ಆಳ್ವಾಸ್: ಸನ್ಮಾನ ಕಾರ್ಯಕ್ರಮ
ಮೂಡುಬಿದಿರೆ:ಆಳ್ವಾಸ್ ಕಾನೂನು ಕಾಲೇಜಿನ ವತಿಯಿಂದ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಶೇಣವ ಹಾಗೂ ಮೂಡುಬಿದಿರೆ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಶರತ್ ಶೆಟ್ಟಿಯವರಿಗೆ ಸನ್ಮಾನ ಕಾರ್ಯಕ್ರಮ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಇಲ್ಲಿ ಬಾಹ್ಯಕಾಶವೇ ಮಿತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಶೇಣವ ವಕೀಲ ವೃತ್ತಿಯಲ್ಲಿ ದೊರೆಯುವ ಹೆಸರು, ಗೌರವ ಮತ್ತು ಆರ್ಥಿಕ ಯಶಸ್ಸು ಬೇರೆ ಯಾವ ಕ್ಷೇತ್ರಗಳಲ್ಲೂ ಸಿಗಲಾರದು. ಇಲ್ಲಿ ಆಕಾಶವಲ್ಲ, ಬಾಹ್ಯಾಕಾಶವೇ ನಮ್ಮ ಮಿತಿ ಎಂದರು. ಮೂರನೇ ಚುನಾವಣೆಯಲ್ಲಿ ಗೆಲುವು ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ನಾಯಕತ್ವ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಬಳಿಕ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಎದುರಿಸಿದ್ದೆ. ಇದೀಗ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ಮೂರನೇ ಪ್ರಮುಖ ಚುನಾವಣೆಯಲ್ಲಿ ಯಶಸ್ಸು ಕಂಡಿದ್ದೇನೆ. ತಾನು ಮೂಲತಃ ವೈದ್ಯನಾಗುವ ಕನಸು ಕಂಡಿದ್ದೆ. ಆದರೆ ಪಿಸಿಎಂಬಿ ವಿಭಾಗದಲ್ಲಿ ಅನುತ್ತೀರ್ಣನಾದ ಬಳಿಕ ಕಲಾ ವಿಭಾಗಕ್ಕೆ ಸೇರ್ಪಡೆಗೊಂಡೆ. ಜೀವನದ ಸೋಲುಗಳೇ ನನ್ನ ಯಶಸ್ಸಿನ ದಾರಿಯನ್ನು ರೂಪಿಸಿದವು ಎಂದು ಹೇಳಿದರು. ವಕೀಲರು ಕೇವಲ ನ್ಯಾಯಾಲಯದೊಳಗೆ ಮಾತ್ರ ಸೀಮಿತರಾಗಿರಬೇಕಿಲ್ಲ. ಉತ್ತಮ ನಾಯಕರು, ನೀತಿ ರೂಪಿಸುವವರು ಹಾಗೂ ಕಾರ್ಪೊರೇಟ್ ವಲಯದ ತಜ್ಞರಾಗಿಯೂ ಬೆಳೆಯಬಹುದು. ಇತರ ಕ್ಷೇತ್ರಗಳಲ್ಲಿ ನಿವೃತ್ತಿಯ ವಯಸ್ಸು ಇದ್ದರೂ, ವಕೀಲ ವೃತ್ತಿಯಲ್ಲಿ ಜೀವಿತಾವಧಿಯವರೆಗೆ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಅವಕಾಶವಿದೆ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಕೀಲ ವೃತ್ತಿಗೆ ವಿಶೇಷ ಗೌರವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಕೀಲ ವೃತ್ತಿಗೆ ವಿಶೇಷ ಗೌರವವಿದೆ. ವೃತ್ತಿಯ ಘನತೆ ಮತ್ತು ನೈತಿಕತೆಯನ್ನು ಕಾಪಾಡಿಕೊಂಡರೆ ಹಣ ಹಾಗೂ ಯಶಸ್ಸು ಸಹಜವಾಗಿಯೇ ಬರುತ್ತದೆ. ವೃತ್ತಿಪರರಾಗುವುದರ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಸಾಮಾಜಿಕ ಪ್ರಜ್ಞೆ ಜಾಗೃತವಾಗಿರಬೇಕು ಇಂದು ಸಮಾಜದಲ್ಲಿ ಹಕ್ಕುಗಳ ಬಗ್ಗೆ ಹೆಚ್ಚು ಮಾತನಾಡಲಾಗುತ್ತಿದೆ. ಆದರೆ ಕರ್ತವ್ಯಗಳ ಬಗ್ಗೆಯೂ ಸಮಾನ ಗಮನ ನೀಡಬೇಕು. ಪ್ರತಿಯೊಬ್ಬರೂ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಂಡರೆ ಭಾರತವನ್ನು ವಿಶ್ವದ ಅಗ್ರ ರಾಷ್ಟ್ರವನ್ನಾಗಿ ರೂಪಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಶರತ್ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಕಾನೂನಿನ ಅನುಷ್ಠಾನದಲ್ಲಿ ಮಹತ್ತರ ಜವಾಬ್ದಾರಿಯನ್ನು ವಕೀಲರು ನಿರ್ವಹಿಸುತ್ತಾರೆ. ಆದ್ದರಿಂದಲೇ ವಕೀಲ ವೃತ್ತಿಯನ್ನು ಅತ್ಯಂತ ಗೌರವಾನ್ವಿತ ಮತ್ತು ಶ್ರೇಷ್ಠ ವೃತ್ತಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಸಾಲದ ಕೋಟ್ ವಕೀಲನಾಗಿ ವೃತ್ತಿ ಆರಂಭಿಸುವ ಸಂದರ್ಭದಲ್ಲಿ ಕೋಟ್ ಖರೀದಿಸಲು ಸಹ ಗೆಳೆಯನಿಂದ 1,500 ರೂಪಾಯಿ ಸಾಲ ಪಡೆದಿದ್ದೆ. ಆದರೆ ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದ ಮೂಲಕ ಇಂದು ಬಾರ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಅವಕಾಶ ದೊರೆತಿದೆ ಎಂದು ತಮ್ಮ ಜೀವನಾನುಭವ ಹಂಚಿಕೊಂಡರು. ಯುವಕರು ಸವಾಲುಗಳಿಗೆ ಹೆದರದೆ ತಮ್ಮ ಗುರಿಯತ್ತ ನಿರಂತರವಾಗಿ ಶ್ರಮಿಸಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕಾನೂನು ಚಿಂತನೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಗತ್ಯವಾಗಿದೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ಶಿಸ್ತು, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ಹಕ್ಕುಗಳ ಬಗ್ಗೆ ನಾವು ಹೆಚ್ಚು ಮಾತನಾಡುತ್ತೇವೆ. ಆದರೆ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಅಗತ್ಯ. ಕಾನೂನು ಶಿಕ್ಷಣದ ಪಾವಿತ್ರ‍್ಯವನ್ನು ಕಾಪಾಡಿಕೊಂಡು ಸಮಾಜದಲ್ಲಿ ಕಾನೂನು ಜಾಗೃತಿ ಮೂಡಿಸುವ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಗುರಿಯತ್ತ ಸ್ಪಷ್ಟವಾದ ಗಮನ, ಶಿಸ್ತು ಮತ್ತು ನೈತಿಕತೆ ಯಶಸ್ಸಿನ ಮೂಲಮಂತ್ರ. ಹೊಂದಾಣಿಕೆ ಮಾಡಿಕೊಳ್ಳಬಹುದು, ಆದರೆ ತತ್ವಗಳಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ನೂತನವಾಗಿ ಅಧಿಕಾರ ಸ್ವೀಕಾರ ಮಾಡಿದ ಜಗದೀಶ್ ಶೇಣವ, ಶರತ್ ಶೆಟ್ಟಿಯನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮೊಹಮ್ಮದ್ ಸಫ್ವಾನ್ ನಿರೂಪಿಸಿದರು. ಕಾರ‍್ಯಕ್ರಮದಲ್ಲಿ ಹಿರಿಯ ವಕೀಲರಾದ ಬಾಹುಬಲಿ ಪ್ರಸಾದ, ಶ್ವೇತಾ ಜೈನ್, ಮನೋಜ್ ಶೆಣೈ, ಜಯಪ್ರಕಾಶ್ ಭಂಡಾರಿ, ಆಳ್ವಾಸ್ ಕಾನೂನು ಕಾಲೇಜಿನ ಪ್ರಾಚಾರ್ಯ ಪ್ರೋ ಮಹಾಂತೇಶ್ ಜಿ ಎಸ್ ಇದ್ದರು.
