ಪ್ರಾಚೀನ ಜೈನ ಕೇಂದ್ರವಾಗಿ ಕೊಪ್ಪಳ ಕುರಿತು ಸಂಶೋಧನಾ ಪ್ರಬಂಧ ಮಂಡನೆ
Published Date: 15-Sep-2026
ರಾಯಚೂರು: ಹಂಪಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಆಶ್ರಯದಲ್ಲಿ ಹಾಗೂ ಲಕ್ಷ್ಮೀ ವೆಂಕಟೇಶ ದೇಸಾಯಿ ಮಹಾವಿದ್ಯಾಲಯ, ರಾಯಚೂರು ಇವರ ಸಹಯೋಗದಲ್ಲಿ, “ಅವಿಭಜಿತ ರಾಯಚೂರು ಜಿಲ್ಲೆಯ ಜೈನ ಮತ-ಪಂಥದ ಸಾಂಸ್ಕೃತಿಕ ಕೊಡುಗೆಗಳು: ಸಂಶೋಧನಾ ಸಾಧ್ಯತೆ ಮತ್ತು ಸವಾಲುಗಳು” ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣವು ಆಯೋಜಿಸಲಾಗಿತ್ತು. ಈ ರಾಷ್ಟ್ರೀಯ ಸಮ್ಮೇಳನದಲ್ಲಿ “ಪ್ರಾಚೀನ ಜೈನ ಕೇಂದ್ರವಾಗಿ ಕೊಪ್ಪಳ” ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ಜೈನ ಸಂಶೋಧಕ ಬೆಂಗಳೂರಿನ ನಿತಿನ್ ಹೆಚ್.ಪಿ.ರವರು ಮಂಡಿಸಿದರು. ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ - www.jainheritagecentres.com ಅಂತರ್ಜಾಲತಾಣದ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ವಿಪ್ರೋ ಕಂಪೆನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ನಿತಿನ್‌ರವರು 1,300 ವರ್ಷಗಳ ಕೊಪ್ಪಳದ ಜೈನ ಇತಿಹಾಸದ ಕುರಿತು ವಿಸ್ತೃತವಾದ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಶ್ರವಣಬೆಳಗೊಳವೂ ಸೇರಿದಂತೆ ಹಲವು ಸ್ಥಳಗಳಲ್ಲಿ ಕಂಡು ಬರುವ ಶಾಸನಗಳಲ್ಲಿ "ಆದಿತೀರ್ಥ" ಹಾಗೂ "ಮಹಾತೀರ್ಥ" ಎಂದು ಕರೆಯಲ್ಪಡುವ ಕೊಪ್ಪಳದ ವಿಶೇಷತೆ, ಕರ್ನಾಟಕದಲ್ಲಿ ಜೈನಧರ್ಮದ ಇತಿಹಾಸದಲ್ಲಿ ಕೊಪ್ಪಳಕ್ಕೂ ಶ್ರವಣಬೆಳಗೊಳಕ್ಕೆ ಸಮನಾದ ವಿಶಿಷ್ಠವಾದ ಸ್ಥಾನವಿದೆ ಎಂಬುದನ್ನು ಶಾಸನಾಧಾರಗಳಿಂದ ನಿರೂಪಿಸಿದರು. ಕರ್ನಾಟಕದಾದ್ಯಂತದಿಂದ ಆಗಮಿಸಿದ್ದ 20 ಸಂಶೋಧಕರು ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ಜೈನಧರ್ಮಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸಂಶೋಧನಾ ಪ್ರಬಂಧಗಳನ್ನು ಸಮ್ಮೇಳನದಲ್ಲಿ ಮಂಡಿಸಿದರು.