Article Image

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸ್ತ್ರೀ ಶಕ್ತಿ ಸಂವರ್ಧನಾ ತರಬೇತಿ

Article Image

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸ್ತ್ರೀ ಶಕ್ತಿ ಸಂವರ್ಧನಾ ತರಬೇತಿ

ಕಲ್ಲಬೆಟ್ಟು : ಸ್ತ್ರೀ ಶಕ್ತಿಯ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಎಕ್ಸಲೆಂಟ್ ಮೂಡುಬಿದಿರೆ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶಾಲಾ ಮಕ್ಕಳಿಗಾಗಿ "ವೀರೆ- ಸ್ತ್ರೀ ಶಕ್ತಿ ಸಂವರ್ಧನಾ ತರಬೇತಿ" ಕಾರ್ಯಕ್ರಮವು ಕಲ್ಲಬೆಟ್ಟುವಿನ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಲ್ಲಿ ಅರ್ಥಪೂರ್ಣವಾಗಿ ಉದ್ಘಾಟನೆಯಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಡುಬಿದಿರೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಪ್ರತಿಭಾ ಅವರು ಹೆಣ್ಣುಮಕ್ಕಳ ಸುರಕ್ಷತೆಯ ಅವಶ್ಯಕತೆ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ತರಬೇತಿಗಳ ಮಹತ್ವವನ್ನು ವ್ಯಕ್ತಪಡಿಸುತ್ತ ಅವರ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಸಮಾಜದ ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ ಮತ್ತು ಪ್ರಾಮುಖ್ಯತೆ ಕುರಿತು ಮಾತನಾಡಿದ ಅವರು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅವರ ಸಮಾಜಮುಖಿ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯ ಪ್ರಾಚಾರ್ಯ ಎಸ್. ಜಿ. ಹಿರೇಮಠ್ ಅವರು ಮಕ್ಕಳಲ್ಲಿ ಸ್ವಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ತರಬೇತಿಯು ಪ್ರಮುಖ ಪಾತ್ರ ವಹಿಸಲಿದೆ. ಹೆಣ್ಣು ಸುರಕ್ಷಿತ ವಲಯದಲ್ಲಿ ಬದುಕುತ್ತ ಸಮಾಜದ ಶಕ್ತಿಯಾಗಿ ರೂಪುಗೊಳ್ಳಬೇಕು. ಮಕ್ಕಳಲ್ಲಿ ಶಕ್ತಿ ಸ್ಫೂರ್ತಿಯನ್ನು ತುಂಬುವ ಎಕ್ಸಲೆಂಟ್ ಸಂಸ್ಥೆಯ ಸಂಕಲ್ಪ ಅಭಿನಂದನೀಯ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡುತ್ತಾ, ಹೆಣ್ಣು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಬಲಳಾದಾಗ ಸಮಾಜವು ಸಶಕ್ತವಾಗಿ ರೂಪುಗೊಳ್ಳುತ್ತದೆ. ಹೆಣ್ಣು ಮಕ್ಕಳು ತಮ್ಮ ಹಕ್ಕುಗಳು, ಅವಕಾಶಗಳು ಮತ್ತು ಸಬಲೀಕರಣದ ಬಗ್ಗೆ ಅರಿವು ಹೊಂದಿದಾಗ ಮಾತ್ರ ಸಮಾನತೆಯ ಸಮಾಜವನ್ನು ನಿರ್ಮಿಸಬಹುದು. ವಿವಿಧ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತಾ ಕೌಶಲಗಳನ್ನು ಬಳಕೆ ಮಾಡಿಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವತ್ತ ಹೆಣ್ಣು ಯೋಚಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಈ ಕಾರ್ಯಕ್ರಮದ ಯೋಜನೆಯನ್ನು ಪ್ರಸ್ತುತಪಡಿಸಿದರು. ಸಭಾ ಕಾರ್ಯಕ್ರಮದ ನಂತರ ಇಂಚರ ಫೌಂಡೇಷನ್ (R) ಸಂಸ್ಥೆಯ ಸಿಬ್ಬಂದಿ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯ ಪ್ರಭಾರ ನಿಲಯ ಪಾಲಕಿ ಆಶಾಲತಾ ಮತ್ತು ವಿದ್ಯಾರ್ಥಿ ಪ್ರತಿನಿಧಿ ಚೈತ್ರಾ ಪಾಟೀಲ್ ಉಪಸ್ಥಿತರಿದ್ದರು. ಉಪನ್ಯಾಸಕ ತೇಜಸ್ವೀ ಭಟ್ ಕಾರ್ಯಕ್ರಮ ನಿರೂಪಿಸಿದರು.

ರೋಟರಿ ಕ್ಲಬ್ : 30 ಕಂಪ್ಯೂಟರ್ ವಿತರಣಾ ಕಾರ್ಯಕ್ರಮ

Article Image

ರೋಟರಿ ಕ್ಲಬ್ : 30 ಕಂಪ್ಯೂಟರ್ ವಿತರಣಾ ಕಾರ್ಯಕ್ರಮ

ಬೆಳ್ತಂಗಡಿ : ಬಹುವರ್ಷಗಳಿಂದ ಅಗತ್ಯತೆ ಇದ್ದ ಬೆಳ್ತಂಗಡಿ ಪರಿಸರದ ಸರ್ಕಾರಿ ಶಾಲೆಗಳಿಗೆ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರು ಮತ್ತು ನುವೇರ್ ಸಿಸ್ಟಮ್ಸ್ ಎಲ್ ಎಲ್ ಪಿ ಸಾಫ್ಟ್‌ವೇರ್ ಕಂಪನಿ ಬೆಂಗಳೂರು ಸಹಭಾಗಿತ್ವದಲ್ಲಿ ಕಂಪ್ಯೂಟರ್ ಗಳನ್ನು ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮವು ಕಾಶಿಬೆಟ್ಟು, ರೋಟರಿ ಸೇವಾ ಭವನದಲ್ಲಿ ನಡೆಯಿತು. ತಾಲೂಕಿನ ಶಾಲೆಗಳಲ್ಲಿ 40,000 ಕ್ಕೂ ಅಧಿಕ ವಿದ್ಯಾರ್ಥಿಗಳು ಈಗಾಗಲೇ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಹಾಗು ವಿದ್ಯಾರ್ಥಿಗಳ ಆಡಳಿತಾತ್ಮಕ ಕೆಲಸಗಳಿಗಾಗಿ ಮಾತ್ರ ಕಂಪ್ಯೂಟರ್ ಇದ್ದು, ವಿದ್ಯಾರ್ಥಿಗಳ ಕಲಿಕೆಗೆ ಕಂಪ್ಯೂಟರ್ ಗಳ ಅಗತ್ಯತೆ ಬಹುದಿನಗಳಿಂದ ಇತ್ತು. ಈ ಅಗತ್ಯತೆಗೆ ಮನ್ನಣೆ ನೀಡಿದ ಬೆಳ್ತಂಗಡಿ ರೋಟರಿ ಸಂಸ್ಥೆಯು ತಾಲೂಕಿನ 12 ಶಾಲೆಗಳಿಗೆ 30 ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡಿದೆ. ಇದು ತಾಲೂಕಿನ 2,500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. 13,50,000 ರೂ. ಕಂಪ್ಯೂಟರ್ ಖರೀದಿಗೆ ವಿನಿಯೋಗ ಮಾಡಲಾಗಿದೆ. ಈ ಹಿಂದೆ ಶಿಕ್ಷಕರ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲು ಕಂಪ್ಯುಟರ್ ಗಳ ತುರ್ತು ಅಗತ್ಯತತೆ ಇದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸರಿಯಾಗಿ ಅನುದಾನ ಸಿಗದೇ ಕಳೆದ ನಾಲ್ಕು ವರ್ಷಗಳಿಂದ ಕಂಪ್ಯೂಟರ್ ಗಳ ಕೊರತೆ ಅನುಭವಿಸುತ್ತಿದ್ದ ಶಿಕ್ಷಣಾಧಿಕಾರಿಗಳ ಕಚೇರಿಯು ತನ್ನ ಇಲಾಖೆಯ ಮುಂದೆ 5 ಕಂಪ್ಯೂಟರ್ ಗಳ ಬೇಡಿಕೆಯನ್ನು ಇರಿಸಿತ್ತು. ಕಂಪ್ಯೂಟರ್ ಗಳು ಲಭಿಸಿದೆ ಇದ್ದುದರಿಂದ, ಬೆಳ್ತಂಗಡಿ ರೋಟರಿ ಕ್ಲಬ್ ಗೆ ಮನವಿ ನೀಡಿತ್ತು. ಮನವಿಯ ಬೆನ್ನಲ್ಲೆ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಕಂಪ್ಯೂಟರ್ ಗಳನ್ನು ನೀಡಿ ಸಹಕರಿಸಲಾಗಿತ್ತು. ಕಂಪ್ಯೂಟರ್ ಗಳನ್ನು ಹಸ್ತಾಂತರಿಸಿ ಮಾತನಾಡಿದ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರಿನ ರೋ. ಸುಬ್ಬು ಕೃಷ್ಣನ್, ಕೋವಿಡ್ ನಂತರದಿಂದ ಕಂಪ್ಯೂಟರ್ ಗಳ ಅಗತ್ಯತೆ ಎಷ್ಟಿದೆ ಎಂಬುದು ಈಗಾಗಲೇ ಎಲ್ಲರಿಗು ತಿಳಿದಿದೆ. ನಗರದ ವಿದ್ಯಾರ್ಥಿಗಳು ಸಾಮಾನ್ಯವಾಗಿ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಾರೆ. ಆದರೆ ಬೆಳ್ತಂಗಡಿ ಪರಿಸರದಂತ ಹಳ್ಳಿಯ ಶಾಲೆಗಳ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಬೆಳೆಯಬೇಕು. ಒಟ್ಟಾರೆಯಾಗಿ ಈ ಕಂಪ್ಯೂಟರ್ ಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಉಪಯೋಗವಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರು ಇದರ ಅಧ್ಯಕ್ಷೆ ರೋ. ಸುಪ್ರಿಯಾ ಖಾಂಡರಿ ಮಾತನಾಡಿ, ರೋಟರಿ ಸಂಸ್ಥೆಗಳು ಸದಾ ಸಾಮಾಜಿಕ ಸೇವೆ ಮತ್ತು ಬೆಳವಣಿಗೆಯೊಂದಿಗೆ ತಳುಕು ಹಾಕಿಕೊಂಡಿದೆ. ರೋಟರಿ ಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾದಾಗ ಮೂಲ ರೋಟರಿಯ ಉದ್ದೇಶವು ಈಡೇರಿದಂತಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಮಾತನಾಡಿ, ಕಂಪ್ಯೂಟರ್ ವ್ಯವಸ್ಥೆಗಳು ಬೆಳ್ತಂಗಡಿಗೆ ಬಂದ ಆರಂಭದ ದಿನಗಳು ಮತ್ತು ಅಂದಿನ ಸಂದರ್ಭದಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ‌ ಕಾರ್ಯದರ್ಶಿ ದಿವಂಗತ ಡಾ.ಯಶೋವರ್ಮರು ಬೆಳ್ತಂಗಡಿ ಯಂತಹ ಹಳ್ಳಿಯ ಪರಿಸರದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಎಷ್ಟು ಮುಖ್ಯ ಎಂಬ ಸಲುವಾಗಿ ಕಾಲೇಜುಗಳ ಗ್ರಂಥಾಲಯದಲ್ಲಿ ಟ್ಯಾಬ್ ಗಳ ಬಳಕೆ , ಕಂಪ್ಯೂಟರ್ ಲ್ಯಾಬ್ ಗಳ ಸ್ಥಾಪನೆ ಇತ್ಯಾದಿ ದೂರದೃಷ್ಟಿತ್ವದ ಕಾರ್ಯಗಳನ್ನು ನೆನಪಿಸಿಕೊಂಡರು. ಇದೇ ಸಂದರ್ಭದಲ್ಲಿ ದಿಡುಪೆಯ ಕಡಿರುದ್ಯಾವರ ಸರಕಾರಿ ಶಾಲೆಗೆ ಬೆಳ್ತಂಗಡಿ ರೋಟರಿ ಕ್ಲಬ್ ನ ಸದಸ್ಯ ರೋ. ಕಿರಣ್ ಹೆಬ್ಬಾರ್ ಯು.ಪಿ.ಎಸ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿಯ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಗಳನ್ನು ನೀಡಲು ಅನುಕೂಲ ಮಾಡಿಕೊಟ್ಟ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರಿನ ರೋ. ಸುಬ್ಬು ಕೃಷ್ಣನ್ ರವರನ್ನು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದದಲ್ಲಿ ಅನೇಕ ಶಾಲೆಯ ಶಿಕ್ಷಕರು, ಎಸ್.ಡಿ. ಎಂ.ಸಿ ಸದಸ್ಯರು ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸದಸ್ಯರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಲಯ ಸೇನಾನಿ ರೋ. ಮನೋರಮಾ ಭಟ್ ನಿರೂಪಿಸಿ, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವೂ ವಂದಿಸಿದರು. ಪ್ರಸ್ತುತ ಸಂದರ್ಭದಲ್ಲಿ ಕಂಪ್ಯೂಟರ್ ಶಿಕ್ಷಣ ಎಲ್ಲಾ ವಿದ್ಯಾರ್ಥಿಗಳಿಗೂ ಅತ್ಯವಶ್ಯಕವಾಗಿದೆ. ತಂತ್ರಜ್ಞಾನದಲ್ಲಿ ಪ್ರತಿನಿತ್ಯ ಹೊಸ ಹೊಸ ಬೆಳವಣಿಗೆಯನ್ನು ನಾವು ಕಾಣಬವುದು. ಈ ಎಲ್ಲಾ ಮಾಹಿತಿ ಮತ್ತು ಜ್ಞಾನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೈಗೆಟುಕದ ತುತ್ತಾಗಬಾರದು ಎಂಬ ಉದ್ದೇಶದಿಂದ ಈ ಕಂಪ್ಯೂಟರ್ ಗಳನ್ನು ನೀಡಲಾಗಿದೆ. ಈ ಎಲ್ಲಾ ಕಂಪ್ಯೂಟರ್ ಗಳು ವಿಶೇಷವಾಗಿ ವಿದ್ಯಾರ್ಥಿಗಳ ಕಲಿಕೆ ಮಾತ್ರ ಉಪಯೋಗವಾಗಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಪೂರನ್‌ ವರ್ಮ ತಿಳಿಸಿದರು. ಬೆಳ್ತಂಗಡಿ ರೋಟರಿ ಸಂಸ್ಥೆಯು ಈಗಾಗಲೇ ಸ್ಕಾಲರ್ಶಿಪ್ ವಿತರಣೆ, ಶಾಲೆಗಳ ನವೀಕರಣ, ಶಾಲಾ ಕೊಠಡಿಗಳ ನಿರ್ಮಾಣ, ನೂತನ ಶೌಚಾಲಯದ ನಿರ್ಮಾಣದಂತಹ ಅನೇಕ ಸೇವಾ ಕಾರ್ಯಗಳನ್ನು ತಾಲೂಕಿನ ಸರಕಾರಿ ಶಾಲೆಗಳಿಗೆ ಮಾಡುತ್ತಾ ಬಂದಿದೆ. ಈಗ ಬಹು ದಿನಗಳಿಂದ ಅವಶ್ಯಕತೆ ಇದ್ದ ಕಂಪ್ಯೂಟರ್ ವ್ಯವಸ್ಥೆಯನ್ನು ಶಾಲೆಗಳಿಗೆ ಕಲ್ಪಿಸಿ ಕೊಟ್ಟಿರುವುದು ವಿದ್ಯಾರ್ಥಿಗಳಿಗೆ ಹಾಗು ಶಿಕ್ಷಕರಿಗೆ ಅತ್ಯಂತ ಸಂತಸ ಮತ್ತು ಉಪಕಾರಿಯಾಗಿದೆ. ಇದರ ಲಾಭವನ್ನು ವಿದ್ಯಾರ್ಥಿಗಳೇ ಪಡೆಯಲಿದ್ದಾರೆ. ರೋಟರಿ ಸಂಸ್ಥೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇಲಾಖೆಯ ವತಿಯಿಂದ ಕೃತಜ್ಞತೆಯನ್ನು ತಿಳಿಸುತ್ತೇವೆ ಎಂದು ಬೆಳ್ತಂಗಡಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಾರಕೇಸರಿ ಅವರು ತಿಳಿಸಿದರು. ತಾಲೂಕಿನ ಕಂಪ್ಯೂಟರ್ ಸ್ವೀಕೃತ ಶಾಲೆಗಳು : ಸರ್ಕಾರಿ ಮಾದರಿ ಶಾಲೆ ಬೆಳ್ತಂಗಡಿ - 5ಕಂಪ್ಯೂಟರ್ ಸರ್ಕಾರಿ ಹಿ. ಪ್ರಾ. ಶಾಲೆ ಕೊಯ್ಯೂರು - 3 ಕಂಪ್ಯೂಟರ್ ಹಳೆ ಪೇಟೆ ಕಿ. ಪ್ರಾ. ಶಾಲೆ - 1 ಕಂಪ್ಯೂಟರ್ ಅಳದಂಗಡಿ ಹಿ. ಪ್ರಾ. ಶಾಲೆ - 2 ಕಂಪ್ಯೂಟರ್ ಕಿರಿಯಾಡಿ ಹಿ. ಪ್ರಾ. ಶಾಲೆ - 1 ಕಂಪ್ಯೂಟರ್ ಮಿತ್ತಬಾಗಿಲು ಹಿ.ಪ್ರಾ ಶಾಲೆ - 5 ಕಂಪ್ಯೂಟರ್ ಅರಸಿನಮಕ್ಕಿ ಹಿ. ಪ್ರಾ. ಶಾಲೆ - 1 ಕಂಪ್ಯೂಟರ್ ದಿಡುಪೆ ಹಿ. ಪ್ರಾ ಶಾಲೆ - 2 ಕಂಪ್ಯೂಟರ್ ಬಂಗಾಡಿ ಹಿ. ಪ್ರಾ. ಶಾಲೆ - 2 ಕಂಪ್ಯೂಟರ್ ಕೊಯ್ಯೂರು ಕಿ‌.ಪ್ರಾ. ಶಾಲೆ - 5 ಕಂಪ್ಯೂಟರ್ ನಿಟ್ಟಡೆ ಹಿ. ಪ್ರಾ.ಶಾಲೆ ವೇಣೂರು - 2 ಕಂಪ್ಯೂಟರ್ ಕೊಯ್ಯೂರು ಶಾಲೆ ದೇವಸ್ಥಾನ - 1 ಕಂಪ್ಯೂಟರ್

ಪದವಿ ಕಾಲೇಜುಗಳಲ್ಲಿ ಜಾನಪದ ಉತ್ಸವ

Article Image

ಪದವಿ ಕಾಲೇಜುಗಳಲ್ಲಿ ಜಾನಪದ ಉತ್ಸವ

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮಾರ್ಚ್‌ನೊಳಗೆ ಜಾನಪದ ಉತ್ಸವ ಆಚರಿಸುವಂತೆ ಕಾಲೇಜು ಶಿಕ್ಷಣ ನಿರ್ದೇಶಕರು ನಿರ್ದೇಶಿಸಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಅಡಗಿರುವ ಆಯಾ ಪ್ರಾದೇಶಿಕ ಸಾಂಪ್ರದಾಯಿಕ ಕಲೆ ಹಾಗೂ ಕೌಶಲ ಪ್ರದರ್ಶಿಸಲು ನಮ್ಮ ಸಂಸ್ಕೃತಿ – ನಮ್ಮ ಹೆಮ್ಮೆ ಶೀರ್ಷಿಕೆಯಡಿ ಉತ್ಸವ ಅಚರಿಸಬೇಕು. ಜನಪದ ಸಾಹಿತ್ಯ ಪರಿಸರ, ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ಇವುಗಳ ಕುರಿತು ಕಾರ್ಯಾಗಾರ, ಪಾರಂಪರಿಕ ಕರಕುಶಲ ವಸ್ತುಗಳ ತಯಾರಿಕೆ/ವಸ್ತು ಪ್ರದರ್ಶನ, ಜನಾಂಗೀಯ ಪಾಕ ಪದ್ಧತಿ ಇವುಗಳ ಪ್ರದರ್ಶನ ಹಾಗೂ ಸ್ಪರ್ಧೆ, ಸ್ಥಳೀಯ ಕಲಾವಿದರಿಂದ ದೇಸಿ ನೃತ್ಯ-ಸಂಗೀತ, ಆಟ-ಇವುಗಳ ಪ್ರದರ್ಶನ ಹಾಗೂ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳಲ್ಲದೆ ವಿದ್ಯಾರ್ಥಿಗಳಲ್ಲಿ ವಿಶೇಷ ಸೃಜನಾತ್ಮಕ ಕಲಾತ್ಮಕ ಕೌಶಲಗಳಿದ್ದಲ್ಲಿ ಅಂತವುಗಳನ್ನು ಗುರುತಿಸಿ ಪ್ರದರ್ಶಿಸಲು ವೇದಿಕೆ ಸಿದ್ಧಪಡಿಸಿ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಜಪಾನ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಕಾರ್ಯಕ್ರಮಕ್ಕೆ ಆಯ್ಕೆ

Article Image

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಜಪಾನ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಕಾರ್ಯಕ್ರಮಕ್ಕೆ ಆಯ್ಕೆ

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ರಾಹುಲ್ ಪಿ ಹೆಗ್ಡೆ, INSPIRE ಮಾನಕ್ ವಿಜ್ಞಾನ ಯೋಜನೆಯಡಿ ಪ್ರಸ್ತುತ ಪಡಿಸಿದ “Animal Vital Monitoring system”ಎಂಬ ಸಂಶೋಧನಾತ್ಮಕ ವಿಜ್ಞಾನ ಮಾದರಿ ಜಪಾನಿನ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆಯು ಆಯೋಜಿಸುವ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಸಕುರಾಗೆ ಆಯ್ಕೆಗೊಂಡಿದೆ. 15-6-2025 ರಿಂದ 21-06-2025ರ ವರೆಗೆ ಜಪಾನಿನಲ್ಲಿ ಜರಗುವ ಈ ವಿಜ್ಞಾನ ಕಾರ್ಯಕ್ರಮದಲ್ಲಿ ಭಾರತದಿಂದ ಆಯ್ಕೆಗೊಂಡಿರುವ 54ಮಂದಿ ವಿದ್ಯಾರ್ಥಿಗಳಲ್ಲಿ ರಾಹುಲ್ ಪಿ ಹೆಗ್ಡೆ ಕೂಡ ಓರ್ವನಾಗಿದ್ದಾನೆ. ಈ ವಿಜ್ಞಾನ ಮಾದರಿ ಪ್ರಾಣಿಗಳ ಆರೋಗ್ಯ ತಪಾಸಣಗೆ ಸಂಬಂಧಿಸಿದ್ದು, ಪ್ರಾಣಿಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ಇದು ಎಚ್ಚರಿಕೆ ಗಂಟೆಯೊಂದಿಗೆ ಮಾಹಿತಿಯನ್ನು ನೀಡುವ ವೈಜ್ಞಾನಿಕ ಅನ್ವೇಷಣೆಯಾಗಿದೆ.. ಎಕ್ಸಲೆಂಟ್ ATL ಲ್ಯಾಬ್ ಅಡಿಯಲ್ಲಿ INSPIRE ಯೋಜನೆಯಡಿ 2023ನೇ ಸಾಲಿನಲ್ಲಿ ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ರಾಹುಲ್ ಪಿ ಹೆಗ್ಡೆ ಸಿದ್ದಪಡಿಸದ್ದ ಈ ಮಾದರಿ ಈ ಬಾರಿ ರಾಷ್ಟçಮಟ್ಟಕ್ಕೆ ಆಯ್ಕೆಗೊಂಡು ಎಲ್ಲರ ಗಮನ ಸೆಳೆದಿತ್ತು. ಕೇಂದ್ರ ಸರ್ಕಾರದ “Make in India” ಅಭಿಯಾನದಡಿಯಲ್ಲಿ ಸಂಸ್ಥೆಯ ಅಧ್ಯಕ್ಷರ ಮತ್ತು ಕಾರ್ಯದರ್ಶಿಯವರ ಮಾರ್ಗದರ್ಶನದಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ಅತ್ಯಂತ ಆಸಕ್ತಿಯಲ್ಲಿ ಮಾಡುತ್ತಿರುವ ರಾಹುಲ್ ಪಿ ಹೆಗ್ಡೆ ಭವಿಷ್ಯದಲ್ಲಿ ತನ್ನದೇ ಆದ ಒಂದು ದೊಡ್ಡ ಕೊಡುಗೆಯನ್ನು ವಿಜ್ಞಾನ ಕ್ಷೇತ್ರಕ್ಕೆ ನೀಡುವ ಕನಸು ಹೊತ್ತಿದ್ದಾನೆ. ಭಾರತೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಆಯೋಜಿಸುವ INSPIRE ಕಾರ್ಯಕ್ರಮದಲ್ಲಿ ಪ್ರತಿವರ್ಷವೂ ಎಕ್ಸಲೆಂಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ರೂ.10,000 ಸ್ಕಾಲರ್‌ಶಿಪ್‌ನೊಂದಿಗೆ ಜಿಲ್ಲಾ ರಾಜ್ಯ-ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಳ್ಳುತ್ತಿದ್ದಾರೆ. ಆಯ್ಕೆಗೊಂಡ ವಿದ್ಯಾರ್ಥಿಯನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

ಆಳ್ವಾಸ್‌ನಲ್ಲಿ ಇನ್ಸ್ಫೀರಿಯಾ-2025 ರಾಷ್ಟ್ರೀಯ ವಿಚಾರ ಸಂಕಿರಣ

Article Image

ಆಳ್ವಾಸ್‌ನಲ್ಲಿ ಇನ್ಸ್ಫೀರಿಯಾ-2025 ರಾಷ್ಟ್ರೀಯ ವಿಚಾರ ಸಂಕಿರಣ

ಮೂಡುಬಿದಿರೆ: ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ವತಿಯಿಂದ `ಇನ್ಸ್ಪೀರಿಯಾ - 2025' ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು. ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಪಾನ್ ಮೂಲದ ಸಕ್ರಾ ವರ್ಲ್ಡ್ ಹಾಸ್ಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಯುಚಿ ನಗಾನೊ ಮುಖ್ಯ ಅತಿಥಿಯಾಗಿ ಮಾತನಾಡಿ, ಕೃತಕ ಬುದ್ಧಿಮತ್ತೆ ಹಾಗೂ ಇನ್ನಿತರ ತಂತ್ರಜ್ಞಾನಗಳ ಪ್ರಗತಿಯೊಂದಿಗೆ ಆರೋಗ್ಯ ನಿರ್ವಹಣಾ ಕ್ಷೇತ್ರವು ಬಹಳಷ್ಟು ಮುಂದುವರಿದಿದೆ. ವೈದ್ಯಕೀಯ ಕ್ಷೇತ್ರವು ಸೋಂಕುಗಳನ್ನು ತಡೆಗಟ್ಟಿ ರೋಗಿಯ ಚೇತರಿಕೆಗೆ ಗಮನ ನೀಡುವುದರೊಂದಿಗೆ ಆಸ್ಪತ್ರೆಗಳು ಮನೆಯ ವಾತಾವರಣವನ್ನು ಕಲ್ಪಿಸಿಕೊಡುವಂತಿರಬೇಕು. ಆಸ್ಪತ್ರೆ ನಿರ್ವಹಣೆಯ ಕುರಿತು ಸೂಕ್ಷ್ಮ-ದೃಷ್ಠಿ ಬೆಳೆಸಿಕೊಳ್ಳಲು ನಮ್ಮಲ್ಲಿರುವ ಜ್ಞಾನ, ಕನಸುಗಳು ಹಾಗೂ ಆಶಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಹೆಚ್ಚಿನ ಆಸ್ಪತ್ರೆಗಳನ್ನು ಕಾರ್ಪೋರೇಟ್ ಸಂಸ್ಥೆಗಳು ನಿರ್ವಹಿಸುವುದರಿಂದ ಜನಸಾಮಾನ್ಯರಿಗೆ ವ್ಯವಸ್ಥೆಗಳು ಬಳಸಿಕೊಳ್ಳಲು ಅನುಕೂಲಕರವಾಗಿಲ್ಲ. ಆಸ್ಪತ್ರೆಯ ನಿರ್ವಾಹಕರು ರೋಗಿಗಳ ಮೇಲೆ ಸಹಾನುಭೂತಿಯ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಹಸಿವು ಹೆಚ್ಚಾಗಬೇಕು ಎಂದರು. ಆಸ್ಪತ್ರೆ ನಿರ್ವಹಣೆಯಲ್ಲಿ ನೈತಿಕ ನಾಯಕತ್ವ ವಿಷಯದ ಕುರಿತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ವ್ಯವಸ್ಥಾಪಕ ರೆವರೆಂಡ್ ಫಾದರ್ ಅಜಿತ್ ಎಂ ಮಿನೇಜಸ್, ಆರೋಗ್ಯ ನಿರ್ವಹಣಾ ಕ್ಷೇತ್ರದಲ್ಲಿ ಆಗುತ್ತಿರುವ ಕ್ರಿಯಾತ್ಮಕ ಬದಲಾವಣೆಯ ಕುರಿತು ಎ.ಜೆ ಹಾಸ್ಪಿಟಲ್‌ನ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲಾ ಕೆ., ನಾಯಕತ್ವದಲ್ಲಿ ನಾವಿನ್ಯತೆಯ ಕುರಿತು ಯೇನಪೋಯಾ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌ನ ಡೀನ್ ಡಾ. ಸುನಿತಾ ಸಲ್ದಾನ, ಆಸ್ಪತ್ರೆ ನಿರ್ವಹಣೆ ಹಾಗೂ ಮಂಡಳಿಯ ನಾಯಕತ್ವದ ಕುರಿತು ಬೆಂಗಳೂರಿನ ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಸೆಫ್ ಪಸಂಗ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಉದ್ಘಾಟನಾ ಕಾರ‍್ಯಕ್ರಮದಲ್ಲಿ ಮಾಹೆಯ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ಮುಖ್ಯಸ್ಥೆ ಡಾ ಉಷಾರಾಣಿ, ಸಕ್ರಾ ವಲ್ಡ್ ಹಾಸ್ಪಿಟಲ್‌ನ ನಿರ್ದೇಶಕಿ ನೀತಾ ವೇಗಸ್ ಇದ್ದರು. ರಾಷ್ಟ್ರದ ವಿವಿಧ ಭಾಗಗಳಿಂದ 300ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ‍್ಯಕ್ರಮದಲ್ಲಿ ಪಾಲ್ಗೊಂಡರು. ಸಮಾರೋಪ ಕಾರ‍್ಯಕ್ರಮದಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್‌ನ ಸ್ತ್ರೀರೋಗ ತಜ್ಞೆ ಡಾ. ಹನಾ ಶೆಟ್ಟಿ, ಉದ್ಯಮಿ ರಾಹುಲ್ ಇದ್ದರು. ಪೋಸ್ಟರ್ ಪ್ರಸ್ತುತಿ ಸ್ಪರ್ಧೆಯ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಟೋಬಿ ಟಾಮ್ ಪ್ರಥಮ, ಅಪರ್ಣ ವಿಕೆ ದ್ವಿತೀಯ, ಸ್ನಾತಕ ವಿಭಾಗದಲ್ಲಿ ತುಳಸಿ ಪ್ರಥಮ, ಫಾತಿಮಾ ಸೈಮಾ ದ್ವಿತೀಯ ಸ್ಥಾನ ಪಡೆದರು. ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥ ಪ್ರೋ. ಆದರ್ಶ ಹೆಗ್ಡೆ ಅವರ ‘ಲೀಡ್ ಟು ಹೀಲ್’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಉಪನ್ಯಾಸಕಿ ನಿಧಿ ವಂದಿಸಿದರು, ವಿದ್ಯಾರ್ಥಿನಿ ವರ್ಷಿಣಿ ಕಾರ್ಯಕ್ರಮ ನಿರೂಪಿಸಿದರು.

ಮುಕ್ತ ವಿವಿ ವಿಜ್ಞಾನ ವಿಷಯದ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಆಳ್ವಾಸ್ ಆಯ್ಕೆ

Article Image

ಮುಕ್ತ ವಿವಿ ವಿಜ್ಞಾನ ವಿಷಯದ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಆಳ್ವಾಸ್ ಆಯ್ಕೆ

ವಿದ್ಯಾಗಿರಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶಾತಿ ಪಡೆದಿರುವ ಸ್ನಾತಕ ಮತ್ತು ಸ್ನಾತಕೋತ್ತರ ವಿಜ್ಞಾನ ವಿಷಯಗಳ ವಿದ್ಯಾರ್ಥಿಗಳಿಗೆ ಆಳ್ವಾಸ್ ಪದವಿ ಕಾಲೇಜಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರವರ್ತಿತ ‘ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ದಲ್ಲಿ ಈ ಶೈಕ್ಷಣಿಕ ಸಾಲಿನಿಂದ ಪ್ರವೇಶಾತಿ ಪಡೆಯುವ ಅಭ್ಯರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ವು ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ಕಲಬುರಗಿ, ದಾವಣಗೆರೆ, ಬೆಂಗಳೂರು ಹಾಗೂ ಮೈಸೂರು ಜಿಲ್ಲೆಯನ್ನು ಹೊರತು ಪಡಿಸಿದರೆ, ಕರಾವಳಿ ಕರ್ನಾಟಕದಲ್ಲಿ ಆಳ್ವಾಸ್ ಕಾಲೇಜು ಮಾತ್ರ ವಿಜ್ಞಾನ ವಿಷಯದ ಪ್ರಾಯೋಗಿಕ ತರಗತಿ ನಡೆಸಲು ಅವಕಾಶ ಪಡೆದಿರುವ ಕೇಂದ್ರವಾಗಿದೆ.

ಉಜಿರೆ ರುಡ್ ಸೆಟ್ ಸಂಸ್ಥೆ: ಸಮಾರೋಪ ಸಮಾರಂಭ

Article Image

ಉಜಿರೆ ರುಡ್ ಸೆಟ್ ಸಂಸ್ಥೆ: ಸಮಾರೋಪ ಸಮಾರಂಭ

ಉಜಿರೆ : ಕಲಿಕೆ ಚೆನ್ನಾಗಿದ್ದರೆ ಗಳಿಕೆಯೂ ಚೆನ್ನಾಗಿರುತ್ತದೆ. ಕಲಿಕೆಯ ಸಂದರ್ಭದಲ್ಲಿ ಹೆತ್ತವರ ಶ್ರಮ, ಗಳಿಕೆಯ ಸಂದರ್ಭ ನಿಮ್ಮ ಪರಿಶ್ರಮ ನಿಮ್ಮ ಜೀವನವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ. ಈ ರುಡ್‌ ಸೆಟ್‌ ಸಂಸ್ಥೆಯಲ್ಲಿ ಕಲಿತ ತರಬೇತಿಗಳು ನಿಮ್ಮ ಬದುಕಿಗೆ ದಾರಿ ದೀಪವಾಗಲಿ, ವೃತಿಯಲ್ಲಿ ಯಾವುದೇ ಕಾರಣಕ್ಕೂ ಅಡಗಿಸಿಕೊಳ್ಳಬೇಡಿ, ಹೆಚ್ಚು ತೊಡಗಿಸಿಕೊಳ್ಳಿ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಆನೇಕ ಯುವಕ-ಯುವತಿಯರು ಸ್ವಂತ ಉದ್ಯೋಗ ಮೂಲಕ ತನ್ನ ಬದುಕನ್ನು ಕಟ್ಟಿಕೊಳ್ಳಲು ಸಹಾಯಕವಾಗಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್‌ ಅಭಿಪ್ರಾಯಪಟ್ಟರು. ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದೆ ಟಿ.ವಿ. ಟೆಕ್ನಿಷಿಯನ್‌ ತರಬೇತಿ ಮತ್ತು 13 ದಿನಗಳ ಕಾಲ ನಡೆದೆ ಸಿ.ಸಿ. ಟಿವಿ ಕ್ಯಾಮರ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಮೌಲ್ಯ ಮತ್ತು ಕೌಶಲ್ಯವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿ ಸ್ವ ಉದ್ಯೋಗಕ್ಕೆ ಬೇಕಾದ ಸಾಲ ಸೌಲಭ್ಯಗಳಿಗೆ ಯೋಜನಾ ವರದಿಯನ್ನು ತಯಾರಿಸಿಕೊಂಡು ಬ್ಯಾಂಕಗಳನ್ನು ಸಂಪರ್ಕ ಮಾಡಿ ಎಂದು ತಿಳಿಸಿದರು. ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಅವರು ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟ ನೀಡಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ಸುಮಾರು 64 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು. ಕೀರ್ತನಾ ಮತ್ತು ಪ್ರತಿಷ್ಟಾ ಪ್ರಾರ್ಥನೆ ಮಾಡಿದರು, ಮಹ್ಮಮದ್ ಫಯಾಜ್‌, ಅಶೋಕ, ಆನಂದ‌, ಕುಮಾರಿ ನಿಸರ್ಗ ತರಬೇತಿಯ ಅನುಭವ ಹಂಚಿಕೊಂಡರು.

ಎಸ್.ಡಿ.ಎಂ ಗಣರಾಜೋತ್ಸವ ಆಚರಣೆ: ಸಾಧನೆಯ ಮೆಲುಕಿನೊಂದಿಗೆ ಅಭ್ಯುದಯದ ಅಭಿವ್ಯಕ್ತಿ

Article Image

ಎಸ್.ಡಿ.ಎಂ ಗಣರಾಜೋತ್ಸವ ಆಚರಣೆ: ಸಾಧನೆಯ ಮೆಲುಕಿನೊಂದಿಗೆ ಅಭ್ಯುದಯದ ಅಭಿವ್ಯಕ್ತಿ

ಉಜಿರೆ, ಜ.26: ಭಾರತದ ಸಂವೈಧಾನಿಕ ಶ್ರೇಷ್ಠತೆ, ವೈವಿಧ್ಯಮಯ ಸಾಂಸ್ಕೃತಿಕ ವೈವಿಧ್ಯತೆ, ವೈಜ್ಞಾನಿಕ ತಾಂತ್ರಿಕ ಸಾಧನೆಯ ಮೈಲಿಗಲ್ಲುಗಳೊಂದಿಗಿನ ವಿನೂತನ ಅಸ್ಮಿತೆ ಮತ್ತು ವಿವಿಧ ಕ್ಷೇತ್ರಗಳ ಮಹತ್ವದ ಕೊಡುಗೆಗಳ ವಿಶೇಷತೆಯನ್ನು ಅನಾವರಣಗೊಳಿಸುವ ಕಲಾತ್ಮಕ ಅಭಿವ್ಯಕ್ತಿ ಮತ್ತು ಸ್ತಬ್ಧಚಿತ್ರ ಪ್ರದರ್ಶನದೊಂದಿಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು 76ನೇ ಗಣರಾಜ್ಯೋತ್ಸವದ ಸಂಭ್ರಮವನ್ನು ವಿನೂತನಗೊಳಿಸಿದರು. ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿಯ ಸಮ್ಮುಖದಲ್ಲಿ 76ನೇ ವರ್ಷದ ಗಣರಾಜ್ಯೋತ್ಸವದ ಪ್ರಯುಕ್ತ ನಿವೃತ್ತ ಕರ್ನಲ್ ನಿತಿನ್ ಭಿಡೆ ಅವರು ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಹಿಳೆಯರು ವಿವಿಧ ರಂಗಗಳಲ್ಲಿ ಸಾಧಿಸಿದ ವಿಶೇಷ ಹೆಜ್ಜೆಗಳು, ಉಜಿರೆಯ ರತ್ನಮಾನಸ ಜೀವನ ಶಿಕ್ಷಣ ವಿಭಾಗ, ಹಾಲಕ್ಕಿ ನುಡಿಯ ಮೌಲಿಕತೆ, ಸ್ವಾತಂತ್ರ್ಯ, ಭ್ರಾತೃತ್ವ, ಸಮಾನತೆ, ನ್ಯಾಯ ಪರಿಕಲ್ಪನೆಗಳನ್ನು ಕಾಯಕಪ್ರಜ್ಞೆಯೊಂದಿಗೆ ಸಮೀಕರಿಸಿದ ಕಲಾತ್ಮಕತೆ, ಕರಾವಳಿ ಸಂಸ್ಕೃತಿಯ ವಿಶಿಷ್ಠ ಗುಣಲಕ್ಷಣಗಳು, ವೀರಗಾಸೆ ನೃತ್ಯ, ಕರ್ನಾಟಕ ಜನಪದ ಸಂಸ್ಕೃತಿ, ವಿಜ್ಞಾನ-ತಂತ್ರಜ್ಞಾನದೊಂದಿಗಿನ ಅಭ್ಯುದಯದ ಮಹತ್ವದ ಹಂತಗಳು ಮತ್ತು ಪ್ರಕೃತಿ ಚಿಕಿತ್ಸೆಯ ಪ್ರಧಾನ ಆಶಯವನ್ನು ಟ್ಯಾಬ್ಲೊ ಪ್ರದರ್ಶನವು ಧ್ವನಿಸಿತು. ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಮೊದಲ ಬಹುಮಾನಕ್ಕೆ ಪಾತ್ರರಾದರು. ಎಸ್.ಡಿ.ಎಂ. ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಪಡೆದರು. ಖ್ಯಾತ ಗಾಯಕ ಸಿ.ಅಶ್ವತ್ಥ್ ಗಾಯನದ ‘ಸ್ತ್ರೀ ಎಂದರೆ ಅಷ್ಟೇ ಸಾಕೇ’ ಹಾಡಿನ ಹಿನ್ನೆಲೆಯೊಂದಿಗೆ ಮಹಿಳೆಯರ ಯಶೋಗಾಥೆಯನ್ನು ಕಾಣಿಸಿದ ಪ್ರದರ್ಶನ ವಿಶೇಷವಾಗಿತ್ತು. ರತ್ನಮಾನಸ ಜೀವನ ಶಿಕ್ಷಣಕ್ಕಿರುವ ಶ್ರಮಸಂಸ್ಕೃತಿ ಮತ್ತು ವಿದ್ಯಾ ಸಂಸ್ಕಾರದ ಆಯಾಮದ ಅಭಿವ್ಯಕ್ತಿಯು ಕಂಗೊಳಿಸಿತು. ಇಸ್ರೋ ಸಂಸ್ಥೆಯ ಉಪಗ್ರಹ ಉಡಾವಣೆಯ ತಾಂತ್ರಿಕ ನೈಪುಣ್ಯದ ಪ್ರಾತ್ಯಕ್ಷಿಕೆಯೂ ಮನಸೆಳೆಯಿತು. ಸೈನಿಕರ ತ್ಯಾಗ ಮತ್ತು ಬಲಿದಾನದ ಪ್ರಾಮುಖ್ಯತೆಯನ್ನು ಕಾಣಿಸುತ್ತಾ ಭಾರತಮಾತೆಯ ಮಡಿಲಲ್ಲಿ ಪ್ರಜೆಗಳೆಲ್ಲರೂ ಸೌಹಾರ್ದದಿಂದ ಬದುಕುವ ಸೌಂದರ್ಯವನ್ನು ಕಾಣಿಸುವ ನೃತ್ಯಪ್ರದರ್ಶನ ದೇಶಪ್ರೇಮದ ಸಂದೇಶ ಸಾರಿತು. ಉಜಿರೆಯ ಎಸ್.ಡಿ.ಎಂ. ಪದವಿ, ಪದವಿಪೂರ್ವ ಕಾಲೇಜು, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ, ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ, ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜು, ಎಸ್.ಡಿ.ಎಂ. ಶಾಲೆ ಮತ್ತು ಪ್ರೌಢಶಾಲೆಗಳು ಸೇರಿದಂತೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಸ್.ಡಿ.ಎಂ. ಶಾಲಾ ಕಾಲೇಜುಗಳ ಎನ್.ಸಿ.ಸಿ.ಯ ಆರ್ಮಿ ಮತ್ತು ನೌಕಾದಳ ಕೆಡೆಟ್‌ಗಳ ಪಥಸಂಚಲನ ಆಕರ್ಷಕವಾಗಿತ್ತು. ರೋವರ್ಸ್ ಮತ್ತು ರೇಂಜರ್ಸ್ನ ಬ್ಯಾಂಡ್‌ನ ತಂಡವು ಸಾಥ್ ನೀಡಿತು. ಎನ್.ಎಸ್.ಎಸ್. ಸ್ವಯಂ ಸೇವಕರು ಮತ್ತು ಎಸ್.ಡಿ.ಎಂ. ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೂಡುಬಿದ್ರೆ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭ

Article Image

ಮೂಡುಬಿದ್ರೆ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭ

ಭಾರತ ಒಂದು ಪ್ರಜಾಸತ್ತಾತ್ಮಕ ದೇಶವಾಗಿ ವಿಚಾರ ಅಭಿವ್ಯಕ್ತಿ ನಂಬಿಕೆ ಭಕ್ತಿ ಮತ್ತು ಆರಾಧನೆಗಳಿಗೆ ಮಹತ್ವ ನೀಡುತ್ತಾ ಸಮಾನ ಸ್ಥಾನಮಾನ ಮತ್ತು ಅವಕಾಶಗಳನ್ನು ಪ್ರತಿಯೋರ್ವರಿಗೂ ಸಂವಿಧಾನದ ಮೂಲಕ ನೀಡುತ್ತಾ ಬಂದಿದೆ. ತನ್ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಕೆಲವು ಮೂಲಭೂತ ಹಕ್ಕುಗಳನ್ನು ಆನಂದಿಸಲು ಅನುಮತಿಸಲಾಗಿದೆ. ಭಾರತೀಯರಾದ ನಾವು ಭಾರತವನ್ನು ರಾಷ್ಟ್ರವಾಗಿ ಮಾರ್ಗದರ್ಶಿಸುವ ಸಂವಿಧಾನದ ಮೂಲ ತತ್ವಗಳನ್ನು ಹಕ್ಕುಗಳನ್ನು ಗೌರವಿಸುವುದರೊಂದಿಗೆ ದೇಶ ಸೇವೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಸರ್ವದಾ ಸಿದ್ಧರಾಗಿರಬೇಕು ನಮ್ಮ ವಿದ್ಯಾಭ್ಯಾಸದ ಚರಮ ಹಾಗೂ ಪರಮ ಲಕ್ಷ್ಯ ದೇಶಸೇವೆಯೇ ಆಗಿರಬೇಕು. ವ್ಯಕ್ತಿಗಿಂತ ರಾಷ್ಟ್ರ ಮುಖ್ಯ ಎಂಬ ಅನುಸಂಧಾನದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದು ಬೆಂಗಳೂರು ಡಿ.ಜೆ.ಸಿ.ಎನ್ ಜತೆ ನಿರ್ದೇಶಕರಾದ ಜಗದೀಶ್ ಬಲ್ಲಾಳ್ ತಿಳಿಸಿದರು. ಅವರು ಮೂಡುಬಿದ್ರೆ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು ಬಳಿಕ ಮಾತನಾಡಿದ ಅವರು ಬಲಿಷ್ಠ ರಾಷ್ಟ್ರಕ್ಕಾಗಿ ಪ್ರತಿಯೋರ್ವ ವಿದ್ಯಾರ್ಥಿಯು ದೈಹಿಕ , ಬೌದ್ಧಿಕ ಹಾಗೂ ಸಾಂಸ್ಕ್ರತಿಕವಾಗಿ ಬಲಿಷ್ಠವಾಗಿ ತೊಡಗಿಸಿಕೊಳ್ಳಬೇಕು ಅಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ತಾಳ್ಮೆ ಮತ್ತು ಬ್ರಾತೃತ್ವದಿಂದ ಒಟ್ಟಿಗೆ ವಾಸಿಸುವ ವೈವಿಧ್ಯತೆಯಲ್ಲಿ ಏಕತೆ ಸಾಧಿಸಿದ ಭಾರತೀಯರಿಗೆ ಈ ದಿನ ಅತ್ಯಂತ ಮಹತ್ವದ ದಿನ. ಸಂವಿಧಾನದ ಮೌಲ್ಯಗಳನ್ನು ಗೌರವಿಸುವುದರೊಂದಿಗೆ ರಾಷ್ಟ್ರಭಕ್ತರಾಗೋಣ ಎಂದರು. ಬಳಿಕ ಸಂಸ್ಥೆಯ ಎನ್‌ಸಿಸಿ, ನೇವಿ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು ಉಪನ್ಯಾಸಕಿ ಪ್ರಿಯಾಂಕ ನಿರೂಪಿಸಿ ವಂದಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿ 2024-25

Article Image

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿ 2024-25

ವಿದ್ಯಾಗಿರಿ: ಪಠ್ಯದ ಜೊತೆಗಿನ ಪಠ್ಯೇತರ ಚಟುವಟಿಕೆಗಳು ಸಮಗ್ರ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬಲ್ಲದು ಎಂದು ದಕ್ಷಿಣ ಕನ್ನಡ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಆಯುಕ್ತ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ನುಡಿದರು. ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಬಾಗಿತ್ವದಲ್ಲಿ ಕೃಷಿ ಸಿರಿ ವೇದಿಕೆಯಲ್ಲಿ ಗುರುವಾರ ‘ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿ’ ಕಾರ್ಯಕ್ರಮದ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ, ರೋವರ್ಸ್ ಮತ್ತು ರೇಂಜರ್ಸ್ ಸಮಾಗಮವನ್ನು ಉದ್ಘಾಟಿಸಿ ಮಾತನಾಡಿದರು. ಬಾಲ್ಯದ ಕಲಿಕೆ ಉಜ್ವಲ ಭವಿಷ್ಯವನ್ನು ರೂಪಿಸುತ್ತದೆ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದಲ್ಲಿ ವಿದ್ಯೆ ಮತ್ತು ಬುದ್ಧಿಯ ಜೊತೆಗೆ ಪಠ್ಯೇತರ ವಿಚಾರಗಳಲ್ಲಿ ತೊಡಗಿಸಿಕೊಂಡಾಗ ಸುಂದರ ಮನಸನ್ನು ಕಟ್ಟಿಕೊಳ್ಳಲು ಸಾಧ್ಯ. ಅವಕಾಶಗಳ ಸದುಪಯೋಗ ಹಾಗೂ ಸಂಸ್ಕಾರದ ಗುಣವನ್ನು ಬೆಳೆಸಿಕೊಳ್ಳಿ. ದೇಶಪ್ರೇಮ, ರಾಷ್ಟ್ರ ಪ್ರೇಮದೊಂದಿಗೆ ಬದುಕೋಣ, ಆದರೆ ಅನ್ಯ ದೇಶದ ನಡುವೆ ಸಂಘರ್ಷ ಬೇಡ ಎಂದರು. ದೇಶಪ್ರೇಮದ ಜೊತೆಗೆ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಿ. ಮನುಷ್ಯ ಬದುಕಲು ನೀರು,ಮಣ್ಣು,ಗಾಳಿ ಅತಿ ಮುಖ್ಯವಾದ ಸಂಪತ್ತು. ಇವುಗಳ ಸಂರಕ್ಷಣೆಯ ಜೊತೆಗೆ ಪ್ರಾಣಿ ಪಕ್ಷಿಗಳ ಬಗ್ಗೆ ಕನಿಕರ ಭಾವ ಹೊಂದಿ ಎಂದರು. ಶಿಸ್ತು, ಸಮಯಪ್ರಜ್ಞೆ, ಸೌಂದರ್ಯ ಪ್ರಜ್ಞೆ, ಸಹಬಾಳ್ವೆ, ಪರೋಪಕಾರ, ಮಾನವೀಯತೆ, ಸೇವಾ ಮನೋಭಾವ, ಸೌಹಾರ್ದತೆ, ಹೋರಾಟ ಮನೋಭಾವ, ವಿನಯತೆ, ಗುರುಹಿರಿಯರಿಗೆ ಗೌರವ ಇವುಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡಾಗ ಸುಂದರ ವ್ಯಕ್ತಿತ್ವ ಸಾಧ್ಯ. ಸಮಯದ ಮಹತ್ವ ಅರಿತವನು ಜಗತ್ತನ್ನೆ ಗೆಲ್ಲಬಲ್ಲ. ದೇಶದ ಸಂಪತ್ತನ್ನು ಕಾಪಾಡುವ ಮನಸ್ಸನ್ನು ವಿದ್ಯಾರ್ಥಿಗಳು ಏಳವೆಯಲ್ಲಿಯೆ ಬೆಳೆಸಿಕೊಳ್ಳಬೇಕು ಎಂದರು. ಇಂತಹ ಹತ್ತು ಹಲವು ಸದ್ಗುಣಗಳನ್ನು ಸ್ಕೌಟ್ಸ್-ಗೈಡ್ಸ್ ಕ್ಯಾಂಪೋರಿ ಮೂಲಕ ಪಡೆಯಲು ಸಾಧ್ಯ ಎಂದರು. ಜಿಲ್ಲಾ ಸ್ಕೌಟ್ ಆಯುಕ್ತ ಮಹಮ್ಮದ್ ತುಂಬೆ, ಜಿಲ್ಲಾ ಗೈಡ್ ಆಯುಕ್ತೆ ವಿಮಲಾ ರಂಗಯ್ಯ, ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್, ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್, ಜಿಲ್ಲಾ ಸಂಘಟನಾ ಆಯುಕ್ತೆ ಸುನೀತಾ, ಜಿಲ್ಲಾ ತರಬೇತಿ ಆಯುಕ್ತ ಶಾಂತಾರಾಮ ಪ್ರಭು, ಶಿಬಿರ ನಿರ್ದೇಶಕ ನಾರಾಯಣ್ ನಾಯ್ಕ, ಗೈಡ್ ವಿಭಾಗ ನಾಯಕಿ ತ್ರಿಶಲಾ, ರೋವರ್ ಮತ್ತು ರೇಂಜರ್ ವಿಭಾಗ ನಾಯಕಿ ಡಾ. ಅಪರ್ಣಾ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಭಾರತಿ ನಾಯಕ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಭರತ್ ರಾಜ್ ಕೆ ಇದ್ದರು. ಜಿಲ್ಲೆಯ 13 ಸ್ಥಳೀಯ ಸಂಸ್ಥೆಗಳಿAದ ಸ್ಕೌಟ್-450, ಗೈಡ್-331, ರೋವರ್ಸ್-12, ರೇಂಜರ್ಸ್-33, ಸ್ಕೌಟ್ ಮಾಸ್ಟರ್-33, ಗೈಡ್ ಕ್ಯಾಪ್ಟನ್-25, ರೇಂಜರ್ ಲೀಡರ್-2, ಸ್ವಯಂಸೇವಕರಾಗಿ ರೋವರ್ಸ್-27, ರೇಂಜರ್ಸ್-44, ಸಿಬ್ಬಂದಿ ವರ್ಗದವರು-35 ಸೇರಿದಂತೆ 992 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿ ನಿರೂಪಿಸಿದರು.ಜಿಲ್ಲಾ ಸಂಘಟನಾ ಆಯುಕ್ತರು ವಸಂತ್ ದೇವಾಡಿಗ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ವಂದಿಸಿದರು. ಉದ್ಘಾಟನಾ ಸಮಾರಂಭದ ನಂತರ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಎಸ್.ಡಿ.ಎಂ. ಕಾಲೇಜಿನಲ್ಲಿ ‘ಪ್ರಮುಕ 2025’ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಉತ್ಸವ ಮತ್ತು ವಸ್ತು ಪ್ರದರ್ಶನ

Article Image

ಎಸ್.ಡಿ.ಎಂ. ಕಾಲೇಜಿನಲ್ಲಿ ‘ಪ್ರಮುಕ 2025’ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಉತ್ಸವ ಮತ್ತು ವಸ್ತು ಪ್ರದರ್ಶನ

ಉಜಿರೆ, ಜ. 6: ಸ್ಕೌಟ್ಸ್ ಗೈಡ್ಸ್ ನಂತಹ ಪಠ್ಯೇತರ ಚಟುವಟಿಕೆಗಳನ್ನು ಶಿಕ್ಷಣದಲ್ಲಿ ಅತ್ಯಗತ್ಯ ಎಂದು ಪರಿಗಣಿಸಬೇಕು ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಸದಸ್ಯರಾದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ರೋವರ್ಸ್ ಆ್ಯಂಡ್ ರೇಂಜರ್ಸ್ ಘಟಕ (ಸ್ಕೌಟ್ಸ್ ಗೈಡ್ಸ್ ಹಿರಿಯರ ವಿಭಾಗ) ಇಂದು (ಜ. 6) ಆಯೋಜಿಸಿದ ಒಂದು ದಿನದ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಉತ್ಸವ ಮತ್ತು ವಸ್ತು ಪ್ರದರ್ಶನ ‘ಪ್ರಮುಕ 2025’ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ‘ಪರೋಪಕಾರಾರ್ಥಂ ಇದಮ್ ಶರೀರಂ’ ಎಂಬ ಸಂಸ್ಕೃತ ಸೂಕ್ತಿಯಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದೆ. ಪಠ್ಯದ ಜತೆಗೆ ಇಂತಹ ಪಠ್ಯೇತರ ಚಟುವಟಿಕೆಗಳು ಶಿಕ್ಷಣದಲ್ಲಿ ಅಗತ್ಯ ಎಂದು ಅವರು ಹೇಳಿದರು. “ದೇಶದ ಭವಿಷ್ಯವು ಯುವಪೀಳಿಗೆಯ ಮೇಲೆ ಅವಲಂಬಿತವಾಗಿದ್ದು, ಸ್ಕೌಟ್ಸ್ ಗೈಡ್ಸ್ ನಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪೂರಕವಾಗಿವೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯು ಈ ದೆಸೆಯಲ್ಲಿ ಸಂಪೂರ್ಣ ಬೆಂಬಲ ನೀಡುತ್ತದೆ” ಎಂದರು. “ಜೀವನದಲ್ಲಿ ಸವಾಲುಗಳು ಎದುರಾದಾಗ ಮೌಲ್ಯಗಳನ್ನು ಕಳೆದುಕೊಳ್ಳಬೇಡಿ. ಮೌಲ್ಯಗಳು ನಮ್ಮ ಗೌರವ ಹೆಚ್ಚಿಸುತ್ತವೆ. ಕಷ್ಟ ಎದುರಿಸುವ ಧೈರ್ಯ, ಪ್ರಕೃತಿಯೊಂದಿಗೆ ಬೆರೆತು ಸಹಬಾಳ್ವೆ ನಡೆಸಲು ಪ್ರೇರಣೆಯನ್ನು ಸ್ಕೌಟ್ಸ್ ಗೈಡ್ಸ್ ನೀಡಲಿ” ಎಂದರು. ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹಾಗೂ ರಾಜ್ಯ ಅಲ್ಪಸಂಖ್ಯಾತರ ಇಲಾಖೆಯ ವೈಸ್ ಚೇರ್ಮನ್ ಅಶ್ವಿತ್ ಜೈನ್ ಮಾತನಾಡಿದರು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಶಕ್ತಿ, ಅಸಾಮಾನ್ಯ ಸಾಮರ್ಥ್ಯ ಯುವಕರಲ್ಲಿದೆ ಎಂದು ಅವರು ಹೇಳಿದರು. “ರೋವರ್ಸ್ ಮತ್ತು ರೇಂಜರ್ ವಿದ್ಯಾರ್ಥಿಗಳು ಕೇವಲ ತಂಡದ ಪ್ರತಿನಿಧಿಗಳಲ್ಲ ಬದಲಾಗಿ ತಂಡದ ನಾಯಕರು. ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಹೊಂದಿರುವ ಹಾಗೂ ಇನ್ನೊಬ್ಬರಿಗೆ ಮಾದರಿಯಾಗುವಂತಹ ವ್ಯಕ್ತಿಗಳು. ಬದಲಾವಣೆಯ ಹರಿಕಾರರು. ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ನೀವು ಇತರರಿಗೆ ಮಾದರಿಯಾಗಿದ್ದೀರಿ” ಎಂದರು. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ದ. ಕ. ಜಿಲ್ಲಾ ಆಯುಕ್ತ (ಸ್ಕೌಟ್ಸ್) ಬಿ. ಎಂ. ತುಂಬೆ ಮಾತನಾಡಿದರು. “ಬಾಲ್ಯವೆಂಬುವುದು ಬಹಳ ಸುಂದರ. ಅದನ್ನು ಸಿಹಿಯಾಗಿಸಿ ಯೌವನವನ್ನು ಆಹ್ವಾನಿಸಿ. ಯೌವನದಲ್ಲಿ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ. ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಯಭಾರಿಗಳಾಗಿ” ಎಂದರು. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ದ.ಕ. ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ಕೆ.ಎಸ್. ಮಾತನಾಡಿದರು. ವಿಶ್ವಮಟ್ಟದ ಸಂಸ್ಥೆಯಾಗಿರುವ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದೆ. ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿಸಲು ಸಹಕರಿಸುತ್ತದೆ ಎಂದರು. ಕಾರ್ಯಕ್ರಮಕ್ಕಾಗಿ ಕಾಲೇಜನ್ನು ಅಭಿನಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ಮಾನವಕುಲದ ಸೇವೆಯೇ ಜೀವನದ ಅತ್ಯುತ್ತಮ ಸೇವೆ. ನಿಜವಾದ ರಾಷ್ಟ್ರ ನಿರ್ಮಾಣವೆಂದರೆ ಮನಸ್ಸುಗಳನ್ನು ಕಟ್ಟುವಂತದ್ದು. ಮನುಷ್ಯರು ಯಂತ್ರಗಳಂತಾಗಿ ಸಂವೇದನೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸ್ಕೌಟ್ಸ್ ಗೈಡ್ಸ್ ನಂತಹ ಸಂಸ್ಥೆಗಳು ಅರ್ಥ ಕಂಡುಕೊಳ್ಳುತ್ತವೆ. ಸ್ಕೌಟ್ಸ್ ಗೈಡ್ಸ್ ಯುವಜನತೆಯಲ್ಲಿ ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಳಿಸುತ್ತದೆ, ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ ಎಂದರು. ಕಾರ್ಯಕ್ರಮ ಸಂಯೋಜಕಿ, ರೇಂಜರ್ ಲೀಡರ್ ಗಾನವಿ ಡಿ. ಪ್ರಾಸ್ತಾವಿಕವಾಗಿ ಮಾತನಾಡಿ, ಇಂಡೋನೇಷಿಯನ್ ಭಾಷೆಯಲ್ಲಿ ‘ಪ್ರಮುಕ’ ಎಂದರೆ ಕೆಲಸವನ್ನು ಪ್ರೀತಿಸುವ ಯುವ ಜನರು ಅಥವಾ ಕೆಲಸಕ್ಕೆ ಸಿದ್ಧರಾಗಿರುವ ಯುವ ನಾಗರಿಕರು ಎಂದರ್ಥ. ಈ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ವಿವಿಧ ಸ್ಪರ್ಧೆಗಳ ಟ್ರೋಫಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು. ವೇದಿಕೆಯಲ್ಲಿ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಕಾಲೇಜಿನ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿ ನಾಯಕರಾದ ಹರ್ಷಿಣಿ ಮತ್ತು ದಿಲೀಪ್ ಉಪಸ್ಥಿತರಿದ್ದರು. ರೇಂಜರ್ ನಿತ್ಯಾ ಮತ್ತು ತಂಡದವರು ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕ, ರೋವರ್ ಸ್ಕೌಟ್ ಲೀಡರ್ ಪ್ರಸಾದ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿಯರಾದ ಮಾನಸಾ ಅಗ್ನಿಹೋತ್ರಿ, ಭೂಮಿಕಾ ಕೆ.ಎಲ್. ಜೈನ್ ಮತ್ತು ಮೋಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಕಾಲೇಜುಗಳ ರೋವರ್ಸ್ ರೇಂಜರ್ಸ್, ರೋವರ್ ಸ್ಕೌಟ್ ಲೀಡರ್ಸ್, ರೇಂಜರ್ ಲೀಡರ್ಸ್, ಸ್ಥಳೀಯ ಎಸ್.ಡಿ.ಎಂ. ಶಾಲೆಗಳ ಸ್ಕೌಟ್ಸ್ ಗೈಡ್ಸ್, ಕಬ್ ಬುಲ್ ಬುಲ್, ಬನ್ನೀಸ್, ಸ್ಕೌಟ್ ಮಾಸ್ಟರ್ಸ್, ಗೈಡ್ ಕ್ಯಾಪ್ಟನ್ಸ್ ಪಾಲ್ಗೊಂಡಿದ್ದರು. ಬೆಳಗ್ಗೆ ಕಾಲೇಜು ಒಳಾಂಗಣದಲ್ಲಿ ಸ್ಕೌಟ್ಸ್ ಧ್ವಜಾರೋಹಣ ಹಾಗೂ ಪ್ರಾರ್ಥನೆ ನೆರವೇರಿತು. ಸ್ಕೌಟ್ಸ್ ಗೈಡ್ಸ್ ಶಿಬಿರಗಳಲ್ಲಿರುವ ಸಾಹಸಮಯ ಆಟಗಳ ಮಾದರಿಗಳು, ಟೆಂಟ್, ಮರದ ಮೇಲಿನ ಅಟ್ಟಳಿಗೆ, ಬಿದಿರು ಮತ್ತು ಹಗ್ಗಗಳನ್ನು ಬಳಸಿ ತಯಾರಿಸಿದ ಏಣಿ ಸೇರಿದಂತೆ ಸ್ಕೌಟಿಂಗ್ ಸಂಬಂಧಿತ ವಿವಿಧ ವಸ್ತು, ಮಾದರಿಗಳನ್ನು ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

ಪ್ರಮುಖ-2025: ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಮತ್ತು ಅಂತರ ಕಾಲೇಜು ಉತ್ಸವ

Article Image

ಪ್ರಮುಖ-2025: ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಮತ್ತು ಅಂತರ ಕಾಲೇಜು ಉತ್ಸವ

ಉಜಿರೆ: ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ವಿದ್ಯಾರ್ಥಿಗಳು ಸೇವೆ ಹಾಗೂ ನಾಯಕತ್ವ ಗುಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಹೇಳಿದರು. ಅವರು ಸೋಮವಾರ ಉಜಿರೆಯಲ್ಲಿ ಇಂದ್ರಪ್ರಸ್ಥ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಮತ್ತು ಅಂತರ ಕಾಲೇಜು ಉತ್ಸವವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಬಾಲ್ಯದ ಸವಿನೆನಪುಗಳು ಜೀವನವಿಡೀ ನೆನಪಿರುತ್ತವೆ. ವ್ಯಕ್ತಿತ್ವವಿಕಸನವೇ ಶಿಕ್ಷಣದ ಗುರಿಯಾಗಿದ್ದು ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ಸಂಸ್ಕಾರದೊಂದಿಗೆ ವಿದ್ಯಾರ್ಥಿಗಳು ಸಭ್ಯ, ಸುಸಂಸ್ಕೃತ ನಾಗರಿಕರಾಗಲು ಪ್ರೇರಣೆ ನೀಡುತ್ತದೆ ಎಂದರು. ಕೆ.ಪಿ.ಸಿ.ಸಿ. ಕಾರ್ಯದರ್ಶಿ ಅಶ್ವಿತ್‌ಜೈನ್, ಮಹ್ಮದ್‌ತುಂಬೆ, ಮತ್ತು ಪ್ರಸಾದ್‌ಕುಮಾರ್ ಶುಭಾಶಂಸನೆ ಮಾಡಿದರು. ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ ಇಂತಹ ಉತ್ಸವಗಳು ಮಾನವೀಯ ಮೌಲ್ಯಗಳ ಉದ್ದೀಪನಕ್ಕೆ ಪ್ರೇರಕವಾಗಿವೆ ಎಂದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಉಪಸ್ಥಿತರಿದ್ದರು. ರೇಂಜರ್ ಲೀಡರ್ ಗಾನವಿ ಡಿ., ಸ್ವಾಗತಿಸಿದರು. ರೋವರ್ ಲೀಡರ್ ಪ್ರಸಾದ್ ಕುಮಾರ್ ಧನ್ಯವಾದವಿತ್ತರು. ಭೂಮಿಕಾ, ಕೆ.ಎಲ್. ಜೈನ್ ಮತ್ತು ಮಾನಸ ಅಗ್ನಿಹೋತ್ರಿ ಕಾರ್ಯಕ್ರಮ ನಿರ್ವಹಿಸಿದರು.

ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಬಹುಶಿಸ್ತೀಯ ಅಂತಾರಾಷ್ಟ್ರೀಯ ಸಮ್ಮೇಳನ

Article Image

ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಬಹುಶಿಸ್ತೀಯ ಅಂತಾರಾಷ್ಟ್ರೀಯ ಸಮ್ಮೇಳನ

ಉಜಿರೆ: “ಪ್ರಚಲಿತ ಆರ್ಥಿಕ ವಿದ್ಯಮಾನದಲ್ಲಿ ಗ್ರಾಮೀಣ ಉದ್ಯಮಶೀಲತೆ” ಎಂಬ ವಿಷಯದ ಬಗ್ಯೆ ಉಜಿರೆಯಲ್ಲಿರುವ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ ಆಶ್ರಯದಲ್ಲಿ 2025ರ ಜನವರಿ 17 ಮತ್ತು 18ರಂದು ಬಹುಶಿಸ್ತೀಯ ಅಂತಾಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಬಹುಶಿಸ್ತೀಯ ಅಂತಾರಾಷ್ಟ್ರೀಯ ಸಮ್ಮೇಳನ ಸಮ್ಮೇಳನ ಆಯೋಜಿಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮತ್ತು ಸಮ್ಮೇಳನದ ಸಂಘಟನಾಕಾರ್ಯದರ್ಶಿ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಡಾ. ಮಹೇಶ್‌ಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಪ್ರಾರಂಭಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ ಹಾಗೂ “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ಪ್ರಗತಿ-ಸಾಧನೆಯ ಯಶೋಗಾಥೆಯ ಹಿನ್ನೆಲೆಯಲ್ಲಿ ಬಹುಶಿಸ್ತೀಯ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳು ಗ್ರಾಮೀಣ ಉದ್ಯಮಶೀಲತಾಭಿವೃದ್ಧಿಗಾಗಿ ಬಳಸಿದ ಬಹುಶಿಸ್ತೀಯ ಆರ್ಥಿಕನೀತಿಯ ಹಿನ್ನೆಲೆಯಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ, ಚರ್ಚೆ, ವಿಚಾರ-ವಿನಿಮಯ ನಡೆಸಲಾಗುವುದು. ಪ್ರಬಂಧ ಕಳುಹಿಸಲು ಕೊನೆಯ ದಿನಾಂಕ : 15-12-2024. ಹೆಸರು ನೋಂದಾವಣೆಗೆ ಕೊನೆಯ ದಿನಾಂಕ: 05-01-2025 ಪ್ರತಿನಿಧಿ ಶುಲ್ಕ: ಉಪನ್ಯಾಸಕರುಗಳಿಗೆ: ರೂ.1,000 ಸಂಶೋಧಕರಿಗೆ: ರೂ. 500. ವಿದ್ಯಾರ್ಥಿಗಳಿಗೆ ರೂ. 300 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಡಾ. ಮಹೇಶ್‌ಕುಮಾರ್ ಶೆಟ್ಟಿ. ಸಂಚಾರಿ ದೂರವಾಣಿ: 9880673174

ಉಜಿರೆ ಶ್ರೀ ಧ.ಮಂ. ಕಾಲೇಜಿಗೆ ರಾಷ್ಟ್ರಮಟ್ಟದ ಎರಡು ಪ್ರಶಸ್ತಿ

Article Image

ಉಜಿರೆ ಶ್ರೀ ಧ.ಮಂ. ಕಾಲೇಜಿಗೆ ರಾಷ್ಟ್ರಮಟ್ಟದ ಎರಡು ಪ್ರಶಸ್ತಿ

ಉಜಿರೆ: ದೇಶದ ಪ್ರತಿಷ್ಠಿತ ಯುಜಿಸಿಯು ನ್ಯಾಕ್ ಸಂಸ್ಥೆ ಮೂಲಕ ನಡೆಸುವ ಗುಣಮಟ್ಟ ಪರೀಕ್ಷೆಯಲ್ಲಿ ಸತತ ನಾಲ್ಕು ಬಾರಿ A++ ಮಾನ್ಯತೆಯೊಂದಿಗೆ ರಾಜ್ಯದ, ದೇಶದ ಹಲವು ಪ್ರಶಸ್ತಿ, ಗೌರವಕ್ಕೆ ಭಾಜನವಾಗಿರುವ ಉಜಿರೆಯ ಶ್ರೀ ಧ.ಮಂ. ಕಾಲೇಜಿಗೆ ಈಚೆಗೆ ಇನ್ನೆರಡು ಪ್ರಶಸ್ತಿಗಳು ಲಭಿಸಿವೆ. ರಾಷ್ಟ್ರಮಟ್ಟದ ‘ಬಿಗಿನಪ್ ರಿಸರ್ಚ್ ಇಂಟಲಿಜೆನ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ಉಜಿರೆ ಶ್ರೀ ಧ.ಮಂ. ಕಾಲೇಜನ್ನು ‘ಬೆಸ್ಟ್ ಆ್ಯಂಡ್ ಮೋಸ್ಟ್ ಟ್ರಸ್ಟೆಡ್ ಡಿಗ್ರಿ ಕಾಲೇಜ್ ಆಫ್ ಕರ್ನಾಟಕ’ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಅತ್ಯುತ್ತಮ ಆಡಳಿತ, ಗುಣಾತ್ಮಕ ಶಿಕ್ಷಣ ಹಾಗೂ ಸಾಮಾಜಿಕ ಕೊಡುಗೆಗೆ ನೀಡಲಾಗುವ ಪ್ರಶಸ್ತಿಗೆ ಕಾಲೇಜನ್ನು ಆಯ್ಕೆ ಮಾಡಿದೆ. ಜೊತೆಗೆ, ‘ಶೈಕ್ಷಣಿಕ ಗುಣಮಟ್ಟದಲ್ಲಿ ಉತ್ಕೃಷ್ಟತೆ ಹಾಗೂ ಅದರ ಪರಿಣಾಮಕಾರಿ ಅಳವಡಿಕೆ ಅನುಷ್ಠಾನ’ ವಿಭಾಗದಲ್ಲಿಯೂ ಕಾಲೇಜನ್ನು ಪ್ರಶಸ್ತಿಗೆ ಪರಿಗಣಿಸಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ‘ಇಂಡಿಯಾ ಇಲೈಟ್ ಎಜುಕೇಶನ್ ಆ್ಯಂಡ್ ಇನ್ಸ್ಟಿಟ್ಯೂಷನಲ್ ಎಕ್ಸೆಲೆನ್ಸ್ ಅವಾರ್ಡ್ಸ್ ಆ್ಯಂಡ್ ಕಾನ್ಫರೆನ್ಸ್ 2024’ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಹಾಗೂ ಉಪ ಪ್ರಾಂಶುಪಾಲ ಎಸ್.ಎನ್. ಕಾಕತ್ಕರ್ ಅವರು ಪ್ರಶಸ್ತಿ ಸ್ವೀಕರಿಸಿದರು. ಸಮಾರಂಭದಲ್ಲಿ, 450ಕ್ಕೂ ಹೆಚ್ಚು ಅಧಿಕ ರಾಷ್ಟ್ರಮಟ್ಟದ ಸಂಸ್ಥೆಗಳ ಪ್ರತಿನಿಧಿಗಳು, ವಿದ್ವಾಂಸರು, ಶೈಕ್ಷಣಿಕ ತಜ್ಞರು, ವಿಶ್ವವಿದ್ಯಾಲಯ ಹಾಗೂ ಶಾಲಾ ಕಾಲೇಜುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಫಿಸಿಯೋಥೆರಪಿ ಕಾಲೇಜು ಹಾಗೂ ಅಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ‍್ಯಕ್ರಮ

Article Image

ಫಿಸಿಯೋಥೆರಪಿ ಕಾಲೇಜು ಹಾಗೂ ಅಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ‍್ಯಕ್ರಮ

ಮೂಡುಬಿದಿರೆ: ಕಾಲೇಜು ಜೀವನವು ವಿದ್ಯಾರ್ಥಿ ಜೀವನದ ಒಂದು ವಿಶಿಷ್ಟವಾದ ಹಂತ. ಇದು ಸಂಪೂರ್ಣವಾಗಿ ತಾರುಣ್ಯವು ಅಲ್ಲದ ಸಂಪೂರ್ಣವಾಗಿ ವಯಸ್ಕರು ಅಲ್ಲದ ಸಮಯ. ಇಲ್ಲಿ ಸಾಕಷ್ಟು ಸವಾಲು ನಮ್ಮ ಮುಂದೆ ಇರುತ್ತದೆ. ನಾವು ಸ್ವಾತಂತ್ರ‍್ಯವನ್ನು ಬಯಸುತ್ತಿರುವಾಗ, ಆರ್ಥಿಕವಾಗಿ ಹೆತ್ತವರ ಮೇಲೆ ಅವಲಂಬಿತರಾಗುತ್ತೇವೆ. ನಮ್ಮ ಮನಸ್ಸು ಹಲವಾರು ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ಹಂತವಿದು ಎಂದು ಖ್ಯಾತ ಮನೋವೈದ್ಯ ಡಾ. ಪಿ. ವಿ. ಭಂಡಾರಿ ನುಡಿದರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥೆಗಳಾದ ಫಿಸಿಯೋಥೆರಪಿ ಕಾಲೇಜು ಹಾಗೂ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳ 2024-25 ಸಾಲಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಭಿವಿನ್ಯಾಸ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ. ಶೈಕ್ಷಣಿಕ ಜೀವನದಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೂರು ರೀತಿಯ ಒತ್ತಡಗಳನ್ನು ಅನುಭವಿಸುತ್ತಾರೆ. ಮೊದಲನೆಯದಾಗಿ ಶೈಕ್ಷಣಿಕ ಒತ್ತಡ, ಎರಡನೆಯದು ಕಾಲೇಜಿನ ನಿಯಮ, ನಿಬಂಧನೆಗಳನ್ನು ಪಾಲಿಸುವ ಒತ್ತಡ, ಮೂರನೆಯದು, ಸಹಪಾಠಿಗಳ ಜೊತೆಗೆ ಹೊಂದಿಕೊಳ್ಳುವ ಒತ್ತಡ. ಈ ರೀತಿಯ ಒತ್ತಡಗಳು ಅಗತ್ಯ. ಆದರೆ ಇವುಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವ ಕೌಶಲವನ್ನು ಬೆಳೆಸಿಕೊಳ್ಳಬೇಕು ಎಂದರು. ವ್ಯಕ್ತ ಪಡಿಸದ ಸಮಸ್ಯೆ ದ್ವಿಗುಣಗೊಳ್ಳುತ್ತದೆ ವಿದ್ಯಾರ್ಥಿಗಳು ತಮ್ಮ ಪ್ರಯಾಣದ ಆರಂಭದಲ್ಲಿ ವಿವಿಧ ಸವಾಲುಗಳನ್ನು ಎದುರಿಸುತ್ತಾರೆ. ಇದು ಮನೆಗೀಳಾಗಿರಬಹುದು, ಮೊಬೈಲ್ ಫೋನ್‌ಗಳ ವ್ಯಸನವಾಗಿರಬಹುದು ಅಥವಾ ಕೆಲವು ದುಷ್ಚಟಗಳಲ್ಲಿ ತೊಡಗಿರಬಹುದು. ತಮ್ಮ ಸಮಸ್ಯೆಗಳನ್ನು ಪೋಷಕರು, ಸ್ನೇಹಿತರು ಮತ್ತು ಶಿಕ್ಷಕರೊಂದಿಗೆ ಹಂಚಿಕೊಳ್ಳಬೇಕು. ಹಂಚಿದ ಸಮಸ್ಯೆ ಅರ್ಧ ಪರಿಹಾರವಾದಂತಾದರೆ, ವ್ಯಕ್ತ ಪಡಿಸದ ಸಮಸ್ಯೆ ದ್ವಿಗುಣಗೊಳ್ಳುತ್ತಾ ಸಾಗುತ್ತದೆ ಎಂದರು. ತಾತ್ಕಾಲಿಕ ಸಮಸ್ಯೆಗೆ ಆತ್ಮಹತ್ಯೆ ಶಾಶ್ವತ ಪರಿಹಾರವೆಂದು ಪರಿಗಣಿಸದಿರಿ ಒತ್ತಡ, ವೈಫಲ್ಯವನ್ನು ಒಪ್ಪಿಕೊಳ್ಳುವುದು ಮತ್ತು ಒಬ್ಬರ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗದಿರುವುದು ಸಹಜ ವಿದ್ಯಮಾನವೆಂದು ಪರಿಗಣಿಸಬೇಕು. ವಿದ್ಯಾರ್ಥಿಗಳು ತಮ್ಮ ತಾತ್ಕಾಲಿಕ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೆ ಶಾಶ್ವತ ಪರಿಹಾರವೆಂದು ಪರಿಗಣಿಸುವುದು ದೊಡ್ಡ ತಪ್ಪು ಎಂದು ಕಿವಿಮಾತು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞೆ ಡಾ.ಹನ್ನಾ ಶೆಟ್ಟಿ, ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸ್ಸ್ ಕ್ಷೇತ್ರವು ಸಮಾಜಕ್ಕೆ ಸೇವೆ ಒದಗಿಸಲು ಇರುವ ಉತ್ತಮ ಅವಕಾಶ. ಆಳ್ವಾಸ್‌ನಲ್ಲಿ ಲಭಿಸುವ ಉತ್ತಮ ಮಾರ್ಗದರ್ಶನ ಹಾಗೂ ಸೌಲಭ್ಯಗಳನ್ನು ಬಳಸಿಕೊಂಡು ವೃತ್ತಿಪರತೆಯನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಆಳ್ವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲೆ ಡಾ.ಶಮಾ ಶೆಟ್ಟಿ, ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ಸ್‌ನ ಪ್ರಾಂಶುಪಾಲ ಡಾ.ಶಂಕರ್ ಶೆಟ್ಟಿ, ಆಡಳಿತಾಧಿಕಾರಿ ಹೇಮಂತ್ ಇದ್ದರು. ಉಪಪ್ರಾಂಶುಪಾಲೆ ಶ್ರೀವನಿತಾ ಟಿವೈ ಸ್ವಾಗತಿಸಿ, ಬುಶ್ರಾ ನಿರೂಪಿಸಿ, ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ಮುಖ್ಯಸ್ಥ ಆದರ್ಶ ಹೆಗ್ಡೆ ವಂದಿಸಿ, ಸುದೇಶ್ ಕಾರ‍್ಯಕ್ರಮದಲ್ಲಿ ಸಹಕರಿಸಿದರು.

ಜೈನ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

Article Image

ಜೈನ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

ರಾಷ್ಟ್ರೀಯ ಸೇವಾ ಯೋಜನೆ ಜೈನ ಪದವಿಪೂರ್ವ ಕಾಲೇಜು ಇದರ ವಾರ್ಷಿಕ ವಿಶೇಷ ಶಿಬಿರ 2024-25ರ ಉದ್ಘಾಟನಾ ಸಮಾರಂಭವು ದಕ್ಷಿಣ ಕನ್ನಡ ಜಿಲ್ಲಾ ಪರಿಷತ್ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೆಳುವಾಯಿ ಮೈನ್, ಕೆಸರ್ ಗದ್ದೆಯಲ್ಲಿ ಅ. 09ರಂದು ರಾಘವೇಂದ್ರ ಬಿ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ, ಇವರಿಂದ ನೆರವೇರಿತು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಿಗೆ ನೆಲ - ಜಲ ಸಂರಕ್ಷಣೆಯ ಬಗ್ಗೆ ಮಾಹಿತಿಯನ್ನು ಉದ್ಘಾಟಕರು ನೀಡಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಜೈನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ| ಪ್ರಭಾತ್ ಬಲ್ನಾಡ್ ವಹಿಸಿದ್ದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಡಾ| ದಯಾನಂದ ನಾಯ್ಕ್, ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರು ಆಗಿ ಕಾರ್ಯನಿರ್ವಹಿಸುತ್ತಿದ್ದು ಶಿಬಿರಾರ್ಥಿಗಳಿಗೆ ಶಿಬಿರದ ಮಹತ್ವ ಮತ್ತು ಸೇವೆಯ ಬಗ್ಗೆ ಮಾಹಿತಿಗಳನ್ನು ನೀಡಿದರು. ಹಾಗೆಯೇ ವೇದಿಕೆಯಲ್ಲಿ ಅತಿಥಿ ಗಣ್ಯರಾಗಿ ಭಾಸ್ಕರ್ ಆಚಾರ್ಯ ಅಧ್ಯಕ್ಷರು, ಶಾಲಾ ಅಭಿವೃದ್ಧಿ ಸಮಿತಿ, ಪ್ರವೀಣ್ ಜೈನ್ ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ, ಡಾ| ನಾಗರಾಜ್ ಶೆಟ್ಟಿ, ಪ್ರಗತಿಪರ ಕೃಷಿಕರು ಬೆಳುವಾಯಿ, ರಾಜಶ್ರೀ ನಾಯಕ್, ಮುಖ್ಯೋಪಾಧ್ಯಯರು, ಜೈನ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಮಧುಕರ್ ಸಾಲಿನ್ಸ್ ಇವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಹಿತನುಡಿಗಳನ್ನು ನೀಡಿ ಶಿಬಿರಕ್ಕೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ವಾಣಿ ಎಂ. ಇವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಸಹ ಸಂಯೋಜನಾಧಿಕಾರಿಗಳಾದ ವನಿತಾ ಆರ್. ಕೆಂಬಾರೆ ಮತ್ತು ಆಕರ್ಷ್ ಕುಮಾರ್ ಜೈನ್, ಕಾಲೇಜಿನ ಕಛೇರಿ ಮೇಲ್ವಿಚಾರಕರಾದ ಜಯಪ್ರಭ ಹಾಗೂ ಘಟಕದ ನಾಯಕಿಯಾದ ರಾಧಿಕಾ ಇವರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿ ನಾಯಕನಾದ ಚೇತನ್ ಇವರು ಎಲ್ಲರಿಗೂ ವಂದನಾರ್ಪಣೆ ಗೈದು, ಶಿಬಿರಾರ್ಥಿಯಾದ ನಿತೀಕ್ಷಾ ಕಾರ್ಯಕ್ರಮ ನಿರೂಪಣೆಗೈದರು.

ಎಕ್ಸಲೆ೦ಟ್ ಮೂಡುಬಿದಿರೆ: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

Article Image

ಎಕ್ಸಲೆ೦ಟ್ ಮೂಡುಬಿದಿರೆ: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

ಮೂಡುಬಿದಿರೆ: ಎಕ್ಸಲೆ೦ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಈ ಶೈಕ್ಷಣಿಕ ವರ್ಷದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಮೂಡುಬಿದಿರೆ ಮಾರ್ಪಾಡಿಯ ನಡ್ಯೋಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೆರವೇರಿತು. ಗಾಂಧೀಜಿಯವರ 100 ನೇ ಜನ್ಮದಿನದ ನೆನಪಿಗಾಗಿ ಆರಂಭಗೊAಡ ರಾಷ್ಟೀಯ ಸೇವಾಯೋಜನೆ ರಾಷ್ಟೀಯ ಜಾಗೃತಿ ರಾಷ್ಟ್ರ ಪ್ರೇಮ ಪ್ರಾಕೃತಿಕ ವಿಕೋಪಗಳಿಂದ ಆಗುವ ತೊಂದರೆಗಳ ಪರಿಹಾರಕ್ಕೆ ಸ್ಪಂದನೆ, ಸ್ವಚ್ಚಪರಿಸರ ಸ್ವಾವಲಂಬಿ ಜೀವನ, ಬಾವೈಕ್ಯತೆ , ಶಿಸ್ತು, ಆರೋಗ್ಯ ಸಹಬಾಳ್ವೆ, ಹೊಂದಾಣಿಕೆ, ಸಾಂಸ್ಕೃತಿಕ ಜೀವನ, ಉತ್ಸಾಹಗಳನ್ನು ನಮ್ಮೊಳಗೆ ತುಂಬಿಸಿ ಪ್ರತಿಯೋರ್ವರು ಜೀವನದ ಗುರಿ ಸಾಧಿಸಲು ಬೇಕಾದ ಆತ್ಮಸ್ಥೈರ್ಯ ತುಂಬಲು ಸಹಕಾರಿಯಾಗಿರುತ್ತದೆ. ಮಾನವ ಬದುಕಿನ ನೋವಿಗೆ ನಲಿವಿಗೆ ದನಿಗೂಡಿಸುವ ಮಾನವೀಯ ಪ್ರಜ್ಞೆ ಜಾಗೃತಗೊಳ್ಳುತ್ತದೆ ಎಂದು ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರೂಪಾಕ್ಷಪ್ಪ ಹೇಳಿದರು. ಅವರು ನಡ್ಯೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾರ್ಪಾಡಿಯಲ್ಲಿ ನಡೆದ ಎಕ್ಸಲೆಂಟ್ ಪದವಿಪೂರ್ವ ಕಾಲೇಜು ಮೂಡುಬಿದಿರೆಯ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2024-25 ನ್ನು ಉದ್ಘಾಟಿಸಿ ಮಾತನಾಡಿದರು. ಮಂಗಳೂರು ವಿಭಾಗದ ಎನ್.ಎಸ್.ಎಸ್. ವಿಭಾಗಾಧಿಕಾರಿಗಳಾದ ಸವಿತಾ ಎರ್ಮಾಳ್ ರಾಷ್ಟೀಯ ಭಾವೈಕ್ಯ ಶಿಬಿರದಲ್ಲಿ ಮನ್ನಣೆ ಪಡೆದ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿನಿ ಕು| ಅಪೇಕ್ಷಾ ಸಾಧನೆಯನ್ನು ಹೇಳುತ್ತಾ ತಂದೆ ತಾಯಿ ಗುರುಗಳನ್ನು ಗೌರವಿಸಿ ಕೌಶಲವನ್ನು ವೃದ್ಧಿಸಿಕೊಳ್ಳಿ ಜೀವ ವಿರೋಧಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ. ಲಿಂಗ ಸಮಾನತೆ ಸಾಧಿಸಿ ಎನ್ನುವ ಶಿಬಿರದ ಧ್ಯೇಯ ವಾಕ್ಯದ ಅಂತರಾಳವನ್ನು ಅರ್ಥೈಸಿಕೊಳ್ಳಿ ನಮಗೆರಡು ಕಣ್ಣು ಎರಡೂ ಹೆಣ್ಣು ಎಂದರು. ಶುಭಾಶಂಸನೆಗೈದ ಉದ್ಯಮಿಗಳಾದ ಶ್ರೀಪತಿ ಭಟ್ ದೀರ್ಘವಾದ ಬದುಕಿನಲ್ಲಿ ಬರುವ ಸಂಘರ್ಷಗಳನ್ನು ಬದುಕಿನ ಸಂಕೀರ್ಣತೆಯ ಪರಿಮಾಣಗಳನ್ನು ಪರಿಚಯ ಅದನ್ನು ಎದುರಿಸಲು ಬೇಕಾಗುವ ದೈರ್ಯ ಇಂತಹ ಶಿಬಿರಗಳಿಂದ ಸಾಧ್ಯ. ಎಕ್ಸಲೆಂಟ್ ಸಂಸ್ಥೆಯ ಶಿಬಿರ ಒಂದು ಮಾದರಿ ಸೇವಾ ಯೋಜನೆ ಶಿಬಿರ ಅಂಕಗಳು ಉದ್ಯೋಗವನ್ನು ಒದಗಿಸಿಕೊಟ್ಟರೆ ರಾಷ್ಟೀಯ ಸೇವಾಯೋಜನೆ ಶಿಬಿರ ಬದುಕನ್ನು ಉತ್ತರಿಸಲು ಹೇಳಿಕೊಡುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊ೦ಡಿದ್ದ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡುತ್ತಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡುತ್ತಾ ಎನ್.ಎಸ್.ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಂಯಮವನ್ನು ಕಲಿಸುತ್ತದೆ. ಪ್ರಜ್ಞಾವಂತ ನಾಗರೀಕರಾಗಿ ಸಮುದಾಯದ ಸಮಸ್ಯೆಗಳನ್ನು ಅರಿತುಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಈ ಊರಿನ ಜನ ಪ್ರತಿ ಬಾರಿ ಭೇಟಿ ನೀಡಿದಾಗಲೂ ಪ್ರೀತಿ ಗೌರವಾದರಗಳಿಂದ ನಡೆದುಕೊಂಡಿದ್ದಾರೆ ಅದೇ ರೀತಿ ಪ್ರೀತಿಯಿಂದ ವಿದ್ಯಾರ್ಥಿಗಳನ್ನು ತಿದ್ದುತ್ತಾರೆ ಅನ್ನುವ ವಿಶ್ವಾಸವಿದೆ. ಎನ್.ಎಸ್.ಎನ್ ನ ಈ ಶೈಕ್ಷಣಿಕ ವರ್ಷದ ಶಿಬಿರವು ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸುತ್ತೇನೆ ಎಂದರು. ನಡ್ಯೋಡಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸವಿತಾ ಸತೀಶ್, ಶಾಲೆಯ ಮುಖ್ಯೋಪಾಧ್ಯಾಯರಾದ ಉಷಾಲತಾ, ನಡ್ಯೋಡಿ ದೈವಸ್ಥಾನದ ಆಡಳಿತ ಮುಕ್ತೇಸರರಾದ ಎ೦ ವಸ೦ತ ಶೆಟ್ಟಿ, ನಡ್ಯೋಡಿ ಕಿರಿಯ ಪ್ರಾಥಮಿಕ ಶಾಲೆಯ ಸಲಹಾ ಸಮಿತಿಯ ಅಧ್ಯಕ್ಷರಾದ ದಿಲೀಪ್ ಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸ೦ಘದ ಅಧ್ಯಕ್ಷರಾದ ಭರತೇಶ್, ಶೆಟ್ಟಿ, ಮಲ್ಲಬೆಟ್ಟು ಮಾರ್ಪಾಡಿಯ ಸುಜೀರ್ ಗುತ್ತಿನ ಐತಪ್ಪ ಆಳ್ವ ಮು೦ತಾದವರು ಉಪಸ್ಥಿತರಿದ್ದರು. ಎನ್ ಎಸ್ ಎಸ್ ಸ೦ಯೋಜನಾಧಿಕಾರಿ ತೇಜಸ್ವೀ ಭಟ್ ಸ್ವಾಗತಿಸಿದರು. ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ವಿಕ್ರಮ ನಾಯಕ ಕೆ ಕಾರ್ಯಕ್ರಮ ನಿರೂಪಿಸಿದರು.

ಸ್ಟಾಟ್‌ಎಕ್ಸಪ್ಲೋರ್ ಅಸೋಸಿಯೇಷನ್‌ಗೆ ಚಾಲನೆ

Article Image

ಸ್ಟಾಟ್‌ಎಕ್ಸಪ್ಲೋರ್ ಅಸೋಸಿಯೇಷನ್‌ಗೆ ಚಾಲನೆ

ಉಜಿರೆ: ಉನ್ನತ ಶಿಕ್ಷಣ ಹಾಗೂ ಸಂಶೋಧನೆಗಳಲ್ಲಿ ಸಂಖ್ಯಾಶಾಸ್ತçದ ಸ್ಥಾನ ಮಹತ್ವದ್ದಾಗಿದೆ ಎಂದು ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್ (ಎನ್‌ಎಲ್‌ಪಿ)ನ ಕುರಿತಾಗಿ ಎಸ್.ಡಿ.ಎಂ ಐಟಿ ಕಾಲೇಜಿನ ಕೃತಕ ಬುದ್ಧಿಮತ್ತೆ ಹಾಗೂ ದತ್ತಾಂಶ ವಿಜ್ಞಾನ ವಿಭಾಗದ ಸಹಾಯಕ ಪ್ರಾದ್ಯಾಪಕ ಪ್ರೊ.ಪದ್ಮಪ್ರಸಾದ್ ಅಭಿಪ್ರಾಯಪಟ್ಟರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಂಖ್ಯಾಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗವು ಆಯೋಜಿಸಿದ್ದ ಸ್ಟಾಟ್‌ಎಕ್ಸ್ಪ್ಲೋರ್ ಕಾರ್ಯಕ್ರಮ ಹಾಗೂ ವಿಭಾಗ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್;ನಲ್ಲಿ ಅಂಕಿಅಂಶಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ ಹಾಗೂ ಸಂಶೋಧನೆ, ಅಧ್ಯಯನದ ಕುರಿತಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಸಂಖ್ಯಾಶಾಸ್ತ್ರದ ಮಾಡೆಲ್‌ಗಳು ಹಾಗೂ ಅಂಕಿಅಂಶಗಳ ಪ್ರಮೇಯಗಳು ನ್ಯಾಚುರಲ್ ಲಾಂಗ್ವೇಜ್ಪ್ರೊ ಸೆಸಿಂಗ್‌ನಲ್ಲಿ ಅಳವಡಿಸಿಕೊಂಡಿರುವುದರ ಕುರಿತಾಗಿ ಮಾಹಿತಿ ನೀಡಿದರು. ಎಸ್‌ಡಿಎಂ ಕಾಲೇಜಿನ ಡೀನ್ ಪ್ರೋ.ವಿಶ್ವನಾಥ್.ಪಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಖ್ಯಾಶಾಸ್ತ್ರವು ವಿವಿಧ ವಲಯಗಳಲ್ಲಿ ಬೇಡಿಕೆಯನ್ನು ವಿಸ್ತರಿಸುತ್ತಿದೆ. ವೈದ್ಯಕೀಯ ಹಾಗೂ ಸಂಶೋಧನಾ ವಿಭಾಗದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆಯುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಸಂಖ್ಯಾಶಾಸ್ತç ವಿಭಾಗದ ಸ್ಟಾಟ್‌ಎಕ್ಸಪ್ಲೋರ್ ಅಸೋಸಿಯೇಷನ್ಸ್ ಉದ್ಘಾಟನೆಯಲ್ಲಿ ಮುಸಿಗ್ಮಾ ವಿಭಾಗದ ಬಿತ್ತಿಪತ್ರವನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ, ಎಸ್, ಎನ್ ಕಾಕತ್ಕರ್, ವಿಭಾಗದ ಮುಖ್ಯಸ್ಥೆ ಡಾ.ಸವಿತಾ ಕುಮಾರಿ ಹಾಗೂ ಸಹ ಪ್ರಾದ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಖ್ಯಾಶಾಸ್ತ್ರ ವಿದ್ಯಾರ್ಥಿಗಳಾದ ಅನನ್ಯಾ ಕಾರ್ಯಕ್ರಮವನ್ನು ಸ್ವಾಗತಿಸಿ, ದಿವ್ಯಾ ಸುಧೀರ್ ವಂದಿಸಿದರು ಹಾಗೂ ವೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ಆಳ್ವಾಸ್ ಪದವಿಪೂರ್ವ ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ

Article Image

ಆಳ್ವಾಸ್ ಪದವಿಪೂರ್ವ ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ

ಮೂಡುಬಿದಿರೆ: ಕಳೆದ ನಾಲ್ಕು ದಶಕಗಳಿಂದ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ದತ್ತು ಸ್ವೀಕಾರ, ಸಹಾಯಧನ, ಪ್ರೋತ್ಸಾಹಧನ, ವಿವಿಧ ಶಿಷ್ಯವೇತನ, ಬಹುಮಾನ, ಪುರಸ್ಕಾರಗಳ ಮೂಲಕ ನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಬರುತ್ತಿರುವ ‘ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ’ವು ಈ ಬಾರಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿಯೇ ವಿಶೇಷ ಶೈಕ್ಷಣಿಕ ವಿದ್ಯಾರ್ಥಿ ವೇತನವನ್ನು ಫೋಷಿಸಿದೆ. 10ನೇ ತರಗತಿಯಲ್ಲಿ ಸಿಬಿಎಸ್‌ಇ (ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ), ಐಸಿಎಸ್‌ಇ (ಭಾರತೀಯ ಪ್ರೌಢಶಿಕ್ಷಣದ ಪ್ರಮಾಣ ಪತ್ರ) ಹಾಗೂ ರಾಜ್ಯ ಪಠ್ಯಕ್ರಮ (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ)ದಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಈ ಶೈಕ್ಷಣಿಕ ವಿದ್ಯಾರ್ಥಿ ವೇತನ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿ ವೇತನಕ್ಕೆ ಅರ್ಹರಾದ ವಿದ್ಯಾರ್ಥಿಗಳು ಅತ್ಯುತ್ತಮ ಮತ್ತು ಪರಿಣಾಮಕಾರಿ ಪದವಿಪೂರ್ವ ಶಿಕ್ಷಣವನ್ನು ಆಳ್ವಾಸ್ ಪದವಿ ಪೂರ್ವ ಕಾಲೇಜಿನಿಂದ ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಷಯಗಳಲ್ಲಿ ಪಡೆಯಬಹುದು. ಗಣಿತ, ವಿಜ್ಞಾನ ಮತ್ತು ಸಾಮಾನ್ಯ ಜ್ಞಾನ ವಿಷಯಗಳ ಕುರಿತು 120 ನಿಮಿಷಗಳ ಪರೀಕ್ಷೆಯು ಅಕ್ಟೋಬರ್ 15, 2024ರಂದು ಮೂಡುಬಿದಿರೆಯ ವಿದ್ಯಾಗಿರಿ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಶ್ನೆಪತ್ರಿಕೆ ಇರಲಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಕ್ಟೋಬರ್ 12, 2024 ಕೊನೆಯ ದಿನಾಂಕವಾಗಿರುತ್ತದೆ. ವಿದ್ಯಾರ್ಥಿಗಳು ಈ ವೆಬ್ ಸೈಟ್ https://scholarship.alvas.org/puc/login.php ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಿಶೇಷ ಸೂಚನೆ: ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆಯ ಅಂಕದ ಆಧಾರದಲ್ಲಿ ಮತ್ತು ಪ್ರತಿ ವರ್ಷದಂತೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಅಂಕವನ್ನು ಪರಿಗಣಿಸಿ, ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆಯ ಮೇಲೂ ಆಯ್ಕೆಗಳು ನಡೆಯಲಿವೆ. ಪರೀಕ್ಷೆಯ ದಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ.ಮೋಹನ ಆಳ್ವರವರು ಸಮಾಲೋಚನೆ ನಡೆಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 6366377827/6366377825 ಸಂಪರ್ಕಿಸಬಹುದು.

ಆಳ್ವಾಸ್ ವಿದ್ಯಾರ್ಥಿಗಳಿಂದ ಕನ್ನಡ ದಿನಪತ್ರಿಕೆ ಉದಯವಾಣಿಯ ಕೇಂದ್ರ ಕಚೇರಿಗೆ ಭೇಟಿ

Article Image

ಆಳ್ವಾಸ್ ವಿದ್ಯಾರ್ಥಿಗಳಿಂದ ಕನ್ನಡ ದಿನಪತ್ರಿಕೆ ಉದಯವಾಣಿಯ ಕೇಂದ್ರ ಕಚೇರಿಗೆ ಭೇಟಿ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಮನೋವಿಜ್ಞಾನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಮಣಿಪಾಲದ ಅಂಗರಚನಾಶಾಸ್ತ್ರ ಪ್ರಯೋಗಾಲಯ ಹಾಗೂ ಕನ್ನಡ ದಿನಪತ್ರಿಕೆ ಉದಯವಾಣಿಯ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಮೊದಲಿಗೆ ಮಣಿಪಾಲ ಮ್ಯೂಸಿಯಂಗೆ ಭೇಟಿ ನೀಡಿದ ವಿದ್ಯಾರ್ಥಿಗಳು, ಪ್ರಾಣಿಗಳು ಮತ್ತು ಮಾನವರ ವಿವಿಧ ಅಂಗರಚನಾ ರಚನೆಗಳನ್ನು ಮತ್ತು ವಿಶೇಷವಾಗಿ ಮಾನವರ ವಿವಿಧ ರೋಗಶಾಸ್ತ್ರಕ್ಕೆ ಸಂಬಂಧಿಸಿದ ಮಾದರಿಗಳನ್ನು ವೀಕ್ಷಿಸಿದರು. ಭೇಟಿಯು ಉತ್ಕೃಷ್ಟ ಪ್ರೇರಕ ಅನುಭವವಾಗಿ ಹೊರಹೊಮ್ಮಿತು. ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ಒದಗಿಸಿತು. ನಂತರ ಉದಯವಾಣಿ ದಿನಪತ್ರಿಕೆ ಕಚೇರಿಗೆ ಭೇಟಿ ನೀಡಿ ಸ್ಥಾನೀಯ ಸಂಪಾದಕ ಕೃಷ್ಣ ಭಟ್‌ರೊಂದಿಗೆ ಸಂವಾದ ನಡೆಸಿದರು. ಆ ಬಳಿಕ ಕಚೇರಿಯ ಸಿಬ್ಬಂದಿ ವರ್ಗದವರು ಪತ್ರಿಕೆಯ ವಿವಿಧ ಅಂಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಉದಯವಾಣಿ ಡಿಜಿಟಲ್‌ನ ಸಿಬ್ಬಂದಿ ಡಿಜಿಟಲ್ ವಿಭಾಗದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಮುದ್ರಣ ವಿಭಾಗದ ಸಿಬ್ಬಂದಿ ಮುದ್ರಣ ತಂತ್ರಜ್ಞಾನ ಹಾಗೂ ಪ್ರಕ್ರಿಯೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರಕ್ಷಿತಾ ತೋಡಾರು, ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಜೋಶ್ವಿತಾ ಡೆಸಾ, ಉಪನ್ಯಾಸಕರಾದ ವಿವೇಕ್ ಜತೆಗಿದ್ದರು.

ಮನೋವಿಜ್ಞಾನ ಸಂಘ ಉದ್ಘಾಟನೆ: ಮಾನಸಿಕ ಆರೋಗ್ಯದ ಬಗ್ಗೆ ತಪ್ಪು ಕಲ್ಪನೆ ಸಲ್ಲದು

Article Image

ಮನೋವಿಜ್ಞಾನ ಸಂಘ ಉದ್ಘಾಟನೆ: ಮಾನಸಿಕ ಆರೋಗ್ಯದ ಬಗ್ಗೆ ತಪ್ಪು ಕಲ್ಪನೆ ಸಲ್ಲದು

ಉಜಿರೆ: ಮನೋವಿಜ್ಞಾನ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಮನೋವಿಜ್ಞಾನದ ವಿದ್ಯಾರ್ಥಿಗಳಾಗಿ ಎಲ್ಲರ ಸರ್ವತೋಮುಖ ಬೆಳವಣಿಗೆ ಹಾಗೂ ಕಲ್ಯಾಣಕ್ಕಾಗಿ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು ಎಂದು ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ಪ್ರಾಧ್ಯಾಪಕಿ ಕೃಷ್ಣಗೋಪಕುಮಾರ್ ಹೇಳಿದರು. ಅವರು ಮಂಗಳವಾರ ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಸ್ನಾತಕೋತ್ತರ ಹಾಗೂ ಮನೋವಿಜ್ಞಾನ ಸಂಶೋಧನಾ ಕೇಂದ್ರ ಆಯೋಜಿಸಿದ “ಪೀಸ್” ವಿದ್ಯಾರ್ಥಿಸಂಘ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುಮಾರ ಹೆಗ್ಡೆ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನೂತನ ಸಂಘದ ಮೂಲಕ ಶಾಂತಿ ಕಾಪಾಡುವ ಕಾರ್ಯಗಳು ನಿರಂತರ ನಡೆಯಲಿ ಎಂದು ಆಶಿಸಿದರು. ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ವಂದನಾ ಜೈನ್, ಕಾರ್ಯಕ್ರಮದ ಸಂಯೋಜಕಿ ಅಶ್ವಿನಿ ಶೆಟ್ಟಿ, ಡಾ. ಮಹೇಶ್‌ಬಾಬು, ಅಶ್ವಿನಿ ಎಚ್. ಸಿಂಧು ವಿ., ಸಂಘದ ಅಧ್ಯಕ್ಷರಾದ ಅಲಿಷ ಪಿ. ಜಾಯ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಕುಮಾರಿ ಚೈತನ್ಯ ಸ್ವಾಗತಿಸಿದರು. ಕೀರ್ತನಾ ಧನ್ಯವಾದವಿತ್ತರು. ಸ್ಟಿನ್ಸಿ ಕಾರ್ಯಕ್ರಮ ನಿರ್ವಹಿಸಿದರು.

ಎಲ್ಲರಿಗೂ ಸಮಾನ ನ್ಯಾಯ ಒದಗಿಸುವುದೇ ಪೋಲಿಸ್ಇ ಲಾಖೆಯ ಮುಖ್ಯ ಧ್ಯೇಯ: ಸಂದೇಶ್ ಪಿ. ಜಿ. ಅಭಿಮತ

Article Image

ಎಲ್ಲರಿಗೂ ಸಮಾನ ನ್ಯಾಯ ಒದಗಿಸುವುದೇ ಪೋಲಿಸ್ಇ ಲಾಖೆಯ ಮುಖ್ಯ ಧ್ಯೇಯ: ಸಂದೇಶ್ ಪಿ. ಜಿ. ಅಭಿಮತ

ಪೋಲಿಸ್ ಕೆಲಸ ತುಂಬಾ ಪವಿತ್ರವಾದ ಕೆಲಸ, ಎಲ್ಲಿ ಮನುಷ್ಯರಿರುತ್ತಾರೆಯೋ ಅಲ್ಲಿ ಗಲಾಟೆ, ಗಲಭೆಗಳಿರುತ್ತವೆ. ಆದರೆ ಅವೆಲ್ಲವನ್ನು ಹಿಡಿತಕ್ಕೆ ತಂದು ಸಾರ್ವಜನಿಕರಲ್ಲಿ ಶಾಂತಿಯ ಬದುಕು ನಿರ್ಮಿಸುವುದು ನಮ್ಮ ಕರ್ತವ್ಯವಾಗಿದೆ. ಎಲ್ಲರಿಗೂ ಸಮಾನವಾದ ನ್ಯಾಯ ಒದಗಿಸುವುದೇ ಪೊಲೀಸ್ ಇಲಾಖೆಯ ಮುಖ್ಯ ಧ್ಯೇಯ ಎಂದು ಮೂಡುಬಿದಿರೆಯ ಪೊಲೀಸ್ ವೃತ್ತ ನಿರೀಕ್ಷಕರಾದ ಸಂದೇಶ್ ಪಿ. ಜಿ.ಯವರು ಅಭಿಪ್ರಾಯಪಟ್ಟರು. ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಪೊಲೀಸ್ ಸಹಕಾರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ನಡೆಯುವ ಅನ್ಯಾಯ ಅಕ್ರಮಗಳು, ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಹೋರಾಡಿ ಶಾಂತಿ ಸುವ್ಯವಸ್ಥೆ ಕಾಪಾಡುವುದು, ಜನಗಳ ಮಧ್ಯೆ ಉತ್ತಮ ಭಾಂಧವ್ಯ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಹೊಸ ಭವಿಷ್ಯವನ್ನು ಬರೆದು ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿ ಮೂಡುಬಿದಿರೆಗೆ ಹೆಮ್ಮೆ ತಂದ ಇವರನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸನ್ಮಾನಿಸಿ ಗೌರವಿಸಿದರು. ಇದರ ಜೊತೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್, ಒಬ್ಬ ದಕ್ಷ ಅಧಿಕಾರಿ ಇದ್ದರೆ ಅಲ್ಲಿನ ವ್ಯವಸ್ಥೆಗಳು ಉತ್ತಮವಾಗಿರುತ್ತದೆ. ಮೂಡುಬಿದಿರೆಗೆ ಅಂತಹ ಪೊಲೀಸ್ ಅಧಿಕಾರಿಯಾಗಿ ಸಂದೇಶ್ ಪಿ. ಜಿ ಯವರು ದೊರಕಿರುವುದು ನಮ್ಮೆಲ್ಲರ ಭಾಗ್ಯ. ಇವರು ತಮ್ಮ ಜವಬ್ದಾರಿಯಿಂದ ಸಂಬಂಧವನ್ನು ಕಟ್ಟುವ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದ್ದಾರೆ. ಈ ರೀತಿ ದೇಶ ಕಟ್ಟುವ ಕೆಲಸ ಮಾಡುತ್ತಿರುವ ಇವರು ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಆಡಳಿತ ನಿರ್ದೇಶಕರಾದ ಡಾ. ಸಂಪತ್ ಕುಮಾರ್, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಶಿಕ್ಷಕ ನಿರಂಜನ್ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು.

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ನಾಯಕತ್ವ ತರಬೇತಿ ಶಿಬಿರ

Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ನಾಯಕತ್ವ ತರಬೇತಿ ಶಿಬಿರ

ಎಸ್.ಡಿ.ಎಂ. ವಿಶ್ವವಿದ್ಯಾಲಯ ಮತ್ತು ಎಂ. ಆರ್. ಪೈ ಫೌಂಡೇಶನ್ ಮುಂಬೈ ಇವರ ಜಂಟಿ ಸಹಭಾಗಿತ್ವದಲ್ಲಿ, ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಯ್ದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಉಚಿತ ನಾಯಕತ್ವ ತರಬೇತಿ ಶಿಬಿರವನ್ನು ಸೆಪ್ಟಂಬರ್ 23 ಮತ್ತು 24ರಂದು ಏರ್ಪಡಿಸಲಾಗಿತ್ತು. ಇಂದಿನ ಯುವ ವಿದ್ಯಾರ್ಥಿಗಳನ್ನು ನಾಳಿನ ಮಹಾನ್ ನಾಯಕರನ್ನಾಗಿ ರೂಪಿಸುವುದೇ ಎಸ್.ಡಿ.ಎಂ. ವಿಶ್ವವಿದ್ಯಾಲಯ ಮತ್ತು ಎಂ. ಆರ್. ಪೈ ಫೌಂಡೇಶನ್‌ನ ಮುಖ್ಯ ಉದ್ದೇಶ. ಈ ನಾಯಕತ್ವ ತರಬೇತಿ ಕಾರ್ಯಕ್ರಮವನ್ನು ದೇಶದ ಹಲವು ಭಾಗಗಳಲ್ಲಿ ನಡೆಸುತ್ತಿದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ ಕುಮಾರ್ ಅವರು ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮುಂಬೈನ ಎಂ. ಆರ್. ಪೈ ಫೌಂಡೇಶನ್‌ನಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಸಚಿನ್ ಕಾಮತ್ ಮತ್ತು ಕ್ಲಾರಿಸ್ಸಾ ಜತ್ತನ್ನ ಅವರು ಆಗಮಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಹಲವು ವಿದ್ಯಾರ್ಥಿಗಳು ತರಬೇತಿ ಶಿಬಿರದ ಬಗ್ಗೆ ತಮ್ಮ ಪ್ರತಿಕ್ರೀಯೆಯನ್ನು ನೀಡಿದರು. ಎಸ್.ಡಿ.ಎಂ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ ಹೆಗ್ಡೆ ಮತ್ತು ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎಸ್. ಅವರು ಅತಿಥಿಗಳಾಗಿದ್ದು, ಸುಮಾರು 90ಕ್ಕೂ ಹೆಚ್ಚು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಮತ್ತು ನಾಯಕತ್ವ ಶಿಬಿರದ ಸಂಯೋಜಕರಾದ ಬಾಬಣ್ಣ ಶೆಟ್ಟಿಗಾರ್ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಮೇಘನಾ ಹೆಗಡೆ ಅತಿಥಿಗಳನ್ನು ಸ್ವಾಗತಿಸಿದರು. ಸಚಿನ್ ಕಾಮತ್ ಅವರು ಎಂ. ಆರ್. ಪೈ ಫೌಂಡೇಶನ್, ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶದ ಬಗ್ಗೆ ಪ್ರಸ್ತಾಪಿಸಿದರು. ಡಾ. ಅಂಜನಿ ವರ್ಮಾ ವಂದಿಸಿದರು.

ಎನ್‌ಡಿಎ ಲಿಖಿತ ಪರೀಕ್ಷೆಯಲ್ಲಿ ಎಕ್ಸಲೆಂಟ್ 2 ವಿದ್ಯಾರ್ಥಿಗಳು ತೇರ್ಗಡೆ

Article Image

ಎನ್‌ಡಿಎ ಲಿಖಿತ ಪರೀಕ್ಷೆಯಲ್ಲಿ ಎಕ್ಸಲೆಂಟ್ 2 ವಿದ್ಯಾರ್ಥಿಗಳು ತೇರ್ಗಡೆ

ಎಕ್ಸಲೆಂಟ್ ಮೂಡಬಿದಿರೆ: ಎನ್‌ಡಿಎ ಲಿಖಿತ ಪರೀಕ್ಷೆ 2 ವಿದ್ಯಾರ್ಥಿಗಳು ತೇರ್ಗಡೆ ಇತ್ತೇಚೆಗೆ ನಡೆದ ದೇಶದ ಪ್ರತಿಷ್ಠಿತ ಎನ್‌ಡಿಎ (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ) ಲಿಖಿತ ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು, ಕಲ್ಲಬೆಟ್ಟು, ಮೂಡಬಿದಿರೆಯ 2 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಸಂದರ್ಶನಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಮುಖ್, ದಿವ್ಯೇಶ್ ತೇರ್ಗಡೆಗೊಂಡಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.

ವೇಣೂರು ಐಟಿಐಗೆ ಶೇಕಡ 100 ಫಲಿತಾಂಶ

Article Image

ವೇಣೂರು ಐಟಿಐಗೆ ಶೇಕಡ 100 ಫಲಿತಾಂಶ

ವೇಣೂರು: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಗೆ ಆಗಸ್ಟ್ 2024ರಲ್ಲಿ ನಡೆದ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ದೊರೆತಿದೆ. ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಟರ್ನರ್, ಮೆಕ್ಯಾನಿಕ್ ಮೋಟಾರ್ ವಾಹನ, ರೆಫ್ರಿಜರೇಟರ್ ಎಸಿ ಟೆಕ್ನಿಷಿಯನ್ ವೃತ್ತಿಗಳಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದಲ್ಲಿ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಶೇಕಡ 100 ಫಲಿತಾಂಶ ದೊರೆತಿದೆ. ಒಂದು ವರ್ಷದ ವೃತ್ತಿ ಘಟಕಗಳಾದ ಮೆಕ್ಯಾನಿಕ್ ಡೀಸೆಲ್ ವೃತ್ತಿಯಲ್ಲಿ ಶೇಕಡ 98, ವೆಲ್ಡರ್ ವೃತ್ತಿಯಲ್ಲಿ ಶೇಕಡ 92 ಫಲಿತಾಂಶ ಬಂದಿದ್ದು ಒಟ್ಟು 314 ಅಭ್ಯರ್ಥಿಗಳಲ್ಲಿ 310 ಮಂದಿ ತೇರ್ಗಡೆ ಹೊಂದಿರುತ್ತಾರೆ. ಈಗಾಗಲೇ ಕ್ಯಾಂಪಸ್ ನ ಮೂಲಕ ವಿವಿಧ ಬಹುರಾಷ್ಟ್ರೀಯ ಕಂಪನಿಗಳಿಗೆ ಆಯ್ಕೆಗೊಂಡಿರುವ ಈ ಎಲ್ಲಾ ವಿದ್ಯಾರ್ಥಿಗಳು ಕಂಪನಿಗಳಲ್ಲಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿರುತ್ತಾರೆ. ಸಂಸ್ಥೆಯ ಉತ್ತಮ ಫಲಿತಾಂಶಕ್ಕಾಗಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕಾರ್ಯದರ್ಶಿಗಳಾದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಮತ್ತು ಡಾ. ಸತೀಶ್ಚಂದ್ರ ಎಸ್. ಇವರು ಸಿಬ್ಬಂದಿಗಳನ್ನು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ ಎಂದು ಸಂಸ್ಥೆಯ ಪ್ರಾಚಾರ್ಯರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

PDO ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ

Article Image

PDO ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ

ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಕೆಲವು ತಿಂಗಳ ಹಿಂದೆಯಷ್ಟೇ ಕರ್ನಾಟಕ ಲೋಕಸೇವಾ ಆಯೋಗವು(KPSC) ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು ಮತ್ತು ಅರ್ಜಿ ಸಲ್ಲಿಕೆಗೆ ನೀಡಿದ್ದ ಕೊನೆ ದಿನಾಂಕ ಕೂಡ ಮುಗಿದಿತ್ತು. ಆದರೆ ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗಾಗಿ ಒಂದು ಮಹತ್ವದ ಆದೇಶ ಹೊರಡಿಸಿದ್ದಾರೆ. ಅದೇನೆಂದರೆ, ಸೆಪ್ಟೆಂಬರ್ 10. 2024ರ CSE 166 SEN 2014 ಪ್ರಕಾರ ಒಂದು ಬಾರಿಗೆ ಅನ್ವಯವಾಗುವಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಮೂರು ವರ್ಷಗಳ ಕಾಲ ಹೆಚ್ಚಿನ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಹೀಗಾಗಿ PDO ಹುದ್ದೆಗಳಿಗೆ KPSC ಮತ್ತೊಮ್ಮೆ ಅರ್ಜಿ ಆಹ್ವಾನ ಮಾಡಿದೆ. ಕಾರಣಾಂತರಗಳಿಂದ ಈ ಹಿಂದೆ ಅರ್ಜಿ ಸಲ್ಲಿಸಲಾಗದವರು ಹಾಗೂ ವಯಸ್ಸಿನ ಮಿತಿ ಹೆಚ್ಚಿದ್ದ ಕಾರಣದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ನಿರಾಸರಾಗಿದ್ದವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ನೇಮಕಾತಿ ಸಂಸ್ಥೆ:- ಕರ್ನಾಟಕ ಲೋಕಸೇವಾ ಆಯೋಗ (KPSC) ಉದ್ಯೋಗ ಸಂಸ್ಥೆ:- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹುದ್ದೆ ಹೆಸರು:- ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಒಟ್ಟು ಹುದ್ದೆಗಳ ಸಂಖ್ಯೆ:- 247 ಹುದ್ದೆಗಳು ಹುದ್ದೆಗಳ ವಿವರ:- * ಹೈದರಬಾದ್ ಕರ್ನಾಟಕ – 97 ಹುದ್ದೆಗಳು * ಸಾಮಾನ್ಯ – 150 ಹುದ್ದೆಗಳು ಉದ್ಯೋಗ ಸ್ಥಳ:- ಕರ್ನಾಟಕದ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನ ಶ್ರೇಣಿಯೊಂದಿಗೆ ಇತರೆ ಸರ್ಕಾರಿ ಸೌಲಭ್ಯಗಳು ಕೂಡ ಸಿಗುತ್ತವೆ ಶೈಕ್ಷಣಿಕ ವಿದ್ಯಾರ್ಹತೆ:- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಭಾಗದಲ್ಲಿ ಪದವಿ ಉತ್ತೀರ್ಣರಾಗಿರಬೇಕು. ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ:- * ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಕನಿಷ್ಠ ವಯೋಮಿತಿ 18 ವರ್ಷಗಳು * ರಾಜ್ಯ ಸರ್ಕಾರವು ಸೆಪ್ಟೆಂಬರ್ 10 ರಂದು ಜಾರಿ ಮಾಡಿರುವ ಆದೇಶದಲ್ಲಿ ಎಲ್ಲಾ ಪ್ರವರ್ಗಗಳಿಗೆ ಒಂದು ಬಾರಿಗೆ ಅನ್ವಯಿಸುವಂತೆ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆ ನೀಡಿರುತ್ತದೆ. ಆ ಪ್ರಕಾರವಾಗಿ ಗರಿಷ್ಠ ವಯೋಮಿತಿ * ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 38 ವರ್ಷಗಳು * ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ 41 ವರ್ಷ * ಪ.ಜಾ, ಪ.ಪಂ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ 43 ವರ್ಷ ಅರ್ಜಿ ಸಲ್ಲಿಸುವ ವಿಧಾನ:- * ಆನ್ ಲೈನ್ ವಿಧಾನದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ * KPSC website ಗೆ ಭೇಟಿ ನೀಡಿ PDO ಅಪ್ಲಿಕೇಶನ್ ವಿಭಾಗಕ್ಕೆ ತೆರಳಿ, ಲಿಂಕ್ ಕ್ಲಿಕ್ ಮಾಡಿ ಕೇಳಲಾಗುವ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು * ಪೂರಕ ದಾಖಲೆಗಳನ್ನು ಕೂಡ ಸೂಚನೆ ಪ್ರಕಾರವಾಗಿ ಸಲ್ಲಿಸಬೇಕು * ನಿಮ್ಮ ವರ್ಗಕ್ಕೆ ಅನುಕೂಲವಾಗುವ ಅರ್ಜಿ ಶುಲ್ಕ ಪಾವತಿಸಿ, ಇ-ರಸೀದಿ ಪಡೆಯಿರಿ * ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪಡೆದುಕೊಳ್ಳಿ. ಅರ್ಜಿ ಶುಲ್ಕ:- * ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600 * ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ ರೂ.300 * ಪ.ಜಾ, ಪ.ಪಂ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ * ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50 ಆಯ್ಕೆ ವಿಧಾನ:- * ಸ್ಪರ್ಧಾತ್ಮಕ ಪರೀಕ್ಷೆ * ನೇರ ಸಂದರ್ಶನ * ದಾಖಲೆಗಳ ಪರಿಶೀಲನೆ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಬಗ್ಗೆ ಪ್ರಬಂಧ ಸ್ಪರ್ಧೆ

Article Image

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಬಗ್ಗೆ ಪ್ರಬಂಧ ಸ್ಪರ್ಧೆ

ಕಲ್ಕೂರ ಪ್ರತಿಷ್ಠಾನ, ಮಂಗಳೂರು ಇದರ ಆಶ್ರಯದಲ್ಲಿ 2024, ಅಕ್ಟೋಬರ್ 10ರಂದು ಡಾ. ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವ ಕಾರಂತ ಹುಟ್ಟುಹಬ್ಬ ಸಮಾರಂಭವು ಜರಗಲಿದ್ದು, ಇದರ ಸಲುವಾಗಿ ಕಾರಂತರ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಾಲೇಜು ಹಾಗೂ ಮುಕ್ತ ಎಂಬ 2 ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮೂರು ಪುಟಕ್ಕೆ ಮೀರದಂತೆ ಪ್ರಬಂಧವನ್ನು ಅಕ್ಟೋಬರ್ 6, 2024ರೊಳಗಾಗಿ ಸ್ವ ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿ ರಸ್ತೆ, ಕೊಡಿಯಾಲ್‌ ಬೈಲ್, ಮಂಗಳೂರು ಈ ವಿಳಾಸಕ್ಕೆ ತಲುಪುವಂತೆ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಬಂಧದ ವಿಷಯ ಕಾಲೇಜು ವಿಭಾಗ : ಕಾರಂತರ ವಿಜ್ಞಾನ ಸಾಹಿತ್ಯ ಮಕ್ಕಳ ಸಾಹಿತ್ಯ ಅವಲೋಕನ, ಅನುಸಂಧಾನ ಮುಕ್ತ ವಿಭಾಗ : ಕಾರಂತರ ಸಾಹಿತ್ಯ (ಕಾದಂಬರಿಗಳು) ಅವಲೋಕನ, ಅನುಸಂಧಾನ

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಕಾವ್ಯ ರಚನಾ ಕಮ್ಮಟ

Article Image

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಕಾವ್ಯ ರಚನಾ ಕಮ್ಮಟ

ಉಜಿರೆ, ಸೆ.12: ಸಾಹಿತ್ಯವೆನ್ನುವುದು ಸಮುದ್ರ ಇದ್ದಂತೆ. ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಡೀ ಜಗತ್ತಿನ ಸಾಹಿತ್ಯ ತಿಳಿಯಲು ಒಂದು ಜನ್ಮ ಸಾಕಾಗುವುದಿಲ್ಲ. ಯಾವ ಭಾವಕ್ಕೆ ಎಷ್ಟು ಒತ್ತು ನೀಡುತ್ತೇವೆ ಎಂಬುದು ಸಾಹಿತ್ಯದಲ್ಲಿ ಮುಖ್ಯವಾಗುತ್ತದೆ ಎಂದು ಯುವ ಕವಿ, ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಮಧು ಬಿರಾದಾರ ಹೇಳಿದರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಕನ್ನಡ ಸಂಘದ ವತಿಯಿಂದ ಇಂದು (ಸೆ. 12) ಆಯೋಜಿಸಿದ್ದ ‘ಕಾವ್ಯ ಕಟ್ಟುವ ಬಗೆ’ ಕಾವ್ಯ ರಚನಾ ಕಮ್ಮಟದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಪಂಪ, ರನ್ನ, ಕುವೆಂಪು ಬರೆದಿರುವುದು ಮಹಾಭಾರತವೇ. ಆದರೆ ಅವರ ಕಾಲಘಟ್ಟ, ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿ ಬೇರೆಯಾಗಿದೆ. ಆದ್ದರಿಂದ ಅವರ ಕೃತಿ ವಿಶಿಷ್ಟತೆ ಹೊಂದಿದೆ. ಪ್ರವಾಹದ ಎದುರು ನಿಲ್ಲುವ ಕವಿಗಳು ಮಾತ್ರ ನೆನಪಿನಲ್ಲಿ ಇರುತ್ತಾರೆ. ಅನುಭವವಿದ್ದರೆ ಕವನ ತುಂಬಾ ಸುಲಭವಾಗುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, “ಕವಿತೆ ಬರೆಯುವುದು ಬಲು ಸುಲಭ. ಇದಕ್ಕೆ ಸೂಕ್ಷ್ಮಗ್ರಹಿಕೆ, ಸಹೃದಯತೆ ಜತೆಗೆ ವಿದ್ಯಮಾನಗಳ ಕುರಿತು ಕುತೂಹಲವಿರಬೇಕು. ಇದರ ಮೇಲೆ ನಮ್ಮ ಅಂತರಂಗದಲ್ಲಿ ಮೂಡುವ ಭಾವನೆಗಳಿಗೆ ಅಕ್ಷರ ನೀಡಿದರೆ ಅದು ಕವನವಾಗುತ್ತದೆ” ಎಂದರು. “ಪ್ರಾಸ, ಭಾವ ಪೂರ್ಣವಾಗಿದ್ದರೆ ಅದುವೇ ಕಾವ್ಯ. ಭಾವನಾತ್ಮಕವಾಗಿ ನಮ್ಮನ್ನು ಹಿಂದಕ್ಕೆ ಕರೆದೊಯ್ಯುವ ಶಕ್ತಿ ಕಾವ್ಯಕ್ಕಿದೆ. ನಾವು ಹಿಂದೆ ಕೇಳಿದ ಪದ್ಯಗಳನ್ನು ಮತ್ತೆ ಕೇಳಿದಾಗ ನಮ್ಮ ಹಿಂದಿನ ದಿನಗಳು ನೆನಪಾಗುತ್ತವೆ” ಎಂದರು. ಕನ್ನಡ ಅಧ್ಯಾಪಕರಾದ ಡಾ. ದಿವಾಕರ ಕೊಕ್ಕಡ, ಡಾ ಎಂ.ಪಿ. ಶ್ರೀನಾಥ್, ಡಾ. ರಾಜಶೇಖರ್, ಭವ್ಯಶ್ರೀ, ತೇಜಸ್ವಿ ಕಾರ್ಯಕ್ರಮ ಸಂಯೋಜಕ ಡಾ. ನಾಗಣ್ಣ ಡಿ.ಎ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ. ಎನ್. ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಉಲ್ಲೇಖ ವಂದಿಸಿ, ಹಿಮಾಲಿ ಎಂ. ಪಿ. ಕಾರ್ಯಕ್ರಮ ನಿರೂಪಿಸಿದರು.

ಎಸ್.ಡಿ.ಎಂ. ಪಿ.ಜಿ ಸೆಂಟರ್ ಓರಿಯೆಂಟೇಶನ್ ಕಾರ್ಯಕ್ರಮ

Article Image

ಎಸ್.ಡಿ.ಎಂ. ಪಿ.ಜಿ ಸೆಂಟರ್ ಓರಿಯೆಂಟೇಶನ್ ಕಾರ್ಯಕ್ರಮ

ಉಜಿರೆ: ಕೌಶಲ್ಯಗಳನ್ನು ನವೀಕರಿಸಿಕೊಂಡು ಜ್ಞಾನಾಧಾರಿತ ಸಂಶೋಧನಾ ಪ್ರಜ್ಞೆ ಮತ್ತು ಅನ್ವಯಿಕ ಸಾಮರ್ಥ್ಯದೊಂದಿಗೆ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರುಗೊಂಡಾಗ ಮಾತ್ರ ಅಚ್ಚಳಿಯದ ಪ್ರಭಾವ ಮೂಡಿಸಿ ಯಶಸ್ಸುಗಳಿಸಲು ಸಾಧ್ಯ ಎಂದು ಬೆಂಗಳೂರಿನ ಸಿಗ್ಮಾ ಅಲ್ಡಿಜ್ ಕಂಪನಿಯ ತಾಂತ್ರಿಕ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ, ಮುಖ್ಯಸ್ಥ ಡಾ. ರವೀಂದ್ರ ವಿಕ್ರಮ್ ಸಿಂಗ್ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಿಗೆ ಪ್ರವೇಶಾತಿ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಉದ್ದೇಶದಿಂದ ಇಂದ್ರಪ್ರಸ್ಥ ಸಭಾಂಗಣದಲ್ಲಿ ಗುರುವಾರ ಆಯೋಜಿತವಾದ ಕಾರ್ಯಕ್ರಮದಲ್ಲಿ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ ಸಿಕ್ಕಿತು. ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಹತ್ತು ವರ್ಷಗಳ ಹಿಂದಿನ ಕೌಶಲ್ಯಗಳು ಇದೀಗ ಅನ್ವಯಗೊಳ್ಳುವುದಿಲ್ಲ. ಕೋವಿಡ್ ನಂತರದ ಜಗತ್ತು ತಾಂತ್ರಿಕವಾಗಿ ಬದಲಾಗಿದೆ. ಹಳೆಯ ಕೌಶಲ್ಯಗಳ ನವೀಕರಣ ಇಂದಿನ ಅಗತ್ಯ. ತಂತ್ರಜ್ಞಾನವನ್ನು ನಿರಾಕರಿಸುವಂತಿಲ್ಲ. ಅದನ್ನು ಟೀಕಿಸಿ ದೂರ ನಿಲ್ಲುವಂತಿಲ್ಲ. ಬದುಕಿನ ಪ್ರತಿಯೊಂದು ಕ್ಷೇತ್ರಗಳಲ್ಲಿ ತಂತ್ರಜ್ಞಾನ ಹಾಸುಹೊಕ್ಕಾಗಿದೆ. ಅದರ ಮೇಲೆ ಅತಿಯಾದ ಅವಲಂಬನೆಯಾಗದೇ ಸ್ವಯಂ ಸಾಮರ್ಥ್ಯದ ಅಧಾರದಲ್ಲಿ ಮುನ್ನೆಡೆಯುವ ವಿವೇಕದೊಂದಿಗೆ ಇದ್ದಾಗ ಸಾರ್ವಕಾಲಿಕ ಗೆಲುವು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಆ ಕ್ಷಣದ ಅನಿವಾರ್ಯತೆ ಮತ್ತು ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ವ್ಯಕ್ತಿಗತ ಮತ್ತು ವೃತ್ತಿಪರ ಬೆಳವಣಿಗೆಯನ್ನು ಕಂಡುಕೊಳ್ಳಬೇಕು. ತಂತ್ರಜ್ಞಾನದ ವೇಗವನ್ನು ಕಂಡುಕೊಂಡು ಅದಕ್ಕನುಗುಣವಾಗಿ ವೃತ್ತಿಪರತೆಯ ಶ್ರೇಷ್ಠತೆಯ ಮಜಲುಗಳನ್ನು ದಾಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಹಂತದ ಕಲಿಕೆಯ ಹಾದಿಯನ್ನು ಯಶಸ್ವಿಯಾಗಿ ನಿರ್ವಹಿಸುವುದರ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಜ್ಞಾನ, ಸ್ಪರ್ಧಾತ್ಮಕತೆ, ತಾರ್ಕಿಕ ಚಿಂತನೆ, ಕೌಶಲ್ಯ ಮತ್ತು ವಿವೇಚನಾತ್ಮಕ ಎಚ್ಚರದ ಹೊಳಹುಗಳೊಂದಿಗೆ ವಿದ್ಯಾರ್ಥಿಗಳು ಸಾಧನೆಯ ಹಾದಿಯನ್ನು ಕ್ರಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ ವಿದ್ಯಾರ್ಥಿಗಳು ಸ್ನಾತಕೋತ್ತರ ಹಂತದಲ್ಲಿ ವಿಸ್ತೃತ ಜ್ಞಾನಾರ್ಜನೆಯ ತುಡಿತ ಮತ್ತು ಪ್ರಾಯೋಗಿಕ ಅನ್ವಯಿಕತೆಯ ಪ್ರಜ್ಞೆಯೊಂದಿಗೆ ಕಲಿಕೆಯನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕು ಎಂದು ನುಡಿದರು. ಎಸ್.ಡಿ.ಎಂ ಕಾಲೇಜಿನ ಉಪಪ್ರಾಂಶುಪಾಲರಾದ ಎಸ್.ಎನ್. ಕಾಕತ್ಕರ್ ಸ್ವಾಗತಿಸಿದರು. ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗದ ಸಹಪ್ರಾದ್ಯಾಪಕರಾದ ಡಾ. ನೆಫಿಸತ್ ಪಿ. ಹಾಗೂ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾದ್ಯಾಪಕರಾದ ಸ್ವಾತಿ ಬಿ. ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ ವಂದಿಸಿದರು. ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊರತಂದ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಸಮಗ್ರ ವಿವರಗಳನ್ನೊಳಗೊಂಡ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಯುವನಿಧಿ: ಅರ್ಜಿ ಆಹ್ವಾನ

Article Image

ಯುವನಿಧಿ: ಅರ್ಜಿ ಆಹ್ವಾನ

ಯುವನಿಧಿ ಯೋಜನೆಗೆ 2023 ಹಾಗೂ 2024ನೇ ಸಾಲಿನಲ್ಲಿ ಯಾವುದೇ ವೃತ್ತಿ ಪರ ಕೋರ್ಸ್, ಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ 6 ತಿಂಗಳವರೆಗೆ (180 ದಿನ) ಉದ್ಯೋಗ ಸಿಗದ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗರಾಗಿರಬೇಕು. ವಾಸವಿರುವ ವಿದ್ಯಾರ್ಥಿ ಎಂದರೆ ಕರ್ನಾಟಕದಲ್ಲಿ ಕನಿಷ್ಠ 6 ವರ್ಷಗಳವರೆಗೆ ಪದವಿ/ಡಿಪ್ಲೊಮಾ/ಸ್ನಾತಕೋತ್ತರ ಪದವಿವರೆಗೆ ಅಧ್ಯಯನ ಮಾಡಿದವರು. ಅರ್ಜಿ ಸಲ್ಲಿಸಿದ ದಿನದಿಂದ ಉದ್ಯೋಗ ಸಿಗುವವರೆಗೆ ಮಾತ್ರ ಅಥವಾ ಗರಿಷ್ಠ 2 ವರ್ಷ ಅವಧಿಯವರೆಗೆ ಮಾತ್ರ ಈ ಭತ್ತೆ ಸಿಗಲಿದೆ. ದಕ್ಷಿಣ ಕನ್ನಡದಲ್ಲಿ ಒಟ್ಟು 4,023 ಅಭ್ಯರ್ಥಿಗಳು ಯುವನಿಧಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 3,328 ಫಲಾನುಭವಿಗಳಿಗೆ ಜುಲೈ-2024ರ ಅಂತ್ಯಕ್ಕೆ ಒಟ್ಟು 2,02,69,500 ರೂ. ಡಿ.ಬಿ.ಟಿ ಮೂಲಕ ಫಲಾನುಭವಿಗಳ ಖಾತೆಗೆ ಜಮೆಯಾಗಿರುತ್ತದೆ. ಅರ್ಜಿ ಸಲ್ಲಿಸುವ ವಿಧಾನ https://sevasindhugs. karnataka.gov.in ಮೂಲಕ ಲಾಗಿನ್ ಆಗಿ ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು ಮೂಲಕವೂ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನೇರ ನಗದು ವರ್ಗಾವಣೆಗಳನ್ನು (ಡಿಬಿಟಿ) ಸ್ವೀಕರಿಸಲು ಮೊಬೈಲ್‌ ಸಂಖ್ಯೆಗೆ ಜೋಡಣೆ ಆದ ಆಧಾ‌ರ್ ಸಂಖ್ಯೆಯ ಬ್ಯಾಂಕ್‌ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಸ್ವಯಂ-ದೃಢೀಕರಣ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪ್ರತಿ ತಿಂಗಳು ಪಡೆಯಬೇಕಿದ್ದರೆ, ಪ್ರತಿ ತಿಂಗಳು 25ನೇ ತಾರೀಕಿನೊಳಗೆ ತಾನು ನಿರುದ್ಯೋಗಿ, ವ್ಯಾಸಂಗ ಮುಂದುವರಿಸುತ್ತಿಲ್ಲ ಹಾಗೂ ಸ್ವಯಂ ಉದ್ಯೋಗಿಯಲ್ಲವೆಂದು https://sevasindhugs.karnataka.gov.in ಸ್ವಯಂ ಘೋಷಣೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

First Previous

Showing 4 of 7 pages

Next Last