ಧಾರವಾಡ: ಹೊರ ರೋಗಿ ವಿಭಾಗದ ನೊಂದಣಿ ಆ್ಯಪ್ ಉದ್ಘಾಟನೆ
Published Date: 09-Jun-2024
ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇತ್ತೀಚಿಗೆ ಹೊರ ರೋಗಿಗಳ ಅನುಕೂಲಕ್ಕಾಗಿ ಆನ್‌ಲೈನ್‌ನಲ್ಲಿ ನೊಂದಣಿ ಮಾಡಲು ಮಾದರಿ(ಆ್ಯಪ್)ಅನ್ನು ಉದ್ಘಾಟಿಸಿದರು. ಈ ಮಾದರಿಯಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದ ಪಾಲಿಕ್ಲಿನಿಕ್‌ಗಳಲ್ಲಿ ವೈದ್ಯರ ಲಭ್ಯತೆಯ ಬಗ್ಗೆ ಮಾಹಿತಿ ಮತ್ತು ರೋಗಿಗಳು ತಮಗೆ ಅನುಕೂಲದ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು. ಇದು ಶೀಘ್ರದಲ್ಲೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ. ಎಸ್.ಡಿ.ಎಂ. ಪಾಲಿಕ್ಲಿನಿಕ್ ಧಾರವಾಡದಲ್ಲಿ ಜುಬಲಿ ಸರ್ಕಲ್ ಬಳಿಯ ವಿ.ಜೆ.ಹೌಸ್‌ನಲ್ಲಿ ಮತ್ತು ಹುಬ್ಬಳ್ಳಿಯಲ್ಲಿ ಎಸ್.ಡಿ.ಎಂ. ಪಾಲಿಕ್ಲಿನಿಕ್ ವಿದ್ಯಾನಗರದ, ಗುರುದತ್ತ ಭವನದ ಹತ್ತಿರ ಕಾರ್ಯನಿರ್ವಹಿಸುತ್ತದೆ. ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಮಖ್ದೂಮ್ ಕಿಲ್ಲೆದಾರ ಅವರು ಪ್ರಾತ್ಯಕ್ಷಿಕೆಯೊಂದಿಗೆ ಆ್ಯಪ್ ಕುರಿತು ಕುಲಪತಿಗಳಿಗೆ ಮಾಹಿತಿ ನೀಡಿದರು. ಎಸ್.ಡಿ.ಎಂ. ಆಸ್ಪತ್ರೆಯ ಯುರಾಲಜಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಥುಲಿಯಮ್ ಲೇಸರ 60 ವ್ಯಾಟ್ ಯಂತ್ರ ಮತ್ತು ಫ್ಲೆಕ್ಸಿಬಲ್ ಯುರೆಟೆರೊಸ್ಕೋಪ್‌ಅನ್ನು ಉದ್ಘಾಟಿಸಿದರು. ಇದು ಪ್ರಸ್ತುತ ವಿಶ್ವದ ಆಧುನಿಕ ಲೇಸರ್ ತಂತ್ರಜ್ಞಾನವಾಗಿದ್ದು ಇದರ ಸಹಾಯದಿಂದ ಮೂತ್ರಪಿಂಡ ಕಲ್ಲುಗಳು, ಮೂತ್ರನಾಳದ ಕಲ್ಲುಗಳು, ಮೂತ್ರಪಿಂಡದ ಕ್ಯಾನ್ಸರ್, ವಿವಿಧ ಮೂತ್ರಶಾಶಸ್ತ್ರದ ಸಮಸ್ಯೆಗಳಿಗೆ ರಕ್ತಸ್ರಾವವಿಲ್ಲದೆ, ಕಡಿಮೆ ನೋವು, ಶಸ್ತ್ರ ಚಿಕಿತ್ಸೆಯ ನಂತರದ ಗಾಯಗಳಿಲ್ಲದೇ ಚಿಕಿತ್ಸೆ ನೀಡಬಹುದಾಗಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳಲು ಇದು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಹೃದಯ ಸಂಬಂಧಿ ಕಾಯಿಲೆಗಳಿಗೂ ಈ ಯಂತ್ರವನ್ನು ಬಳಸಬಹುದು. ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ, ಕಾರ್ಯನಿರ್ವಾಹಕ ನಿದೇಶಕಿಯವರಾದ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿಗಳಾದ ವಿ. ಜೀವಂಧರ ಕುಮಾರ, ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ ಹೆಗ್ಡೆ, ಉಪಸ್ಥಿತರಿದ್ದರು. ಯುರಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಿವಾಸ ಕಲಭಾವಿ ಅವರು ಉಪಕರಣಗಳ ಕಾರ್ಯನಿರ್ವಹಿಸುವ ಕುರಿತು ಪ್ರಾತ್ಯಕ್ಷಿತೆ ನೀಡಿದರು.