Article Image

ಡಾ. ಎಚ್. ಪಿ. ಮೋಹನ ಕುಮಾರ ಶಾಸ್ತ್ರಿ - ಆಯ್ಕೆ

Article Image

ಡಾ. ಎಚ್. ಪಿ. ಮೋಹನ ಕುಮಾರ ಶಾಸ್ತ್ರಿ - ಆಯ್ಕೆ

ಮೈಸೂರು: ಖ್ಯಾತ ಶಿಕ್ಷಣ ತಜ್ಞರು, ವಿದ್ಯಾರ್ಥಿ ಪೋಷಕರು, ಆಪ್ತ ಸಮಾಲೋಚಕರಾದ ವಿದ್ಯಾ ವಾಚಸ್ಪತಿ ಡಾ. ಎಚ್. ಪಿ. ಮೋಹನ ಕುಮಾರ ಶಾಸ್ತ್ರಿರವರು ಅಂತರ್ ರಾಷ್ಟ್ರೀಯ ಶಿಕ್ಷಕ ದಿನಾಚರಣೆ ನಿಮಿತ್ತ "ಇಂಟರ್ನ್ಯಾಷನಲ್ ಟೀಚರ್ಸ್ ಎಕ್ಸಲೆಂಟ್ ಅವಾರ್ಡ್ " ಪ್ರಶಸ್ಥಿಗೆ ಭಾಜನರಾಗಿದ್ದಾರೆ.

ಜೈನ್ ಮಿಲನ್ ಮಾಸಿಕ ಸಭೆ ಹಾಗೂ “ಗುರುವಂದನಾ” ಕಾರ್ಯಕ್ರಮ

Article Image

ಜೈನ್ ಮಿಲನ್ ಮಾಸಿಕ ಸಭೆ ಹಾಗೂ “ಗುರುವಂದನಾ” ಕಾರ್ಯಕ್ರಮ

ಮಂಗಳೂರು: ಜೈನ್ ಮಿಲನ್ ಮಾಸಿಕ ಸಭೆಯನ್ನು “ಗುರುವಂದನಾ” ಎಂಬ ಅರ್ಥಪೂರ್ಣ ಶೀರ್ಷಿಕೆಯೊಂದಿಗೆ ವರ್ಧಮಾನ ಸಿದ್ಧಾರ್ಥ ಭವನ, ಮಹಾವೀರ್ ಜೈನ್ ಬೋರ್ಡಿಂಗ್‌ನಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ಗುರುವಂದನಾ ಕಾರ್ಯಕ್ರಮದಲ್ಲಿ 46ಕ್ಕೂ ಹೆಚ್ಚು ಶಿಕ್ಷಕರನ್ನು ಆಹ್ವಾನಿಸಿ, ಫಲ ಹಾಗೂ ತಂಬೊಲ ನೀಡಿ ಗೌರವಿಸಲಾಯಿತು. ಶಿಕ್ಷಕರಿಗೆ ಗೌರವ ಸಲ್ಲಿಸುವ ಮೂಲಕ ಅವರ ಸಮಾಜ ಮತ್ತು ವಿದ್ಯಾರ್ಥಿಗಳ ಜೀವನಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು. ಇದೇ ಸಂದರ್ಭದಲ್ಲಿ ವೈವಾಹಿಕ ದಿನಾಚರಣೆ ,ಹುಟ್ಟುಹಬ್ಬದ ಆಚರಣೆ ಹಾಗೂ ಉಡುಗೊರೆ ಸಮಾರಂಭವನ್ನು ಅನ್ವಿತಾ ಅವರು ನಡೆಸಿಕೊಟ್ಟರು. ಸಂಘಟನೆಯ ಸದಸ್ಯರು ಹಾಗೂ ಸದಸ್ಯೆಯರ ಸಕ್ರಿಯ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು ಹಾಗೂ ಹೊಸ 8 ಸದಸ್ಯರನ್ನು ಸೇರ್ಪಡೆಗೋಳಿಸಲಾಯಿತು. ಸಭೆಯಲ್ಲಿ ಇತ್ತೀಚೆಗೆ ಅಗಲಿದ ಐ. ಆ. ಬಲ್ಲಾಳ್ ಅವರಿಗೆ ಪಂಚ ನಮಸ್ಕಾರದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಕಾರ್ಯಕ್ರಮದ ವಿಶೇಷತೆಯೆಂದರೆ ಮಕ್ಕಳೇ ನಿರ್ವಹಿಸಿದರು. ನಂತರ ಮಕ್ಕಳ ತಂಡದಿಂದ ಸುಂದರವಾದ ನೃತ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಮಕ್ಕಳು ಆತ್ಮವಿಶ್ವಾಸದಿಂದ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿನ್ ಕುಮಾರ್ ಜೈನ್, ಅಧ್ಯಕ್ಷರು, ಭಾರತೀಯ ಜೈನ ಮಿಲನ್, ಮಂಗಳೂರು ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಶ್ರುತಿಕೀರ್ತಿ ರಾಜಾ, ನಿರ್ದೇಶಕರು, ಶೃತ ಅಕಾಡೆಮಿ, ಮಂಗಳೂರು ಹಾಗೂ ವಿಶೇಷ ಅತಿಥಿಗಳಾಗಿ ಪುಷ್ಪರಾಜ್ ಜೈನ್, ರಾಷ್ಟ್ರೀಯ ಉಪಾಧ್ಯಕ್ಷರು, ಭಾರತೀಯ ಜೈನ ಮಿಲನ್, ನವದೆಹಲಿ ಮತ್ತು ರಾಜೇಶ್ ಎಂ., ರಾಷ್ಟ್ರೀಯಸಂಯೋಜಕರು, ಭಾರತೀಯ ಜೈನ ಮಿಲನ್, ನವದೆಹಲಿ ಉಪಸ್ಥಿತರಿದ್ದರು. ಸನ್ನಿದಿ ಮತ್ತು ತಂಡದವರು ಸ್ವಾಗತಿಸಿದರು. ಶ್ರವಣ್‌ರವರು ಸ್ವಾಗತ ಭಾಷಣ ಮಾಡಿದರು. ಅಕ್ಷಯ ಕುಮಾರ್‌ರವರು ಮಾಸಿಕ ವರದಿಯನ್ನು ಮಂಡಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಸಮ್ಮೇದ್ ಜೈನ್‌ರವರು ನೆರವೇರಿಸಿದರು. ಬಳಿಕ ನಡೆದÀ ಲಕ್ಕಿ ಗೇಮ್ ಕಾರ್ಯಕ್ರಮವನ್ನು ಶಾಶ್ವತಿ ಜೈನ್ ನಡೆಸಿಕೊಟ್ಟರು. ಗಹನ ಜೈನ್‌ರವರು ಕಾರ್ಯಕ್ರಮವನ್ನು ನಿರ್ವಹಿಸಿದರು ಸಮರ್ಥ್ ಜೈನ್‌ರವರು ವಂದನಾರ್ಪಣೆ ಸಲ್ಲಿಸಿದರು. ಡಾ. ಸೌಮ್ಯರವರು ಶಾಂತಿ ಮಂತ್ರವನ್ನು ನೆರವೇರಿಸುವ ಮೂಲಕ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.

ಕ ವಿ ವಿ ಜೈನ ಅಧ್ಯಯನ ಪೀಠ: ವಿಶೇಷ ಉಪನ್ಯಾಸ ಕಾರ್ಯಕ್ರಮ

Article Image

ಕ ವಿ ವಿ ಜೈನ ಅಧ್ಯಯನ ಪೀಠ: ವಿಶೇಷ ಉಪನ್ಯಾಸ ಕಾರ್ಯಕ್ರಮ

ಧಾರವಾಡ: ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪ್ರಾಚೀನ ಭಾಷೆ ಕನ್ನಡಕ್ಕೆ ಮತ್ತು ನಾಡಿನ ಸಂಸ್ಕೃತಿಗೆ ಜೈನ ಕವಿಗಳ ಕೊಡುಗೆ ಅಪಾರವಾಗಿದೆ. ರತ್ನತ್ರಯ ಕವಿಗಳೆಂದೇ ಹೆಸರಾದ ಪಂಪ, ರನ್ನ, ಪೊನ್ನ ಹಾಗೂ ಅಭಿನವ ಪಂಪ ಎಂದು ಹೆಸರಾದ ನಾಗಚಂದ್ರ, ಜನ್ನ, ನಯಸೇನ ಮುಂತಾದ ಹಲವಾರು ಜೈನ ಕವಿಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದರಲ್ಲದೆ ಅಹಿಂಸಾ ತತ್ವದ ಜೊತೆಗೆ ಸಮಾನತೆ, ಧಾರ್ಮಿಕ ಚಿಂತನೆ ಆಧ್ಯಾತ್ಮಿಕ ಮೌಲ್ಯಗಳನ್ನು ಮನುಕುಲಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ಅಭಿಪ್ರಾಯಪಟ್ಟರು. ಅವರು ಪರಮ ಪೂಜ್ಯ ಬಾಲಾಚಾರ್ಯ ಡಾ. ಸಿದ್ಧಸೇನ ಮುನಿಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಜೈನಶಾಸ್ತ್ರ ಅಧ್ಯಯನ ಪೀಠ ಹಾಗೂ ಜೆ ಎಸ್ ಎಸ್ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂಶೋಧನ ಕೇಂದ್ರ ಧಾರವಾಡ ಮತ್ತು ಸಮಸ್ತ ಜೈನ ಸಮಾಜ ಛಬ್ಬಿ ಇವುಗಳ ಸಹಯೋಗದಲ್ಲಿ ಜರುಗಿದ "ಸಾಹಿತ್ಯ-ಸಂಸ್ಕೃತಿ" ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕರಾಗಿ ಖ್ಯಾತ ವಾಗ್ಮಿಗಳು ನಿವೃತ್ತ ಪ್ರಾಧ್ಯಾಪಕರು ಆದ ಡಾ. ವೈ. ಎಂ. ಭಜಂತ್ರಿ ಇವರು "ಹಳಗನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ" ವಿಷಯ ಕುರಿತಾಗಿ ಅತ್ಯಂತ ಮಹತ್ವಪೂರ್ಣ ಮಾಹಿತಿ ನೀಡಿ ಅದ್ಭುತವಾದ ಉಪನ್ಯಾಸ ನೀಡಿದರು. ಅವರು ಜೈನ ಕವಿಗಳು ಹಳೆಗನ್ನಡ ಮತ್ತು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಶೈಲಿಯಲ್ಲಿ ಕಾವ್ಯಗಳನ್ನು ರಚಿಸಿ ಅಂದಿಗೆ ಇಂದಿಗೂ ಮುಂದೆಯೂ ಸದಾ ಸ್ಮರಿಸುವಂತ ವಿಶಿಷ್ಟ ಕೊಡುಗೆಯನ್ನು ನೀಡಿ ಸಾಹಿತ್ಯ ಪ್ರಪಂಚದಲ್ಲಿ ಅಜರಾಮರರಾಗಿದ್ದಾರೆ. ಕನ್ನಡ ಸಾಹಿತ್ಯವನ್ನು ಜೈನ ಕವಿಗಳಿಂದ ರಚನೆಯಾದ ಕೃತಿಗಳಿಂದ ಬೇರ್ಪಡಿಸಿ ನೋಡಿದರೆ ಅದು ಮನುಷ್ಯನ ಶರೀರದ ಅಸ್ತಿಪಂಜರದಂತೆ, ಹೂರಣ ತೆಗೆದ ಹೋಳಿಗೆಯಂತೆ ಕಾಣುತ್ತದೆ ಎಂದರು. ಜೈನ ಕವಿಗಳ ಕೊಡುಗೆಯಿಂದ ಕನ್ನಡ ಭಾಷೆಗೆ ಶಕ್ತಿ ತುಂಬಿದ್ದರಿಂದ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಲು ಕಾರಣವಾಗಿದೆ ಎಂದರು. ಜೈನ ಶಾಸ್ತ್ರ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಹಡಗಲಿ ಇವರು ಪ್ರಸ್ತಾವಿಕವಾಗಿ ಮಾತನಾಡಿ ಪೀಠ ನಡೆದು ಬಂದ ದಾರಿ ಮತ್ತು ಕಾರ್ಯಚಟುವಟಿಕೆಗಳನ್ನು ಹಾಗೂ ಮುಂದಿನ ಯೋಜನೆಗಳನ್ನು ಸವಿಸ್ತಾರವಾಗಿ ವಿವರಿಸಿದರು. ಸಾನಿಧ್ಯ ವಹಿಸಿದ ಪರಮ ಪೂಜ್ಯ ಬಾಲಾಚಾರ್ಯ ಡಾ. ಸಿದ್ದಸೇನ ಮುನಿಮಹಾರಾಜರು ತಮ್ಮ ಪ್ರವಚನದಲ್ಲಿ ಸಾಹಿತ್ಯ-ಸಂಸ್ಕೃತಿಯ ಉನ್ನತಿಗಾಗಿ ಶ್ರಮಿಸುತ್ತಿರುವ ಜೈನ ಪೀಠದ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ತ್ಯಾಗಿಗಳಾದ ಸೋಮದೇವ ಬಯ್ಯಾಜಿ, ರಾಜೇಂದ್ರ ಬಯ್ಯಾಜಿ, ಜೈನ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಶಾಂತರಾಜ ಮಲ್ಲಸಮುದ್ರ, ಧನಪಾಲ ಮುನ್ನೊಳ್ಳಿ, ಶಾಂತಿನಾಥ ಹೋತಪೇಟಿ, ಛಬ್ಬಿ ಜೈನ ಸಮಾಜದ ಅಧ್ಯಕ್ಷ ಅನಂತ ಕಲಘಟಗಿ, ಚಾತುರ್ಮಾಸ ಕಮಿಟಿ ಅಧ್ಯಕ್ಷ ರವಿ ಹುಲ್ಲಂಬಿ ಹಾಗೂ ಛಬ್ಬಿ ಗ್ರಾಮದ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಜೆ ಎಸ್ ಎಸ್ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ. ಭರಮಪ್ಪ ಭಾವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವರದಿ : ಎಸ್ ಆರ್ ಮಲ್ಲಸಮುದ್ರ

ವಿದುಷಾ ಜೈನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Article Image

ವಿದುಷಾ ಜೈನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಪುದುಚೇರಿಯ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2026ರಲ್ಲಿ ಅಂಡರ್-18 ಮಹಿಳೆಯರ 3000 ಮೀಟರ್ ರೇಸ್ ವಾಕ್ ವಿಭಾಗದಲ್ಲಿ ಚಿಕ್ಕಮಗಳೂರಿನ ಪೂರ್ಣಪ್ರಜ್ಞ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದೂಷಾ ಜೈನ್ ರವರು ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದು, ರಾಷ್ಟ್ರಮಟ್ಟದ ಜೂನಿಯರ್ ಅಥ್ಲೆಟಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಕಳಸಾದ ಕೆಳಂಗಡಿ ನಿವಾಸಿಯಾದ ಸತ್ಯೇಂದ್ರ ಜೈನ ಹಾಗೂ ವೀಣಾ ಚೈನ್ ದಂಪತಿಗಳ ಪುತ್ರಿ.

ಪ್ರಜ್ಞಾಶ್ರೀ ಜೈನ್‌ರವರಿಗೆ ದ್ವಿತೀಯ ರ‍್ಯಾಂಕ್

Article Image

ಪ್ರಜ್ಞಾಶ್ರೀ ಜೈನ್‌ರವರಿಗೆ ದ್ವಿತೀಯ ರ‍್ಯಾಂಕ್

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ 2025-26ನೇ ಶೈಕ್ಷಣಿಕ ವರ್ಷದ ಕೃಷಿ ಇಂಜಿನಿಯರಿಂಗ್ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾಶ್ರೀ ಜೈನ್‌ರವರು ದ್ವಿತೀಯ ರ‍್ಯಾಂಕನ್ನು ಪಡೆದಿರುತ್ತಾರೆ. ಇವರು ಮೂಡುಬಿದಿರೆ, ಜಯನಿವಾಸದ ಜಯದೇವ್ ಕೆ ಮತ್ತು ಪ್ರಭಾವತಿ ದಂಪತಿಗಳ ಪುತ್ರಿ.

ಡಾ. ರಜತಾ ಪಿ. ಶೆಟ್ಟಿಯವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ

Article Image

ಡಾ. ರಜತಾ ಪಿ. ಶೆಟ್ಟಿಯವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ

ಉಜಿರೆ: ಜ್ಞಾನಾರ್ಜನೆ, ಸಂಶೋಧನೆ ಹಾಗೂ ಓದುವ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಲ್ಲಿಸಿದ ಸುದೀರ್ಘ ಸೇವೆಯನ್ನು ಗುರುತಿಸಿ, ಎಸ್‌.ಡಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಉಜಿರೆಯ ಮುಖ್ಯ ಗ್ರಂಥಪಾಲಕಿ ಡಾ. ರಜತಾ ಪಿ. ಶೆಟ್ಟಿ ಅವರಿಗೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ.), ಮಂಗಳೂರು ವಿಭಾಗದ ವತಿಯಿಂದ 2026ನೇ ಸಾಲಿನ ‘ಅಧ್ಯಾಪಕ ಭೂಷಣ ಪ್ರಶಸ್ತಿ’ ಉಡುಪಿಯ ಕಿದಿಯೂರಿನ ಮಾಧವ ಕೃಷ್ಣ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಗ್ರಂಥಪಾಲಕಿಯಾಗಿ ಡಾ. ರಜತಾ ಪಿ. ಶೆಟ್ಟಿಯವರ ಶೈಕ್ಷಣಿಕ ಸೇವೆ, ಗ್ರಂಥಾಲಯ ನಿರ್ವಹಣೆ, ಡಿಜಿಟಲೀಕರಣ, ಇ-ಸಂಪನ್ಮೂಲಗಳ ಬಳಕೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಯಿತು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಡಾ. ರಜತಾ ಪಿ. ಶೆಟ್ಟಿ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಇ-ಸಂಪನ್ಮೂಲಗಳ ಕುರಿತು ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ಎಸ್‌.ಡಿ.ಎಂ. ಕಾಲೇಜು, ಉಜಿರೆಯಲ್ಲಿ ಗ್ರಂಥಪಾಲಕರಾಗಿ ಹಾಗೂ ನಂತರ ಎಸ್‌.ಡಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮುಖ್ಯ ಗ್ರಂಥಪಾಲಕರಾಗಿ ಸುಮಾರು ಎರಡೂವರೆ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಂಥಾಲಯದ ಅಭಿವೃದ್ಧಿ ಮತ್ತು ನಿರ್ವಹಣೆಯೊಂದಿಗೆ ಆಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಎಸ್‌.ಡಿ.ಎಂ. ಸಮೂಹ ಸಂಸ್ಥೆಗಳ ಗ್ರಂಥಾಲಯ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿರುವ ಅವರು, ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಂಶೋಧಕರಿಗೆ ಅಗತ್ಯವಾದ ಜ್ಞಾನ ಸಂಪನ್ಮೂಲಗಳನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಕಾರ್ಯಗಳನ್ನು ಕೈಗೊಂಡಿದ್ದಾರೆ. ವಿವಿಧ ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ಅವರು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸುವ ಮೂಲಕ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ಸಂಶೋಧನಾ ಚಟುವಟಿಕೆಗಳಿಗೂ ಕೊಡುಗೆ ನೀಡಿದ್ದಾರೆ.

ಪುಪ್ಪರಾಜ್ ಜೈನ್- ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆ

Article Image

ಪುಪ್ಪರಾಜ್ ಜೈನ್- ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆ

ಮಂಗಳೂರು: ಭಾರತೀಯ ಜೈನ್ ಮಿಲನಿನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪುಪ್ಪರಾಜ್ ಜೈನ್‌ರವರು ನೇಮಕಗೊಂಡಿರುತ್ತಾರೆ. ಇವರು ದಕ್ಷಿಣಕನ್ನಡ ಜಿಲ್ಲೆಯ ಬಿಲ್ಡರ್ಸ್ ಅಸೋಸಿಯೇಷನ್ (CREDAI MANGALORE) ಇದರ ಸಂಘಟನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ತದನಂತರ ರಾಜ್ಯಮಟ್ಟದಲ್ಲಿ ಕಾರ್ಯದರ್ಶಿಯಾಗಿ ತದನಂತರ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ನಂತರ ಪುನಃ ಮಂಗಳೂರು CREDAIಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ CHAIRMAN ಆಗಿರುತ್ತಾರೆ. ಅಭೀಷ್ ಬಿಲ್ಡರ್ಸ್ ಮೂಲಕ ಈವರೆಗೆ ಅನೇಕ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಪುಷ್ಪರಾಜ್ ಜೈನ್ ಅವರು ಸಮಾಜ ಸೇವೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಅವರು ನಡೆಸಲ್ಪಡುವ ರಾಮೋತ್ಸವ ಸಮಿತಿಯಲ್ಲಿ ಸತತ 5 ವರ್ಷ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ರೋಟರಿ, ಲಯನ್ಸ್, ಜೇಸಿಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. RED CROSS ದಕ್ಷಿಣಕನ್ನಡ ಜಿಲ್ಲಾ ಇದರ ಚುನಾಯಿತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. RED CROSS ಇದರ ಬಿಲ್ಡಿಂಗ್ ಕಮಿಟಿಯ CHAIRMAN ಆಗಿದ್ದು ಇವರ ಕಾಲಾವಧಿಯಲ್ಲಿ ಅತ್ಯಾಕರ್ಷಕ ಕಟ್ಟಡ ನಿರ್ಮಾಣವಾಗಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಿಂದ ಇದಕ್ಕಾಗಿ ಸನ್ಮಾನಗೊಂಡಿದ್ದಾರೆ. ಭಾರತೀಯ ಜೈನ್ ಮಿಲನ್‌ನ ವಿವಿಧ ಹುದ್ದೆಗಳನ್ನು ಅಲಂಕರಿಸಿ ವಲಯ -8 ರಾಜ್ಯದ ಅಧ್ಯಕ್ಷರಾಗಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮಂಗಳೂರು ಜೈನ್ ಸೊಸೈಟಿ ಸಂಘಟನೆಯ ಪ್ರಸ್ತುತ ಅಧ್ಯಕ್ಷರಾಗಿ ಧವಳ ಕೋ-ಆಪರೇಟಿವ್ ಬ್ಯಾಂಕನ್ನು ಸ್ಥಾಪನೆ ಮಾಡುವಲ್ಲಿ ಮುಖ್ಯಸ್ಥರಾಗಿ, ಈಗ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಅಧ್ಯಕ್ಷರಾಗಿಯೂ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮತಸ್ಥಾಪನ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ 2027ರಲ್ಲಿ ಕಾರ್ಕಳದಲ್ಲಿ ಅತ್ಯಂತ ವೈಭವದಿಂದ ನಡೆಯಲಿರುವ ಮಹಾಮಸ್ತಕಾಭಿಷೇಕ ಸಮಿತಿಯ ಪ್ರದಾನ ಕಾರ್ಯದರ್ಶಿಯಾಗಿರುತ್ತಾರೆ.

ದಶಲಕ್ಷಣ ಪರ್ವ ಮತ್ತು ಬೃಹತ್ ಋಷಿಮಂಡಲ ಮಹಾ ಆರಾಧನೆ

Article Image

ದಶಲಕ್ಷಣ ಪರ್ವ ಮತ್ತು ಬೃಹತ್ ಋಷಿಮಂಡಲ ಮಹಾ ಆರಾಧನೆ

ಬೆಂಗಳೂರು: ದಶಲಕ್ಷಣ ಮಹಾಪರ್ವ ಆಚರಣೆಯು ಆಚಾರ್ಯ ಶ್ರೀ ೧೦೮ ಅನೇಕಾಂತ ಸಾಗರ ಮುನಿ ಮಹಾರಾಜರು ಹಾಗೂ ಚತುರ್ವಿಧ ಸಂಘದ ಪರಮ ಪಾವನ ಸಾನ್ನಿಧ್ಯದಲ್ಲಿ ದಿನಾಂಕ 16-09-2026 ಬುಧವಾರದಿಂದ 26-09-2026 ಶನಿವಾರದವರೆಗೆ ನಡೆಯಲಿದೆ. ಬೃಹತ್ ಋಷಿಮಂಡಲ ಮಹಾ ಆರಾಧನೆಯು ದಿನಾಂಕ 16-09-2026 ಬುಧವಾರದಿಂದ 23-09-2026 ಬುಧವಾರದ ವರೆಗೆ ಜರಗಲಿದೆ. ಚಾರಿತ್ರ ಚಕ್ರವರ್ತಿ ಪ್ರಥಮಾಚಾರ್ಯ ಶ್ರೀ ಶಾಂತಿಸಾಗರ ಮುನಿಮಹಾರಾಜರ 71ನೇ ಪುಣ್ಯತಿಥಿ ಕಾರ್ಯಕ್ರಮವು ದಿನಾಂಕ 20-09-2026 ಭಾನುವಾರದಂದು ನಡೆಯಲಿದೆ. ಈ ಮೇಲಿನ ಎಲ್ಲಾ ಕಾರ್ಯಕ್ರಮಗಳು ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯ ಉಚ್ಛನ್ಯಾಯಾಲಯದ ಮಹಿಳಾ ನ್ಯಾಯಮೂರ್ತಿಯಾಗಿ ಉಷಾರಾಣಿಯವರು ನೇಮಕ

Article Image

ರಾಜ್ಯ ಉಚ್ಛನ್ಯಾಯಾಲಯದ ಮಹಿಳಾ ನ್ಯಾಯಮೂರ್ತಿಯಾಗಿ ಉಷಾರಾಣಿಯವರು ನೇಮಕ

ಮೈಸೂರಿನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಷಾರಾಣಿ ಇವರನ್ನು ಉಚ್ಛನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಇವರು ಉಚ್ಛನ್ಯಾಯಾಲಯದ ಪ್ರಥಮ ಜೈನ ಮಹಿಳಾ ನ್ಯಾಯಮೂರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇವರು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿನಿಯಾಗಿರುತ್ತಾರೆ. ಮೂಲತಃ ಬೆಳ್ತಂಗಡಿ ತಾಲೂಕಿನವರಾದ ಇವರು ಹಿರಿಯ ವಕೀಲರು ಹಾಗೂ ಸಮಾಜಸೇವಾಕರ್ತರಾಗಿ ಚಿರಪರಿಚಿತರಾಗಿದ್ದ ದಿವಂಗತ ನೇಮಿರಾಜ ಶೆಟ್ಟಿರವರ ಪುತ್ರಿ.

ಜ್ಯೋತಿ ನಾವಳ್ಳಿ ಅವರಿಗೆ ತಾಲೂಕು ಉತ್ತಮ ಶಿಕ್ಷಕಿ ಪ್ರಶಸ್ತಿ

Article Image

ಜ್ಯೋತಿ ನಾವಳ್ಳಿ ಅವರಿಗೆ ತಾಲೂಕು ಉತ್ತಮ ಶಿಕ್ಷಕಿ ಪ್ರಶಸ್ತಿ

ಕರ್ನಾಟಕ ರಾಜ್ಯ ಸರ್ಕಾರದಿಂದ ಕೊಡಮಾಡಲ್ಪಡುವ ತಾಲೂಕು ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಹುಬ್ಬಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜ್ಯೋತಿ ನಾವಳ್ಳಿಯವರಿಗೆ ನೀಡಿ ಗೌರವಿಸಲಾಗಿದೆ.

ಜೈನ್ ದಿಗಂಬರ ವಧು-ವರರ ಸಮಾವೇಶ

Article Image

ಜೈನ್ ದಿಗಂಬರ ವಧು-ವರರ ಸಮಾವೇಶ

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪ್ರಪ್ರಥಮ ಬಾರಿಗೆ ಜೈನ ದಿಗಂಬರ ವಧು ವರರ ಸಮಾವೇಶವು ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಸೆ.6 ರಂದು ನಡೆಯಲಿದೆ. ನೋಂದಣಿ ಶುಲ್ಕ: 1,000. ನೋಂದಣಿ ಮಾಡುವವರಿಗೆ ಸಿಗುವ ಸೌಲಭ್ಯಗಳು: * ಕಾರ್ಕಳ ರಾಜ್ಯಮಟ್ಟದ ಎರಡನೇ ಸಮಾವೇಶಕ್ಕೆ ಉಚಿತ ಪ್ರವೇಶ ತಕ್ಷಣ PDF ಪ್ರೊಫೈಲ್‌ಗಳ ವಿತರಣೆ * ವಾಟ್ಸಾಪ್ ಗ್ರೂಪ್ ಸೇರ್ಪಡೆ * ಒಂದು ವರ್ಷದ ಸೇವೆ ಮತ್ತು ಅಗತ್ಯ ಮಾಹಿತಿ ಲಭ್ಯ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸಂಪತ್‌ ಜೈನ್ ಎಡಿಟ‌ರ್ ಚಿಗುರು ಪತ್ರಿಕೆ 9902782588, 7483902931

ಕುಪ್ಪೆಪದವು: ಜೈನ್ ಮಿಲನ್ ವತಿಯಿಂದ ವಕೀಲೆ ಶ್ವೇತಾ ಜೈನ್ ರವರಿಗೆ ಗೌರವ

Article Image

ಕುಪ್ಪೆಪದವು: ಜೈನ್ ಮಿಲನ್ ವತಿಯಿಂದ ವಕೀಲೆ ಶ್ವೇತಾ ಜೈನ್ ರವರಿಗೆ ಗೌರವ

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ನ್ಯಾಯ ಕ್ಷೇತ್ರದಲ್ಲಿನ ಸಾಧನೆಗಳಿಗಾಗಿ ವಕೀಲೆ ಶ್ವೇತ ಜೈನ್ ಅವರನ್ನು ಕುಪ್ಪೆಪದವು ಜೈನ್ ಮಿಲನ್ ವತಿಯಿಂದ ಸನ್ಮಾನಿಸಲಾಯಿತು. 2026-28ನೇ ಸಾಲಿಗೆ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಜೊತೆ ಕಾರ್ಯದರ್ಶಿಯಾಗಿ ಪುನರ್ ಆಯ್ಕೆಯಾದ ಹಿನ್ನೆಲೆಯಲ್ಲಿ ಹಾಗೂ ಕುಪ್ಪೆಪದವು ಮತ್ತು ಬೆಳುವಾಯಿ ಜೈನ್ ಮಿಲನ್‌ಗೆ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ನೀಡಿದ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಷ್ ಚಂದ್ರ ಜೈನ್, ಅಧ್ಯಕ್ಷ ಧೀರೇಶ್ ಜೈನ್, ಕಾರ್ಯದರ್ಶಿ ಜಿನೇಂದ್ರ ಇಂದ್ರ, ಭೋಜರಾಜ್ ಜೈನ್, ಅಜಿತ್ ಕುಮಾರ್ ಜೈನ್, ಸ್ವರ್ಣ ಲತಾ, ಪದ್ಮಪ್ರಸಾದ್ ಇಂದ್ರ ಹಾಗೂ ಉದಯಕುಮಾರ್ ಉಪಸ್ಥಿತರಿದ್ದರು.

ಅಲ್ಪಸಂಖ್ಯಾತ ಜೈನ ಸೇವಾ ಸಂಘ- ಪದಾಧಿಕಾರಿಗಳ ಆಯ್ಕೆ

Article Image

ಅಲ್ಪಸಂಖ್ಯಾತ ಜೈನ ಸೇವಾ ಸಂಘ- ಪದಾಧಿಕಾರಿಗಳ ಆಯ್ಕೆ

ಅಲ್ಪಸಂಖ್ಯಾತ ಜೈನ ಸೇವಾ ಸಂಘ ನವನಗರ ಹುಬ್ಬಳ್ಳಿ ಇದರ 2026-27 ರಿಂದ ಮೂರು ವರ್ಷದ ಅವಧಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು . ಸಂರಕ್ಷಕರಾಗಿ ಬಿ.ಎ. ಪಾಟೀಲ, ಗೌರವಾಧ್ಯಕ್ಷರಾಗಿ ಜೆ.ಎ. ಪಾಟೀಲ ಇವರನ್ನು ನಾಮ ನಿರ್ದೇಶನ ಮಾಡಲಾಯಿತು. ಶಾಂತರಾಜ ಮಲ್ಲಸಮುದ್ರ ಇವರು ಅಧ್ಯಕ್ಷರಾಗಿ ಸತತ ಐದನೇ ಬಾರಿ ಮರು ಆಯ್ಕೆಯಾದರೆ, ಕಾರ್ಯಾಧ್ಯಕ್ಷರಾಗಿ ರವೀಂದ್ರ ಟಿ ರಾಯಪ್ಪನವರ, ಉಪಾಧ್ಯಕ್ಷರಾಗಿ ಅಜಿತ ಎ ಉಪಾಧ್ಯ, ಮಹಿಳಾ ಉಪಾಧ್ಯಕ್ಷರಾಗಿ ಶೋಭಾ ವರೂರ, ಗೌರವ ಕಾರ್ಯದರ್ಶಿಯಾಗಿ ದೇವೇಂದ್ರ ಆರ್ ಚೌದರಿ, ಸಹಕಾರ್ಯದರ್ಶಿಗಳಾಗಿ ಸಂತೋಷ ಹಂಡಗೆ ಮತ್ತು ಅಶೋಕ ಯೋಗಪ್ಪನವರ, ಖಜಾಂಚಿಯಾಗಿ ಯಲ್ಲಪ್ಪ ಆಂಬೊಜಿ ಆಯ್ಕೆಗೊಂಡರು. ಕಾರ್ಯಕಾರಿ ಮಂಡಳಿ ಸದಸ್ಯರಾಗಿ : * ಭೀಮಣ್ಣ ಎಸ್ ವರೂರ * ರತ್ನಾಕರ ಜೆ ಪಾಟೀಲ * ಬಾಹುಬಲಿ ಹೊಂಬಣ್ಣವರ * ಅಶೋಕ ಅಂಬಣ್ಣವರ * ಶ್ರೇಣಿಕ ಡಿ ತೆಲಗಡ್ಡಿ * ವಿಕ್ರಮ್ ಆರ್ ಮಲ್ಲಸಮುದ್ರ * ಶಿರಿಯಪ್ಪ ಟಿ ಪಂಡಿತ ಇವರುಗಳು ಅವಿರೋಧವಾಗಿ ಆಯ್ಕೆಯಾದರು. ಅಲ್ಪಸಂಖ್ಯಾತ ಜೈನ ಸೇವಾ ಸಂಘವು ಕಳೆದ 20 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು ನವನಗರದ ಭಗವಾನ ಮುನಿಸುವೃತ ಜಿನಮಂದಿರದ ಆಡಳಿತ ನಡೆಸುತ್ತಾ ಪೂಜಾ ವಿಧಾನಗಳನ್ನು ಆಯೋಜಿಸುವ ಮೂಲಕ ಆದ್ಯಾತ್ಮಿಕ ಪ್ರಭಾವನೆಯನ್ನು ಮಾಡುತ್ತಿದೆ. ವರದಿ : ರವೀಂದ್ರ ರಾಯಪ್ಪನವರ ಕಾರ್ಯಾಧ್ಯಕ್ಷರು

ವಿದ್ವಾನ್ ಚಂದ್ರಯ್ಯರಿಗೆ ಕಸಾಪದ ರಾಜ್ಯಮಟ್ಟದ ಚಾವುಂಡರಾಯ ಪ್ರಶಸ್ತಿ ಪ್ರದಾನ

Article Image

ವಿದ್ವಾನ್ ಚಂದ್ರಯ್ಯರಿಗೆ ಕಸಾಪದ ರಾಜ್ಯಮಟ್ಟದ ಚಾವುಂಡರಾಯ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಸಾಹಿತ್ಯ ಸೇವೆಗೆ ವಯಸ್ಸಿನ ನಿರ್ಬಂಧವಿಲ್ಲ ಎನ್ನುವುದಕ್ಕೆ ಶತಾಯುಷಿ ವಿದ್ವಾನ್ ಚಂದ್ರಯ್ಯ ಅವರು ಚಾವುಂಡರಾಯ ದತ್ತಿ ಪ್ರಶಸ್ತಿಗೆ ಭಾಜನರಾಗಿರುವುದೇ ಸಾಕ್ಷಿ . ಈ ಮೂಲಕ ಕನ್ನಡ ಸಾಹಿತ್ಯ ಪರಿಷತ್ ತನ್ನ ಘನತೆ ಹೆಚ್ಚಿಸಿಕೊಂಡಂತಾಗಿದೆ ಎಂದು ರಾಜ್ಯ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ ನೇಮಿಚಂದ್ರ ದೇಸಾಯಿ ನುಡಿದರು. ಅವರು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರೀ ಕೃಷ್ಣ ರಾಜ ಪರಿಷತ್ತಿನ ಮಂದಿರದಲ್ಲಿ ಜರಗಿದ ಚಾವುಂಡರಾಯ ದತ್ತಿ ಹಾಗೂ ಡಾ. ಸಿದ್ಧಲಿಂಗಯ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿ ಮಾತನಾಡಿದರು. ದತ್ತಿ ಪ್ರಶಸ್ತಿ ಪ್ರದಾನ: ಪ್ರಾಚೀನ ಜೈನ ಸಾಹಿತ್ಯವನ್ನು ಆಧರಿಸಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕೃತಿ ರಚನೆಯ ಸಾಧನೆಗಾಗಿ 2024ನೇ ಸಾಲಿಗೆ ಹಿರಿಯ ಸಾಹಿತಿ ಶತಾಯುಷಿ ವಿದ್ವಾನ್ ಬಿ. ಚಂದ್ರಯ್ಯ ಅವರಿಗೆ 2025 ರ ಸಾಲಿಗೆ ವಿಜಯಪುರದ ಡಿ.ಎನ್. ಅಕ್ಕಿ ಅವರಿಗೆ ನಗದು ಗೌರವ ಸಹಿತ ರಾಜ್ಯ ಮಟ್ಟದ ಚಾವುಂಡರಾಯ ಪ್ರಶಸ್ತಿ ಪ್ರದಾನ ನಡೆಯಿತು. ಬೆಂಗಳೂರಿನ ಹಿರಿಯ ಸಾಹಿತಿ, ಸಂಶೋಧಕ ಡಾ. ಹೆಚ್.ಆರ್. ಸ್ವಾಮಿ ಅವರಿಗೆ ಡಾ. ಸಿದ್ಧಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾರ್ಥಕ ಭಾವ: ಚಂದ್ರಯ್ಯ ಜೀವನದ ನೂರನೇ ವಯಸ್ಸಿನಲ್ಲಿ ಸಾಹಿತ್ಯ ಸೇವೆಗಾಗಿ ಚಾವುಂಡರಾಯ ಪ್ರಶಸ್ತಿಯಂತಹ ಗೌರವ ಲಭಿಸಿರುವುದು ಸಾರ್ಥಕ ಭಾವ ತಂದಿದೆ ಎಂದು ಪ್ರಶಸ್ತಿ ಪುರಸ್ಕೃತ ವಿದ್ವಾನ್ ಚಂದ್ರಯ್ಯ ನುಡಿದರು. ಕನ್ನಡ ರಾಜ್ಯೋದಯದ ಸಂದರ್ಭ ಮಡಿಕೇರಿಯಲ್ಲಿ ಖಾದಿ ಕಮಿಶನ್ ಉದ್ಯೋಗಿಯಾಗಿದ್ದ ಸಂದರ್ಭ ಬರೆದ " ಉದಯವಾಯಿತು ಒಂದು ಗೂಡಿತು ಹರಿದ ಹಿರಿಮೆಯ ಕನ್ನಡ" ಎಂಬ ಆಶಯ ಗೀತೆಯನ್ನು ಹಾಡಿದ ಅವರು ತನಗೆ ದೊರೆತ ಈ ಗೌರವದಿಂದ ಸಂತಸಗೊಂಡಿದ್ದ ಪತ್ನಿ ಸರೋಜಿನಿ ಪ್ರಶಸ್ತಿ ಪ್ರದಾನದ ಮುನ್ನಾ ದಿನ ನಿಧನರಾಗಿದ್ದಾರೆ. ಆದರೆ ಗೀತೆಯ ನಿರ್ಲಿಪ್ತತೆಯೊಂದಿಗೆ ಪ್ರಶಸ್ತಿ ಸ್ವೀಕರಿಸಿ ಪತ್ನಿಯ ಆಶಯ ಪೂರೈಸಿದ ಸಂತಸ ಅನುಭವಿಸುತ್ತಿದ್ದೇನೆ ಎಂದರು. ಮುಖ್ಯ ಅತಿಥಿಯಾಗಿದ್ದ ಬೆಂ.ವಿ.ವಿ. ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ. ರಾಜಪ್ಪ ದಳವಾಯಿ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿ ಅಜಲು ಪದ್ಧತಿ ನಿಷೇಧಿಸುವಲ್ಲಿ ಕಾರಣರಾದ ಸಿದ್ಧಲಿಂಗಯ್ಯ ಅವರ ಬದುಕೊಂದು ಸಾಹಸ ಗೀತೆ ಎಂದರು. ಗಮಕಿ ವಿದ್ವಾಂಸ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರು ಸಮ್ಮಾನಿತರನ್ನು ಪರಿಚಯಿಸಿ ರತ್ನಾಕರವರ್ಣಿ ಸಾಂಗತ್ಯದಲ್ಲಿ ರಚಿಸಿದ ಭರತೇಶ ವೈಭವ ಕೃತಿಯನ್ನು ಭಾಮಿನಿ ಷಟ್ಪದಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಭರತೇಶ ವೈಭವಾಮೃತವನ್ನಾಗಿ ನೀಡಿದ ಚಂದ್ರಯ್ಯ ಅವರ ಕೊಡುಗೆ ಅನನ್ಯ . ಇಳಿವಯಸ್ಸಿನಲ್ಲೂ ಅವರು ಮಾಡುತ್ತಿರುವ ಸಾಹಿತ್ಯ ಸೇವೆ ಮಾದರಿ ಎಂದರು. ದತ್ತಿ ದಾನಿಗಳಾದ ವಿಶ್ರಾಂತ ಪತ್ರಿಕಾ ಸಂಪಾದಕ, ಸಾಹಿತಿ ಡಾ. ಪದ್ಮರಾಜ ದಂಡಾವತಿ ಆಶಯದ ನುಡಿಗಳನ್ನಾಡಿ ಚಂದ್ರಯ್ಯ ಅವರನ್ನು ತಡವಾಗಿಯಾದರೂ ಗುರುತಿಸಿ ಗೌರವಿಸಲಾಗುತ್ತಿದೆ ಎಂದರು. ದತ್ತಿ ದಾನಿ ರಮಾಕುಮಾರಿ ಸಿದ್ದಲಿಂಗಯ್ಯ ಮಾತನಾಡಿ ಮಾನವ ಧರ್ಮ, ಮಾನವೀಯತೆಯ ಸಾಧಕರಿಗೆ ಸಿದ್ಧಲಿಂಗಯ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸುವ ಆಶಯವನ್ನು ವಿವರಿಸಿದರು. ಪ್ರಶಸ್ತಿ ಪುರಸ್ಕೃತ ಸಾಧಕರಾದ ಡಿ.ಎನ್. ಅಕ್ಕಿ, ಡಾ. ಹೆಚ್.ಆರ್. ಸ್ವಾಮಿ ತಮ್ಮ ಅನಿಸಿಕೆ ಹಂಚಿಕೊಂಡರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪರಿಷತ್ ಆಡಳಿತಾಧಿಕಾರಿ ಕೆ.ಎ. ದಯಾನಂದ, (ಐ.ಎ.ಎಸ್.) ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಡಗೀತೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಶಾಂತಕುಮಾರಿ ಕೆ.ಆರ್. ಸ್ವಾಗತಿಸಿ ಚಂದನ ವಾಹಿನಿಯ ಧನಂಜಯ ನಿರೂಪಿಸಿ ವಂದಿಸಿದರು. ಭಟ್ಟಾರಕ ಶ್ರೀ ಗೌರವಾಭಿನಂದನೆ: ವಿದ್ವಾನ್ ಬಿ. ಚಂದ್ರಯ್ಯ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮೂಡುಬಿದಿರೆಯ ಶ್ರೀ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಜೈನ ಸಾಹಿತ್ಯ ರಂಗಕ್ಕೆ ಅನನ್ಯ ಕೊಡಗೆ ನೀಡಿ ಪ್ರತಿಷ್ಠಿತ ಚಾವುಂಡರಾಯ ಪ್ರಶಸ್ತಿಗೆ ಭಾಜನರಾದ ಚಂದ್ರಯ್ಯ ಅವರನ್ನು ಅಭಿನಂದಿಸಿದ್ದಾರೆ. ಪ್ರಶಸ್ತಿ ಪ್ರದಾನಕ್ಕೆ ವಾರದ ಮೊದಲೇ ಬೆಂಗಳೂರಿನ ಚಂದ್ರಯ್ಯ ಅವರ ನಿವಾಸಕ್ಕೆ ತೆರಳಿ ಸರೋಜಿನಿಚಂದ್ರಯ್ಯ ದಂಪತಿಯನ್ನು ಶ್ರೀಗಳವರು ಗೌರವಿಸಿದ್ದರು. ಇದೇ ವೇಳೆ ಶ್ರೀ ಮಠದ ವಿವೇಕಾಭ್ಯುದಯ ಮಾಸಿಕದ ಸಂಪಾದಕರಾಗಿ ದೀರ್ಘಾವಧಿಗೆ ಚಂದ್ರಯ್ಯ ಅವರು ಸಲ್ಲಿಸಿರುವ ಸೇವೆಯನ್ನೂ ಶ್ರೀಗಳವರು ಸ್ಮರಿಸಿಕೊಂಡಿದ್ದಾರೆ.

ಶಿರ್ಲಾಲು: ಆಹಾರೋತ್ಸವ ಮತ್ತು ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ

Article Image

ಶಿರ್ಲಾಲು: ಆಹಾರೋತ್ಸವ ಮತ್ತು ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ

ಭಾರತೀಯ ಜೈನ್ ಮಿಲನ್ ಶಿರ್ಲಾಲು ಮತ್ತು ಶ್ರೀ ಅನಂತಮತಿ ಮಹಿಳಾ ಸಂಘ ಶಿರ್ಲಾಲು ಇವರ ನೇತೃತ್ವದಲ್ಲಿ ಆಹಾರೋತ್ಸವ 2026 ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನಿಲ್ ಕುಮಾರ್ ಜೈನ್ ಮತ್ತು ಮಲ್ಲಿಕಾ ಜಯಪಾಲ್ ಜೈನ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾರತೀಯ ಭಾರತೀಯ ಜೈನ್ ಮಿಲನ್ ವಲಯ - 8, ನಿರ್ದೇಶಕರು ಪ್ರಭಾತ್ ಕುಮಾರ್ ಜೈನ್ ಕಾರ್ಕಳ, ಅನಂತರಾಜ್ ಪೂವಣಿ. ಸನತ್ ಕುಮಾರ್ ಜೈನ್, ನಮಿರಾಜ ಜೈನ್, ನಿರಂಜನ ಕಡಂಬ, ಶಾಂತಿರಾಜ್ ಜೈನ್, ಸುದರ್ಶನ್ ಜೈನ್, ಶ್ರೀಕಾಂತ ಇಂದ್ರ, ವಿನಂತಿ ಆರ್ ಪೂವಣಿ ಭಾಗವಹಿಸಿದ್ದರು. ಶೀತಲ್ ಕುಮಾರ್ ಜೈನ್ ಸ್ವಾಗತಿಸಿದರು. ನೀತು ರತ್ನರಾಜ ಜೈನ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಜ್ವಲ್ ಜೈನ್ ನೆರವೇರಿಸಿದರು.

ಧಾರವಾಡ: ಸನ್ಮತಿ ಸೇವಾ ಸಮಾಜ ಆಯೋಜಿಸಿದ ಚಾತುರ್ಮಾಸದ ಯಾತ್ರೆ

Article Image

ಧಾರವಾಡ: ಸನ್ಮತಿ ಸೇವಾ ಸಮಾಜ ಆಯೋಜಿಸಿದ ಚಾತುರ್ಮಾಸದ ಯಾತ್ರೆ

ಧಾರವಾಡ ಸನ್ಮತಿ ಸೇವಾ ಸಮಾಜದ ವತಿಯಿಂದ ಚಾತುರ್ಮಾಸದ ನಿಮಿತ್ಯವಾಗಿ ಆಗಸ್ಟ್ 2 ರಂದು ಒಂದು ದಿನದ ಧಾರ್ಮಿಕ ಪ್ರವಾಸವನ್ನು ಕೆ. ಜೆ. ರಪಾಟಿ ಇವರ ಉಸ್ತುವಾರಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆಗೊಂಡಿತು. ಈ ಗುಂಪಿನಲ್ಲಿ ಅತ್ಯಂತ ಆಸಕ್ತಿ ಭಕ್ತಿಯಿಂದ ದೇವ, ಗುರು, ಶಾಸ್ತ್ರ ನಿತ್ಯ ಆಚರಣೆಯಲ್ಲಿರುವ ಇಪ್ಪತ್ತು ಜನ ಧರ್ಮಾನುರಾಗಿಗಳು ಭಾಗಿಯಾಗಿದ್ದರು. ಮುಂಜಾನೆ 9 ಗಂಟೆಗೆ ಸನ್ಮತಿ ಜಿನ ಮಂದಿರದಿಂದ ಭಗವಂತನ ದರ್ಶನದೊಂದಿಗೆ ಪ್ರವಾಸ ಪ್ರಾರಂಭಿಸಲಾಯಿತು. ಛೆಬ್ಬಿ ಗ್ರಾಮದಲ್ಲಿರುವ ಭ| ಶಾಂತಿನಾಥ ತೀರ್ಥಂಕರ ಜಿನ ಮಂದಿರಕ್ಕೆ ಹೋಗಿ ದರ್ಶನ ಮಾಡಿಕೊಂಡು ಹಾಗೇ ವರ್ಷಾಯೋಗ ಅನುಷ್ಠಾನದಲ್ಲಿರುವ ಬಾಲಾಚಾರ್ಯ ಮುನಿಶ್ರೀ ಸಿದ್ಧಸೇನ ಮಹಾರಾಜರ ದರ್ಶನಮಾಡಿ ಆಶೀರ್ವಾದ ಪಡೆದುಕೊಂಡು ನೇರವಾಗಿ ವರೂರು ಕ್ಷೇತ್ರಕ್ಕೆ ಹೋಗಿ ಅಲ್ಲಿ ದರ್ಶನದನಂತರ ಪರಮ ಪೂಜ್ಯ ಆಚಾರ್ಯ ಗುಣದರನಂದಿ ಮಹಾರಾಜರ ಆಶೀರ್ವಾದ ಪಡೆದು ಅರಟಾಳ ಕ್ಷೇತ್ರದತ್ತ ಪಯಣ ಮುಂದುವರೆಸಲಾಯಿತು. ಅರಟಾಳ ಕ್ಷೇತ್ರದಲ್ಲಿ ಪರಮ ಪೂಜ್ಯ ಆಚಾರ್ಯ ಪುಣ್ಯಸಾಗರ ಮಹಾರಾಜರ ಮುನಿಶ್ರೀ ಪುರಾಣ ಸಾಗರ ಮುನಿಮಹಾರಾಜರ ಮತ್ತು ಬಾಲ ಬ್ರಹ್ಮಚಾರಿ ಪೂಜ್ಯ ಶ್ರೀ ಸೋಮದೇವ ಬೈಯಾಜಿ ಇವರ ಉಪಸ್ಥಿತಿಯಲ್ಲಿ ಚಾತುರ್ಮಾಸ ಅನುಷ್ಠಾನ ಕಳಸಸ್ಥಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಪ್ರವಾಸದ ಮುಖ್ಯ ಉದ್ದೇಶದಂತೆ ಇಡೀ ಕಾರ್ಯಕ್ರಮವನ್ನು ಅತ್ಯಂತ ಭಕ್ತಿಯಿಂದ ಭಾಗವಹಿಸಿ ಸಂಭ್ರಮಿಸಲಾಯಿತು. ಕುಟುಂಬ ಪರಿವಾರ ಜೊತೆ ಮಾಡಿರುವ ಪ್ರವಾಸಕ್ಕಿಂತ ಸಮಾನ ಮನಸ್ಕ ಶ್ರಾವಕ ಶ್ರಾವಕಿಯರ ಪರಿವಾರದೊಂದಿಗೆ ಮಾಡಿದ ಪ್ರವಾಸವು ವಿಭಿನ್ನವಾಗಿರುತ್ತದೆ ಎನ್ನುವದ ಅನುಭವದ ಮಾತು. ಏಕೆಂದರೆ ಇಲ್ಲಿ ಸೇರಿರುವರೆಲ್ಲ ಒಂದೇ ಕುಟುಂಬದ ಸದಸ್ಯರಂತೆ ಅನಿಸಿತು. ಪ್ರವಾಸ ಎಂದರೆ ಕೇವಲ ಹೊಸ ಹೊಸ ಸ್ಥಳಗಳನ್ನು ವಿಕ್ಸಿಸುವುದಷ್ಟೇ ಅಲ್ಲ , ಬದಲಿಗೆ ಅದೊಂದು ರೋಮಾಂಚನಕಾರಿ ಕಲಿಕೆಯ ಅನುಭವ. ಇದು ದೈನಂದಿನ ದಿನಚರಿಯಿಂದ ಮುಕ್ತಿ ನೀಡಿ, ಹಲವಾರು ಮಾನಸಿಕ ಒತ್ತಡ ಮರೆತು ದೇವರ ಸನ್ನಿದಿಯಲ್ಲಿ ಮುನಿ ಮಹಾರಾಜರ ಮತ್ತು ಬಟ್ಟಾರಕ ಸ್ವಾಮೀಜಿಯವರ ದರ್ಶನದಿಂದ ಮನಸ್ಸಿಗೆ ಒಂದು ಹೊಸ ಚೈತನ್ಯ ಉಂಟಾಗುತ್ತದೆ. ಸಾಂಸ್ಕೃತಿಕ, ಜೈನ ಇತಿಹಾಸ ಹಾಗೂ ಪರಂಪರೆಯ ಕುರಿತಾದ ಸಮಗ್ರ ಮಾಹಿತಿ ತಿಳಿದುಕೊಳ್ಳುವ ಅವಕಾಶಗಳು ಇಂತಹ ಪ್ರವಾಸದಿಂದ ಸಿಗುತ್ತದೆ, ಅಷ್ಟೇ ಅಲ್ಲ ನಮ್ಮ ಜೀವನದಲ್ಲಿ ಎಂತಹ ಬದಲಾವಣೆಗಳನ್ನು ತರುತ್ತವೆ ಎಂದರೆ ನಮಗೆ ತಿಳಿಯದಿರುವ ಸಣ್ಣ ಪುಟ್ಟ ವಿಷಯಗಳನ್ನು ಆಳವಾಗಿ ತಿಳಿದುಕೊಳ್ಳುವ ಅವಕಾಶ ಸಿಗುತ್ತದೆ ಎನ್ನಬಹುದು. ಪ್ರವಾಸವು ಮನಸ್ಸಿಗೆ ಶಾಂತಿ ಜೀವನಕ್ಕೆ ಹೊಸ ಚೈತನ್ಯ ಮತ್ತು ಮನಸ್ಸಿಗೆ ವಿಭಿನ್ನ ಅನುಭವ ನೀಡುವ ಮಾರ್ಗ ಎಂದರೂ ತಪ್ಪಾಗುವದಿಲ್ಲ. ಸಂಪ್ರದಾಯಗಳನ್ನು ಕಲಿಯುವುದು ನಮ್ಮ ಜ್ಞಾನವನ್ನು ವಿಸ್ತರಿಕೊಳ್ಳುವದು ಅದರಲ್ಲೂ ಮುಖ್ಯವಾಗಿ ಶ್ರಾವಕರ ಶ್ರಾವಕಿಯರ ಮತ್ತು ಆತ್ಮೀಯರ ಜೊತೆಗಿನ ಪ್ರವಾಸವು ನಮ್ಮ ಸಾಮಾಜಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಎಲ್ಲರಿಗೂ ಅತ್ಯಂತ ಖುಷಿ ನೀಡಿದ ಹಾಗೂ ಯಶಸ್ವಿ ಪ್ರವಾಸಕ್ಕೆ ಕಾರಣರಾದ ಪ್ರತಿಯೊಬ್ಬರೂ ಅಭಿನಂದನಾರ್ಹರು. ವರದಿ: ಶಾಂತರಾಜ ಮಲ್ಲಸಮುದ್ರ

ಕಾರ್ಕಳ: ಜೈನ್ ಮಿಲನ್ ಮಾಸಿಕ ಸಭೆ

Article Image

ಕಾರ್ಕಳ: ಜೈನ್ ಮಿಲನ್ ಮಾಸಿಕ ಸಭೆ

ಭಾರತೀಯ ಜೈನ್ ಮಿಲನ್ ಇದರ ಜುಲೈ ತಿಂಗಳ ಮಾಸಿಕ ಸಭೆ ಮತ್ತು ಆಹಾರೋತ್ಸವ ಕಾರ್ಯಕ್ರಮವು ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ಅಶೋಕ್ ಎಚ್ ಎಂ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಾಮೂಹಿಕ ಪಂಚ ನಮಸ್ಕಾರ ಮಂತ್ರದೊಂದಿಗೆ ಸಭೆ ಆರಂಭಗೊಂಡಿತು. ಪ್ರಣಮ್ಯ ಅಶ್ವಿನ್ ಕುಮಾರ್ ಇವರು ಜೂನ್ ತಿಂಗಳ ಮಾಸಿಕ ಸಭೆಯ ವರದಿ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಜೈನ್ ಮಿಲನ್ ವಲಯ 8 ಇದರ ಮಂಗಳೂರು ವಿಭಾಗದ ನಿರ್ದೇಶಕರಾದ ಸುಕುಮಾರ್ ಬಲ್ಲಾಳ್ ಇವರು ಅನೇಕ ದೃಷ್ಟಾಂತಗಳ ಮೂಲಕ ಎಲ್ಲರ ಮನ ಮುಟ್ಟುವಂತೆ ಜೈನ ಧರ್ಮದ ತತ್ವಗಳ ಬಗ್ಗೆ ಮಾತನಾಡಿದರು. ಜುಲೈ ತಿಂಗಳಲ್ಲಿ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದವರಿಗೆ ಶುಭಾಶಯ ಕೋರಲಾಯಿತು. ಅದೃಷ್ಟಶಾಲಿ ವ್ಯಕ್ತಿ ಮತ್ತು ಅದೃಷ್ಟಶಾಲಿ ದಂಪತಿಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ ನೆನಪಿನ ಕಾಣಿಕೆ ವಿತರಿಸಲಾಯಿತು. ನಿರ್ದೇಶಕರಾದ ಯುವರಾಜ್ ಬಲಿಪ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆಹಾರೋತ್ಸವದಲ್ಲಿ 33 ಬಗೆಯ ತಿಂಡಿಗಳ ವ್ಯವಸ್ಥೆ ಮಾಡಲಾಗಿತ್ತು. ಅಧ್ಯಕ್ಷರಾದ ಅಶೋಕ್ ಎಚ್ ಎಂ ಅಧ್ಯಕ್ಷೀಯ ಭಾಷಣದಲ್ಲಿ ಕಾರ್ಯಕ್ರಮದ ಯಶಸ್ಸಿಗೆ ದುಡಿದವರಿಗೆ ಅಭಿನಂದಿಸಿದರು. ನಂತರ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೀಕ್ಷಿತ ಏ ಜೈನ್, ಪ್ರಖ್ಯ ಜೈನ್, ಮತ್ತು ರಿಧಿ ಜೈನ ರವರು ಪ್ರಾರ್ಥಿಸಿದರು. ಮಿಲನ್ ಕಾರ್ಯದರ್ಶಿ ವಸಂತ್ ಕುಮಾರ್ ಬಂಗ ರವರು ಸ್ವಾಗತಿಸಿ ಆಷಾಢ ಮಾಸದಲ್ಲಿ ಆಹಾರೋತ್ಸವದ ಪ್ರಾಮುಖ್ಯತೆ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುರೇಶ್ ಇಂದ್ರ ರವರು ವಂದಿಸಿದರು. ವೀರೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಾಮೂಹಿಕ ಶಾಂತಿ ಮಂತ್ರದೊಂದಿಗೆ ಸಭೆಯು ಮುಕ್ತಾಯಗೊಂಡಿತು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ- ಸಮಾಲೋಚನಾ ಸಭೆ

Article Image

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ- ಸಮಾಲೋಚನಾ ಸಭೆ

ಬೆಂಗಳೂರು ಕೇಂದ್ರ ಕಚೇರಿಯಲ್ಲಿ ರಾಜ್ಯದ ಜೈನ ಸಮುದಾಯದ ಕುಂದು ಕೊರತೆಗಳ ಬಗ್ಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ನಿಸಾರ್ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳಜೈನ್ ರವರ ನೇತ್ರತ್ವದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶೇಕ್ ಲತಿಫ್ ರವರ ಉಪಸ್ಥಿತಿಯಲ್ಲಿ ಇಂದು (ಜು. 21) ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ಸಮಾಜದ ಪ್ರಮುಖರು ಹಾಗೂ ಡಾ. ಕೆ ಜಯಕೀರ್ತಿ ಜೈನ್ ಧರ್ಮಸ್ಥಳ, ಧನ ಕೀರ್ತಿ ಶೆಟ್ಟಿ ಧರ್ಮಸ್ಥಳ, ಮಹಾವೀರ್ ಜೈನ್ ದೆಪ್ಪುನಿ ಮುಂತಾದವರು ಭಾಗವಹಿಸಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಪ್ರಮುಖವಾಗಿ ತಸ್ತಿಕ್ ಕೊಡುತ್ತಿರುವ ಬಸದಿಗಳಿಗೆ ಸಹಾಯಕ ಪುರೋಹಿತರಿಗೂ ಗೌರವಧನ ನೀಡಬೇಕು, ಸ್ತ್ರೀ ಶಕ್ತಿ ಗುಂಪುಗಳಿಗೆ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ಕೊಡಬೇಕು, ಆಯೋಗದ ಕಚೇರಿಗಳಲ್ಲಿ ಸಮಾಜದವರಿಗೆ ಉದ್ಯೋಗ ಅವಕಾಶಗಳನ್ನು ನೀಡಬೇಕು, ಬಸದಿಗಳ ದಾಖಲೆಗಳನ್ನು ಸರಿಪಡಿಸಲು ಸಹಕರಿಸಬೇಕು, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮುಂತಾದ ಹಲವಾರು ವಿಷಯಗಳನ್ನು ಅಧ್ಯಕ್ಷರ ಗಮನಕ್ಕೆ ತಂದು ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಸಲ್ಲಿಸಲಾಯಿತು.

ಹೇಮಾವತಿ ವೀ. ಹೆಗ್ಗಡೆಯವರಿಗೆÀ ಗೌರವ ಡಾಕ್ಟರೇಟ್ ಪ್ರದಾನ

Article Image

ಹೇಮಾವತಿ ವೀ. ಹೆಗ್ಗಡೆಯವರಿಗೆÀ ಗೌರವ ಡಾಕ್ಟರೇಟ್ ಪ್ರದಾನ

ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಜ್ಞಾನವಿಕಾಸ’ ಕಾರ್ಯಕ್ರಮದ ಅಧ್ಯಕ್ಷರಾಗಿ ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸೇವಾ ಚಟುವಟಿಕೆಗಳಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಜಾಗತಿಕ ಮನ್ನಣೆ ಪಡೆದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಯಾದ ‘ಸ್ವಿಟ್ಜರ್ಲೆಂಡ್‌ನ ಪ್ರತಿಷ್ಠಿತ ಡನ್‌ಸ್ಟರ್ ಬ್ಯುಸಿನೆಸ್ ಸ್ಕೂಲ್’ ಇವರು ‘ಗೌರವ ಡಾಕ್ಟರೇಟ್’ ಪದವಿಯನ್ನು ನೀಡಿ ಗೌರವಿಸಿದರು. ಡನ್‌ಸ್ಟರ್ ಬಿಸಿನೆಸ್ ಸ್ಕೂಲ್ ಇದೊಂದು ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ರಾಜ್ಯಮಟ್ಟದ ಪುನಶ್ಚೇತನಾ ಕಾರ್ಯಾಗಾರದಲ್ಲಿ ಡನ್‌ಸ್ಟರ್ ಬಿಸಿನೆಸ್ ಸ್ಕೂಲ್‌ನ ಅಧ್ಯಕ್ಷರಾದ ಫಿಲಿಪ್ ಥೆವೆನೋಟ್‌ರವರು ಆನ್‌ಲೈನ್ ಮೂಲಕ ಪದವಿಯನ್ನು ಪ್ರಕಟಿಸಿದರು. ಡನ್‌ಸ್ಟರ್ ಬಿಸಿನೆಸ್ ಸ್ಕೂಲ್‌ನ ಪರವಾಗಿ ಅವಿನಾಶ್ ಗುಪ್ತಾರವರು ಗೌರವ ಡಾಕ್ಟರೇಟ್ ಪದವಿಯನ್ನು ಧರ್ಮಸ್ಥಳದಲ್ಲಿ ಪ್ರದಾನಿಸಿದರು. ಈ ಸಂದರ್ಭದಲ್ಲಿ ಅವಿನಾಶ್ ಗುಪ್ತಾರವರು ಮಾತಾನಾಡುತ್ತಾ ‘ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರನ್ನು ಗೌರವಿಸುವ ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳುವುದು ನಮ್ಮ ಸಂಸ್ಥೆಗೆ ಹೆಮ್ಮೆ ಹಾಗೂ ಧನ್ಯತೆಯ ಕ್ಷಣವಾಗಿದೆ. ನಾವಿಲ್ಲಿ ಕೇವಲ ಒಬ್ಬ ವ್ಯಕ್ತಿಯನ್ನು ಗೌರವಿಸುತ್ತಿಲ್ಲ. ಬದಲಾಗಿ ಅಸಂಖ್ಯಾತ ಜನರ ಬದುಕಿನಲ್ಲಿ ಬೆಳಕಾಗಿ, ಅವರ ಜೀವನವನ್ನೇ ಧನ್ಯಗೊಳಿಸಿದ ಮಹೋನ್ನತ ಚೇತನವೊಂದರ ಸಾಧನೆಯನ್ನು ಸಂಭ್ರಮಿಸುತ್ತಿದ್ದೇವೆ. ಅಪರೂಪಕ್ಕೊಮ್ಮೆ ನಮಗೆ ಇಂತಹ ಅಸಾಧಾರಣ ವ್ಯಕ್ತಿಗಳು ಸಿಗುತ್ತಾರೆ. ಇವರು ನಮಗೆ ಅತ್ಯುನ್ನತವಾದ ಜ್ಞಾನ ಅಂದರೆ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲ, ಬದಲಾಗಿ ಮಾನವನ ಬದುಕನ್ನು ಸುಧಾರಿಸುವ ಶಕ್ತಿ ಇದೆ ಎಂಬುದನ್ನು ನೆನಪಿಸುತ್ತಾರೆ. ಅಂತಹ ಅಸಾಧಾರಣ ವ್ಯಕ್ತಿತ್ವವೇ ಹೇಮಾವತಿ ವೀ. ಹೆಗ್ಗಡೆಯವರು. ಕಳೆದ ನಾಲ್ಕು ದಶಕಗಳಿಂದ ಗ್ರಾಮೀಣ ಮಟ್ಟದಲ್ಲಿ ಸುಸ್ಥಿರವಾದ ಸಾಮಾಜಿಕ ಪರಿವರ್ತನೆಯನ್ನು ನಿರಂತರವಾಗಿ ಹೇಗೆ ತರಬಹುದು ಎಂಬುವುದನ್ನು ಮಾತೃಶ್ರೀಯವರು ಅತ್ಯಂತ ಯಶಸ್ವಿಯಾಗಿ ತೋರಿಸಿಕೊಟ್ಟಿದ್ದಾರೆ. ಜಗತ್ತು ಮಹಿಳಾ ಸಬಲೀಕರಣ, ಆರ್ಥಿಕತೆ, ಸಾಮಾಜಿಕ ಉದ್ಯಮಶೀಲತೆ ಮತ್ತು ಸಮಗ್ರ ಅಭಿವೃದ್ಧಿಯಂತಹ ಪರಿಕಲ್ಪನೆಗಳನ್ನು ಒಪ್ಪಿಕೊಳ್ಳುವುದಕ್ಕಿಂತ ದಶಕಗಳ ಹಿಂದೆಯೆ ರಾಜ್ಯದಾದ್ಯಂತ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಇವರು ಕೆಲಸವನ್ನು ಮಾಡಿದ್ದಾರೆ. ಇವರ ಉದಾತ್ತ ಆದರ್ಶಗಳಿಗೆ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಸಾಕ್ಷಿಯಾಗಿದೆ. ಗ್ರಾಮೀಣ ಮಹಿಳೆಯರು ಎದುರಿಸುತ್ತಿದ್ದ ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರವಾಗಿ ನಾಲ್ಕು ದಶಕಗಳ ಹಿಂದೆ ‘ಜ್ಞಾನವಿಕಾಸ’ ಎಂಬ ಕಾರ್ಯಕ್ರಮವನ್ನು ಆರಂಭಿಸಿದರು. ಅದು ಇಂದು ಹೆಮ್ಮರವಾಗಿ ಬೆಳೆದು ವಾತ್ಸಲ್ಯ, ಮಾಸಾಶನ ಮುಂತಾದ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದೆ. ಜ್ಞಾನವಿಕಾಸದಿಂದಾಗಿ ಹಳ್ಳಿಯ ಮಹಿಳೆಯರಲ್ಲಿ ಮಹತ್ತರ ಬದಲಾವಣೆಯಾಗಿದೆ. ಆತ್ಮವಿಶ್ವಾಸ, ಸ್ವಾಭಿಮಾನದಿಂದ ಬದುಕು ಸಾಗಿಸಲು ಸಾಧ್ಯವಾಗಿದೆ. ಸಿರಿ ಗ್ರಾಮೋದ್ಯೋಗ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿದೆ. ಪರಿಸರ, ಜಲ ಸಂರಕ್ಷಣೆಯ ನಿಟ್ಟಿನಲ್ಲೂ ಕೆಲಸ ಮಾಡಿದ್ದಾರೆ. ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಇವರ ಕೊಡುಗೆ ಅಪೂರ್ವವಾದುದು. ಮಾತೃಶ್ರೀಯವರು ಸರ್ವ ಆದರ್ಶಗಳಿಗೆ ಮಾದರಿಯಾಗಿದ್ದಾರೆ. ಮಹಿಳಾ ಸಬಲೀಕರಣ, ಗ್ರಾಮಾಭಿವೃದ್ಧಿ ಸಮುದಾಯದ ನಾಯಕತ್ವ ಮತ್ತು ಮಾನವೀಯ ಸೇವೆಗೆ ಇವರು ನೀಡಿರುವ ಅಸಾಧಾರಣ ಕೊಡುಗೆಗಳನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಲಾಗಿದೆ’ ಎಂದರು. ಹೆಗ್ಗಡೆಯವರು, ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಡಾ. ಹರೀಶ್ ಕೃಷ್ಣ ಸ್ವಾಮಿ, ಉದಯಕುಮಾರ್ ಶೆಟ್ಟಿ, ಸಂಪತ್ ಸಾಮ್ರಾಜ್ಯ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದÀ ಅನಿಲ್ ಕುಮಾರ್ ಎಸ್.ಎಸ್., ಯೋಜನೆಯ ಹಣಕಾಸು ಅಧಿಕಾರಿಗಳಾದ ಶಾಂತಾರಾಮ್ ಆರ್. ಪೈ., ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಪ್ರಾದೇಶಿಕ ನಿರ್ದೇಶಕರು, ನಿರ್ದೇಶಕರುಗಳು, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. 1972 ಡಿಸೆಂಬರ್ 27ರಂದು ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿಯಾದ ಹೇಮಾವತಿ ವೀ. ಹೆಗ್ಗಡೆಯವರು ಮಹಿಳಾ ಸಬಲೀಕರಣಕ್ಕಾಗಿ, ಸಮಾಜದ ಅಸಹಾಯಕರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೈಗೊಂಡ ಕೆಲಸಗಳ ಪಟ್ಟಿ ಬಹುದೊಡ್ಡದು. ಧರ್ಮಸ್ಥಳದ ಯುವತಿಯರನ್ನೇ ಸೇರಿಸಿಕೊಂಡು ಆರಂಭಿಸಿದ ‘ಕನ್ಯಾಕುಮಾರಿ ಯುವತಿ ಮಂಡಲ ಮುಂದೆ ಅವರ ಸಮಾಜಸೇವೆಗೆ ಮುನ್ನುಡಿ ಬರೆಯಿತು. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರನ್ನು ಸ್ವಉದ್ಯೋಗಿಗಳನ್ನಾಗಿಸುವ ನಿಟ್ಟಿನಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಆರಂಭ, ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ‘ಗೆಳತಿ ಕೌಟುಂಬಿಕ ಸಲಹಾ ಕೇಂದ್ರ’ ಗ್ರಾಮೀಣ ಮಹಿಳೆಯರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸುವ, ಬೆಳೆಸುವ ನಿಟ್ಟಿನಲ್ಲಿ ಜ್ಞಾನವಿಕಾಸ ಕೇಂದ್ರಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ, ಮಹಿಳೆಯರು ನೀರಿಗಾಗಿ ಪಡುತ್ತಿರುವ ಬವಣೆಯನ್ನು ನೀಗಿಸಲು ರಾಜ್ಯದ ಕೆರೆಗಳನ್ನು ಹೂಳೆತ್ತುವ ಕಾರ್ಯಕ್ರಮ, ರಾಜ್ಯದಲ್ಲಿರುವ ಅಸಹಾಯಕರಿಗೆ ನೆರವು ನೀಡುವ ನಿಟ್ಟಿನಲ್ಲಿ ‘ವಾತ್ಸಲ್ಯ’, ‘ಮಾಸಾಶನ’ ಕಾರ್ಯಕ್ರಮ ಹೀಗೆ ಅವರು ಕೈಗೊಂಡ ಕಾರ್ಯಕ್ರಮಗಳು ಒಂದೆರಡಲ್ಲ. ಇವರು ಕಲಾಪ್ರಿಯರೂ ಹೌದು. ಧರ್ಮಸ್ಥಳದ ಸಿಬ್ಬಂದಿಗಳನ್ನು ಸೇರಿಸಿ ಕಟ್ಟಿದ ‘ರಂಗಶಿವ ಕಲಾ ಬಳಗ’ ಈಗಾಗಲೇ ಹಲವಾರು ನಾಟಕಗಳನ್ನು ಪ್ರದರ್ಶಿಸಿ ಕಲಾಭಿಮಾನಿಗಳ ಮನೆಗೆದ್ದಿದೆ. ಹಾಗೆಯೇ ಉಜಿರೆಯಲ್ಲಿ ‘ಸಮೂಹ’ ಸಾಂಸ್ಕೃತಿಕ ಕೇಂದ್ರ ವನ್ನು ಸ್ಥಾಪಿಸುವ ಮೂಲಕ ಉಜಿರೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕಾರಣೀಕರ್ತರಾಗಿದ್ದಾರೆ. ಓದು ಇವರ ಹವ್ಯಾಸಗಳಲ್ಲೊಂದು. ನಿರಂತರದ ‘ಗೆಳತಿ’, ಮಂಜುವಾಣಿಯ ‘ಮಗಳಿಗೊಂದು ಪತ್ರ’ ಅಂಕಣದ ಮೂಲಕವೂ ಇವರು ಚಿರಪರಿಚಿತರು. ಇವರು ಕೈಗೊಂಡಿರುವ ಕೆಲಸ ಕಾರ್ಯಗಳು, ಸೇವೆಗಳು ನಾಡಿಗೆ ಮಾದರಿಯಾಗಿದೆ.

ಪದ್ಮಾಂಬ ಮಹಿಳಾ ಸಮಾಜ: ಮಾಸಿಕ ಸಭೆ

Article Image

ಪದ್ಮಾಂಬ ಮಹಿಳಾ ಸಮಾಜ: ಮಾಸಿಕ ಸಭೆ

ದಾವಣಗೆರೆ: ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ, ಶ್ರೀ 1008 ಪಾರ್ಶ್ಶ್ವನಾಥ ಜಿನಮಂದಿರದ ಆವರಣದಲ್ಲಿ, ನಡೆದ ಸಮಾರಂಭದಲ್ಲಿ D.R.M. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರೂಪಶ್ರೀರವರು ದಾವಣಗೆರೆಯಲ್ಲಿ ಪ್ರಾಧ್ಯಾಪಕರಾಗಿ,ವಿಭಾಗ ಮುಖ್ಯಸ್ಥರಾಗಿ, ಪ್ರಾಶುಂಪಾಲರಾಗಿ ಅತ್ಯುತ್ತಮ ಸೇವೆ ಮತ್ತು ದಾವಣಗೆರೆಯ ಜೈನ ಸಮಾಜದ ಜೊತೆ ನಿಕಟ ಬಾಂಧವ್ಯವನ್ನು ಹೊಂದಿರುವುದನ್ನು ಗಮನಿಸಿ "ಪದ್ಮಾಂಬ ಮಹಿಳಾ ಸಾಧನಾ ಪ್ರಶಸ್ತಿ"ಯನ್ನು ನೀಡಿ ಗೌರವಿಸಲಾಯಿತು. ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು ಮಹಿಳೆಯರ ಸಬಲೀಕರಣ ಮತ್ತು ಮಹಿಳಾ ಸಮಾಜಕ್ಕೆ ಮಹಿಳೆಯರ ಕೊಡುಗೆ ಇದರ ಬಗ್ಗೆ ತುಂಬಾ ವಿವರವಾಗಿ ಚೆನ್ನಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪದ್ಮಾಂಬ ಮಹಿಳಾ ಸಮಾಜದ ಅಧ್ಯಕ್ಷರಾದ ವರ್ಷ ಸುಧೀರ್, ಕಾರ್ಯದರ್ಶಿಯಾದ ಸುಹಾಸಿನಿ ದೀಪಕ್, ಖಜಾಂಚಿಯಾದ ಚೇತನ ಪದ್ಮರಾಜ್ ಹಾಗೂ ಗೌರವಾಧ್ಯಕ್ಷರಾದ ಸರಸ್ವತಮ್ಮ ಬೆತುರ, ಸಂಸ್ಥಾಪಕರಾದ ಉಷಾ ಜಯಪ್ರಕಾಶ್ ಮತ್ತು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಪದ್ಮ ಪ್ರಕಾಶ್ ಹಾಗೂ ಕಾರ್ಯದರ್ಶಿಯಾದ ಹರ್ಷ ನಾಗರಾಜ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯೆಯರು ಉಪಸ್ಥಿತರಿದ್ದರು.

ಹುಬ್ಬಳ್ಳಿಯ ಬ್ರಹ್ಮಕುಮಾರ ಬೀಳಗಿರವರಿಗೆ ಚಾಣಕ್ಯಶ್ರೀ ಪುರಸ್ಕಾರ

Article Image

ಹುಬ್ಬಳ್ಳಿಯ ಬ್ರಹ್ಮಕುಮಾರ ಬೀಳಗಿರವರಿಗೆ ಚಾಣಕ್ಯಶ್ರೀ ಪುರಸ್ಕಾರ

ಹುಬ್ಬಳಿಯ ಹೆಸರಾಂತ ವ್ಯಾಪಾರೋಧ್ಯಮಿ, ಸರಳ ಸಜ್ಜನಿಕೆಯ ಸ್ನೇಹಜೀವಿ, ಅಜಾತ ಶತ್ರು ಹಾಗೂ ಜೈನ ಸಮಾಜದ ಗಣ್ಯರು, ಸಕ್ರಿಯ ಸಮಾಜಸೇವೆಯಲ್ಲಿ ಕ್ರೀಯಾಶೀಲರಾದ 80 ರ ಹರೆಯದ ಬ್ರಹ್ಮಕುಮಾರ ಬೀಳಗಿ ಇವರ ಸಹಸ್ರ ಚಂದ್ರದರ್ಶನ ಅಭಿಮಾನೋತ್ಸವ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮ ವೈಭವದಿಂದ ಮಾತ್ರ ಕೂಡಿರಲಿಲ್ಲ ಇದು ಇತರರಿಗೂ ಒಂದು ಅನುಕರಣಿಯ ಆದರ್ಶದ ಪಾಠ ಎನ್ನುವ ರೀತಿಯಲ್ಲಿ ಪರೋಕ್ಷವಾಗಿ ಸಂದೇಶ ರವಾನಿಸಿದಂತಿತ್ತು ಯಾಕಂದರೆ ಬ್ರಹ್ಮಕುಮಾರ ಬೀಳಗಿ ಇವರು 80 ರ ಹರೆಯದಲ್ಲೂ ಅವರ ಜೀವನ ಶೈಲಿ, ಯುವಕರನ್ನು ನಾಚಿಸುವ ಜೀವನೋತ್ಸಾಹ, ಕ್ರಮಬದ್ಧ ಶಿಸ್ತಿನ ದಿನಚರಿ, ಆರೋಗ್ಯ ಭಾಗ್ಯ ಇವೆಲ್ಲಕ್ಕಿಂತಲೂ ಮುಖ್ಯವಾಗಿ ಇವರ ಸಮಾಜಮುಖಿ ಕಲ್ಯಾಣ ಕಾರ್ಯಗಳು ನಿಜಕ್ಕೂ ಮೆಚ್ಚಬೇಕು. ಈ ಇಳಿ ವಯಸ್ಸಿನಲ್ಲೂ ನಿಮ್ಮ ಉತ್ಸಾಹಕ್ಕೆ ಚಿರಯೌವನ ಮತ್ತು ಆರೋಗ್ಯದ ಗುಟ್ಟೇನು? ಎಂದು ಯಾರಾದರೂ ಕೇಳಿದರೆ ಅದಕ್ಕೆ ಅವರು ಕೊಡುವ ಉತ್ತರ - ನಾನು ಎಲ್ಲರನ್ನೂ ಆತ್ಮೀಯವಾಗಿ ಪ್ರೀತಿಸುತ್ತೇನೆ ಯಾರನ್ನೂ ದ್ವೇಷಿಸುವದಿಲ್ಲ ಪ್ರತಿಯೊಬ್ಬರೂ ಒಳ್ಳೆಯವರೇ ಅವರಲ್ಲಿರುವ ಒಳ್ಳೆಯ ಗುಣಗಳನ್ನು ಸ್ವೀಕರಿಸುತ್ತೇನೆ, ಯಾರನ್ನೂ ನಿಂದಿಸುವದಿಲ್ಲ, ಸಹಾಯ, ಸಹಕಾರ, ಪರೋಪಕಾರ ದಾನ ಧರ್ಮ, ಮಾಡುವ ಮನೋಭಾವನೆ ಧಾರ್ಮಿಕ ಚಿಂತನೆ ಮೂಲಕ ಸಮಾಜದ ಕೆಲಸದಲ್ಲಿ ದೇವರನ್ನು ಕಾಣುವ ಪ್ರವೃತ್ತಿಯನ್ನು ಅಳವಡಿಸಿಕೊಂಡಿದ್ದೇನೆ ಪ್ರತಿಯೊಂದು ಕೆಲಸವನ್ನು ಇಷ್ಟಪಟ್ಟು ಮಾಡುತ್ತೇನೆ " ಎನ್ನುತ್ತಾರೆ. ಇದೇ ಇವರ ದೀರ್ಘ ಜೀವನೋತ್ಸಾಹದ ಸೂತ್ರ. ಇತ್ತೀಚಿನ ಆಧುನಿಕ ಪರಿಸರದಲ್ಲಿ ನಿತ್ಯ ಒತ್ತಡದ ಬದುಕು ಮತ್ತು ಅನಾರೋಗ್ಯ ಜೀವನಶೈಲಿ ಮಧ್ಯದಲ್ಲೂ ನಾವು ಹೇಗೆ ಉತ್ಸಾಹದಿಂದ ಬದುಕಬೇಕು ಎನ್ನುವದನ್ನು ಮೌಲ್ಯಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವದನ್ನು ಇವರಿಂದ ಕಲಿಯಬೇಕು ಎಂದು ಅನೇಕರು ಅಂದುಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಶ್ರೀ ಶಾಂತಿನಾಥ ತೀರ್ಥಂಕರ ದಿಗಂಬರ ಜೈನ ಬಸದಿ ಟ್ರಸ್ಟ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಮಹಾವೀರ ಗೊಂಗಡಿ ಸೇರಿ ಪದಾಧಿಕಾರಿಗಳು ಇವರ ಸಮಾಜ ಸೇವೆಯನ್ನು ಗುರುತಿಸಿ "ಚಾಣಕ್ಯಶ್ರೀ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಿದರು. ಮಾಜಿ ಮುಖ್ಯಮಂತ್ರಿ, ಸಂಸದರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ ಬೆಲ್ಲದ ರಾಜಕೀಯ ಮುಖಂಡರಾದ ಮಹೇಶ್ ತೆಂಗಿನಕಾಯಿ,ಶಂಕರಣ್ಣ ಮುನವಳ್ಳಿ, ಮೋಹನ್ ಲಿಂಬಿಕಾಯಿ, ಖ್ಯಾತ ಪತ್ರಕರ್ತ ಅಜಿತ್ ಹನಮಕ್ಕನವರ ಮುಂತಾದವರು ಭಾಗವಹಿಸಿ ಶುಭಕೋರಿ ಅಭಿನಂದಿಸಿದರು. ಎನ್ ಆರ್ ಪುರ ಜೈನ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮಿಗಳು, ಹೊಂಬುಜದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಸೇರಿದಂತೆ ಎಲ್ಲಾ ಜೈನ ಮಠಗಳ ಸ್ವಾಮೀಜಿಯವರು ಮತ್ತು ಮಾಜಿ ಮುಖ್ಯಮಂತ್ರಿ ಯಡೆಯೂರಪ್ಪ ಸೇರಿ ಹಲವು ರಾಜಕೀಯ ಗಣ್ಯರು ಶುಭ ಸಂದೇಶ ಕಳಿಸುವ ಮೂಲಕ ಶುಭಾಶಯ ತಿಳಿಸಿದ್ದಾರೆ. ವರದಿ : ಎಸ್ ಆರ್ ಮಲ್ಲಸಮುದ್ರ

ಸುಕೇಶ್‌ ಕುಮಾರ್ ಜೈನ್ ರವರಿಗೆ- ಆರೋಗ್ಯ ಸೇವಾ ರತ್ನ ಪ್ರಶಸ್ತಿ

Article Image

ಸುಕೇಶ್‌ ಕುಮಾರ್ ಜೈನ್ ರವರಿಗೆ- ಆರೋಗ್ಯ ಸೇವಾ ರತ್ನ ಪ್ರಶಸ್ತಿ

ಬೆಳ್ತಂಗಡಿ: ಬಸವ ಅಕ್ಯೂ ಅಕಾಡೆಮಿ, ಬೆಂಗಳೂರು ವತಿಯಿಂದ ಆಯೋಜಿಸಲಾದ ಅಕ್ಯುಪ್ರೆಶರ್ ಹಾಗೂ ಮರ್ಮಬಿಂದು ಕಾರ್ಯಾಗಾರದಲ್ಲಿ ಔಷಧ ರಹಿತ ಚಿಕಿತ್ಸಾ ಸೇವೆಯಲ್ಲಿ ಸಲ್ಲಿಸಿರುವ ಗಮನಾರ್ಹ ಕೊಡುಗೆಗಾಗಿ ಅಳದಂಗಡಿಯ ಕಲ‌ ಥೆರಪಿಸ್ಟ್ ಸುಕೇಶ್ ಕುಮಾರ್ ಜೈನ್ ಅವರಿಗೆ “ಆರೋಗ್ಯ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರಲ್ಲಿ ಕಲರ್ ಥೆರಪಿ, ಅಕ್ಯುಪ್ರೆಶರ್, ಮರ್ಮ ಪಾಯಿಂಟ್ ಥೆರಪಿ, ಸೀಡ್ ಥೆರಪಿ, ರೇಖೆ ಹೀಲಿಂಗ್ ಸೇರಿದಂತೆ ವಿವಿಧ ಪರ್ಯಾಯ ಚಿಕಿತ್ಸೆಗಳು ಲಭ್ಯವಿದ್ದು, ಆರೋಗ್ಯ ಜಾಗೃತಿ ಮತ್ತು ಸೇವೆಯ ಮೂಲಕ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು, ಸುಕೇಶ್ ಕುಮಾರ್‌ ಜೈನ್‌ ಅವರ ಸೇವಾ ಮನೋಭಾವವನ್ನು ಶ್ಲಾಘಿಸಿ ಅಭಿನಂದಿಸಿದರು.

ತುಮಕೂರು: ಮುನಿ ಮಹಾರಾಜರುಗಳ ಆಗಮನ

Article Image

ತುಮಕೂರು: ಮುನಿ ಮಹಾರಾಜರುಗಳ ಆಗಮನ

ತುಮಕೂರು ನಗರದಲ್ಲಿ 2026 ರ ಚಾತುರ್ಮಾಸವನ್ನು ಆಚರಿಸಲು ದಿಗಂಬರ ಜೈನಾಚಾರ್ಯ 108 ಶ್ರೀ ಪ್ರಮುಖ ಸಾಗರ್ ಜೀ ಮಹಾರಾಜ್ ಮತ್ತು ಅವರ ಮುನಿ ಸಂಘ ದಿನಾಂಕ 6-7-2026 ಸೋಮವಾರ ತುಮಕೂರು ತಾಲ್ಲೂಕು ಪಂಡಿತನ ಹಳ್ಳಿ ಬಳಿ ಇರುವ ಮಂದಾರ ಗಿರಿ ಅತಿಶಯ ಕ್ಷೇತ್ರಕ್ಕೆ ಆಗಮಿಸಿದರು. ಜೈನ ಸಮಾಜದ ಅಧ್ಯಕ್ಷರಾದ ಟಿ ಡಿ ಬಾಹುಬಲಿ ಬಾಬು, ಪದಾಧಿಕಾರಿಗಳು ಮತ್ತು ತುಮಕೂರು ನಗರದ ಶ್ರಾವಕ -ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸುಧೀರ್ ಕುಮಾರ್- ಅಧ್ಯಕ್ಷರಾಗಿ ಆಯ್ಕೆ

Article Image

ಸುಧೀರ್ ಕುಮಾರ್- ಅಧ್ಯಕ್ಷರಾಗಿ ಆಯ್ಕೆ

ಮೂಡುಬಿದಿರೆ ರೋಟರಿ ಇಂಗ್ಲೀಷ್ ಮೀಡಿಯಂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವೇಣೂರಿನ ಸುಧೀರ್ ಕುಮಾರ್ ರವರು ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್: ವಿವೇಕ್ ಆಳ್ವ ನೇಮಕ

Article Image

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್: ವಿವೇಕ್ ಆಳ್ವ ನೇಮಕ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ರವರನ್ನು ನವದೆಹಲಿ ಕೇಂದ್ರ ಕಚೇರಿಯ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯ ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರಾದ ಡಾ ಪಿ.ಜಿ.ಆರ್. ಸಿಂಧಿಯಾ ರವರ ಶಿಫಾರಸಿನ ಮೇರೆಗೆ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನ ಮುಖ್ಯ ರಾಷ್ಟ್ರೀಯ ಆಯುಕ್ತರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಕೆ.ಕೆ. ಖಂಡೇಲ್ವಾಲ್ ಇವರನ್ನು ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರನ್ನಾಗಿ ನೇಮಕಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ನೇಮಕಾತಿಯು ಕರ್ನಾಟಕಕ್ಕೆ ಹಾಗೂ ಕರಾವಳಿ ಭಾಗಕ್ಕೆ ಹೆಮ್ಮೆಯ ವಿಷಯವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಯುವಜನರಲ್ಲಿ ಸಾಂಸ್ಕೃತಿಕ ಸಾಮರಸ್ಯ, ರಾಷ್ಟ್ರೀಯ ಏಕತೆ ಹಾಗೂ ಅಂತರಾಷ್ಟ್ರೀಯ ಸ್ನೇಹ ಸಂಬಂಧಗಳನ್ನು ಬಲಪಡಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ. ಉಪ ರಾಷ್ಟ್ರೀಯ ಆಯುಕ್ತ (ಸಾಂಸ್ಕೃತಿಕ ವಿನಿಮಯ) ಹುದ್ದೆಯಲ್ಲಿ ವಿವೇಕ್ ಆಳ್ವರು ದೇಶದ ವಿವಿಧ ರಾಜ್ಯಗಳ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ರೂಪಿಸುವುದು, ರಾಷ್ಟ್ರೀಯ ಸಮಗ್ರತಾ ಶಿಬಿರಗಳು, ಯುವ ವಿನಿಮಯ ಯೋಜನೆಗಳು, ಸಾಂಸ್ಕೃತಿಕ ಜಾಂಬೂರಿಗಳು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಯುವ ಸಂವಾದಗಳು ಹಾಗೂ ವಿಶ್ವ ಸ್ಕೌಟ್ಸ್–ಗೈಡ್ಸ್ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ವಿವಿಧ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳ ನಡುವೆ ಪರಸ್ಪರ ಗೌರವ, ರಾಷ್ಟ್ರೀಯ ಐಕ್ಯತೆ ಹಾಗೂ ವೈವಿಧ್ಯದಲ್ಲಿ ಏಕತೆ ಎಂಬ ಭಾರತದ ಮೌಲ್ಯಗಳನ್ನು ಯುವಜನರಲ್ಲಿ ಬೆಳೆಸುವ ಕಾರ್ಯಕ್ಕೂ ಅವರು ನಾಯಕತ್ವ ವಹಿಸಲಿದ್ದಾರೆ. ಇದರ ಜೊತೆಗೆ ವಿವಿಧ ರಾಜ್ಯಗಳ ಪ್ರತಿಭಾವಂತ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ರಾಷ್ಟ್ರೀಯ ವೇದಿಕೆ ಕಲ್ಪಿಸುವುದು, ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಕಾರ್ಯಕ್ರಮಗಳನ್ನು ರೂಪಿಸುವುದು, ಯುವಜನರಲ್ಲಿ ನಾಯಕತ್ವ ಕೌಶಲ್ಯ, ಸಂವಹನ ಸಾಮರ್ಥ್ಯ ಮತ್ತು ಅಂತರಾಷ್ಟ್ರೀಯ ದೃಷ್ಟಿಕೋನವನ್ನು ಬೆಳೆಸುವ ಯೋಜನೆಗಳನ್ನು ಜಾರಿಗೊಳಿಸುವಲ್ಲಿಯೂ ಪ್ರಮುಖ ಪಾತ್ರವಹಿಸಲಿದ್ದಾರೆ. ವಿವೇಕ್ ಆಳ್ವರವರು ಹಲವು ವರ್ಷಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ಸಕ್ರಿಯ ಬೆಂಬಲ ನೀಡುತ್ತಿದ್ದು, ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ, ರಾಷ್ಟ್ರೀಯ ಸಮಗ್ರತಾ ಶಿಬಿರ, ಯುವ ನಾಯಕತ್ವ ತರಬೇತಿಗಳು ಹಾಗೂ ವಿವಿಧ ರಾಷ್ಟ್ರೀಯ ಮಟ್ಟದ ಸ್ಕೌಟ್ಸ್–ಗೈಡ್ಸ್ ಕಾರ್ಯಕ್ರಮಗಳ ಯಶಸ್ವಿ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ವಿಶೇಷವಾಗಿ ಮೂಡುಬಿದಿರೆಯಲ್ಲಿ ನಡೆದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಯಶಸ್ವಿ ಸಂಘಟನೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಗಳಿಸಿದ್ದಾರೆ.

ಸಂತಶಿರೋಮಣಿ ಆಚಾರ್ಯ ವಿದ್ಯಾಸಾಗರ ಮಹಾರಾಜರ 59ನೇ ದೀಕ್ಷಾ ದಿನ ಆಚರಣೆ

Article Image

ಸಂತಶಿರೋಮಣಿ ಆಚಾರ್ಯ ವಿದ್ಯಾಸಾಗರ ಮಹಾರಾಜರ 59ನೇ ದೀಕ್ಷಾ ದಿನ ಆಚರಣೆ

ದಿಗಂಬರ ಜೈನ ಸಮಾಜದ ಅತಿದೊಡ್ಡ ನಕ್ಷತ್ರ ಎಂದೇ ಹೆಸರಾಗಿದ್ದ, ವಿಶ್ವ ವಂದನೀಯ ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜರ 59ನೇ ದೀಕ್ಷಾ ದಿನ ಆಚರಣೆಯು ಧಾರವಾಡ ಚಿಕ್ಕಮಲ್ಲಿಗವಾಡ ಹೊರವಲಯದ ಹಿರಿಯ ನ್ಯಾಯಾಧೀಶ ರಾಜಶೇಖರ್ ತಿಳಗಂಜಿ ಇವರ ನಿವಾಸದಲ್ಲಿ ಪರಮಪೂಜ್ಯ ಆಚಾರ್ಯಶ್ರೀ ಪುಣ್ಯಸಾಗರ ಮಹಾರಾಜರ ಮತ್ತು ಪ.ಪೂ ಮುನಿಶ್ರೀ ಪುರಾಣ ಸಾಗರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ವೈಭವದಿಂದ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಶ್ರಾವಕ ಶ್ರಾವಕಿಯರಿಂದ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ ಪೂಜಾ ಅಷ್ಟಕ ಜರುಗಿತು. ಹಿರಿಯ ನ್ಯಾಯಾಧೀಶ ರಾಜಶೇಖರ್ ತಿಳಗಂಜಿ ಮತ್ತು ಪರಿವಾರದವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ತೀರ್ಥಂಕರರನ್ನು ನಾವು ನೋಡಿಲ್ಲ ಆದರೆ ದೇಶದಾದ್ಯಂತ ಶಾಂತಿ ಅಹಿಂಸೆ ಸಂದೇಶಗಳ ಮೂಲಕ ಧರ್ಮ ಪ್ರಭಾವನೆ ಮಾಡುತ್ತಿರುವ ಕಣ್ಣಿಗೆ ಕಾಣುವ ತೀರ್ಥಂಕರರನ್ನೇ ದಿಗಂಬರ ಮುನಿ ಮಹಾರಾಜರು ಇಂಥ ಮುನಿ ಮಹಾರಾಜರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ತಿಳಿಸಿ ಅವರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಕೆ ಜೆ ರಪಾಟಿ, ಎಸ್ ಆರ್ ಮಲ್ಲಸಮುದ್ರ ಮುಂತಾದವರು ಮಾತನಾಡಿದರು. ಪರಮಪೂಜ್ಯ ಮುನಿಶ್ರೀ ಪುರಾಣ ಸಾಗರ ಮಹಾರಾಜರು ತಮ್ಮ ಪ್ರವಚನದಲ್ಲಿ ಆಚಾರ್ಯಶ್ರೀಗಳ ಗುಣಗಾನ ಮಾಡಿ ಸ್ಮರಿಸಿದರು. ಸಾನಿಧ್ಯ ವಹಿಸಿ ಪ್ರವಚನ ದಯಪಾಲಿಸಿದ ಆಚಾರ್ಯ ಶ್ರೀ ಪುಣ್ಯಸಾಗರ ಮಹಾರಾಜರು ಸಂತಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರು ಭಾರತ ದೇಶ ಕಂಡ ಅತ್ಯಂತ ಶ್ರೇಷ್ಠ ಪ್ರಭಾವಿ ಆಚಾರ್ಯರಾಗಿದ್ದರು ಅವರು ಆಧ್ಯಾತ್ಮ ಕವಿ, ಲೇಖಕ, ವಿಮರ್ಶಕ, ದಿಗಂಬರ ಜೈನ ಸರೋವರದ ರಾಜಹಂಸ ಎಂದು ಕರೆಯಲ್ಪಡುತ್ತಿದ್ದರು, ಕರ್ನಾಟಕದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ ಶ್ರೀಮತಿ ಶ್ರೀಮತಿದೇವಿ ಹಾಗೂ ಶ್ರೀ ಮಲ್ಲಪ್ಪಾಜಿಯವರ ಸುಪುತ್ರರಾಗಿ ದಿನಾಂಕ 10-10-1946 ಜನಿಸಿದರು. ಬಾಲ್ಯದಿಂದಲೂ ಆದ್ಯಾತ್ಮದ ಕಡೆ ಒಲವು ಹೊಂದಿದ್ದರು, ಆಚಾರ್ಯ ದೇಷಭೂಷಣ ಮಹಾರಾಜರಿಂದ ಪ್ರಭಾವಿತರಾಗಿ ಅನೇಕ ಸ್ಥಳಗಲ್ಲಿ ಸಂಚಾರಿಸುತ್ತ ಧರ್ಮದ ಅಧ್ಯಯನ ಮಾಡಿದರು. ಪೂಜ್ಯ ಜ್ಞಾನ ಸಾಗರ ಮಹಾರಾಜರಿಂದ ದಿನಾಂಕ 30-6-1968 ರಲ್ಲಿ ದಿಗಂಬರ ದೀಕ್ಷೆ ಪಡೆದು ಇಂದಿಗೆ 58 ವರ್ಷ ಮುಗಿದು 59ನೇ ವರ್ಷಕ್ಕೆ ಜೈನ ಮುನಿಯಾದರು. ಆಚಾರ್ಯರೊಟ್ಟಿಗೆ ಸದಾಕಾಲ ಸಾವಿರಕ್ಕೂ ಹೆಚ್ಚು ಅವರ ಶಿಷ್ಯರು ದೇಶದಾದ್ಯಂತ ವಿಹಾರ ಮಾಡಿ ಜಿನಧರ್ಮದ ಪ್ರಸಾರ ಹಾಗೂ ಧರ್ಮಜ್ಞಾನವನ್ನು ಪ್ರಸರಿಸಿದರು. ಆಶ್ಚರ್ಯವೆಂದರೆ ಆಚಾರ್ಯರ ಮೂಕ ಮಾಟಿ ಎಂಬ ಗ್ರಂಥವು ಜಗತ್ತಿನ ಎಲ್ಲ ಭಾಷೆಗಳಲ್ಲಿ ಪ್ರಕಟವಾಗಿದೆ. ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಇಂಥ ಗುರುವರ್ಯರಿಂದ ನನ್ನನ್ನೂ ಸೇರಿ ಹಲವಾರು ಮುನಿಗಳು ದೀಕ್ಷೆ ಪಡೆದು ಧನ್ಯರಾಗಿದ್ದೇವೆ ಎಂದು ದೀಕ್ಷಾ ಗುರುಗಳನ್ನು ಸ್ಮರಿಸಿದರು. ನಂತರ 59 ದೀಪಗಳಿಂದ ಮಹಾ ಮಂಗಳಾರತಿ ವೈಭವದಿಂದ ನಡೆಯಿತು. ಸಮಾರಂಭದಲ್ಲಿ ಹುಬ್ಬಳ್ಳಿ ನವನಗರ ಧಾರವಾಡ ಮುಮ್ಮಿಗಟ್ಟಿ ಗದಗ ಮುಂತಾದ ಊರುಗಳಿಂದ ಹಲವಾರು ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ಕುಶಲ ಅವಲಕ್ಕಿ ಅವರು ಪ್ರಾರ್ಥಿಸಿ, ಎಸ್ ಆರ್ ಮಲ್ಲಸಮುದ್ರರವರು ಸ್ವಾಗತಿಸಿ, ನಂದಿನಿ ಗೊಟೂರೆ ಇವರಿಂದ ಮಂಗಳಾಚರಣೆ ನೆರವೇರಿತು. ವರದಿ : ಶಾಂತರಾಜ ಮಲ್ಲಸಮುದ್ರ.

ಮೈಸೂರು: 20ನೇ ವಲಯ ಸಮ್ಮೇಳನ

Article Image

ಮೈಸೂರು: 20ನೇ ವಲಯ ಸಮ್ಮೇಳನ

ಮೈಸೂರು: ಭಾರತೀಯ ಜೈನ್ ಮಿಲನ್ ವಲಯ 8ರ 20ನೇ ವಲಯ ಸಮ್ಮೇಳನವು ಇತ್ತೀಚೆಗೆ ಮಾನಸ ಗಂಗೋತ್ರಿಯ ಸೆನೆಟ್ ಹಾಲ್ ನಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ರವರು ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೈನ್ ಮಿಲನ್ ಗಳ ಬಗ್ಗೆ ಮಾಹಿತಿ ನೀಡಿದರು. ದುಬೈ, ಜರ್ಮನಿ, ಲಂಡನ್, ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ಸಿಂಗಾಪುರದಲ್ಲಿ ಜೈನ್ ಮಿಲನ್ ಶಾಖೆಗಳು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು ಬಹಳ ಜನಪ್ರಿಯವಾಗಿವೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್, ರಾಷ್ಟ್ರೀಯ ಉಪಾಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್ ಸೇರಿದಂತೆ ಗಣ್ಯಾತೀಗಣ್ಯರು ಉಪಸ್ಥಿತರಿದ್ದರು.

ಧಾರವಾಡ: ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ

Article Image

ಧಾರವಾಡ: ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ

‘ಧಾರವಾಡದಲ್ಲಿ ಪ್ರಪ್ರಥಮ ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮ ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗದ ವತಿಯಿಂದ ಹಿರಿಯ ಚಿತ್ರಕಲಾವಿದ ಮಹಾವೀರ ರಾಯಪ್ಪಾ ಬಾಳಿಕಾಯಿ ಅವರ ಕುರಿತು ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ ಮಾತನಾಡಿ, ರಾಜ್ಯದ ನಾಲ್ಕು ವಿಭಾಗಗಳ ಪೈಕಿ ಒಂದು ಜಿಲ್ಲೆಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರದಂದು ಆಯಾ ಜಿಲ್ಲೆಯಲ್ಲಿರುವ ನಾಡು-ನುಡಿ, ಕಲೆ, ಸಾಹಿತ್ಯ ಹಾಗೂ ಸಂಗೀತ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಪರಿಗಣಿಸಿ, ಅವರ ಸಾಧನೆಯನ್ನು ಯುವಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ “ಸಾಧಕರೊಂದಿಗೆ ಸಂವಾದ” ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಧಾರವಾಡ ಜಿಲ್ಲೆಯಿಂದಲೇ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಚಿತ್ರಕಲಾವಿದರಾದ ಎಮ್. ಆರ್. ಬಾಳಿಕಾಯಿ ಅವರ ಜೀವನ-ಸಾಧನೆ ಕುರಿತು ಸಂವಾದ ಮಾಡಲಾಗುತ್ತಿದೆ ಎಂದರು. ಎಮ್. ಆರ್. ಬಾಳಿಕಾಯಿ ಅವರು ಚಿತ್ರಕಲಾ ಕ್ಷೇತ್ರಕ್ಕೆ ಸಲ್ಲಿಸಿರುವ ಅನುಪಮ ಸಾಧನೆ ಗುರುತಿಸಿ, 2023ರಲ್ಲಿ ಜರುಗಿದ ಹುಕ್ಕೇರಿ ತಾಲೂಕಾ 11ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದು ಹೆಮ್ಮೆಯ ಸಂಗತಿ ಎಂದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಮ್. ಆರ್. ಬಾಳಿಕಾಯಿ ಅವರು, ತಮ್ಮ ಬಾಲ್ಯ, ಜೀವನ, ಕಲಾಕ್ಷೇತ್ರದಲ್ಲಿ ತಾವು ನಡೆದು ಬಂದ ದಾರಿಯನ್ನು ವಿವರಿಸುತ್ತ, ನನ್ನ ಸಾಧನೆಯ ಹಿಂದೆ ಇಡೀ ಸಮಾಜವೇ ಇದೆ. ಅದಕ್ಕಾಗಿ ನನ್ನ ಸಾಧನೆಯನ್ನು ಸಮಾಜಕ್ಕೇ ಅರ್ಪಿಸುತ್ತೇನೆ ಎಂದರು. ಜೀವನದಲ್ಲಿ ನಾವು ಎಷ್ಟು ಕಷ್ಟಗಳನ್ನು ಅನುಭವಿಸಿತ್ತೇವೆಯೋ ಅವುಗಳೇ ಸಾಧನೆಯ ಮೆಟ್ಟಲುಗಳಾಗುತ್ತವೆ. ಯಾವುದೇ ಕಾರ್ಯವನ್ನು ಹೃದಯಪೂರ್ವಕವಾಗಿ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಅನುಭವವೇ ನನ್ನ ಜೀವನಕ್ಕೆ ದಾರಿದೀಪವಾಗಿದೆ. ಸತ್ಯದ ಹಾದಿಯಲ್ಲಿ ನಡೆದರೆ ಜೀವನ ಸುಗಮವಾಗಿರುತ್ತದೆ ಎಂದರು. ತಮ್ಮ ಸಾಧನೆಯ ಮಾರ್ಗವನ್ನು ಮತ್ತು ಗುರು-ಶಿಷ್ಯರುಗಳ ಬೆಸುಗೆಯ ಬಗ್ಗೆ ಸಭಿಕರೊಂದಿಗೆ ಮನಬಿಚ್ಚಿ ಮಾತನಾಡಿದರು. ನಂತರ ಜರುಗಿದ ಸಂವಾದದಲ್ಲಿ ಡಿ. ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷ ಬಿ. ಮಾರುತಿ, ಮಹದೇವ ಜಗತಾಪ, ಡಾ. ಬಿ. ಎಲ್. ಚೌಹಾನ, ಪಿ. ಎಸ್. ಕಡೇಮನಿ, ಡಾ. ಎಸ್. ಸಿ. ಪಾಟೀಲ, ಎಮ್. ಎಸ್. ಚೌಧರಿ, ಡಿ. ಎಮ್. ಬಡಿಗೇರ, ಬಿ. ಐ. ಈಳಗೇರ ಮುಂತಾದವರು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಎಮ್. ಆರ್. ಬಾಳಿಕಾಯಿ ಅವರ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನಗೊಂಡಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮನಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸುರೇಶ ಹಾಲಭಾವಿ, ಡಾ. ಶಶಿಧರ ನರೇಂದ್ರ, ಡಾ. ಬಸವರಾಜ ಕುರಿಯವರ, ಎನ್. ಆರ್. ನಾಯ್ಕರ್, ಡಾ. ರಾಯಪ್ಪಾ ಬಾಳಿಕಾಯಿ, ವಿಠ್ಠಲ ಬಸಳಿಗುಂದಿ, ಎಸ್. ಬಿ. ಕಂಕಣವಾಡಿ, ರಮೇಶಕುಮಾರ ಬಾಳಿಕಾಯಿ, ಎಸ್. ಪಿ. ಸತ್ಯನಾಯಕ ಇನ್ನಿತರರು ಇದ್ದರು. ವರದಿ: ಡಾ. ರಾಯಪ್ಪಾ ಬಾಳಿಕಾಯಿ

ರಸಿಕ ಕಂಬಳಿ- ನಿಧನ

Article Image

ರಸಿಕ ಕಂಬಳಿ- ನಿಧನ

ಮೂಡುಬಿದಿರೆ: ಮಹಾವೀರ ಕಾಲೇಜು ಬಳಿಯ ಕಂಬಳಿ ಬಾಗ್ ನಿವಾಸಿ, ಭಾರತೀಯ ಜೈನ್ ಮಿಲನ್ ವಲಯ 8ರ ನಿರ್ದೇಶಕ, ಪೆರಿಂಜೆ ಗುತ್ತು ಜಯರಾಜ ಕಂಬಳಿರವರ ಧರ್ಮಪತ್ನಿ ರಸಿಕ ಕಂಬಳಿರವರು ಇಂದು ನಿಧನ ಹೊಂದಿದರು. ಇವರು ಪತಿ ಮತ್ತು ಮಕ್ಕಳಾದ ನೌವೇಶ್ ಕಂಬಳಿ, ನವ್ಯ ಕಂಬಳಿ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ.

ವೈಶಾಲಿ ಚಂದ್ರಪ್ರಭುರವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ

Article Image

ವೈಶಾಲಿ ಚಂದ್ರಪ್ರಭುರವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ

ಕರ್ನಾಟಕ ಮಿಡಿಯಾ ಕ್ಲಬ್ ವತಿಯಿಂದ ಕೊಡಮಾಡುವ “ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ”ಯನ್ನು ವೈಶಾಲಿ ಚಂದ್ರಪ್ರಭುರವರ ಮಾಧ್ಯಮ ಕ್ಷೇತ್ರದ ಅಪೂರ್ವ ಸಾಧನೆ ಬದುಕಿನ ಧೃಡತೆ, ಮಾನವೀಯ ಮೌಲ್ಯಗಳೊಂದಿಗೆ ಈ ಸಮಾಜಕ್ಕಾಗಿ ಸಾಧಿಸಿದ ಸಾಧನೆಯನ್ನು ಗುರುತಿಸಿ, ಬೆಂಗಳೂರಿನ ವಿಶ್ವವಿದ್ಯಾಲಯ ಆವರಣದ ಕಲಾಗ್ರಾಮದಲ್ಲಿ ಜೂ. 5ರಂದು ನಡೆದ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.

First Previous

Showing 1 of 9 pages

Next Last