ಧರ್ಮಸ್ಥಳ ಬಸದಿಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ
Published Date: 21-May-2024
ಧರ್ಮಸ್ಥಳ: ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ(ಮೇ.21) ತೋರಣ ಮುಹೂರ್ತ, ವಿಮಾನಶುದ್ಧಿ, ಆರಾಧನಾ ಪೂರ್ವಕ ಕ್ಷೇತ್ರಪಾಲ ಪ್ರತಿಷ್ಠೆ, ನವಕಲಶ ಅಭಿಷೇಕ ಮತ್ತು ನಾಂದಿಮಂಗಲ ಪೂಜಾವಿಧಾನ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು ಮತ್ತು ಊರಿನ ಶ್ರಾವಕರು- ಶ್ರಾವಕಿಯರು ಉಪಸ್ಥಿತರಿದ್ದರು. ಇಂದಿನ ಕಾರ್ಯಕ್ರಮ: ಇಂದು ಬುಧವಾರ ವಾಸ್ತುಪೂಜಾ ವಿಧಾನ, ಜಿನಸಹಸ್ರನಾಮ ಪುಷ್ಪಾರ್ಚನೆ, ಷೋಡಶ ಕಲಶಾಭಿಷೇಕ, ನವಗ್ರಹ ಮಹಾಶಾಂತಿ, ಮಹಾಮಂಗಳಾರತಿ ಮೊದಲಾದ ಕಾರ್ಯಕ್ರಮಗಳು ನಡೆಯುತ್ತವೆ. ನಾಳೆ ಗುರುವಾರ ಅಪರಾಹ್ನ ಗಂಟೆ 2.30 ರಿಂದ ಮಹಾಮಾತೆ ಶ್ರೀಪದ್ಮಾವತಿ ಅಮ್ಮನವರ ಆರಾಧನೆ, ಸಹಸ್ರನಾಮ ಕುಂಕುಮಾರ್ಚನೆ, ಪದ್ಮಾವತಿ ದೇವಿ ಪ್ರತಿಷ್ಠೆ, ಭವ್ಯ ಅಗ್ರೋದಕ ಮೆರವಣಿಗೆ ಮತ್ತು ಉತ್ಸವ ಸಹಿತ ಭಗವಾನ್ ಚಂದ್ರನಾಥ ಸ್ವಾಮಿಗೆ 108 ಕಲಶಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ.