ಹಳಬಳ್ಳಿ ಕುಟುಂಬದ ಪುನರ್ಮಿಲನ ಕಾರ್ಯಕ್ರಮ
Published Date: 30-Sep-2026
ಸಾಗರ: ಇತ್ತೀಚಿನ ವರ್ಷಗಳಲ್ಲಿ ಜೈನ ಮಿಲನ, ಜಿನಸಮ್ಮಿಲನ, ಮುಂತಾದ ಕಾರ್ಯಕ್ರಮಗಳನ್ನು ನಾವು ನೋಡುತ್ತಿದ್ದೇವೆ. ಆದರೆ ಕುಟುಂಬ ಪುನರ್ಮಿಲನ ಎಂಬುದು ಒಂದು ಹೊಸ ಪರಿಕಲ್ಪನೆ. ಇದನ್ನು ರೂಪಿಸಿ ಸಾಧ್ಯವಾಗಿಸಿ ತೋರಿಸಿ ಕೊಟ್ಟಿದ್ದು ಸಾಗರ ತಾಲೂಕು ಭಾರಂಗಿ ಹೋಬಳಿಯ ಹಳಬಳ್ಳಿ ಕುಟುಂಬದವರು. ಇಂತಹ ಒಂದು ಹೊಸ ಮಾದರಿಯ ಕಾರ್ಯಕ್ರಮವನ್ನು ಹಳಬಳ್ಳಿ ಕುಟುಂಬದವರು ಕಾರ್ಗಲ್ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದರು. ಮೊದಲಿಗೆ ವೇದಿಕೆಯಲ್ಲಿ ಹಳಬಳ್ಳಿ ಕುಟುಂಬದ ಪೂರ್ವಜರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು. ಬಾಹುಬಲಿ ಎಂ ಎಂ ಇವರು ಕುಟುಂಬ ಪುನರ್ ಮಿಲನದ ಕಾರ್ಯಕ್ರಮದ ಪರಿಕಲ್ಪನೆ ತಿಳಿಸಿಕೊಡುತ್ತಾ ಪ್ರಸ್ತಾವಿಕವಾಗಿ ಮಾತನಾಡಿದರು. ಎಂ ಸುಂದರಪ್ರಭು ಇವರು ಹಳಬಳ್ಳಿ ಕುಟುಂಬದ ಇತಿಹಾಸದ ಪರಿಚಯ ಮಾಡಿಕೊಟ್ಟರು. ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಮಹಾವೀರ ಜೈನ ಇಚಲಂಪಾಡಿ ಅವರು ಅವಿಭಕ್ತ ಕುಟುಂಬದ ಹಿರಿಮೆ ಹಾಗೂ ಪ್ರಸ್ತುತ ಸಮಾಜದಲ್ಲಿ ಕುಟುಂಬಗಳ ಸಾಮರಸ್ಯದ ಅಗತ್ಯತೆ ಬಗ್ಗೆ ಉಪನ್ಯಾಸ ನೀಡಿದರು. ಹಳಬಳ್ಳಿ ವಂಶದ 21 ಕುಟುಂಬಗಳ 32 ಹಿರಿಯರನ್ನು ಈ ವೇದಿಕೆಯಲ್ಲಿ ಗೌರವಿಸಲಾಯಿತು. ಕುಟುಂಬದ ಅನೇಕ ಸದಸ್ಯರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಹಿರಿಯರನ್ನು ನೆನಪಿಸಿಕೊಂಡರು. ಹಳಬಳ್ಳಿ ಕುಟುಂಬದ ಚಂದ್ರಪ್ರಭ (ಬಾಲು) ಎಲ್ಲರನ್ನು ಸ್ವಾಗತ ಮಾಡಿದರು. ತಾರಾನಾಥ್ ಜೈನ್‌ರವರು ವಂದಿಸಿದರು. ಕವಿತಾ ಜೈನ್ ಆಯನೂರು ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ನಂತರ ಹಿರಿಯರಿಗೆ ಮತ್ತು ಕಿರಿಯರಿಗೆ ಆಟಗಳು ಸಂಗೀತ ಕೋಲಾಟ ನೃತ್ಯ ಮುಂತಾದ ಅನೇಕ ಮನರಂಜನೆ ಕಾರ್ಯಕ್ರಮಗಳು ನಡೆದವು. (ಸುಂದರಪ್ರಭು)