ ರಶ್ಮಿತಾ ಯುವರಾಜ್ ಜೈನ್ ಮತ್ತು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಇವರ ವಿಶೇಷ ಅತಿಥೇಯದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಪ್ರೊ. ಅಜಿತ್ ಪ್ರಸಾದ್ ನಿವೃತ್ತ ಉಪ ಪ್ರಾಂಶುಪಾಲರು ಮತ್ತು ವಿಭಾಗ ಮುಖ್ಯಸ್ಥರು ಮತ್ತು ವೀಣಾ ಬಿ. ಆರ್. ಶೆಟ್ಟಿ ಸಾಹಿತಿಗಳು ಮೂಡುಬಿದಿರೆ ಇವರು ಆಗಮಿಸಲಿದ್ದಾರೆ.

ಕಾರ್ಕಳ ಹಿರಿಯಂಗಡಿ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮದಲ್ಲಿ ದಶಲಕ್ಷಣ ಪರ್ವ ಆಚರಣೆ

Article Image

ಕಾರ್ಕಳ ಹಿರಿಯಂಗಡಿ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮದಲ್ಲಿ ದಶಲಕ್ಷಣ ಪರ್ವ ಆಚರಣೆ

ಕಾರ್ಕಳ ಹಿರಿಯಂಗಡಿ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮದಲ್ಲಿ ದಿನಾಂಕ 08.09.2024 ನೇ ಭಾನುವಾರದಿಂದ ದಿನಾಂಕ 10.09.2024 ನೇ ಮಂಗಳವಾರದವರೆಗೆ ಕಾರ್ಕಳ ದಾನಶಾಲಾ ಜೈನ ಮಠದ ರಾಜಗುರು ಧ್ಯಾನ ಯೋಗಿ ಪರಮಪೂಜ್ಯ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ದಶಲಕ್ಷಣ ಪರ್ವವನ್ನು ಶ್ರದ್ಧಾ ಭಕ್ತಿಯಿಂದ ಪ್ರತಿ ವರ್ಷದಂತೆ ಆಚರಿಸಲಾಯಿತು. ಉತ್ತಮ ಕ್ಷಮಾಧರ್ಮದಂದು ಧಾರ್ಮಿಕ ಚಿಂತಕರಾದ ಭರತ್ ರಾಜ್ ಮುಡಾರು, ಹಿರಿಯ ಮಾಘಮಾಲ, ಆಶ್ರಮದ ಆಡಳಿತ ಮಂಡಳಿಯ ಸದಸ್ಯರಾದ ಅಶೋಕ್ ಕುಮಾರ್ ಬಲ್ಲಾಳ್, ಪ್ರಭಾತ್ ಕುಮಾರ್, ಕಾರ್ಕಳ ಜೈನ್ ಮಿಲನಿನ ಅಧ್ಯಕ್ಷರಾದ ಅಶೋಕ್ ಎಚ್. ಎಂ., ಆಶ್ರಮದ ಮೇಲ್ವಿಚಾರಕರಾದ ವೀರೇಂದ್ರ ಜೈನ್ ಇವರುಗಳು ದೀಪ ಬೆಳಗಿಸುವುದರ ಮೂಲಕ 10 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿದಿನ ಸಂಜೆ ಶ್ರೀ ಜಿನಪೂಜೆ, ಭಜನೆ, ಮಹಾಮಂಗಳಾರತಿ, ವಿದ್ವಾಂಸರಿಂದ ಉಪನ್ಯಾಸ, ತತ್ವಾರ್ಥ ಸೂತ್ರವಾಚನ, ನಿಲಯದ ವಿದ್ಯಾರ್ಥಿಗಳಿಂದ ಭಾಷಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕೊನೆಯ ದಿನವಾದ ದಿನಾಂಕ 17.09.2024 ನೇ ಮಂಗಳವಾರ ಉತ್ತಮ ಬ್ರಹ್ಮಚರ್ಯ ಧರ್ಮದ ಆಚರಣೆಯಂದು ಆಶ್ರಮದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಎಂ.ಕೆ. ವಿಜಯಕುಮಾರ್ ಇವರ ಅಧ್ಯಕ್ಷತೆಯಲ್ಲಿ ಕೋಶಾಧಿಕಾರಿಗಳಾದ ಎಸ್. ಅನಂತರಾಜ್ ಪೂವಣಿ ಮತ್ತು ಆಶ್ರಮದ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಬ್ರಹ್ಮದೇವ ಆರ್. ಕೆ. ಕಳಸ ಇವರ ಗೌರವ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದ ಆರಂಭದಲ್ಲಿ ಯೋಗರಾಜ್ ಶಾಸ್ತ್ರಿ ಇವರು ಸ್ವಾಗತಿಸಿದರು. ಪರ್ವದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನಡೆಸಲಾದ ಧಾರ್ಮಿಕ ಮತ್ತು ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಶ್ರಮದ ಹಳೆ ವಿದ್ಯಾರ್ಥಿ ಸಂಘದ ಸದಸ್ಯರ ವತಿಯಿಂದ 7 ನೇ, 10 ನೇ ಮತ್ತು ದ್ವಿತೀಯ ಪಿಯುಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಆಶ್ರಮದ ಆಡಳಿತ ಮಂಡಳಿಯ ಸದಸ್ಯರಾದ ಬಿ. ಭರತ್ ರಾಜ್ ಇವರು ಪ್ರತಿವರ್ಷದಂತೆ ಇಬ್ಬರು ವಿದ್ಯಾರ್ಥಿಗಳ ಭೋಜನಶುಲ್ಕದ ವೆಚ್ಚವನ್ನು ದಾನವಾಗಿ ನೀಡಿದರು. ಅದೇ ರೀತಿ ದಿ| ಕೆ ನಾಗ ಕುಮಾರ ಇಂದ್ರ ಮತ್ತು ಇವರ ಧರ್ಮಪತ್ನಿ ದಿ| ವಿಜಯ ಲಕ್ಷ್ಮಿ ಇವರ ಸ್ಮರಣಾರ್ಥವಾಗಿ ಮೃತರ ಪುತ್ರಿ ಬಬಿತಾ ಮಂಜುನಾಥ್ ಪ್ರಸಾದ್ ಇವರು ಮೂವರು ವಿದ್ಯಾರ್ಥಿಗಳಿಗೆ ಔಷಧ ದಾನವನ್ನು ಮಾಡಿದರು. ಹಾಗೆ ಕಾರ್ಕಳದ ಹಿರಿಯ ಶ್ರಾವಕರಾದ ಸಾಂತ್ರಬೆಟ್ಟು ಪುಷ್ಪಾವತಿ ಅಮ್ಮ ಇವರು ಆಶ್ರಮದ ಭೋಜನ ನಿಧಿಗೆ ರೂ. 15000ವನ್ನು ದಾನವಾಗಿ ನೀಡಿದರು. ಪರ್ವದ ಹತ್ತು ದಿನಗಳ ಪೂಜಾ ಮತ್ತು ಇತರ ವೆಚ್ಚಗಳ ದಾನಿಗಳನ್ನು ಹಾಗೂ ಸಂಸ್ಥೆಗೆ ಧನ ಸಹಾಯ ಮಾಡಿದ, ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಿದ ಮಹನೀಯರುಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಆಶ್ರಮದ ಸಹ ಮೇಲ್ವಿಚಾರಕರಾದ ಶ್ರೀ ಬಾಹುಬಲಿ ಇವರು ತತ್ವಾರ್ಥಸೂತ್ರ ಪಠಿಸಿದರು. ವಿದ್ಯಾರ್ಥಿಗಳಾದ ಉತ್ಸವ್ ಮತ್ತು ಧ್ರುವ ಪ್ರಾರ್ಥಿಸಿದರು. ಪವನ್ ವರದಿ ಮಂಡಿಸಿದರು. ಪಾರ್ಶ್ವನಾಥ್ ಸಂದೇಶ ವಾಚಿಸಿದರು. ಪ್ರಜ್ವಲ್ ಮತ್ತು ಹರ್ಷಿತ್ ವಿದ್ಯಾರ್ಥಿ ಭಾಷಣ ನೆರವೇರಿಸಿದರು. ರಜತ್ ಧನ್ಯವಾದ ಸಮರ್ಪಿಸಿದರು. ತೀರ್ಥನ್ ಇವರು ಕಾರ್ಯಕ್ರಮ ನಿರೂಪಿಸಿದರು.

ಬಜಿಲಕೇರಿ ಶ್ರೀ ಆದಿನಾಥ ಬಸದಿ: ದಶಲಕ್ಷಣ ಪರ್ವ

Article Image

ಬಜಿಲಕೇರಿ ಶ್ರೀ ಆದಿನಾಥ ಬಸದಿ: ದಶಲಕ್ಷಣ ಪರ್ವ

ಬಜಲಕೇರಿ, ಸೆ. 21: ಭಾರತೀಯ ಜೈನ್ ಮಿಲನ್ ಆಶ್ರಯದಲ್ಲಿ ಬಜಿಲಕೇರಿಯ ಶ್ರೀ ಆದಿನಾಥ ಬಸದಿಯಲ್ಲಿ ದಶಲಕ್ಷಣ ಪರ್ವದ ಹಿನ್ನೆಲೆಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಮೂಡುಬಿದಿರೆಯ ಶ್ರೀ ಜೈನ ಮಠದ ಸ್ವಸ್ತಿಶ್ರೀ ಡಾ। ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನಗೈದರು. ಬಸದಿಯ ಮೊಕ್ತೇಸರರಾದ ಸುರೇಶ್ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ರಾಜವರ್ಮ ಬಳ್ಳಾಲ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭ ವಿದ್ವಾಂಸ ಮುನಿರಾಜ ರೆಂಜಾಳ ಕಾರ್ಕಳ ಅವರನ್ನು ಸಮ್ಮಾನಿಸಲಾಯಿತು. ಭಾರತೀಯ ಜೈನ್ ಮಿಲನ್ ನ ಮಂಗಳೂರು ವಲಯ ಅಧ್ಯಕ್ಷರಾದ ರತ್ನಾಕರ್ ಜೈನ್ ಸ್ವಾಗತಿಸಿದರು. ವೈಶಾಲಿ ಪಡಿವಾಲ್ ವಂದಿಸಿದರು. ಪ್ರಿಯಾ ಸುದೇಶ್ ನಿರೂಪಿಸಿದರು. ಸನತ್ ಕುಮಾರ್ ಜೈನ್ ಸಹಕರಿಸಿದರು. ದಿ। ಎಂ. ಶ್ರೀಧರ ಪಾಂಡಿ ವಿರಚಿತ ಜಿನಕಾವ್ಯ 'ಶ್ರೀ ಜ್ವಾಲಾಮಾಲಿನಿ ದೇವಿ ಚರಿತೆ' ಯಕ್ಷಗಾನದ ಶೈಲಿಯ ಕಾವ್ಯವಾಚನ ಕಾರ್ಯಕ್ರಮದಲ್ಲಿ ಕಾವ್ಯಶ್ರೀ ಅಜೇರು ಅವರಿಂದ ಹಾಡುಗಾರಿಕೆ ಹಾಗೂ ಮುನಿರಾಜ ರೆಂಜಾಳ ಕಾರ್ಕಳ ಅವರಿಂದ ಪ್ರವಚನ ನಡೆಯಿತು. ಚೆಂಡೆಯಲ್ಲಿ ಶ್ರೀಪತಿ ನಾಯಕ್ ಅಜೇರು, ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಸಹಕರಿಸಿದರು.

ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ದಶ ಲಕ್ಷಣ ಮಹಾಪರ್ವದ ಆಚರಣೆ

Article Image

ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ದಶ ಲಕ್ಷಣ ಮಹಾಪರ್ವದ ಆಚರಣೆ

ಪ.ಪೂ.ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಶ್ರೀ ಜೈನ ಮಠ, ಕಾರ್ಕಳ, ಇವರ ಪಾವನ ಸಾನಿಧ್ಯ, ಪೂಜ್ಯ ಖಾವಂದರ ಆಶೀರ್ವಾದ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಂತೆ ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ದಶಲಕ್ಷಣ ಮಹಾಪರ್ವವು ಹತ್ತು ದಿನಗಳ ಪರ್ಯಂತ ಅಷ್ಟವಿಧಾರ್ಚನೆ ಪೂಜಾವಿಧಿಗಳೊಂದಿಗೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಮಠದ ವ್ಯವಸ್ಥಾಪಕರಾದ ಧನಕೀರ್ತಿ ಕಡಂಬರು ಉಪಾಹಾರದ ವ್ಯವಸ್ಥೆಯನ್ನು ಮಾಡಿದ್ದಲ್ಲದೆ, ಶ್ರೀ ಬಾಹುಬಲಿ ಶ್ರಾವಿಕಾಶ್ರಮದ ಅಭಿವೃದ್ಧಿ ಕಾರ್ಯಗಳಿಗಾಗಿ ರೂ. ಒಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದುದನ್ನು ದಾನವಾಗಿ ನೀಡಿದ್ದಾರೆ. ಇವರನ್ನು ಶ್ರೀ ಬಾಹುಬಲಿ ಶ್ರಾವಿಕಾಶ್ರಮದ ಆಡಳಿತ ಮಂಡಳಿಯ ಕಾರ್ಯದರ್ಶಿಯವರಾದ ಶಿಶುಪಾಲ ಪೂವಣಿಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಸನ್ಮಾನಿಸಿದರು. ಡಾ. ಭರತೇಶ್ ರವರು, ಊರಿನ ಸದ್ಧರ್ಮ ಬಂಧುಗಳು ಮತ್ತು ಆಡಳಿತ ಮಂಡಳಿಯ ಸದಸ್ಯರೆಲ್ಲಾ ಉಪಸ್ಥಿತರಿದ್ದರು.

ದತ್ತಿನಿಧಿ ಪ್ರಶಸ್ತಿ ಪ್ರಧಾನ

Article Image

ದತ್ತಿನಿಧಿ ಪ್ರಶಸ್ತಿ ಪ್ರಧಾನ

2023ನೇ ಸಾಲಿನ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಶ್ರೀ ಜೈನ ಮಠ ಶ್ರವಣಬೆಳಗೊಳ ದತ್ತಿನಿಧಿ ಪ್ರಶಸ್ತಿ”ಯನ್ನು ಶ್ರೀ ಬಾಹುಬಲಿ ಶ್ರಾವಿಕಾಶ್ರಮದ ವಿದ್ಯಾರ್ಥಿನಿ ಪ್ರೀತಿ ಸುನಿಲ್ ವೈಗುಡೆ, ಭೋಜ್, ಚಿಕ್ಕೋಡಿ ತಾ|| ಇವರಿಗೆ ನೀಡಲಾಯಿತು. ಧಾರ್ಮಿಕ ಚಿಂತಕ, ಉಪನ್ಯಾಸಕ, ಮಹಾವೀರ್ ಜೈನ್ ಇಚಿಲಂಪಾಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ ಇವರು, ಪ್ರಶಸ್ತಿ ಪ್ರಧಾನ ಮಾಡಿದರು. ಅವರು ಕಾರ್ಕಳದ ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರನ್ನುದ್ಧೇಶಿಸಿ ಮಾತನಾಡುತ್ತಾ, ಉತ್ತಮ ‘ಮಾರ್ಕ್ಸ್’ ಗಳಿಸಿದಲ್ಲಿ ಉನ್ನತ ಉದ್ಯೋಗ ಸಿಗಬಹುದು. 'ರಿಮಾರ್ಕ್ಸ್’ ಇಲ್ಲದ ರೀತಿಯಲ್ಲಿ ಕುಟುಂಬವನ್ನು ಉತ್ತಮವಾಗಿ ನಿರ್ವಹಿಸಬೇಕಾದರೆ, ಧಾರ್ಮಿಕ, ಆಧ್ಯಾತ್ಮಿಕ, ಸಂಸ್ಕಾರ ಬೇಕಾಗಿದೆ. ಇಂತಹ ಮೌಲ್ಯಯುತ ಸಂಸ್ಕಾರವು, ಮಾತೃಶ್ರೀಯವರು ನಡೆಸುತ್ತಿರುವ ಆಶ್ರಮದಿಂದ ಸಿಗುತ್ತಿರುವುದು ಶ್ಲಾಘನೀಯವಾಗಿದೆ. ಎಂದು ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಶ್ರೀಯುತರನ್ನು ಶಾಲು, ಹಾರ ಹಾಕಿ, ಫಲ-ಪುಷ್ಪ ನೀಡಿ ಗೌರವಿಸಲಾಯಿತು. ಆಶ್ರಮದಲ್ಲಿ ಶೈಕ್ಷಣಿಕವಾಗಿ ಉನ್ನತ ಸ್ಥಾನ ಪಡೆದ ವಿದ್ಯಾರ್ಥಿನಿಯರಿಗೆ, ಸಂಸ್ಥೆಯ ಅಧ್ಯಕ್ಷರಾದ ಹೇಮಾವತಿ ಅಮ್ಮನವರು ಕೊಡಮಾಡಿದ ಅಭಿನಂದನಾ ಪತ್ರ ಮತ್ತು ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಸಮಾರಂಭದಲ್ಲಿ ಮಾಜಿ ರೋಟರಿ ಗವರ್ನರ್, ಡಾ|| ಭರತೇಶ್ ಜೈನ್, ಕಾರ್ಯದರ್ಶಿ ಶಿಶುಪಾಲ್ ಪೂವಣಿ, ಧರ್ಮಸ್ಥಳ, ಟ್ರಸ್ಟಿಗಳಾದ ಸುಮಾಲಿನಿ, ಮಾಲತಿ, ಜಯಲಕ್ಷ್ಮೀ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ, ಕಾರ್ಕಳ ಶ್ರೀ ಜೈನ ಮಠದ ವ್ಯವಸ್ಥಾಪಕರಾದ ಧನಕೀರ್ತಿ ಕಡಂಬ ಇವರು ಆಶ್ರಮದ ಅಭಿವೃದ್ಧಿ ನಿಧಿಗಾಗಿ ರೂ.1,11,111/-ರ (ಒಂದು ಲಕ್ಷದ, ಹನ್ನೊಂದು ಸಾವಿರದ, ನೂರ ಹನ್ನೊಂದು) ಚಕ್ ನ್ನು ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. 10 ದಿವಸವೂ ಅಷ್ಟವಿಧಾರ್ಚನೆ, ದಶಲಕ್ಷಣ ಪೂಜೆ, ಪದ್ಮಾವತಿ ಅಮ್ಮನವರ ಪೂಜೆ, ಭಜನೆ, ಗಣ್ಯರಿಂದ ಹಾಗೂ ವಿದ್ಯಾರ್ಥಿನಿಯರಿಂದ ಧಾರ್ಮಿಕ ಪ್ರವಚನವನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ಶ್ರಾವಕ, ಶ್ರಾವಿಕೆಯರು ಪೂಜೆಯಲ್ಲಿ ಭಾಗವಹಿಸಿ ಪುಣ್ಯಭಾಗಿಗಳಾದರು. ವರದಿ : ಶಿಶುಪಾಲ್ ಪೂವಣಿ, ಧರ್ಮಸ್ಥಳ

ಹೊಸ್ಮಾರು: ಸಾಮೂಹಿಕ ವ್ರತ ಸ್ವೀಕಾರ (ವೃತೋಪದೇಶ) ಸಮಾರಂಭ

Article Image

ಹೊಸ್ಮಾರು: ಸಾಮೂಹಿಕ ವ್ರತ ಸ್ವೀಕಾರ (ವೃತೋಪದೇಶ) ಸಮಾರಂಭ

ಶ್ರೀ ಸಿದ್ಧಿ ಕ್ಷೇತ್ರ ಸಿದ್ದರವನ ಬಸದಿಯಲ್ಲಿ ನಡೆದ ಸಾಮೂಹಿಕ ವ್ರತ ಸ್ವೀಕಾರ (ವೃತೋಪದೇಶ) ಸಮಾರಂಭವು ಪ. ಪೂ. 105 ಮುಕ್ತಿ ಮತಿ ಮಾತಾಜಿಯವರ ಧರ್ಮೋಪದೇಶ ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳವರ ದಿವ್ಯ ಮಾರ್ಗದರ್ಶನ, ಸಿಂಹನಗದ್ದೆ ಬಸ್ತಿಮಠದ ಪ. ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳವರ ಆಶೀರ್ವಚನಗಳೊಂದಿಗೆ ಸೆ.15ರಂದು ಸಂಪನ್ನಗೊಂಡಿತು. ಜೈನರ ಪವಿತ್ರ ವ್ರತ ನಿಯಮಗಳನ್ನು ಪಾಲನೆ ಮಾಡಿದರೆ ಜಗತ್ತಿನ ಯಾವ ಕಾನೂನುಗಳು ಜೈನರಿಗೆ ಅನ್ವಯಿಸುವುದಿಲ್ಲ ಹಾಗಾಗಿ ಯಾರು ಭಯ ಆತಂಕ ಪಡದೆ ವ್ರತ ನಿಯಮಗಳನ್ನು ಪಾಲನೆ ಮಾಡಬೇಕು. ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಧರ್ಮ ಸಂಸ್ಕೃತಿ ಇದ್ದರೂ ನಮ್ಮ ಧರ್ಮವನ್ನು ರಕ್ಷಿಸುವ ಹಕ್ಕು ಮತ್ತು ಅಧಿಕಾರ ನಮಗಿದೆ. ಕನ್ಯಾ ಕುಮಾರಿಯಿಂದ ಗೋವಾ ಕರಾವಳಿಯವರೆಗೆ ಯಾವ ವಿದೇಶಿಗನು ಪ್ರವೇಶಿಸದಂತೆ ಹೋರಾಟ ಮಾಡಿದ ಜೈನ ಮಹಿಳೆ ಚೆನ್ನಾಬೈರಾದೇವಿಯ ಪರಾಕ್ರಮವನ್ನು ಸವಿಸ್ತಾರವಾಗಿ ವಿವರಿಸಿದರು. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಅಗತ್ಯವಿದೆ ಎಂದು ಸಿಂಹನಗದ್ದೆ ಬಸ್ತಿಮಠದ ಪ. ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳವರು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಮೂಡಾ ಅಧ್ಯಕ್ಷರಾದ ಹರ್ಷವರ್ಧನ ಪಡಿವಾಲ್ ಅವರನ್ನು ಗೌರವಿಸಲಾಯಿತು. ಮುನಿರಾಜ ರೆಂಜಾಳರವರು ಮಕ್ಕಳಿಗೆ ಸಂಸ್ಕಾರದ ಮಾಹಿತಿ ನೀಡಿದರು. ಸುಮಾರು 112 ಜೈನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡು ಜೈನಾಗಮದಂತೆ ದೇವ ಗುರು ಶಾಸ್ತ್ರದೊಂದಿಗೆ ರತ್ನತ್ರಯವನ್ನು ಧಾರಣೆ ಮಾಡಿದರು. ಸೇವಾ ಕರ್ತೃರಾದ ಶ್ರುತಾಂಜನ್ ಜೈನ್ ಉಪಸ್ಥಿತರಿದ್ದರು. ವಿಜಯ ಕುಮಾರ್ ಕಂಗಿನಮನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸಿದರು.

ಪ್ರಥ್ವಿರಾಜ್ ಬಲ್ಲಾಳ್ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ

Article Image

ಪ್ರಥ್ವಿರಾಜ್ ಬಲ್ಲಾಳ್ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆದಿಂಜೆ ಶ್ರೀ ವಿದ್ಯಾಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಥ್ವಿರಾಜ್ ಬಲ್ಲಾಳ್ ರವರಿಗೆ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಬೆಂಗಳೂರು ಇವರ ವತಿಯಿಂದ ಶಿಕ್ಷಕ ವೃತ್ತಿಯಲ್ಲಿ ಅಮೋಘ ಸೇವೆ ಸಲ್ಲಿಸಿ ವಿದ್ಯಾರ್ಥಿಗಳು ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದು ಇವರ ಸೇವೆಯನ್ನು ಪುರಸ್ಕರಿಸಿ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆದ 2024-25ನೇ ಸಾಲಿನ ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗಣ್ಯ ಅತಿಥಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಈ ಮೊದಲು ಇವರಿಗೆ, "ತಾಲೂಕು ಸಾಧಕ ಶಿಕ್ಷಕ ಪ್ರಶಸ್ತಿ" "ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ", "ನಿಟ್ಟೆ ರೋಟರಿ ಸಂಸ್ಥೆಯ ನೇಶನ್ ಬಿಲ್ಡರ್ ಅವಾರ್ಡ್" ಲಭಿಸಿರುತ್ತದೆ.

ದಶಲಕ್ಷಣ ಪರ್ವದ ಅಂಗವಾಗಿ ಅಷ್ಟವಿಧಾರ್ಚನೆ ಪೂಜೆ

Article Image

ದಶಲಕ್ಷಣ ಪರ್ವದ ಅಂಗವಾಗಿ ಅಷ್ಟವಿಧಾರ್ಚನೆ ಪೂಜೆ

ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಡಿ ವೀರೇಂದ್ರ ಹೆಗ್ಗಡೆಯವರ, ಹೇಮಾವತಿ ವಿ. ಹೆಗ್ಗಡೆಯವರ, ಡಿ. ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ದಿನಾಂಕ 8/ 9/ 2024 ರಿಂದ 17/9/2024 ರವರೆಗೆ ದಶಲಕ್ಷಣ ಪರ್ವದ ಅಂಗವಾಗಿ ಅಷ್ಟವಿಧಾರ್ಚನೆ ಪೂಜೆ ಹಾಗೂ ದಶಲಕ್ಷಣ ಪರ್ವಗಳಿಗೆ ಸಂಬಂಧಿಸಿದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಹಾಗೆಯೇ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಮತ್ತು ಸ್ವಾಧ್ಯಾಯವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲಾ ಶ್ರಾವಕ ಶ್ರಾವಕಿಯರು ಭಾಗವಹಿಸಿ ಪುಣ್ಯಭಾಗಿಗಳಾದರು.

ಪುರಾಣ ವಾಚನ-ಪ್ರವಚನ: ಸಮಾರೋಪ ಸಮಾರಂಭ

Article Image

ಪುರಾಣ ವಾಚನ-ಪ್ರವಚನ: ಸಮಾರೋಪ ಸಮಾರಂಭ

ಉಜಿರೆ: ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಎರಡು ತಿಂಗಳ ಕಾಲ ನಡೆದ ಪುರಾಣ ವಾಚನ-ಪ್ರವಚನ ಕಾರ್ಯಕ್ರಮ ಸೋಮವಾರ ಮುಕ್ತಾಯಗೊಂಡಿತು. ಎರಡು ತಿಂಗಳು ಪ್ರತಿದಿನ ಸಂಜೆ ಗಂಟೆ 6 ರಿಂದ ರಾತ್ರಿ ಗಂಟೆ 8ರ ವರೆಗೆ ನಡೆದ ಕಾರ್ಯಕ್ರಮದಲ್ಲಿ ಊರಿನ ನಾಗರಿಕರು ಹಾಗೂ ಕ್ಷೇತ್ರಕ್ಕೆ ಬಂದ ಭಕ್ತಾದಿಗಳು ಕೂಡಾ ಕಾರ್ಯಕ್ರಮದ ಸೊಗಡನ್ನು ಆಸ್ವಾದಿಸಿ ಪುಣ್ಯಸಂಚಯ ಮಾಡಿಕೊಂಡರು. ಎರಡು ತಿಂಗಳು ನಡೆದ ಪುರಾಣ ವಾಚನದಲ್ಲಿ 14 ಮಂದಿ ಹಾಗೂ ಪ್ರವಚನದಲ್ಲಿ 20 ಮಂದಿ ವಿದ್ವಾಂಸರು ಭಾಗವಹಿಸಿದರು. ಸೋಮವಾರ ಸುಪ್ರೀತಾ ಕೋರ್ನಾಯ ವಾಚನ ಮಾಡಿದರೆ ಅಶೋಕ ಭಟ್ ಪ್ರವಚನ ನೀಡಿದರು. ಸಮಾರೋಪ ಸಮಾರಂಭದಲ್ಲಿ ಹೆಗ್ಗಡೆಯವರು ಪುರಾಣ ವಾಚನ-ಪ್ರವಚನದಲ್ಲಿ ಭಾಗವಹಿಸಿ, ಎಲ್ಲರನ್ನೂ ಗೌರವಿಸಿ ಅಭಿನಂದಿಸಿದರು.

ನಾರಾವಿ ಬಸದಿಯಲ್ಲಿ ಅನಂತನೋಂಪಿ ಆರಾಧನಾ ವಿಧಾನ

Article Image

ನಾರಾವಿ ಬಸದಿಯಲ್ಲಿ ಅನಂತನೋಂಪಿ ಆರಾಧನಾ ವಿಧಾನ

ಉಜಿರೆ: ನಾರಾವಿ ಗ್ರಾಮದಲ್ಲಿರುವ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಹದಿಮೂರನೆ ವರ್ಷದ ಅನಂತನೋಂಪಿ ಆರಾಧನಾ ವಿಧಾನದ ಪ್ರಥಮ ದಿನದ ಪೂಜೆಯು ಸೋಮವಾರ ನಡೆಯಿತು. 12 ಮಂದಿ ಶ್ರಾವಕರು ಹಾಗೂ 8 ಮಂದಿ ಶ್ರಾವಕಿಯರು ಸೇರಿದಂತೆ ಒಟ್ಟು 20 ಮಂದಿ ನೋಂಪಿಯ ವೃತಧಾರಿಗಳಾಗಿ ಶ್ರದ್ಧಾ-ಭಕ್ತಿಯಿಂದ ಭಾಗವಹಿಸಿದರು. ಅಳದಂಗಡಿಯ ಪದ್ಮಪ್ರಭ ಇಂದ್ರ ಮತ್ತು ನಾರಾವಿ ಹರ್ಷೇಂದ್ರ ಇಂದ್ರ ಅವರ ಸಹಕಾರದೊಂದಿಗೆ ನೋಂಪಿ ಆರಾಧನಾ ವಿಧಾನ ನಡೆಯಿತು. ಮೂರು ದಿನಗಳಲ್ಲಿ ಅನಂತ ನೋಂಪಿ ನಡೆಯಲಿದ್ದು ಇಂದು ಬುಧವಾರ ಸಮಾಪನಗೊಳ್ಳುತ್ತದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿರಿದ್ದು ಮಂಗಲಪ್ರವಚನ ನೀಡುವರು.

ಆತ್ಮನೇ ಚರೀತೇತಿ ಬ್ರಹ್ಮಚರ್ಯ: ಉತ್ತಮ ಬ್ರಹ್ಮಚರ್ಯ

Article Image

ಆತ್ಮನೇ ಚರೀತೇತಿ ಬ್ರಹ್ಮಚರ್ಯ: ಉತ್ತಮ ಬ್ರಹ್ಮಚರ್ಯ

ಆತ್ಮನೇ ಚರೀತೇತಿ ಬ್ರಹ್ಮಚರ್ಯ: ಆತ್ಮನಲ್ಲಿ ತಲ್ಲೀನವಾಗುವುದು ಲೀನವಾಗುವುದೇ ಬ್ರಹ್ಮಚರ್ಯ. ಆಂತರಿಕವಾಗಿಯೂ, ಬಾಹ್ಯವಾಗಿ ಯೂ ವಿಷಯಾಸಕ್ತಿ ಭೋಗಗಳಲ್ಲಿ ಸದಾ ತಲ್ಲೀನನಾಗಿರದೇ ಮನಸ್ಸಿನ ವಿಕಾರತೆಗೆ ಒಳಗಾಗದೇ ಬದುಕುವುದು ಬ್ರಹ್ಮಚರ್ಯ. ಇಲ್ಲಿ ವಿಕಾರತೆ ಎಂದರೆ ಕೇವಲ ದೈಹಿಕ ವಿಕಾರತೆಗೆ ಒಳಗಾಗದೇ ಇರುವುದು ಮಾತ್ರವಲ್ಲ, ಹೊರಗಿನ ಪ್ರಪಂಚದ ಮಾಯಾಲೋಕಕ್ಕೆ ಸಿಲುಕದೇ ಸಂಸಾರದಲ್ಲಿದ್ದರೂ ತನ್ನ ಪುರುಷ ಅಥವಾ ಸ್ತ್ರೀಯನ್ನು ಹೊರತುಪಡಿಸಿ ಉಳಿದೆಲ್ಲ ಪುರುಷ ಮತ್ತು ಸ್ತ್ರೀಯರನ್ನು ಗೌರವ ಭಾವದಿಂದ, ವಿಕಾರತೆಯಲ್ಲದೇ ನೋಡುವುದೇ ಬ್ರಹ್ಮಚರ್ಯ. ಶ್ವೇತಾ ನಿಹಾಲ್ ಜೈನ್ ಪಾಣೆ ಮಂಗಳೂರು

ತುಳು ನಾಡಿನ ಭವ್ಯ ಪರಂಪರೆಗೆ ಜೈನರ ಕೊಡುಗೆ ಅಪಾರ

Article Image

ತುಳು ನಾಡಿನ ಭವ್ಯ ಪರಂಪರೆಗೆ ಜೈನರ ಕೊಡುಗೆ ಅಪಾರ

ಕರ್ನಾಟಕ ರಾಜ್ಯದಲ್ಲಿರುವ ತುಳುನಾಡು ಭವ್ಯವಾದ ಪರಂಪರೆ, ಸಂಸ್ಕೃತಿ, ಆಚರಣೆಗಳು ಮುಂತಾದ ಮಹೋನ್ನತ ಉದಾತ್ತ ಧ್ಯೇಯಗಳನ್ನು ಹೊಂದಿರುವ ಬೀಡಾಗಿದೆ. ಇಲ್ಲಿ ಸರ್ವಧರ್ಮಗಳು ಸಹೋದರತೆಯ ಪಡಿಯಚ್ಚಿನಲ್ಲಿ ಬಾಳಿ ಬದುಕುವ ಪರಿಯನ್ನು ನೋಡುವ ಸೊಗಸೇ ಅನನ್ಯವಾದದ್ದು. ಆದರೆ ಕೆಲವು ರಾಜಕೀಯ ಹಾಗೂ ಕೊಳಕು ಮನಸ್ಸುಗಳ ಚಿತಾವಣೆಯಿಂದಾಗುವ ಸಾಮರಸ್ಯದ ಧಕ್ಕೆ ಅತ್ಯಲ್ಪವಾದರೂ ಕೆಲವೊಮ್ಮೆ ಗಂಭೀರವಾಗಿ ಬೂದಿ ಮೆಚ್ಚಿದ ಕೆಂಡದಂತೆ ಕಂಡರೂ ತುಳುನಾಡಿನ ಭವ್ಯತೆಗೆ ಕೊಂಕಿಲ್ಲ ಎಂಬುದು ಅಷ್ಟೇ ದಿಟ. ಇಲ್ಲಿ ಬಸದಿಗಳು, ದೇವಸ್ಥಾನಗಳು, ಮಸೀದಿಗಳು, ಚರ್ಚುಗಳು, ಭೂತಸ್ಥಾನಗಳು, ನಾಗಾಲಯಗಳು ಈ ಮಣ್ಣಿನ ಬಾಂಧವ್ಯದ ಸೊಗಡಿನ ಘಮಲನ್ನು ವಿಶ್ವದಾದ್ಯಂತ ಪಸರಿಸುತ್ತಿದೆ. ಮೊದಲೇ ಹೇಳಿದಂತೆ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಪರಸ್ಪರರ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿವೆ. ಈ ವಿಚಾರಗಳು ಮೋಲ್ನೋಟಕ್ಕೆ ವಿಜ್ರಂಭಿಸುವಂತೆ ಕಂಡರೂ ತುಳುವರ ಅಸಾಮಾನ್ಯ ಸಾಮರಸ್ಯವನ್ನು ಹಾಳುಗೆಡವಲು ಸಾಧ್ಯವೇ ಇಲ್ಲ ಎಬುದು ತುಳುನಾಡಿನ ಚರಿತ್ರೆಯ ಪುಟಗಳಿಂದ ತಿಳಿದು ಬರುತ್ತದೆ. ತುಳುನಾಡಿನ ಇತಿಹಾಸ , ವರ್ತಮಾನದಲ್ಲಿಯೇ ಆಗಲಿ ಜೈನರು ನೀಡಿರುವ ಕೊಡುಗೆಯ ಮಹಾಪೂರವೇ ದಾಖಲಾಗಿದೆ. ಸಾಮರಸ್ಯದ ಬದುಕಿಗೆ ಜೈನರಸರು ನೀಡಿದ ಕೊಡುಗೆಯ ಉಲ್ಲೇಖ ಚರಿತ್ರಾರ್ಹವಾದದ್ದು. ಭಾರತದ ಇತಿಹಾಸದಲ್ಲಿ ರಾಜಮಹಾರಾಜರುಗಳು ರಕ್ತಸಿಕ್ತ ಚರಿತ್ರೆಯನ್ನು ಹೊಂದಿದ್ದರೆ ತುಳುನಾಡಿನ ಜೈನರಸರು ಇದಕ್ಕೆ ಅಪವಾದವಾಗಿದ್ದಾರೆ. ಬಸದಿಗಳು, ದೇವಸ್ಥಾನಗಳು , ಮಸೀದಿಗಳು, ಚರ್ಚುಗಳು, ಭೂತಾಲಯ, ನಾಗಾಲಯಗಳು ಜೈನರ ಕೊಡುಗೆಯನ್ನು ಸಾರುತ್ತಾ ಗತ ಇತಿಹಾಸದಲ್ಲಿ ನಡೆದ ತ್ಯಾಗ, ದಾನ, ಸಮರ್ಪಣೆಯನ್ನು ಸಾರುತ್ತಾ ಬಂದಿದೆ. ಕೆಲವೊಂದು ಸಂದರ್ಭಗಳಲ್ಲಿ ಜೈನರು ಸಂಪೂರ್ಣವಾಗಿ ಮನೆಮಠಗಳನ್ನು ಕಳೆದುಕೊಂಡರೂ ಸರಿಯೇ ದೈವ ದೇವ ಮಂದಿರಗಳನ್ನು ಉಳಿಸಿ ಬೆಳೆಸಿದ ಪರಿಯನ್ನು ಮೆಲುಕು ಹಾಕುವುದೇ ಹೆಮ್ಮೆಯ ವಿಚಾರವಾಗಿದೆ. ಜಾತ್ಯಾತೀತ ಮನೋಭಾವನೆಯನ್ನು ಮೆರೆದ ಜೈನರಸರು ತಮ್ಮ ಕುಲದೇವರುಗಳನ್ನಾಗಿ ಹಿಂದೂಗಳ ಆರಾಧ್ಯ ದೇವರುಗಳನ್ನು ಪೂಜಿಸಿಕೊಂಡು ಬಂದ ಪರಂಪರೆ ನಮ್ಮ ಮುಂದಿದೆ. ಇವತ್ತಿನವರೆಗೂ ದೈವ ದೇವರ ಸ್ಥಾನಗಳ ಅಡಿಪಾಯದ ಕಲ್ಲುಗಳೂ ಕೂಡ ಜೈನರ ಕೊಡುಗೆಯನ್ನು ಎದೆಯುಬ್ಬಿಸಿ ಸಾರುತ್ತಾ ಬರುತ್ತಿದೆ. ಮಾತೃ ಪ್ರಧಾನ ವ್ಯವಸ್ಥೆಗೆ ಜೈನರು ಕೊಟ್ಟ ಕೊಡುಗೆ ಇಂದು ಹಲವು ಮತಪಂಗಡಗಳಲ್ಲೂ ಚಿಗುರೊಡೆದು ಹೆಮ್ಮರವಾಗಿ ಬೆಳೆದಿದೆ. ತುಳುವರು ಅವರು ಯಾರೇ ಆಗಿರಲಿ, ಹಿಂದೂಗಳೇ ಆಗಿರಲಿ, ಎಲ್ಲರ ಕೊಡುಗೆ ಶ್ರೇಷ್ಠವಾದದ್ದು ಎಂಬ ಅರಿವು ತುಳುವರಿಗಿದೆ. ಆದರೆ ಕೆಲವೊಂದು ಘಟನೆಗಳು ಇತ್ತೀಚೆಗೆ ಜೈನರನ್ನು ತುಳುನಾಡಿನ ಭವ್ಯ ಪರಂಪರೆಯಿಂದ ಬೇರ್ಪಡಿಸುವ ವಿಚಾರಗಳು ಚಿಗುರೊಡೆಯಲು ಪ್ರಾರಂಭವಾಗಿರುವುದು ಖೇದಕರ. ಆದರೆ ಇದನ್ನು ತುಳುನಾಡಿನ ತುಳುವರು ಪರಿಗಣನೆಗೆ ತೆಗೆದುಕೊಳ್ಳಬಾರದು ಹಾಗೂ ತುಳುನಾಡಿನ ಐಕ್ಯತೆಗೆ ಭಂಗ ತರುವ ಕೆಲಸಗಳಿಗೆ ಪ್ರೋತ್ಸಾಹ ನೀಡಬಾರದು.‌ ನಮ್ಮ ತುಳುನಾಡು ವಿಶ್ವದಲ್ಲಿಯೇ ಸರ್ವಶ್ರೇಷ್ಠವಾದ ಸಂಸ್ಕೃತಿಗೆ ಅಪಚಾರವಾಗದಂತೆ ತುಳುವರು ನಡೆದುಕೊಳ್ಳಬೇಕಿರುವುದು ಅತೀ ಅಗತ್ಯವಾಗಿದೆ. ನಿರಂಜನ್ ಜೈನ್ ಕುದ್ಯಾಡಿ

ಜೈನರ ದೊಡ್ಡ ಹಬ್ಬ - ದಶ ಲಕ್ಷಣ ಪರ್ವ

Article Image

ಜೈನರ ದೊಡ್ಡ ಹಬ್ಬ - ದಶ ಲಕ್ಷಣ ಪರ್ವ

ದಶಲಕ್ಷಣ ಪರ್ವ ದಿಗಂಬರ ಜೈನರು ಆಚರಿಸುವ ಬಲು ದೊಡ್ಡ ಹಬ್ಬ. ದಿಗಂಬರ ಸಂಪ್ರದಾಯದಲ್ಲಿ, ಜೈನರಿಗೆ ಆತ್ಮದ ಗುಣಲಕ್ಷಣಗಳನ್ನು ನೆನಪಿಸಲು ಭಾದ್ರಪದ ಮಾಸದ ಶುಕ್ಲ ಪಂಚಮಿಯಂದು ಪ್ರಾರಂಭವಾಗಿ 10 ದಿನಗಳ ಕಾಲ ಹತ್ತು ಪ್ರಮುಖ ಗುಣಗಳಾದ ದಶಲಕ್ಷಣ ಧರ್ಮವನ್ನು ಆಚರಿಸಲಾಗುತ್ತದೆ. ಹತ್ತು ಧರ್ಮಗಳು ಅಥವಾ ಆತ್ಮದ ಸದ್ಗುಣಗಳೆಂದರೆ: ಕ್ಷಮೆ, ನಮ್ರತೆ, ನೇರತೆ, ತೃಪ್ತಿ, ಸತ್ಯ, ಇಂದ್ರಿಯ ಸಂಯಮ, ತಪಸ್ಸು, ದಾನ, ಸ್ವಾಮ್ಯರಹಿತತೆ ಮತ್ತು ಬ್ರಹ್ಮಚರ್ಯ. ದಶಲಕ್ಷಣ ಪರ್ವ ಹತ್ತು ಪುಣ್ಯಗಳ ಹಬ್ಬ. "ಹತ್ತು ಧರ್ಮ"ಗಳೆಂದೂ ಕರೆಯಲ್ಪಡುವ ಈ ಹತ್ತು ಗುಣಗಳನ್ನು ಕೆಳಗೆ ನೀಡಲಾಗಿದೆ. ವಾಸ್ತವವಾಗಿ ಇವುಗಳ ಮೂಲಕ ನಾವು ಧರ್ಮದ ಅತಿಹತ್ತಿರ ಸಾಗಬಹುದು. ಇವುಗಳನ್ನು ನಿರ್ದಿಷ್ಟ ಕ್ರಮದಲ್ಲಿ ಜೋಡಿಸಲಾಗಿದೆ, ಏಕೆಂದರೆ ಆತ್ಮದ ನಿಯಮಿತ ಬೆಳವಣಿಗೆಗೆ ಮತ್ತು ದುಷ್ಕೃತ್ಯ ಗಳು, ಪಾಪಗಳನ್ನು ಕಡಿಮೆ ಮಾಡಲು ಈ ಕ್ರಮ ಹೆಚ್ಚು ಉಪಯುಕ್ತವಾಗಿದೆ. ಮೊದಲು ನಾವು ಭಾವೋದ್ರೇಕಗಳಿಂದ ಕಳಚಿ ನಾವು ನಮ್ಮ ಆತ್ಮದ ಉನ್ನತಿಗೆ ಅಗತ್ಯವಾದ ಸಂಯಮ, ತಪ, ತ್ಯಾಗ ಇತ್ಯಾದಿಗಳ ಕಡೆಗೆ ನಡೆಯುತ್ತಾ, ಜಾತಿ, ಧರ್ಮ, ಲಿಂಗ ಅಥವಾ ದೇಶದ ಆಧಾರದ ಮೇಲೆ ಯಾವುದೇ ಭೇದಭಾವವಿಲ್ಲದ ಹತ್ತು ಸದ್ಗುಣಗಳು ಎಲ್ಲಾ ಮನುಕುಲಕ್ಕೆ ಆದರ್ಶವಾಗಿದೆ.ಅದರ ಉಪಯುಕ್ತತೆ ಮತ್ತು ಎಲ್ಲರಿಗೂ ಸಮಾನವಾದ ಪ್ರಾಮುಖ್ಯತೆಗೆ ಮುಖ್ಯ ಕಾರಣವೆಂದರೆ ಅದರ ಕರ್ಮ ನೆಲೆ. ನಮ್ಮ ಜೀವನದ ಎಲ್ಲಾ ಸುಖ-ದುಃಖಗಳು ವರ್ತಮಾನದಲ್ಲಿ ಅಥವಾ ಹಿಂದಿನ ಜೀವಿತಾವಧಿಯಲ್ಲಿ ನಾವು ಸಂಗ್ರಹಿಸಿದ ನಮ್ಮ ಆತ್ಮಕ್ಕೆ ಸಂಬಂಧಿಸಿದ ಕರ್ಮಗಳಿಂದಾಗಿ- ಎಂದು ನಾವು ತಿಳಿದಿರಬೇಕು. ನಾವು ಪುರುಷಾರ್ಥ (ಒಳ್ಳೆಯ ಪ್ರಯತ್ನಗಳು) ಅಥವಾ ತಪ (ತಪಸ್ಸು) ಮೂಲಕ ನಮ್ಮ ಆತ್ಮಕ್ಕೆ ಸಂಬಂಧಿಸಿದ ಕೆಟ್ಟ ಕರ್ಮವನ್ನು (ಪಾಪ) ತೆಗೆದುಹಾಕದ ಹೊರತು, ನಮ್ಮ ಜೀವನದಲ್ಲಿ ನಿಜವಾದ ಸಂತೋಷ ಮತ್ತು ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ. ಕೆಲವು ಒಳ್ಳೆಯ ಕರ್ಮಗಳ (ಪುಣ್ಯ) ಫಲದಿಂದಾಗಿ ನಾವು ಏನನ್ನಾದರೂ ಸಾಧಿಸುವ ಸಾಧ್ಯತೆಯಿದೆ ಆದರೆ ಅವು ಕೊನೆಗೊಂಡ ತಕ್ಷಣ ನಾವು ಮತ್ತೆ ಅಸ್ವಸ್ಥತೆಗೆ ಒಳಗಾಗುತ್ತೇವೆ. ಆದ್ದರಿಂದ ನಾವು ದಶಲಕ್ಷಣ ಪರ್ವದಲ್ಲಿ ಅಭ್ಯಾಸ ಮಾಡುವ ಹತ್ತು ವಿಧದ ಧರ್ಮಗಳನ್ನು ತಿಳಿದಿರಬೇಕು ಮತ್ತು ಅವುಗಳನ್ನು ಅತ್ಯುತ್ತಮ ರೀತಿಯಲ್ಲಿ ಅನುಸರಿಸುವುದು ಬಹಳ ಅವಶ್ಯಕ. ವಾಸ್ತವವಾಗಿ ಈ ಸದ್ಗುಣಗಳು/ಧರ್ಮಗಳ ಅಭ್ಯಾಸವು ಶಾಂತಿಯುತ, ಸಮೃದ್ಧ, ಅರ್ಥಪೂರ್ಣ ಮತ್ತು ಸುರಕ್ಷಿತ ಜೀವನದ ನಿಜವಾದ ಕೀಲಿಯಾಗಿದೆ. ಉತ್ತಮ ಕ್ಷಮಾ(Supreme Forgiveness) ಸಹನೆಯನ್ನು ಹೃದಯಾಂತರಾಳದಲ್ಲಿ ಬೆಳೆಸಿ ಕೋಪವನ್ನು ದೂರವಿಡುವುದು ಇದರರ್ಥ ಕೋಪವು ಏರಲುಬಿಡಬಾರದು, ಹಾಗಾದಲ್ಲಿ ಆಂತರಿಕ ಶಕ್ತಿಯ ಮೂಲಕ ಅದನ್ನು ನಿಷ್ಪರಿಣಾಮಕಾರಿಯಾಗಿ ಮಾಡುವುದು. ಕೋಪದ ಸಂಪೂರ್ಣನಿಗ್ರಹ. ಕ್ಷಮೆಯು ಹೇಡಿಯಲ್ಲ ಧೈರ್ಯಶಾಲಿಗಳ ಗುಣ(ಕ್ಷಮಾ ವೀರಸ್ಯ ಭೂಷಣಂ)ಕೋಪವು ಆತ್ಮದ ದೊಡ್ಡ ಶತ್ರುವಾಗಿದೆ ಮತ್ತು ಅದು ಎಲ್ಲಾ ಕೆಡುಕುಗಳ ಮೂಲವಾಗಿದೆ. ನಿಜವಾದ ಕ್ಷಮೆಯು ಯಾವುದೇ ಪ್ರತಿಫಲದ ಭಾವನೆಗಳಿಲ್ಲದೆ ಒಳಗಿನಿಂದ ಬರುತ್ತದೆ. ಹಿರಿಯರ ಗೌರವ ಮತ್ತು ಪಾಲನೆಯಿಂದಾಗಿ ಕ್ಷಮಿಸುವುದು ಅತ್ಯುನ್ನತ ರೀತಿಯ ಕ್ಷಮೆಯಲ್ಲ (ಉತ್ತಮ ಕ್ಷಮ), ಇದು ಕೇವಲ ಉತ್ತಮ ನಡವಳಿಕೆಯಾಗಿದೆ. ಉತ್ತಮ ಮಾರ್ದವ (Tenderness or Humility) ಅಹಂಕಾರ, ಸ್ವಾರ್ಥ ಅಥವಾ ಅಹಂಕಾರದ ಕೊರತೆಯೇ ನಮ್ರತೆ. ಅಹಂಕಾರವು ಶ್ರೇಷ್ಠತೆಯ ಸಂಕೀರ್ಣದ ವರ್ತನೆಯಾಗಿದೆ. ಧನಸಂಪತ್ತು ಹೆಮ್ಮೆಯ ಮುಖ್ಯ ಕಾರಣವಾಗಿದೆ. ಬಡತನ ಅಥವಾ ದೌರ್ಬಲ್ಯದಿಂದಾಗಿ ನಮ್ರತೆಯನ್ನು ತೋರಿಸುವುದು ಸೌಮ್ಯತೆ, ದೀನತೆ ನಿಜವಾದ ನಮ್ರತೆ ಅಲ್ಲ (ಉತ್ತಮ ಮಾರ್ದವ). ನಮ್ರತೆ ಎಂಬುದನ್ನು ಒಪ್ಪಿಕೊಳ್ಳುವುದು. ಒಬ್ಬ ವ್ಯಕ್ತಿಯು ಸ್ವಾಭಿಮಾನ ಮತ್ತು ಹೆಮ್ಮೆಯ ನಡುವಿನವ್ಯತ್ಯಾಸವನ್ನುಅರ್ಥಮಾಡಿಕೊಳ್ಳಬೇಕು ಮತ್ತು ಅವುಗಳನ್ನು ಗೊಂದಲಗೊಳಿಸಬಾರದು.ಇದು ಉತ್ತಮ ಮಾರ್ದವ. ಉತ್ತಮ ಆರ್ಜವ - (ನೇರ ಅಥವಾ ಪ್ರಾಮಾಣಿಕತೆ) ವಂಚನೆಯನ್ನು ತೊಡೆದುಹಾಕುವ ಮೂಲಕ ಜೀವನದಲ್ಲಿ ಮೋಸವಿಲ್ಲದ ನಡವಳಿಕೆಯನ್ನು ಅಭ್ಯಾಸ ಮಾಡಲು.ಕುತಂತ್ರವಿಲ್ಲದ ಅಥವಾ ಮೋಸದ ಮನೋಭಾವವನ್ನು ಸರಳತೆ ಕಪಟವಿಲ್ಲದ ನಡವಳಿಕೆ ಎಂದು ವ್ಯಾಖ್ಯಾನಿಸಲಾಗಿದೆ. ದುರ್ಬಲ ವ್ಯಕ್ತಿಯು ಮಾತ್ರ ಮೋಸವನ್ನು ಮಾಡುತ್ತಾನೆ, ಏಕೆಂದರೆ ಅವನು ಸಿಕ್ಕಿಬೀಳುವ ಭಯದಲ್ಲಿದ್ದಾನೆ. ತನ್ನ ಮೋಸವನ್ನು ಮರೆಮಾಡಲು, ಅವನು ಮತ್ತಷ್ಟು ಮೋಸವನ್ನು ಮಾಡುತ್ತಾನೆ. ಕುತಂತ್ರದ ವ್ಯಕ್ತಿಯ ಆಲೋಚನೆಗಳು, ಮಾತು ಮತ್ತು ಕ್ರಿಯೆಗಳ ನಡುವೆ ಯಾವುದೇ ಸಾಮ್ಯತೆ ಇಲ್ಲ. ಅವನು ಒಂದು ವಿಷಯವನ್ನು ಯೋಚಿಸುತ್ತಾನೆ, ಇನ್ನೊಂದನ್ನು ಹೇಳುತ್ತಾನೆ ಮತ್ತು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ವರ್ತಿಸುತ್ತಾನೆ. ಉತ್ತಮ ಶೌಚ (ತೃಪ್ತಿ ಅಥವಾ ಶುದ್ಧತೆ) ದುರಾಸೆಯನ್ನು ತೊಲಗಿಸಿ ದೇಹ, ಮನಸ್ಸು ಮತ್ತು ಮಾತುಗಳನ್ನು ಶುದ್ಧವಾಗಿಟ್ಟುಕೊಳ್ಳುವುದು. ದುರಾಸೆಯ ಇಲ್ಲದಿರುವುದೇ ನೆಮ್ಮದಿ. ದುರಾಸೆ ಎಂದರೆ ಹೊಂದುವ ಬಯಕೆ. ಇದು ಎಲ್ಲಾ ಪಾಪಗಳ ಮೂಲ ಕಾರಣಗಳು ಮತ್ತು ವ್ಯಕ್ತಿಯ ಆಧ್ಯಾತ್ಮಿಕ ಬೆಳವಣಿಗೆಗೆ ಕೋಪದಷ್ಟೇ ಅಪಾಯಕಾರಿ.ನಾಲ್ಕು ಭಾವೋದ್ರೇಕಗಳ ಮೇಲೆ ನಿಯಂತ್ರಣವನ್ನು ಮಾಡಿದ ನಂತರ, ಜನರು ತಮ್ಮ ಆತ್ಮದಲ್ಲಿ ಧನಾತ್ಮಕ ಸದ್ಗುಣಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಾರೆ. ಮುಂಬರುವ ಸದ್ಗುಣಗಳ ಪರಿಚಯಕ್ಕಾಗಿ ಹುರುಪಿನ ನಿಯಂತ್ರಣವು ಅತ್ಯಗತ್ಯ. ಉತ್ತಮ ಸತ್ಯ (Truthfulness) ಯಾವುದೇ ಜೀವಿಗಳಿಗೆ ಯಾವುದೇ ಹಾನಿಯಾಗದಂತೆ ಪವಿತ್ರ ಉದ್ದೇಶದಿಂದ ಪ್ರೀತಿಯಿಂದ ಮಾತನಾಡುವುದು. ಹೆಚ್ಚಿನ ಜನರಿಗೆ ಸತ್ಯತೆ ಎಂದರೆ ಸುಳ್ಳು ಹೇಳದಿರುವುದು,ಆದರೆ ಅದು ಪರಿಪೂರ್ಣವಾಗಿಲ್ಲ. ಸಂಪೂರ್ಣ ಸತ್ಯವೆಂದರೆ ವಿಷಯವನ್ನು ಹಾಗೆಯೇ ತಿಳಿದುಕೊಳ್ಳುವುದು, ಮತ್ತು ಕೆಟ್ಟದ್ದನ್ನು ಒಳ್ಳೆಯದರಿಂದ ಪ್ರತ್ಯೇಕಿಸುವುದು ಮಾತ್ರವಲ್ಲ. ಉತ್ತಮ ಸತ್ಯವನ್ನು ಅನುಸರಿಸಲು ಆನೆಕಾಂತವಾದದ ಆಳವಾದ ತಿಳುವಳಿಕೆ ಅತ್ಯಗತ್ಯ. ಸ್ಯಾದ್ವಾದವು ಅನೇಕಾಂತ ಪ್ರಕಾರ ನಮ್ಮ ಅಭಿಪ್ರಾಯಗಳನ್ನು ಪ್ರಸ್ತುತ ಪಡಿಸುವ ಒಂದು ಮಾರ್ಗವಾಗಿದೆ. ಉತ್ತಮ ಸಂಯಮ್ - (ಸ್ವಯಂ ಸಂಯಮ) ಪಂಚೇಂದ್ರಿಯಗಳು - ಸ್ಪರ್ಶ, ರುಚಿ, ವಾಸನೆ, ದೃಷ್ಟಿ ಮತ್ತು ಶ್ರವಣೇಂದ್ರಿಯಗಳು ಒದಗಿಸುವ ಎಲ್ಲಾ ಸಂತೋಷಗಳಿಂದ ದೂರವಿರುವ ಮತ್ತು ಎಲ್ಲಾ ಜೀವಿಗಳನ್ನು ಅತ್ಯಂತ ಶಕ್ತಿಯಿಂದ ರಕ್ಷಿಸಲು; ಆರನೇ ಮನಸ್ಸಿನ ಗುಣ. ಎಲ್ಲಾ ಜೀವಿಗಳ ವಿರುದ್ಧ ಆಲೋಚನೆಗಳು ಅಥವಾ ದೈಹಿಕ ವಿಧಾನಗಳಿಂದ ಉಂಟಾಗುವ ಹಿಂಸೆಯ ಮೇಲಿನ ನಿಯಂತ್ರಣ ಮತ್ತು ಲೌಕಿಕ ಸಂತೋಷಗಳ ಮೇಲಿನ ನಿಯಂತ್ರಣವು ಸ್ವಯಂ ನಿಯಂತ್ರಣದ ನಿಜವಾದ ವ್ಯಾಖ್ಯಾನವಾಗಿದೆ. ಉತ್ತಮ ತಪ (ತಪಸ್ಸು ಅಥವಾ ತಪಸ್ಸು) ಹಲವಾರು ವಿಧಾನಗಳ ಮೂಲಕ ಎಲ್ಲಾ ಲೌಕಿಕ ಆಸೆಗಳಿಗೆ ನಿರ್ಬಂಧ ಹಾಕುವ ಸಂಯಮವನ್ನು ಅಭ್ಯಾಸ ಮಾಡಲು ತಪಸ್ಸುಅಗತ್ಯ. ತಪಸ್ಸು ಎಂದರೆ ಒಬ್ಬರ ಪಾಪಗಳ ಪಶ್ಚಾತ್ತಾಪ. ಇದು ಬೆಂಕಿ, ಇದು ಕರ್ಮ ಧೂಳಿನ ಶಕ್ತಿಗಳನ್ನು ಸುಟ್ಟು ಮತ್ತು ಬೂದಿ ಮಾಡುತ್ತದೆ. ಸಂಯಮವು ಎರಡು ವಿಧವಾಗಿದೆ: *ಎ. ಬಾಹ್ಯ ವಿಧಗಳು, ಇದು ಭೌತಿಕ ನಿರ್ಬಂಧಗಳನ್ನು ಒಳಗೊಂಡಿರುತ್ತದೆ ಮತ್ತು, *ಬಿ. ಆಂತರಿಕ ಪ್ರಕಾರಗಳು, ಇದು ಮಾನಸಿಕ ಶುದ್ಧೀಕರಣದೊಂದಿಗೆ ವ್ಯವಹರಿಸುತ್ತದೆ. ಉತ್ತಮ ತ್ಯಾಗ (Renunciation) ಆಹಾರ (ಆಹಾರ), ಅಭಯ (ನಿರ್ಭಯತೆ), ಔಷಧ (ಔಷಧ), ಮತ್ತು ಶಾಸ್ತ್ರ ದಾನ (ಪವಿತ್ರ ಗ್ರಂಥಗಳ ವಿತರಣೆ), ಮತ್ತು ಸ್ವಯಂ ಮತ್ತು ಇತರ ಉನ್ನತಿಗಾಗಿ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳನ್ನು ಪೋಷಿಸಲು ನಾಲ್ಕು ಪಟ್ಟು ದತ್ತಿಗಳನ್ನು ನೀಡಲು. ಪರಿತ್ಯಾಗವನ್ನು ಆಂತರಿಕ ಮತ್ತು ಬಾಹ್ಯ ಎರಡೂ ಆಸ್ತಿಗಳನ್ನು ತ್ಯಜಿಸುವುದು ಎಂದು ವ್ಯಾಖ್ಯಾನಿಸಲಾಗಿದೆ. ಉತ್ತಮ ಆಕಿಂಚನ್ಯ - (ಅನುಬಂಧ) ಮೋಹದ ವಿರುದ್ಧವಾಗಿ ನೈಜ ಆತ್ಮದಲ್ಲಿ ನಂಬಿಕೆಯನ್ನು ಹೆಚ್ಚಿಸಿ ಬೇರೆಯೆಲ್ಲ ನನ್ನದಲ್ಲ ಅಂದರೆ, ಭೌತಿಕ ವಸ್ತುಗಳ; ಮತ್ತು ಆಂತರಿಕ ಪರಿಗ್ರಹವನ್ನು ತ್ಯಜಿಸಲು ಉದಾ. ಕೋಪ ಮತ್ತು ಹೆಮ್ಮೆ ಇತ್ಯಾದಿ ಮತ್ತು ಬಾಹ್ಯ ಪರಿಗ್ರಹವು- ಸಂಪತ್ತು, ಆಸ್ತಿ, ಚಿನ್ನ, ಬೆಳ್ಳಿ ವಜ್ರಗಳು ಮತ್ತು ರಾಜ ಸಂಪತ್ತುಗಳ ಮೋಹ ಬಿಡುವುದು. ಉತ್ತಮ ಬ್ರಹ್ಮಚರ್ಯ (ಪರಿಶುದ್ಧತೆ) ಬ್ರಹ್ಮಚರ್ಯದ ಮಹಾನ್ ಪ್ರತಿಜ್ಞೆಯನ್ನು ಆಚರಿಸಲು; ಅಂತರಾತ್ಮ ಮತ್ತು ಸರ್ವಜ್ಞನಾದ ಭಗವಂತನಲ್ಲಿ ಭಕ್ತಿಯನ್ನು ಹೊಂದಲು; ವಿಷಯಲೋಲುಪತೆಯ ಬಯಕೆಗಳು, ಅಸಭ್ಯ ಫ್ಯಾಷನ್‌ಗಳು, ಬಹುಪತ್ನಿತ್ವ, ಮಹಿಳೆಯರ ಮೇಲಿನ ಕ್ರಿಮಿನಲ್ ಆಕ್ರಮಣವನ್ನು ತ್ಯಜಿಸಲು. ಅನಿಯಮಿತ ಲೈಂಗಿಕ ಬಯಕೆಯು ಲೈಂಗಿಕವಾಗಿ ಹರಡುವ ರೋಗಗಳು ಅಬೋಲ, ಏಡ್ಸ್ ಮತ್ತು ಕುಟುಂಬಗಳ ನಾಶಕ್ಕೆ ಮೂಲ ಕಾರಣವಾಗಿದೆ. ಒಬ್ಬನು ತನ್ನ/ಅವಳ ಜೀವನ ಸಂಗಾತಿಗೆ ನಿಷ್ಠನಾಗಿರುವುದರಿಂದ ಅವನ/ಅವಳ ಕುಟುಂಬಕ್ಕೆ ಸ್ಥಿರತೆಯನ್ನು ನೀಡಬಹುದು. ದಶಲಕ್ಷಣ ಪರ್ವ ಶ್ರಾವಕ ಸಮಯದಲ್ಲಿ- ಶ್ರಾವಿಕರು ಸಂಬಂಧಪಟ್ಟ ದಿನಗಳಲ್ಲಿ ಮೇಲಿನ ಸದ್ಗುಣಗಳನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ವಾಸ್ತವವಾಗಿ ಈ ಸದ್ಗುಣಗಳು ಒಂದಕ್ಕೊಂದು ಸಂಬಂಧಿಸಿವೆ ಮತ್ತು ನೀವು ಒಂದನ್ನು ಅನುಸರಿಸಿದರೆ, ಇನ್ನೊಂದು ಸ್ವಯಂಚಾಲಿತವಾಗಿ ಬರುತ್ತವೆ. ಆಧ್ಯಾತ್ಮಿಕ ಅಭಿವೃದ್ಧಿ ಮತ್ತು ಶಾಂತಿಯುತ ಲೌಕಿಕ ಜೀವನದ ದೃಷ್ಟಿಕೋನದಿಂದ ಇವೆಲ್ಲವುಗಳಲ್ಲಿ ನಿಜವಾದ ಕ್ಷಮೆಯು ಅತ್ಯುನ್ನತವಾಗಿದೆ. ಆದ್ದರಿಂದ ನಾವು ಅದರಿಂದ ಪ್ರಾರಂಭಿಸಿ 10 ದಿನಗಳ ಪರ್ವದ ನಂತರ ನಾವು ಅನಂತ ಚತುರ್ದಶಿಯ ಒಂದು ದಿನದ ನಂತರ "ಕ್ಷಮವಾಣಿ"ಯನ್ನು ಆಚರಿಸುತ್ತೇವೆ. ಕ್ಷಮಾವಾಣಿಯ ಮುನ್ನಾದಿನದಂದು ನಾವು ಪರಸ್ಪರ ಕ್ಷಮೆಯನ್ನು ವ್ಯಕ್ತಪಡಿಸುತ್ತೇವೆ ಮತ್ತು ಕೆಟ್ಟ ನೆನಪುಗಳು ಅಥವಾ ಘಟನೆಗಳನ್ನು ಬಿಟ್ಟು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತೇವೆ. ಸ್ಪರ್ಧೆ ಮತ್ತು ದೈಹಿಕ ಬೆಳವಣಿಗೆಯ ಪ್ರಸ್ತುತ ಯುಗದಲ್ಲಿ ಜನರು ಐಷಾರಾಮಿ ಜೀವನಕ್ಕಾಗಿ ಹಣ ಮತ್ತು ಅನೇಕ ಭೌತಿಕ ಸಾಧನಗಳನ್ನು ಹೊಂದಿದ್ದಾರೆ ಆದರೆ ಅವರು ಮನಸ್ಸಿನ ಶಾಂತಿಯನ್ನು ಕಳೆದುಕೊಂಡಿದ್ದಾರೆ.ಈ ಸದ್ಗುಣಗಳ ಮೂಲಕ ಅವರು ಹೆಚ್ಚು ತೃಪ್ತಿ ಮತ್ತು ಮನಸ್ಸಿನ ಶಾಂತಿಯನ್ನು ಪಡೆಯಬಹುದು. ಮಾನಸಿಕ ಖಿನ್ನತೆಯಿದ್ದರೆ ಅದರಿಂದ ಹೊರಬರಬಹುದು ಮತ್ತು ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಮತ್ತು ಕೆಟ್ಟ ಕಾರ್ಯಗಳನ್ನು/ಪಾಪಗಳನ್ನು ಬಿಟ್ಟು ತಮ್ಮ ಅದೃಷ್ಟವನ್ನು ಬೆಳೆಸಿಕೊಳ್ಳಬಹುದು. ಅನೇಕ ಸಂದರ್ಭಗಳಲ್ಲಿ ಅದೃಷ್ಟವು ನಮ್ಮ ವೃತ್ತಿ ಅಥವಾ ವ್ಯವಹಾರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಕ್ಷಮೆ, ಸರಳ ಮತ್ತು ನೇರವಾದ ಜೀವನ, ಮೋಸ ಮುಕ್ತ ನಡವಳಿಕೆ ಮತ್ತು ದುರಾಶೆಯನ್ನು ತೊಡೆದುಹಾಕುವ ಮೂಲಕ ಅದೃಷ್ಟವನ್ನು ಸಾಧಿಸಬಹುದು. ಈ ಸತ್ಯದ ಹಿನ್ನೆಲೆಯಲ್ಲಿ ದಶಲಕ್ಷಣ ಪರ್ವದಲ್ಲಿ ನಾವು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಬೇಕು, ಇದರಿಂದ ನಾವು ಹೆಚ್ಚು ಶಾಂತಿಯುತ ಜೀವನವನ್ನು ಪಡೆಯಬಹುದು. ಪ್ರೊ. ಅಕ್ಷಯ ಕುಮಾರ್ ಮಳಲಿ

ಹೊಸ್ಮಾರು: ಸಾಮೂಹಿಕ ಉಚಿತ ವ್ರತ ಸ್ವೀಕಾರ (ವ್ರತೋಪದೇಶ) ಕಾರ್ಯಕ್ರಮ

Article Image

ಹೊಸ್ಮಾರು: ಸಾಮೂಹಿಕ ಉಚಿತ ವ್ರತ ಸ್ವೀಕಾರ (ವ್ರತೋಪದೇಶ) ಕಾರ್ಯಕ್ರಮ

ಹೊಸ್ಮಾರು, ಶ್ರೀ ಸಿದ್ದಿಕ್ಷೇತ್ರ ಸಿದ್ಧರವನ ಭ| 1008 ಶ್ರೀ ಮಹಾವೀರ ಸ್ವಾಮಿ ಬಸದಿಯಲ್ಲಿ ಪ.ಪೂ. ಗಣಿನೀ ಆರ್ಯಿಕಾ 105 ಮುಕ್ತಿಮತಿ ಮಾತಾಜೀಯವರ ಚಾತುರ್ಮಾಸ್ಯದ ಪ್ರಯುಕ್ತ ದಿನಾಂಕ 15-09-2024ನೇ ಆದಿತ್ಯವಾರ ಗಂಟೆ 8.00ರಿಂದ ಸಾಮೂಹಿಕ ಉಚಿತ “ವ್ರತ ಸ್ವೀಕಾರ” (ವ್ರತೋಪದೇಶ) ಕಾರ್ಯಕ್ರಮವು ಕಾರ್ಕಳ ಶ್ರೀ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ, ಮಹಾಸ್ವಾಮಿಗಳು ಮತ್ತು ಎನ್.ಆರ್.ಪುರ ಸಿಂಹನಗದ್ದೆ ಬಸ್ತಿಮಠದ, ಪರಮಪೂಜ್ಯ ಸ್ವಸ್ತಿಶ್ರೀ ಮದಭಿನವ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಜರುಗಲಿದೆ. ವಿ.ಸೂ: 8 ವರ್ಷ ಮೇಲ್ಪಟ್ಟ ಸದ್ಧರ್ಮ ಬಂಧುಗಳ ಮಕ್ಕಳ ಹೆಸರನ್ನು ನೋಂದಾಯಿಸಿ ಸಹಕರಿಸ ಬೇಕಾಗಿ ವಿನಂತಿ. ವಿವಾಹ ಆಗದೇ ಇರುವ ಯುವಕ ಯುವತಿಯರಿಗೆ ಸಿಂಹನಗದ್ದೆ ಬಸ್ತಿಮಠ, ಎನ್.ಆರ್.ಪುರ ಪೂಜ್ಯ ಸ್ವಾಮೀಜಿಯವರಿಂದ ವಿಶೇಷ ವ್ರತೋಪದೇಶ ಕಾರ್ಯಕ್ರಮ ಜರುಗಲಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದ್ಭರ್ಮ ಬಂಧುಗಳ ಮಕ್ಕಳು ಮತ್ತು ಅವಿವಾಹಿತ ಯುವಕ ಯುವತಿಯರು ಆಗಮಿಸಿ ಸಹಕರಿಸಬೇಕಾಗಿ ವಿನಂತಿ. ತಮ್ಮ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 12.09.20124 ನೋಂದಾವಣೆಗಾಗಿ ಸಂಪರ್ಕಿಸಿ: 7483068903, 9902066870.

ನಾರಾವಿ: 13 ನೇ ವರ್ಷದ ಅನಂತನೋಂಪಿ ಆರಾಧನಾ ಪೂಜಾ ವಿಧಾನ

Article Image

ನಾರಾವಿ: 13 ನೇ ವರ್ಷದ ಅನಂತನೋಂಪಿ ಆರಾಧನಾ ಪೂಜಾ ವಿಧಾನ

ನಾರಾವಿ ಮಾಗಣೆ ಭ| 1008 ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ದಿನಾಂಕ 16.09.2024ನೇ ಸೋಮವಾರದಿಂದ 18.09.2024ನೇ ಬುಧವಾರ ಪರ್ಯಂತ 13 ನೇ ವರ್ಷದ "ಅನಂತನೋಂಪಿ ಆರಾಧನಾ ಪೂಜಾ ವಿಧಾನ"ವು ಜರುಗಲಿರುವುದು. ಆ ಪ್ರಯುಕ್ತ ದಿನಾಂಕ 16.09.24ನೇ ಸೋಮವಾರ ಅನಂತ ತ್ರಯೋದಶಿಯಂದು ಬೆಳಿಗ್ಗೆ 8 ಗಂಟೆಗೆ ಆರಾಧನಾ ಪೂಜಾ ವಿಧಾನ ಆರಂಭ. ದಿನಾಂಕ 17.09.24ನೇ ಮಂಗಳವಾರ ಅನಂತ ಚತುರ್ದಶಿಯಂದು ಬೆಳಿಗ್ಗೆ 8 ಗಂಟೆಗೆ ಆರಾಧನಾ ಪೂಜಾ ವಿಧಾನವು ಸೌಮ್ಯ ಸರ್ವೆಶ್ ಜೈನ್ ಮತ್ತು ಸರ್ವೆಶ್ ಜೈನ್ ಹಾಗೂ ಬಳಗ ಮೂಡಬಿದ್ರೆ ಇವರ "ಸಂಗೀತ ಪೂಜಾಷ್ಟಕ"ದೊಂದಿಗೆ ಆರಂಭ. ದಿನಾಂಕ 18.09.24 ನೇ ಬುಧವಾರ ಅನಂತ ಹುಣ್ಣಿಮೆ ಯಂದು 8 ಗಂಟೆಗೆ ಆರಾಧನಾ ಪೂಜಾವಿಧಾನ ಆರಂಭ. ಈ ದಿನ ಮಧ್ಯಾಹ್ನ 12 ಗಂಟೆಗೆ ಬೆಳಿಗ್ಗೆ ಕಾರ್ಕಳ ಶ್ರೀ ಜೈನ ಮಠದ, ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಆಶೀರ್ವಚನ ಮಾಡಲಿದ್ದಾರೆ.

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ

Article Image

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ ಆಚರಣೆಯ ಸಂದರ್ಭದಲ್ಲಿ ಪರಮ ಪೂಜ್ಯ ಮುನಿಶ್ರೀ 108 ಪುಣ್ಯಸಾಗರ ಮಹಾರಾಜರು ಮತ್ತು ಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು ನಂತರ ಉತ್ತಮ ಮಾರ್ದವ ಧರ್ಮದ ಬಗ್ಗೆ ಡಾ. ನೀರಜಾ ನಾಗೇಂದ್ರಕುಮಾರ್ ಅವರು ಉಪನ್ಯಾಸ ನೀಡಿದರು. ಹುಬ್ಬಳ್ಳಿ ಜೈನ ಸಮಾಜದ ಲೋಬೋಗೋಳ್, ವಿದ್ಯಾಧರ್, ಬೀಳಗಿ, ರತ್ನಾಕರ್ ಅಣ್ಣಿಗೇರಿ, ಶಾಂತಿನಾಥ ಹೋತಪೇಟೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಕುತ್ಲೂರು, ಪರುಷಗುಡ್ಡೆ: ಶ್ರಾವಣ ಮಾಸದ ಸಂಪತ್ತು ಶುಕ್ರವಾರದ ವಿಶೇಷ ಪೂಜೆ

Article Image

ಕುತ್ಲೂರು, ಪರುಷಗುಡ್ಡೆ: ಶ್ರಾವಣ ಮಾಸದ ಸಂಪತ್ತು ಶುಕ್ರವಾರದ ವಿಶೇಷ ಪೂಜೆ

ಅತಿಶಯ ಕ್ಷೇತ್ರ ಕುತ್ಲೂರು ಪರುಷಗುಡ್ಡೆ ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯ ಆಡಳಿತ ಟ್ರಸ್ಟ್, ಭಾರತೀಯ ಚೈನ್ ಮಿಲನ್ ಪರುಷಗುಡ್ಡೆ ಶಾಖೆ, ಶ್ರೀ ಶಾಂತಿ ಸೌಹಾರ್ದ ಸಂಘ, ಪರುಷಗುಡ್ಡೆ ಇದರ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಸಂಪತ್ತು ಶುಕ್ರವಾರ ನಾಳೆ (ಸೆ. 13)ವಿಶೇಷ ಪೂಜೆಯೊಂದಿಗೆ ಬೆಳಗ್ಗೆ 10.30ರಿಂದ ಭರತೇಶ ವೈಭವ ಎಂಬ ಜೈನ ಪುಣ್ಯ ಕಥಾ ಭಾಗ ಯಕ್ಷಗಾನ - ತಾಳಮದ್ದಳೆ ಜರಗಲಿದೆ.

ರಾಜಪರ್ವವಾದ ದಶಧರ್ಮದಲ್ಲಿ ನ್ಯಾನೋ ಕಥೆ: ಉತ್ತಮ ಸಂಯಮ

Article Image

ರಾಜಪರ್ವವಾದ ದಶಧರ್ಮದಲ್ಲಿ ನ್ಯಾನೋ ಕಥೆ: ಉತ್ತಮ ಸಂಯಮ

ಸಣ್ಣ ವಯಸ್ಸಿನಲ್ಲೇ “ಬಿಸಿನೆಸ್ ಐಕಾನ್" ಎಂದು ಹೆಸರು ಮಾಡಿರುವ ಅವನು ದಾರಿಯಲ್ಲಿ ಮುನಿ ಮಹಾರಾಜರನ್ನು ನೋಡಿ “ಜೀವನದಲ್ಲಿ ಸಾಧಿಸುವುದನ್ನು ಬಿಟ್ಟು ಇಷ್ಟು ಸಣ್ಣ ವಯಸ್ಸಿನಲ್ಲಿ ಯಾಕೆ ವೈರಾಗ್ಯ ತಾಳುತ್ತಾರೆ ಎಂದು ಡ್ರೈವರ್ ಬಳಿ ಹೇಳಿದಾಗ ಯಾವತ್ತೂ ಹಿಂತುರುಗಿ ಮಾತಾನಾಡದ ಡ್ರೈವ‌ರ್ ಕಾರ್ ನಿಲ್ಲಿಸಿ ಅಂತಹ ಮುನಿಗಳ ಕಾಲ ಧೂಳಿಗೆ ಸಮವಲ್ಲ ನಾವು ನೀವೂ.. ನೀವು ನೋಡಿದ ಇಬ್ಬರೂ ಮುನಿಗಳು ಕೋಟ್ಯಾಧಿಪತಿಗಳು ಆದರೆ ಅದೆಲ್ಲ ಬಿಟ್ಟು ವೈರಾಗ್ಯ ಭಾವದಿಂದ ದೀಕ್ಷೆ ತೆಗೆದುಕೊಂಡು ಅವರ ಆತ್ಮಕಲ್ಯಾಣ ಮಾಡುತ್ತಾ ಭವ್ಯ ಜೀವಿಗಳ ಕಲ್ಯಾಣವನ್ನು ಮಾಡುತ್ತಿದ್ದಾರೆ. ಎಂದಾಗ ಆತ ಅದೇ ಮುನಿಗಳ ಬಳಿ ತನ್ನ ಕಾರು ಚಾಲಕನ ಜೊತೆಗೆ ಹೋಗಿ “ನಾವಿರುವ ಜಗತ್ತಿನಲ್ಲಿ ನೀವು ಸಹ ಇದ್ದು ಯಾವುದೇ ಭೋಗಕ್ಕೆ ಆಕರ್ಷಿಸಲ್ಪಡದೇ ಹೇಗಿರುತ್ತೀರಿ?" ಎಂದು ಕೇಳಿದ. ಮುನಿಗಳು ಉತ್ತರಿಸುತ್ತಾ "ನಾವು ಪಂಚೇಂದ್ರಿಯಗಳ ಅಧೀನತೆಯಲ್ಲಿ ಇಲ್ಲದೇ ನಮ್ಮ ವಿವೇಕತೆಯ ಅಧೀನತೆಯಲ್ಲಿದ್ದು ಇಂದ್ರಿಯಗಳ ನಿಗ್ರಹದಲ್ಲಿದ್ದು ಸಂಯಮವನ್ನು ಪಾಲಿಸುತ್ತೇವೆ. ಈ ಸಂಯಮದ ಪಾಲನೆಯಿಂದ ಯಾವುದೇ ವಿಕಾರತೆಗೆ ಒಳಗಾಗದೇ ಆತ್ಮ ಕಲ್ಯಾಣದ ಬೆಲೆ ಅರಿತವನಿಗೆ ಸಂಯಮದ ಪಾಲನೆಯ ಮನಸ್ಸು ಅಂತರಾತ್ಮದಿಂದ ಆಗುತ್ತದೆ". ಎಂದಾಗ ಆ ಇಬ್ಬರೂ ಮುನಿಗಳಿಬ್ಬರ ಕಾಲಿಗೆ ಬಿದ್ದು ಆ ಪ್ರಸಿದ್ಧ ವ್ಯಾಪಾರಸ್ಥ ಕೆಲವೇ ವರುಷಗಳಲ್ಲಿ ತನ್ನ ವ್ಯವಹಾರವನ್ನು ಮಗನಿಗೆ ವಹಿಸಿ ದೀಕ್ಷೆ ತೆಗೆದುಕೊಳ್ಳುತ್ತಾನೆ. ಸಂಯಮದ ಪಾಲನೆಯಿಂದ ಲೌಖಿಕ ಸುಖದೊಂದಿಗೆ ಪಾರಮಾರ್ಥಿಕ ಸುಖ ದೊರೆತು ಆತ್ಮ ಕಲ್ಯಾಣವಾಗುತ್ತದೆ ಶ್ವೇತಾ ನಿಹಾಲ್ ಜೈನ್

ಶ್ರೀ ಭುಜಬಲಿ ಬ್ರಹ್ಮಚರ್ಯಾ ಶ್ರಮ ಹಿರಿಯoಗಡಿ ಕಾರ್ಕಳ ದಶಲಕ್ಷಣ ಪರ್ವ ಸಮಾರಂಭ

Article Image

ಶ್ರೀ ಭುಜಬಲಿ ಬ್ರಹ್ಮಚರ್ಯಾ ಶ್ರಮ ಹಿರಿಯoಗಡಿ ಕಾರ್ಕಳ ದಶಲಕ್ಷಣ ಪರ್ವ ಸಮಾರಂಭ

ದಶಲಕ್ಷಣ ಪರ್ಯೂಶಣ ಪರ್ವದ ಮೂರನೇ ದಿನ ಪೂಜೆ ಭಜನೆ, ವಿದ್ಯಾರ್ಥಿಗಳ ಉಪನ್ಯಾಸದೊಂದಿಗೆ ಉತ್ತಮ ಆರ್ಜವ ಧರ್ಮವನ್ನು ಆಚರಿಸಲಾಯಿತು. ಮೂಡುಬಿದಿರೆಯ ಖ್ಯಾತ ವಕೀಲರಾದ ಶ್ವೇತಾ ಜೈನ್ ಉತ್ತಮ ಆರ್ಜವ ಧರ್ಮದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು.

ಶ್ರೀ ಜೈನ ಮಠ, ದಾನಶಾಲೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು

Article Image

ಶ್ರೀ ಜೈನ ಮಠ, ದಾನಶಾಲೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು

ಕಾರ್ಕಳ: ಶ್ರೀ ಜೈನ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಿಂಹ ಮಾಸದ ಮಂಗಳವಾರದ ವಿಶೇಷ ಪೂಜಾ ಕಾರ್ಯಕ್ರಮಗಳು ಕಾರ್ಕಳದ ಶ್ರೀ ಜೈನ ಮಠದಲ್ಲಿ ಜರುಗಿದವು. ವಿಶೇಷ ಆಮಂತ್ರಿತರಾದ ಶ್ರೀ ಕ್ಷೇತ್ರ ಕೊಲ್ಲಾಪುರ, ಶ್ರೀ ದಿಗಂಬರ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ತಮ್ಮ ಪಾವನ ಸಾನಿಧ್ಯವನ್ನು ನೀಡಿದ ಈ ಪುಣ್ಯ ಸಂದರ್ಭದಲ್ಲಿ ಕಾರ್ಕಳ ಶ್ರೀ ಮಠದ ವತಿಯಿಂದ ಪೂಜ್ಯರನ್ನು ಮಠಾಧೀಶರು ಕಾರ್ಕಳದ ಸಮಸ್ತ ಜೈನ ಬಾಂಧವರ ಪರವಾಗಿ ಅತ್ಯಂತ ಪ್ರೀತಿಯಿಂದ ಗೌರವ ಸಮರ್ಪಣೆ ಮಾಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮಠದ ವ್ಯವಸ್ಥಾಪಕರಾದ ಧನಕೀರ್ತಿ ಕಡಂಬ ಇವರು ಮಾಡಿದರು.

ದಶಧರ್ಮಗಳಲ್ಲಿ ನ್ಯಾನೋ ಕಥೆ: ಉತ್ತಮ ಸತ್ಯ

Article Image

ದಶಧರ್ಮಗಳಲ್ಲಿ ನ್ಯಾನೋ ಕಥೆ: ಉತ್ತಮ ಸತ್ಯ

ಉತ್ತಮ ಸತ್ಯ ಸತ್ಯ ದಿನನಿತ್ಯದ ಪದ ಬಳಕೆಯಲ್ಲಿ ಕೇಳುವ ಶಬ್ದವಾದರೂ ಅದಕ್ಕೆ ಅದರದೇ ಆದ ವಿಶೇಷ ಮೌಲ್ಯವಿದೆ. ಸಾಮಾನ್ಯ ಅರ್ಥದಲ್ಲಿ ವಾಸ್ತವವನ್ನು ವಸ್ತು ನಿಷ್ಠವಾಗಿ ಇದ್ದಂತೆ ಹೇಳುವುದು ಸತ್ಯವಾದರೂ, ಅವಶ್ಯಕತೆ ಇಲ್ಲಕದ ಸಂದರ್ಭದಲ್ಲಿ ಇನ್ನೊಬ್ಬರಿಗೆ ನೋವು ನೀಡುವಂತಹ ಉದ್ದೇಶದಿಂದ ಹೇಳುವ ಸತ್ಯ ಕೂಡ ಸಹ್ಯವಲ್ಲ. ಅಂತಹ ಸಂದರ್ಭದಲ್ಲಿ ಮಿತಭಾಷಿಯಾಗಿರಬೇಕು ಅಥವಾ ವಚನ ಗುಪ್ತಿಯಲ್ಲಿರಬೇಕು. ವಚನ ಗುಪ್ತಿಎಂದರೆ ಏನನ್ನು ಹೇಳದೆ ಮನದಲ್ಲಿ ಏನನ್ನು ವಿಚಾರ ಮಾಡದೆ ಸುಮ್ಮನಿರುವುದು. ಕಾರಣ ಉತ್ತಮ ಸತ್ಯವೂ ಅಹಿಂಸಾ ಧರ್ಮದ ರೂಪವಾಗಿದೆ. ಸತ್ಯದ ನೆಪದಲ್ಲಿ ಉದ್ದೇಶಪೂರ್ವಕವಾಗಿ ಇನ್ನೊಬ್ಬರಿಗೆ ಭಾವನಾತ್ಮಕ ಹಿಂಸೆ ನೀಡುವುದು ಪಾಪ. ಮತ್ತೊಂದು ಅರ್ಥದಲ್ಲಿ ಕಾಯಾ ವಾಚಾ ಮನಸಾ ಸತ್ಯದ ದಾರಿಯಲ್ಲಿ ಇದ್ದರೆ ಶುದ್ದಾತ್ಮಾನನ್ನು ಅರಿಯಲು ಸಾಧ್ಯ. ಶುದ್ಧ ಆತ್ಮನ ಅರಿವೇ ಉತ್ತಮ ಸತ್ಯ. ದಶಧರ್ಮಗಳಲ್ಲಿ ನ್ಯಾನೋ ಕಥೆ ಉತ್ತಮ ಸತ್ಯ ಅವರು ಸನ್ಯಾಸಿಯಲ್ಲದಿದ್ದರೂ ಅತ್ಯಂತ ಸತ್ಯ, ನಿಷ್ಠೆ, ಪ್ರಾಮಾಣಿಕತೆಯ ಜೊತೆ ಸದಾ ಯೋಗಿಯಂತೆ ಬದುಕಿ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಿದ್ದರು. ಒಂದು ಸಂದರ್ಭದಲ್ಲಿ ಯಾವುದೋ ತೋಟದಲ್ಲಿ ಕಳ್ಳತನವಾದಾಗ ಆ ಯೋಗಿ ಆವತ್ತು ಅಲ್ಲೇ ಇರುವ ಪರಿಸ್ಥಿತಿ ಎದುರಾಯಿತು. ಪಂಚಾಯಿತಿ ಕಟ್ಟೆಯಲ್ಲಿ ಸಾಕ್ಷಿಗಾಗಿ ಯೋಗಿಯನ್ನೇ ಕರೆದು ವ್ಯಕ್ತಿ ಒಬ್ಬನನ್ನು ತೋರಿಸಿ 'ಇವನು ಕಳ್ಳತನ ಮಾಡಿದ್ದು ನೀವು ನೋಡಿದ್ದೀರಾ' ಎಂದು ಪಂಚಾಯತಿ ಸದಸ್ಯರು ಕೇಳಿದಾಗ, 'ಇಲ್ಲಾ ಆತ ಕಳ್ಳತನ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದರು ಯೋಗಿ. ಕೊನೆಗೆ ಅವನಿಗೆ ಯಾವುದೇ ಶಿಕ್ಷೆ ಕೊಡದೇ ಬಿಟ್ಟುಬಿಟ್ಟರು. ಯೋಗಿಯ ಜೊತೆಗಿದ್ದ ವ್ಯಕ್ತಿ 'ನೀವು ಯಾವಾಗಲೂ ಸತ್ಯವನ್ನೇ ಹೇಳುತ್ತಿದ್ದವರು, ಮಹಾವೀರ ಭಗವಾನರನ್ನು ಶ್ರದ್ಧಾ, ಭಕ್ತಿಯಿಂದ ನಂಬುವವರಾಗಿ ಸತ್ಯವನ್ನೇ ಭೋಧಿಸಿದ ಮಹಾವೀರರ ತತ್ವವನ್ನು ಎಲ್ಲಿ ಪಾಲಿಸಿದಂತಾಯಿತು?' ಎಂದು ಕೇಳಿದ. ಯೋಗಿ ಹೇಳಿದರು 'ಮಹಾವೀರ ಭಗವಾನರು ಯಾವಾಗಲೂ ಸತ್ಯವನ್ನೇ ನುಡಿಯಬೇಕು, ಸತ್ಯ ಎನ್ನುವುದು ಆತ್ಮ ಧರ್ಮದ ಬೆಳಕೂ ಕೂಡಾ. ಆದರೆ ಇನ್ನೊಬ್ಬರಿಗೆ ನಾವು ಹೇಳುವ ಸತ್ಯ ಇನ್ನಷ್ಟು ಸಮಸ್ಯೆಯಾಗುವುದು ಎಂದಾಗ ಯೋಚಿಸಿ ಸತ್ಯ ಹೇಳಬೇಕಾದ್ದು ನಮ್ಮ ಕರ್ತವ್ಯ ಎಂದಿದ್ದಾರೆ. ಅವನು ಕದ್ದಿದ್ದು ನಿಜ ಆದರೆ ಆ ಹಣ್ಣುಗಳು ನಾಳೆ ಹಾಳಾಗುತ್ತಿದ್ದವು. ಅದರ ಮಾಲೀಕರು ಸದ್ಯಕ್ಕೆ ಹೊರ ದೇಶದಲ್ಲಿ ಇದ್ದಾರೆ. ಅವನ ಹೊಟ್ಟೆ ಪಾಡಿಗಾಗಿ ಅವನು ನಾಳೆ ಹಾಳಾಗಿ ಹೋಗೋ ಹಣ್ಣುಗಳನ್ನು ಕದ್ದ. ಅದರ ಬೀಜಗಳನ್ನು ಕೂಡಾ ತಂದು ಇದೇ ಮರದ ಕೆಳಗೆ ಬಿತ್ತಿ ಮತ್ತೊಂದು ಮರ ಬೆಳೆಯಲು ಸಹಕರಿಸಿದ್ದಾನೆ' ಆಚಾರ್ಯ ಭಗವಂತರು ಹೇಳುತ್ತಾರೆ, ಸತ್ಯ ಜೀವತತ್ವ ಮತ್ತು ಅವಿನಾಶಿ. ಸತ್ಯ ಹೇಳುವುದು ವಚನವಾಗಿದೆ. ವಚನ, ಪುದ್ದಲ ವಿಭಾವ ವ್ಯಂಜನ ಪರ್ಯಾಯವಿದೆ. ಇನ್ನೊಬ್ಬರಿಗೆ ನೋವುಂಟು ಮಾಡುವ ಅಥವಾ ದುಃಖವನ್ನು ಮಾಡುವ ಸತ್ಯ ಅಥವಾ ಸುಳ್ಳು ಎರಡೂ ಆತ್ಮಕಲ್ಯಾಣ ಹಾಗೂ ಲೌಖಿಕ ಕಲ್ಯಾಣಕ್ಕೆ ಹಾನಿ. ಆ ಕಾರಣದಿಂದ ಇವತ್ತು ಒಳ್ಳೆ ಉದ್ದೇಶದಿಂದ ಆತ ಸುಳ್ಳು ಹೇಳಿದರೂ ಸತ್ಯದ ದಾರಿಯಲ್ಲಿ ಉಪಯುಕ್ತವಿದೆ. ಯೋಗಿ ಮಹಾವೀರ ಭಗವಾನರನ್ನು ತಾನು ಹೇಳಿದ ಸುಳ್ಳಿಗಾಗಿ ಮನದಲ್ಲಿಯೇ ಕ್ಷಮೆ ಬೇಡಿದ. ಉತ್ತಮ ಸತ್ಯ ಧರ್ಮ ಕೀ ಜೈ ಶ್ವೇತಾ ನಿಹಾಲ್ ಜೈನ್

ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Article Image

ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

1ರಿಂದ 8ನೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2024-25ನೇ ಸಾಲಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ(PRE-MATRIC SCHOLARSHIP) ಯೋಜನೆಯಡಿಯಲ್ಲಿ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್‌ನ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 31ರಂದು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು 1)ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದವರಾಗಿರಬೇಕು. 2)ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. 3)ಎಲ್ಲ ಮೂಲಗಳಿಂದ ವಿದ್ಯಾರ್ಥಿಯ/ಪಾಲಕರ/ಪೋಷಕರ ವಾರ್ಷಿಕ ಆದಾಯವು ರೂ.1.00 ಲಕ್ಷಗಳನ್ನು ಮೀರಿರಬಾರದು. ಅರ್ಜಿ ಸಲ್ಲಿಸುವವರಿಗೆ ವಿಶೇಷ ಸೂಚನೆ: *ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು. *ಕಳೆದ ವರ್ಷದಲ್ಲಿ ವಿದ್ಯಾರ್ಥಿ ವೇತನ ಮಂಜೂರಾದ ವಿದ್ಯಾರ್ಥಿಗಳ ಅರ್ಜಿಗಳನ್ನು Auto Renewal ಎಂದು ಪರಿಗಣಿಸಲಾಗುವುದರಿಂದ ಸದರಿ ವಿದ್ಯಾರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. *ಹಿಂದಿನ ವರ್ಷ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿ ವಿದ್ಯಾರ್ಥಿವೇತನ ಮಂಜೂರಾಗದೇ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕು. *ಪ್ರೀ ಮೆಟ್ರಿಕ್ ಯೋಜನೆಯ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿರುವ ಬಗ್ಗೆ ಹಾಗೂ NPCI Mapping | Active ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಶಿಕಾಂತ್ ವೈ. ಆಯ್ಕೆ

Article Image

ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಶಿಕಾಂತ್ ವೈ. ಆಯ್ಕೆ

ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಮೂಡುಬಿದಿರೆ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶಶಿಕಾಂತ್ ವೈ ಆಯ್ಕೆಯಾಗಿದ್ದು ಸೆ.14 ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರಾದ ಸನ್ಮಾನ್ಯ ಮಧು ಬಂಗಾರಪ್ಪನವರು, ರಾಜ್ಯಾಧ್ಯಕ್ಷರಾದ ಎನ್.ಗೋಪಾಲ ಹಾಗೂ ಗಣ್ಯರು ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ. ಇವರಿಗೆ 2019 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುತ್ತದೆ.

ದಶಲಕ್ಷಣಪರ್ವ ಆಚರಣೆ ಉದ್ಘಾಟನೆ

Article Image

ದಶಲಕ್ಷಣಪರ್ವ ಆಚರಣೆ ಉದ್ಘಾಟನೆ

ಉಜಿರೆ: ಧರ್ಮದ ಮರ್ಮವನ್ನರಿತು ಮಾಡುವ ಆಚರಣೆಯಿಂದ ನಮ್ಮಲ್ಲಿರುವ ದೋಷಗಳ ನಿವಾರಣೆಯಾಗಿ ವರ್ತನೆಯಲ್ಲಿ ಪರಿವರ್ತನೆಯಾಗುತ್ತದೆ ಎಂದು ನಿವೃತ್ತ ಉಪನ್ಯಾಸಕಿ ಪ್ರೊ. ತ್ರಿಶಲಾ ಉದಯಕುಮಾರ್ ಮಲ್ಲ ಹೇಳಿದರು. ಅವರು ಸೋಮವಾರ ಉಜಿರೆಯಲ್ಲಿ ಸಿದ್ಧವನ ಗುರುಕುಲದಲ್ಲಿ ದಶಲಕ್ಷಣ ಪರ್ವ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ದಶಲಕ್ಷಣ ಪರ್ವವು ಆಧ್ಯಾತ್ಮಿಕ ಪರ್ವವಾಗಿದ್ದು, ದಶಧರ್ಮಗಳ ಅನುಷ್ಠಾನದಿಂದ ಮಾನವೀಯ ಮೌಲ್ಯಗಳು ಉದ್ದೀಪನಗೊಂಡು, ಸುಖ-ಶಾಂತಿ, ನೆಮ್ಮದಿಯ ಸಾರ್ಥಕ ಜೀವನ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಸಮಯದ ಸದುಪಯೋಗ ಮಾಡಬೇಕೆಂದು ಅವರು ಸಲಹೆ ನೀಡಿದರು. ಮುತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ, ನಿರಂಜನ ಜೈನ್ ಅಳಿಯೂರು ಧಾರ್ಮಿಕ ಪ್ರವಚನ ನೀಡಿ, ಉತ್ತಮ ಕ್ಷಮಾ ಉತ್ತಮ ಮಾರ್ದವ, ಉತ್ತಮ ಆರ್ಜವ, ಉತ್ತಮ ಶೌಚ, ಉತ್ತಮ ಸತ್ಯ, ಉತ್ತಮ ಸಂಯಮ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಆಕಿಂಚನ್ಯ ಮತ್ತು ಉತ್ತಮ ಬ್ರಹ್ಮಚರ್ಯ ಎಂಬ ದಶಧರ್ಮಗಳು ನಮ್ಮ ಆತ್ಮನ ಸಹಜ ಗುಣಗಳಾಗಿವೆ. ಆತ್ಮನಿಗೆ ಕರ್ಮದ ಕೊಳೆ ಅಂಟಿದಾಗ ಆತ್ಮನ ಸಹಜಗುಣ ಪ್ರಕಟವಾಗುವುದಿಲ್ಲ. ರಾಗ-ದ್ವೇಷ ರಹಿತವಾಗಿ, ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರ್ಯಾಂ ಎಂಬ ರತ್ನತ್ರಯ ಧರ್ಮದ ಮೂಲಕ ದಶಧರ್ಮಗಳ ಪಾಲನೆ ಮಾಡಬೇಕು. ಕೋಪವನ್ನು ತ್ಯಜಿಸಿದಾಗ, ಕ್ಷಮಾ ಗುಣ ಬೆಳೆಯುತ್ತದೆ. ಮಾರ್ದವ ಅಂದರೆ ಮೃದು ಸ್ವಭಾವ, ವಿನಯಶೀಲತೆ. ಮನಸು, ಕಣ್ಣು ಮತ್ತು ಕೋಪದ ನಿಯಂತ್ರಣದಿಂದ ದಶಧರ್ಮಗಳ ಪಾಲನೆಯೊಂದಿಗೆ ಜೀವನ ಪಾವನವಾಗುತ್ತದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳಾದ ಆದರ್ಶ್ ಮತ್ತು ಜೀವನ್ ಮಾತನಾಡಿದರು. ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ ಚೌತಿ, ದಶಲಕ್ಷಣಪರ್ವ ಮೊದಲಾದ ಪರ್ವಗಳ ಆಚರಣೆಯಿಂದ ಸಾರ್ವಕಾಲಿಕ ಮಾನವೀಯ ಮೌಲ್ಯಗಳು ಉದ್ದೀಪನಗೊಂಡು ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಇಂದಿನ ವೇಗದ ಮತ್ತು ಯಾಂತ್ರಿಕ ಬದುಕಿನಲ್ಲಿ ನಮ್ಮ ಆಚಾರ-ವಿಚಾರ ಮತ್ತು ಆಹಾರ-ವಿಹಾರ ಪರಿಶುದ್ಧವಾಗಿದ್ದಲ್ಲಿ ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ ಎಂದು ಹೇಳಿದರು. ಸಿದ್ಧವನ ಗುರುಕುಲದ ಉಪಪಾಲಕ ಕೇಶವ ಉಪಸ್ಥಿತರಿದ್ದರು. ಸಂಕೇತ್ ಸ್ವಾಗತಿಸಿದರು. ಚೇತನ್ ಧನ್ಯವಾದವಿತ್ತರು. ಉಪನ್ಯಾಸಕ ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ರಾಜಪರ್ವವಾದ ದಶಧರ್ಮದಲ್ಲಿ ನ್ಯಾನೋ ಕಥೆ: ಉತ್ತಮ ಶೌಚ

Article Image

ರಾಜಪರ್ವವಾದ ದಶಧರ್ಮದಲ್ಲಿ ನ್ಯಾನೋ ಕಥೆ: ಉತ್ತಮ ಶೌಚ

ಆ ವ್ಯಾಪಾರಸ್ಥ ಇನ್ನೇನು ತನ್ನ ಕಾರಲ್ಲಿ ಕುಳಿತು ಡ್ರೈವ್ ಮಾಡಬೇಕೆನ್ನುವಷ್ಟರಲ್ಲಿ ಅವನ ಪರ್ಸ್ ಕಳೆದುಹೋಗಿತ್ತು, ಕೂಡಲೇ ಆಗಷ್ಟೇ ಹೋಗಿದ್ದ ದೇವಸ್ಥಾನದಲ್ಲೂ ಪರ್ಸ್ ದೊರೆಯದಿದ್ದಾಗ ನಿರಾಶೆಯಲ್ಲಿ ಇನ್ನೇನು ಕಾರಲ್ಲಿ ಕೂರಬೇಕೆನ್ನುವಷ್ಟರಲ್ಲಿ ಭಿಕ್ಷುಕನೊಬ್ಬ ಕುಂಟುತ್ತಾ ಆ ವ್ಯಾಪಾರಸ್ಥನನ್ನು ಕೂಗಿ ರ್ಪಟ್ಟು “ನಿಮ್ಮ ಪರ್ಸ್ ಇಲ್ಲೇ ಬಿದ್ದಿತ್ತು. ನಿಮ್ಮನ್ನು ಎಷ್ಟು ಕೂಗಿ ಕರೆದರೂ ನೀವು ನೋಡ್ಲೆ ಇಲ್ಲ ಎಂದಾಗ ಅವನ ಕಣ್ಣುಗಳು ತುಂಬಿ ಬಂದು ಪರ್ಸ್‌ನಲ್ಲಿದ್ದ ಸ್ವಲ್ಪ ಹಣ ವ್ಯಾಪಾರಸ್ಥ ಭಿಕ್ಷುಕನಿಗೆ ಕೊಟ್ಟಾಗ ಭಿಕ್ಷುಕ ಒಂದು ಪೈಸೆಯನ್ನು ತೆಗೆದುಕೊಳ್ಳದೇ ಇವತ್ತಿಗೆ ನನಗೆ ಎಷ್ಟು ಬೇಕಿದೆ ಅಷ್ಟು ಹಣ ದೊರೆತಿದೆ ಇನ್ನೊಮ್ಮೆ ಈ ಕಡೆ ಬಂದಾಗ ಹೊಟ್ಟೆಗೆ ಇಲ್ಲದಿದ್ದಾಗ ಹಣ ಕೊಡಿ" ಎಂದಷ್ಟೇ ಹೇಳಿ ಕುಂಟುತ್ತಾ ತನ್ನ ಜಾಗಕ್ಕೆ ಹಿಂತಿರುಗಿದ. ಆ ಸಮಯಕ್ಕೆ ವ್ಯಾಪಾರಸ್ಥನಿಗೆ ಲೋಭದ ಆಸೆಯಿಂದ ಗೆಳೆಯನೇ ಕೊಡಿಸಿದ ಪ್ರಾಜೆಕ್ಟನ್ನು ಗೆಳೆಯನನ್ನು ಬಿಟ್ಟು ಮಾಡಲು ಹೊರಟಿರುವುದಕ್ಕೆ ಪಶ್ಚಾತ್ತಾಪಪಟ್ಟು ಇಂತಹ ಭಿಕ್ಷುಕನೇ ಲೋಭವನ್ನು ಬಿಟ್ಟು ಯೋಚಿಸುತ್ತಿರುವಾಗ ನಾನೆಷ್ಟು ನೀಚ ಎಂದೆನಿಸಿತು. ಲೋಭ ಕಷಾಯ ಬದುಕಿನ ನೆಮ್ಮದಿಯನ್ನು ಕ್ಷೀಣಗೊಳಿಸುತ್ತದೆ. ಹಾಗೆ ಲೋಭ ಮನಸ್ಸಿನ ಮಲಿನತೆಯನ್ನು ಮುಕ್ತಗೊಳಿಸಿ ಆತ್ಮ ಕಲ್ಯಾಣಕ್ಕೆ ಪ್ರೇರಣಿಯಾಗುತ್ತದೆ ಎನ್ನುವ ಮಾತು ಎಲ್ಲೋ ಓದಿರುವುದು ಅವನಿಗೆ ನೆನಪಾಗಿ ಗೆಳೆಯನಲ್ಲಿ ಮನಸ್ಸಿನಲ್ಲೇ ಕ್ಷಮೆ ಕೇಳಿದ. ಲೋಭದ ಆಭಾವವೇ ಭಾವದ ಪರಿಶುದ್ಧತೆ. ಉತ್ತಮ ಶೌಚ ಧರ್ಮ ಲೌಖಿಕ ಮತ್ತು ಪಾರಮಾರ್ಥಿಕ ಜೀವನದ ಅಭ್ಯುದಕ್ಕೂ ಸಂಜೀವಿನಿ. ಶ್ವೇತಾ ನಿಹಾಲ್ ಜೈನ್

ದಾವಣಗೆರೆ: ದಶ ಲಕ್ಷಣ ಪರ್ವ ಉಪನ್ಯಾಸ

Article Image

ದಾವಣಗೆರೆ: ದಶ ಲಕ್ಷಣ ಪರ್ವ ಉಪನ್ಯಾಸ

ದಾವಣಗೆರೆಯ ಶ್ರೀ ಪಾರ್ಶ್ವನಾಥ ಜಿನ ಮಂದಿರಕ್ಕೆ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಹಾಗೂ ರತ್ನತ್ರಯ ಧಾರವಾಹಿ ನಿರ್ದೇಶಕಿ. ಡಾ. ನೀರಜಾ ನಾಗೇಂದ್ರ ಕುಮಾರ್ ಭೇಟಿ ನೀಡಿ ಉತ್ತಮ ಅರ್ಜವ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷ ಪದ್ಮಪ್ರಕಾಶ್ ಹಾಗೂ ದಾವಣಗೆರೆ ಜೈನ ಸಮಾಜದ ಪದಾಧಿಕಾರಿಗಳು ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.

ಮೈಸೂರು: ಜೈನಾಲಜಿ ಮತ್ತು ಪ್ರಾಕೃತ ವಿಭಾಗ ಮುಂದುವರಿಸುವಂತೆ ಆಗ್ರಹ

Article Image

ಮೈಸೂರು: ಜೈನಾಲಜಿ ಮತ್ತು ಪ್ರಾಕೃತ ವಿಭಾಗ ಮುಂದುವರಿಸುವಂತೆ ಆಗ್ರಹ

ಮೈಸೂರು ವಿಶ್ವವಿದ್ಯಾಲಯದಲ್ಲಿ ಜೈನಾಲಜಿ ಮತ್ತು ಪ್ರಾಕೃತ ವಿಭಾಗವನ್ನು ಮುಂದುವರಿಸುವಂತೆ ಆಗ್ರಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಹೆಗಡೆ ನೇತೃತ್ವದಲ್ಲಿ ಇಂದು ಉಪಕುಲಪತಿ ಲೋಕನಾಥ್ ರವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು. ನಿಯೋಗದಲ್ಲಿ ಜಯಶ್ರೀ, ಪದ್ಮಪ್ರಸಾದ್, ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಯುವರಾಜ್ ಭಂಡಾರಿ, ಗೌರವ ಅಧ್ಯಕ್ಷರಾದ ಶೀಲಾ ಅನಂತರಾಜು, ಪ್ರಧಾನ ಕಾರ್ಯದರ್ಶಿ ರತ್ನರಾಜು, ಖಜಾಂಚಿ ಚಂದ್ರಶೇಖರ ಅರಿಗ, ಜಂಟಿ ಕಾರ್ಯದರ್ಶಿ ಪ್ರಶಾಂತ್, ಮೈಸೂರು ವಿಭಾಗದ ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಚಂದ್ರು ಪ್ರಕಾಶ್, ಅರುಣಾಚಂದ್ರ ಪ್ರಕಾಶ್, ಪದ್ಮಶ್ರೀ ಮಹಿಳಾ ಸಮಾಜದ ಅಧ್ಯಕ್ಷರಾದ ಲತಾ ಸುದರ್ಶನ್, ಜಂಟಿ ಕಾರ್ಯದರ್ಶಿ ಸಿಂಧೂ ಅರುಣ್, ಕರ್ನಾಟಕ ಜೈನ ತೀರ್ಥಕ್ಷೇತ್ರ ಕಮಿಟಿ ಅಧ್ಯಕ್ಷ ವಿನೋದ್ ಬಾಕ್ಲಿವಾಲ, ಶ್ವೇತಾಂಬರ ಮೂರ್ತಿ ಪೂಜಕ್ ಸಂಘದ ಅಧ್ಯಕ್ಷ ಬೇರು ಲಾಲ್, ಟ್ರಸ್ಟಿಗಳಾದ ಹನ್ಸರಾಜ್, ದೇವಿ ಚಂದ, ಚಂಪಾಲಾಲ್, ಪ್ರೊ. ಶುಭಚಂದ್ರ ಭಾಗವಹಿಸಿದ್ದರು. ಜೆ.ರಂಗನಾಥ ತುಮಕೂರು

ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆ

Article Image

ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆ

ಬೆಂಗಳೂರು: ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪ, ಬೆಂಗಳೂರಿನಲ್ಲಿ ಇತ್ತೀಚೆಗೆ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎ.ವಿ. ಪದ್ಮನಿಯವರು "ಲೇಶ್ಯಗಳ" ಬಗ್ಗೆ ಉಪನ್ಯಾಸ ನೀಡಿದರು. ಶೋಭಿತ ನವೀನ್ ಅವರು ಪರ್ವವಾಚನ ಮಾಡಿದರು. ಸುಗುಣರವರು ರತ್ನತ್ರಯ ಮಿಲನದ ಉದ್ದೇಶಗಳನ್ನು ತಿಳಿಸಿದರು. ಪದ್ಮಾ ಸೂರಿಯವರು. ವಿವಾಹ ವಾರ್ಷಿಕ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡ ರತ್ನತ್ರಯ ಮಿಲನ ಸದಸ್ಯರಿಗೆ ಶುಭ ಕೋರಿದರು. ಶೋಭಾ ಪಾಟೀಲ್, ತ್ರಿಕಾಲ ತೀರ್ಥಂಕರರ ಹೆಸರುಗಳನ್ನು ವಾಚಿಸಿದರು. ಮಹಾವೀರ ಕುಮಾರವರು ರತ್ನತ್ರಯ ಮಿಲನಿನ ನಡಾವಳಿಯನ್ನು ವಾಚಿಸಿದರು. ರಾಣಿ ಪ್ರಫುಲ್ಲ ಅವರು ಅತಿಥಿಗಳನ್ನು ಪರಿಚಯ ಮಾಡಿದರು. ಅನಂತಕುಮಾರಿಯವರು, ಅಗಲಿದ ಕಮಲಾ ಹಂಪನಾ ಅವರ ಕುರಿತಾದ ಸ್ವರಚಿತ ಕವನ ವಾಚನ ಮಾಡುವುದರ ಮುಖೇನ ಶ್ರದ್ಧಾಂಜಲಿ ಅರ್ಪಿಸಿದರು. ನವೀನ್ ಕುಮಾರ್ ಗುಬ್ಬಿಯವರು ಅಧ್ಯಕ್ಷರ ನುಡಿಗಳನ್ನಾಡಿದರು. ಚಂದನ ಸುರೇಂದ್ರ ಅವರು ಕಾರ್ಯಕ್ರಮದ ಆತಿಥ್ಯವನ್ನು ವಹಿಸಿಕೊಂಡಿದ್ದರು. ಚಂದನಾದೇವಿ ಅವರು ಪಾರ್ಥಿಸಿ, ಶಿಲ್ಪಾ ಸುರೇಂದ್ರ ಅವರು ಸ್ವಾಗತಿಸಿದರು, ಉಷಾ ಮಹಾವೀರ್ ಅವರು ವಂದಿಸಿದರು. ಅನಂತಕುಮಾರಿ ಅವರು ಕಾರ್ಯಕ್ರಮ ನಿರೂಪಿಸಿದರು.

“ಪರ್ಯೂಷಣ ಪರ್ವ” ಕೃತಿ ಬಿಡುಗಡೆ

Article Image

“ಪರ್ಯೂಷಣ ಪರ್ವ” ಕೃತಿ ಬಿಡುಗಡೆ

ಉಜಿರೆ: ದಶಲಕ್ಷಣಪರ್ವ ಆಚರಣೆಯ ಶುಭಾವಸರದಲ್ಲಿ ಧರ್ಮಸ್ಥಳದಲ್ಲಿರುವ “ಮಂಜೂಷಾ” ವಸ್ತು ಸಂಗ್ರಹಾಲಯದ ಕ್ಯುರೇಟರ್ ಪುಷ್ಪದಂತ ಬರೆದ “ಪರ್ಯೂಷಣ ಪರ್ವ” ಕೃತಿಯನ್ನು ಸೋಮವಾರ ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಪುಸ್ತಕದಲ್ಲಿರುವ ಉಪಯುಕ್ತ ಆಧ್ಯಾತ್ಮಿಕ ಮಾಹಿತಿ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಲೇಖಕ ಪುಷ್ಪದಂತ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ನಿರಂಜನ್ ಜೈನ್, ಆರ್.ಯನ್. ಪೂವಣಿ ಉಪಸ್ಥಿತರಿದ್ದರು.

ವಿಶ್ವ ಭೌತಚಿಕಿತ್ಸಾ ಸಪ್ತಾಹ ಮತ್ತು ಭೌತ ಚಿಕಿತ್ಸಾ ದಿನಾಚರಣೆ

Article Image

ವಿಶ್ವ ಭೌತಚಿಕಿತ್ಸಾ ಸಪ್ತಾಹ ಮತ್ತು ಭೌತ ಚಿಕಿತ್ಸಾ ದಿನಾಚರಣೆ

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ವಿಶ್ವ ಭೌತಚಿಕಿತ್ಸಾ ಸಪ್ತಾಹ ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನಲ್ಲಿ ಸೆಪ್ಟೆಂಬರ್ 3 ರಿಂದ 6ರವರೆಗೆ ವಿಶ್ವ ಭೌತಚಿಕಿತ್ಸಾ ಸಪ್ತಾಹ ಮತ್ತು ಭೌತ ಚಿಕಿತ್ಸಾ ದಿನಾಚರಣೆಯನ್ನು ಆಚರಿಸಲಾಯಿತು. ಭೌತಚಿಕಿತ್ಸಾ ಸಪ್ತಾಹದ ಅಂಗವಾಗಿ ಪೋಸ್ಟರ್ ಪ್ರದರ್ಶನ, ಚರ್ಚಾ ಸ್ಪರ್ಧೆ, ಶೈಕ್ಷಣಿಕ ಕಾರ್ಯಕ್ರಮಗಳು, ಕಾಲ್ನಡಿಗೆ ಜಾಥಾ, ತಪಾಸಣಾ ಶಿಬಿರ ಮುಂತಾದ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮುಖ್ಯ ಅತಿಥಿಗಳಾಗಿದ್ದು ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಭೌತಚಿಕಿತ್ಸಕರು ಮತ್ತು ಎಂ.ಎಸ್.ರಾಮಯ್ಯ್ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ರವೀಂದ್ರ ಹಾಗೂ ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರವಿ ಸವದತ್ತಿ ಅವರನ್ನು ಭೌತಚಿಕಿತ್ಸೆಯ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್, ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಹಣಕಾಸು ಅಧಿಕಾರಿಗಳಾದ ವಿ. ಜಿ. ಪ್ರಭು ಮತ್ತು ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ ಪರಮಾರ ಮತ್ತು ಇತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಸಂಗೀತಾ ಅಪ್ಪಣ್ಣನವರ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ. ಜ್ಯೋತಿ ಜೀವಣ್ಣವರ ಅತಿಥಿಗಳನ್ನು ಸ್ವಾಗತಿಸಿದರು. ಡಾ. ತುಳಸಿ ಕುಲಕರ್ಣಿ ಮತ್ತು ಡಾ. ಐಶ್ವರ್ಯ ದೇಸಾಯಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಸುಧೀರ್ ಭಟ್ಟಭೋಲನ್ ವಂದರ್ನಾಪಣೆ ಸಲ್ಲಿಸಿದರು.

First Previous

Showing 17 of 25 pages

Next Last