ಕ ವಿ ವಿ ಜೈನ ಅಧ್ಯಯನ ಪೀಠ: ವಿಶೇಷ ಉಪನ್ಯಾಸ ಕಾರ್ಯಕ್ರಮ
Published Date: 03-Oct-2026
ಧಾರವಾಡ: ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪ್ರಾಚೀನ ಭಾಷೆ ಕನ್ನಡಕ್ಕೆ ಮತ್ತು ನಾಡಿನ ಸಂಸ್ಕೃತಿಗೆ ಜೈನ ಕವಿಗಳ ಕೊಡುಗೆ ಅಪಾರವಾಗಿದೆ. ರತ್ನತ್ರಯ ಕವಿಗಳೆಂದೇ ಹೆಸರಾದ ಪಂಪ, ರನ್ನ, ಪೊನ್ನ ಹಾಗೂ ಅಭಿನವ ಪಂಪ ಎಂದು ಹೆಸರಾದ ನಾಗಚಂದ್ರ, ಜನ್ನ, ನಯಸೇನ ಮುಂತಾದ ಹಲವಾರು ಜೈನ ಕವಿಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದರಲ್ಲದೆ ಅಹಿಂಸಾ ತತ್ವದ ಜೊತೆಗೆ ಸಮಾನತೆ, ಧಾರ್ಮಿಕ ಚಿಂತನೆ ಆಧ್ಯಾತ್ಮಿಕ ಮೌಲ್ಯಗಳನ್ನು ಮನುಕುಲಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ಅಭಿಪ್ರಾಯಪಟ್ಟರು. ಅವರು ಪರಮ ಪೂಜ್ಯ ಬಾಲಾಚಾರ್ಯ ಡಾ. ಸಿದ್ಧಸೇನ ಮುನಿಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಜೈನಶಾಸ್ತ್ರ ಅಧ್ಯಯನ ಪೀಠ ಹಾಗೂ ಜೆ ಎಸ್ ಎಸ್ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂಶೋಧನ ಕೇಂದ್ರ ಧಾರವಾಡ ಮತ್ತು ಸಮಸ್ತ ಜೈನ ಸಮಾಜ ಛಬ್ಬಿ ಇವುಗಳ ಸಹಯೋಗದಲ್ಲಿ ಜರುಗಿದ "ಸಾಹಿತ್ಯ-ಸಂಸ್ಕೃತಿ" ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕರಾಗಿ ಖ್ಯಾತ ವಾಗ್ಮಿಗಳು ನಿವೃತ್ತ ಪ್ರಾಧ್ಯಾಪಕರು ಆದ ಡಾ. ವೈ. ಎಂ. ಭಜಂತ್ರಿ ಇವರು "ಹಳಗನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ" ವಿಷಯ ಕುರಿತಾಗಿ ಅತ್ಯಂತ ಮಹತ್ವಪೂರ್ಣ ಮಾಹಿತಿ ನೀಡಿ ಅದ್ಭುತವಾದ ಉಪನ್ಯಾಸ ನೀಡಿದರು. ಅವರು ಜೈನ ಕವಿಗಳು ಹಳೆಗನ್ನಡ ಮತ್ತು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಶೈಲಿಯಲ್ಲಿ ಕಾವ್ಯಗಳನ್ನು ರಚಿಸಿ ಅಂದಿಗೆ ಇಂದಿಗೂ ಮುಂದೆಯೂ ಸದಾ ಸ್ಮರಿಸುವಂತ ವಿಶಿಷ್ಟ ಕೊಡುಗೆಯನ್ನು ನೀಡಿ ಸಾಹಿತ್ಯ ಪ್ರಪಂಚದಲ್ಲಿ ಅಜರಾಮರರಾಗಿದ್ದಾರೆ. ಕನ್ನಡ ಸಾಹಿತ್ಯವನ್ನು ಜೈನ ಕವಿಗಳಿಂದ ರಚನೆಯಾದ ಕೃತಿಗಳಿಂದ ಬೇರ್ಪಡಿಸಿ ನೋಡಿದರೆ ಅದು ಮನುಷ್ಯನ ಶರೀರದ ಅಸ್ತಿಪಂಜರದಂತೆ, ಹೂರಣ ತೆಗೆದ ಹೋಳಿಗೆಯಂತೆ ಕಾಣುತ್ತದೆ ಎಂದರು. ಜೈನ ಕವಿಗಳ ಕೊಡುಗೆಯಿಂದ ಕನ್ನಡ ಭಾಷೆಗೆ ಶಕ್ತಿ ತುಂಬಿದ್ದರಿಂದ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಲು ಕಾರಣವಾಗಿದೆ ಎಂದರು. ಜೈನ ಶಾಸ್ತ್ರ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಹಡಗಲಿ ಇವರು ಪ್ರಸ್ತಾವಿಕವಾಗಿ ಮಾತನಾಡಿ ಪೀಠ ನಡೆದು ಬಂದ ದಾರಿ ಮತ್ತು ಕಾರ್ಯಚಟುವಟಿಕೆಗಳನ್ನು ಹಾಗೂ ಮುಂದಿನ ಯೋಜನೆಗಳನ್ನು ಸವಿಸ್ತಾರವಾಗಿ ವಿವರಿಸಿದರು. ಸಾನಿಧ್ಯ ವಹಿಸಿದ ಪರಮ ಪೂಜ್ಯ ಬಾಲಾಚಾರ್ಯ ಡಾ. ಸಿದ್ದಸೇನ ಮುನಿಮಹಾರಾಜರು ತಮ್ಮ ಪ್ರವಚನದಲ್ಲಿ ಸಾಹಿತ್ಯ-ಸಂಸ್ಕೃತಿಯ ಉನ್ನತಿಗಾಗಿ ಶ್ರಮಿಸುತ್ತಿರುವ ಜೈನ ಪೀಠದ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ತ್ಯಾಗಿಗಳಾದ ಸೋಮದೇವ ಬಯ್ಯಾಜಿ, ರಾಜೇಂದ್ರ ಬಯ್ಯಾಜಿ, ಜೈನ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಶಾಂತರಾಜ ಮಲ್ಲಸಮುದ್ರ, ಧನಪಾಲ ಮುನ್ನೊಳ್ಳಿ, ಶಾಂತಿನಾಥ ಹೋತಪೇಟಿ, ಛಬ್ಬಿ ಜೈನ ಸಮಾಜದ ಅಧ್ಯಕ್ಷ ಅನಂತ ಕಲಘಟಗಿ, ಚಾತುರ್ಮಾಸ ಕಮಿಟಿ ಅಧ್ಯಕ್ಷ ರವಿ ಹುಲ್ಲಂಬಿ ಹಾಗೂ ಛಬ್ಬಿ ಗ್ರಾಮದ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಜೆ ಎಸ್ ಎಸ್ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ. ಭರಮಪ್ಪ ಭಾವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವರದಿ : ಎಸ್ ಆರ್ ಮಲ್ಲಸಮುದ್ರ