ಎಕ್ಸಲೆಂಟ್: ವಾರ್ಷಿಕ ವಿಶೇಷ ಶಿಬಿರ
ಮೂಡುಬಿದಿರೆ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಬೋರುಗುಡ್ಡೆ, ನೆಲ್ಲಿಕಾರು ಇಲ್ಲಿ ವಿಧ್ಯುಕ್ತವಾಗಿ ಆರಂಭಗೊಂಡಿತು. ಶಿಬಿರವನ್ನು ಕರ್ನಾಟಕ ಸರಕಾರದ ಮಾಜಿ ಸಚಿವರು ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ರಾಷ್ಟ್ರೀಯ ಸೇವಾ ಯೋಜನೆ ಎಂದರೆ ಕೇವಲ ಶಿಬಿರವನ್ನು ನಡೆಸುವುದಲ್ಲ; ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಹೊಣೆಗಾರಿಕೆ, ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಸಾರ್ಥಕ ವೇದಿಕೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೇ ಮರಳಿಸುವ ಮನೋಭಾವ ಯುವಜನರಲ್ಲಿ ಮೂಡಿದಾಗ ಮಾತ್ರ ಶಿಕ್ಷಣ ತನ್ನ ನಿಜವಾದ ಅರ್ಥವನ್ನು ಪಡೆದುಕೊಳ್ಳುತ್ತದೆ. ಗ್ರಾಮೀಣ ಬದುಕಿನೊಂದಿಗೆ ಬೆರೆತು, ಜನರ ಸಮಸ್ಯೆಗಳನ್ನು ಅರಿತು, ಅವುಗಳಿಗೆ ಸ್ಪಂದಿಸುವ ಅನುಭವ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಮೃದ್ಧಗೊಳಿಸುತ್ತದೆ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಮೂಡುಬಿದಿರೆ ಆಡಳಿತ ನಿರ್ದೇಶಕರಾದ ಡಾ. ಬಿ.ಪಿ. ಸಂಪತ್ ಕುಮಾರ್ ರವರು ಮಾತನಾಡುತ್ತಾ, “ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳನ್ನು ಸಮಾಜದ ನೈಜ ಬದುಕಿನತ್ತ ಕರೆದೊಯ್ಯುವ ಶೈಕ್ಷಣಿಕ ಪ್ರಕ್ರಿಯೆಯಾಗಿದೆ. ಸೇವೆಯ ಮೂಲಕ ಶ್ರಮದ ಮಹತ್ವ, ಸಹಬಾಳ್ವೆಯ ಮೌಲ್ಯ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಳ್ಳಲು ವಿದ್ಯಾರ್ಥಿಗಳಿಗೆ ಈ ಶಿಬಿರ ಉತ್ತಮ ಅವಕಾಶ. ಇಲ್ಲಿ ಕಲಿಯುವ ಪ್ರತಿಯೊಂದು ಅನುಭವವೂ ಅವರ ಮುಂದಿನ ಬದುಕಿಗೆ ದಾರಿದೀಪವಾಗಬೇಕು” ಎಂದರು. ಕಾರ್ಯಕ್ರಮದಲ್ಲಿ ಶ್ರೀ ಚಾಮುಂಡಿ ದೇವಸ್ಥಾನದ ಆನುವಂಶಿಕ ಆಡಳಿತ ಮುಖ್ಯಸ್ಥರಾದ ಮಹಾವೀರ ಹೆಗ್ಡೆ ಬಡಕೋಡಿಗುತ್ತು, ಪಿಡಬ್ಲ್ಯುಡಿ ಗುತ್ತಿಗೆದಾರರಾದ ಮಧ್ವರಾಜ್ ಜೈನ್, ನೆಲ್ಲಿಕಾರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಉದಯ ಪೂಜಾರಿ, ಸತ್ಯಪುರ ಸತ್ಯನಾರಾಯಣ ದೇವಸ್ಥಾನದ ಅಧ್ಯಕ್ಷರಾದ ಜಯಂತ ಹೆಗ್ಡೆ, ಬೋರುಗುಡ್ಡೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಸತೀಶ್, ಮುಖ್ಯ ಶಿಕ್ಷಕಿ ಸುಜಾತ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರವೀಣ್ ಕೆ., ಊರಿನ ಪ್ರಮುಖರಾದ ಸುಂದರ ಹೆಗ್ಡೆ ಹಾಗೂ ಪಿಜಿನ ಪೂಜಾರಿ, ವಿದ್ಯಾರ್ಥಿ ನಾಯಕ ಅದಿತ್ ಶಿಬಿರದ ನಾಯಕರುಗಳಾದ ನಂದನ್ ಹಾಗೂ ಹಿಮಾನಿ ಉಪಸ್ಥಿತರಿದ್ದರು. ಶಿಬಿರಾಧಿಕಾರಿ ಅಶೋಕ್. ಪಿ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಶಾಂತ ಶೆಟ್ಟಿ ವಂದಿಸಿದರು. ಉಪನ್ಯಾಸಕಿ ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು.
