ಜೈನರಲ್ಲಿ ಗೌರಿ ನೊಂಪಿ


Logo

Published Date: 14-Sep-2026

"ಶ್ರೀಯೋ ಜಿನೇಂದ್ರಂ ಚಂದ್ರಸ್ಯ ಚರಣಾಂಭೋರುಹ ಧ್ವಯಂ|ನತ್ವಾ ಗೌರೀ ಕಥಾಂ ವಕ್ಪೈ ಶುಭ ಸೌಭಾಗ್ಯದಾಯಿನಿ/" ಜಂಬೂದ್ವೀಪದಲ್ಲಿ ಅಮರಾವತಿಗೆ ತಿಲಕನಾಗಿದ್ದ ಸಿಂಹಪುರ ಎಂಬ ಪಟ್ಟಣವನ್ನು ಆಳುತ್ತಿದ್ದ ಇಕ್ಷಾಕು ವಂಶದ ವಿಷ್ಣುವರ್ಧನ ಮಹಾರಾಜ ಧರ್ಮ ಕರ್ಮ ಪುಣ್ಯಾಭಿವೃದ್ಧಿಯನ್ನು ಹೆಚ್ಚಿಸುವ ನಂದಾ ಮಹಾದೇವಿ ಇತರೆ ಸ್ತ್ರೀ ರತ್ನಗಳೊಡನೆ ಕೂಡಿ ರಾಜ್ಯವಾಳುತ್ತಿದ್ದ. ಅವನ ಮಗನು ರಾಜ್ಯದ ಭವ್ಯಜನಗಳಿಗೆ ಶ್ರೇಯಸ್ಸನ್ನು ಕೊಡುವ ಶ್ರೇಯಾಂಸ ಜಿನೇಶ್ವರರ ಆರಾಧಿಸಿ ನಮಸ್ಕರಿಸಿ ಅವರ ಯಕ್ಷಿ ಗೌರಿದೇವಿಯ ನೊಂಪಿಯ ವಿಧಾನ ಮಾಡುವ ಬಗೆಯನ್ನು ತಿಳಿಸಲು ಕೇಳಿದಾಗ ನೊಂಪಿಯ ಆಚರಣೆ ಬಗ್ಗೆ ಒಂದು ಕಥೆಯನ್ನು ಹೇಳುತ್ತಾನೆ. ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕಾಂಭೋಜ ಎಂಬ ನಾಡಿನಲ್ಲಿ ಉಜ್ಜೇಯಿನಿ ಎಂಬ ನಗರವನ್ನು ಆಳುತ್ತಿದ್ದ ಶ್ರೇಯೋರಾಜ ಎಂಬ ಅರಸ ಮತ್ತು ಅವನ ಪತ್ನಿ ಶ್ರೇಯೋಮತಿ ಸುಖದಿಂದ ಬಾಳ್ವೆ ನಡಸುತ್ತಿರಬೇಕಾದರೆ ಕುಂಥುನಾಥ ಎಂಬ ಮುನಿಗಳು ಬಂದಾಪುರದ ಉದ್ಯಾನದಲ್ಲಿ ವಿಹಾರ ನಿಮಿತ್ತವಾಗಿ ಬಂದು ತಂಗಿದ್ದರು ಇವರ ಇರುವಿಕೆಯನ್ನು ತಿಳಿದು ಪುರಜನರೊಂದಿಗೆ ಅಲ್ಲಿಗೆ ತೆರಳಿದ ರಾಣಿ ಮುನೀಂದ್ರರಿಗೆ ನಮಸ್ಕರಿಸಿ ಕೈಮುಗಿದು ನಮಗೆ ಯಾವುದಾದರೂ ಒಂದು ನೊಂಪಿಯ ವಿಧಾನದ ಬಗ್ಗೆ ತಿಳಿಸಲು ಕೇಳಿಕೊಂಡಾಗ ಮುನೀಂದ್ರರು ಹನ್ನೊಂದನೇ ತೀರ್ಥಂಕರರಾದ ಶ್ರೇಯಾಂಸನಾಥರ ಯಕ್ಷಿ ಗೌರಿದೇವಿಯ ನೊಂಪಿಯ ವಿಧಾನವನ್ನು ತಿಳಿಸಿದರು. ಭಾದ್ರಪದ ಶುದ್ಧ ತೆದಿಗೆಯಂದು ಶುಚಿರ್ಭೂತರಾಗಿ, ಶುದ್ಧ ವಸ್ತ್ರ ತೊಟ್ಟು, ದಿವ್ಯಾಭರಣಗಳನ್ನು ಧರಿಸಿ ಪೂಜಾದ್ರವ್ಯಗಳ ಸಹಿತವಾಗಿ ಜಿನಾಲಯಕ್ಕೆ ಬಂದು ಈಶ್ವರ ಯಕ್ಷ ಗೌರಿಯಕ್ಷಿದೇವಿ ಸಹಿತವಾಗಿ ಇರುವ ಶ್ರೇಯಾಂಸ ಜಿನೇಶ್ವರರಿಗೆ ಪಂಚಾಮೃತ ಅಭಿಷೇಕ ಮತ್ತು ಅಷ್ಟವಿಧಾರ್ಚನೆಯನ್ನು ಮಾಡಿ ನಂತರ ಶಾಸ್ತ್ರ ಗುರು ಶ್ರುತದೇವಿಯರಿಗೆ ಪೂಜೆಯನ್ನು ಸಲ್ಲಿಸಿ, ಯಕ್ಷಿಯಾದ ಗೌರಿದೇವಿಗೆ ಬಾಗಿನ, ಬೆಲ್ಲದ ಅಚ್ಚು, ಬಾಳೆಹಣ್ಣು, ತೆಂಗಿನಕಾಯಿ ಕಡಲೆ, ಹೊಙಗುನೂಲು, ಕರಿಮಣಿ, ಗಂಧ ಚಂದ್ರ ಚಿಗುಳಿ ತಂಬಿಟ್ಟು, ಅಲ್ಲದೇ ಹದಿನಾರು ಭಕ್ಷ, ಹದಿನಾರು ಅಡಕೆ, ಹದಿನಾರು ಎಲೆ, ಫಲಗಳು, ಅಕ್ಷತೆ, ಪುಷ್ಟ ಸಹಿತವಾಗಿ ಹೊಸಮೊರದಲ್ಲಿ ಇಟ್ಟು ಮೂರು ನೂಲನ್ನು ಸುತ್ತಿ ಗೌರಿದೇವಿಗೆ ಬಾಗಿನ ಅರ್ಪಿಸಬೇಕು. ಹೀಗೆ ಬಾಗಿನ ಅರ್ಪಿಸುವಾಗ ಈ ಮಂತ್ರ ಭಕ್ತಿಯಿಂದ ಶುದ್ಧ ಭಾವನೆಯಿಂದ ಹೇಳಬೇಕು" "ಓಂ ಹ್ರೀಂ ದಾತೃಭಿರಭೀಪ್ಸಿತ ಫಲದೇಭ್ಯಃ ಸ್ವಾಹ". ಎಂದು ಅರ್ಘ್ಯ ಕೊಟ್ಟು ಗೌರಿದೇವಿ ಮತ್ತು ಶ್ರುತದೇವಿಯರನ್ನು ಪೂಜಿಸಬೇಕು. ಬಾಗಿನಗಳಲ್ಲಿ ಗೌರಿದೇವಿ, ಶ್ರುತದೇವಿಯರಿಗೆ ನೀಡಿ ಮೂರು/ಎರಡು/ಒಂದು ಬಾಗಿನವನ್ನಾದರೂ ಮುತ್ತೈದೆಯರಿಗೆ ನೀಡಿ ನಮಸ್ಕಾರ ಮಾಡಬೇಕು. ಆನಂತರ ಕ್ಷೇತ್ರದಲ್ಲಿ ಮುನಿಗಳಿದ್ದರೆ ಅಹಾರ ಧಾನ ಮಾಡಬೇಕು. ಮರುದಿನ ಶ್ರೇಯಾಂಸ ತೀರ್ಥಂಕರರ ಅಭಿಷೇಕ ಪೂಜೆ ಮಾಡಿ, ಅಷ್ಟವಿಧಾರ್ಚನೆ ಮಾಡಿ, ಬ್ರಹ್ಮಯಕ್ಷ, ಈಶ್ವರ ಯಕ್ಷ, ಪದ್ಮಾವತಿ, ಶ್ರುತದೇವಿಯರಿಗೆ ಹಾಗೂ ಗೌರಿದೇವಿಯರಿಗೆ ಅನೇಕ ಫಲಪುಷ್ಪ ನೈವ್ಯೇದ್ಯಗಳಿಂದ ಪೂಜಿಸಬೇಕು. ಆ ದಿನ ಒಂದು ಹೊತ್ತು ಆಹಾರ ಸೇವಿಸಬೇಕು. ಹಾಗೂ ಯಥಾಶಕ್ತಿ ಧಾನ ಮಾಡಬೇಕು. ಅನಂತರ ಯಥಾಶಕ್ತಿ ಅನುಸಾರ ಉದ್ಯಾಪನೆ ಮಾಡಬೇಕು. ಇದರಿಂದಾಗಿ ಮನೆಯಲ್ಲಿ ಮತ್ತು ಮನದಲ್ಲಿ ಎಲ್ಲಾ ರೀತಿಯ ದೋಷ ನಿವಾರಣೆಯಾಗಿ ಸಕಲ ಪಾಪಗಳು ದೂರವಾಗಿ ಕುಟುಂಬ, ಮನೆ, ನಾಡು, ರಾಜ್ಯದಲ್ಲಿ ಸಮೃದ್ಧತೆ ಉಂಟಾಗುತ್ತದೆ. ಎಂದು ಮುನೀಂದ್ರರು ಹೇಳಲು ಅದರಿಂದ ಪ್ರೇರಿತರಾದ ರಾಣಿ ಶ್ರೇಯೋಮತಿ ತಾನು ಕೈಗೊಂಡು ತನ್ನ ರಾಜ್ಯದಲ್ಲಿ ಗೌರಿ ನೊಂಪಿಯ ಮಗನು ಮಾಡಲು ಆಜ್ಞೆಯನ್ನು ನೀಡಲು ಉಜ್ಜಯಿನಿ ತುಂಬಾ ಸಂಭ್ರಮದಿಂದ ಗೌರಿನೊಂಪಿಯನ್ನು ಎಲ್ಲರೂ ಆಚರಿಸಿ ಸಮೃದ್ಧತೆಯನ್ನು ಕಂಡರು. ಹೀಗೆ ಗೌರಿ ನೊಂಪಿಯು ಜೈನರಲ್ಲಿ ಆಚರಣೆಗೆ ಬಂತು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img