ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಪಿತೃದೇವೋಭವ ಕಾರ್ಯಕ್ರಮ
Published Date: 17-Jun-2025
ಮೂಡುಬಿದಿರೆ: ನಾವೆಲ್ಲಾ ಅಪ್ಪ ಎಂದರೆ ಪ್ರೀತಿ ಮಾಡುತ್ತೇವೆ. ನಮ್ಮ ಎಲ್ಲಾ ತಪ್ಪುಗಳನ್ನು ತಿದ್ದಿ ಸರಿದಾರಿಗೆ ತರುವ ಹೀರೋ ಅಪ್ಪ. ಅಮ್ಮನಿಂದ ಜೀವ ಲಭಿಸಿದರೆ, ಅಪ್ಪನಿಂದ ಜೀವನ ಲಭಿಸುತ್ತದೆ. ನಮ್ಮ ಧೈರ್ಯವೇ ಅಪ್ಪನ ಕೈ ಬೆರಳು. ಅಪ್ಪನ ಹೆಗಲ ಮೇಲೆ ಮಲಗಿದಾಗ ಆಗುವ ಆನಂದ ಮತ್ತೆಲ್ಲಿಯೂ ಸಿಗುವುದಿಲ್ಲ. ಅಪ್ಪ ನಮ್ಮ ಕಣ್ಣ ಮುಂದಿರುವ ನಿಜವಾದ ದೇವರು. ಅಪ್ಪನಿಂದ ಜೀವನದಲ್ಲಿ ಶಿಸ್ತು, ಬದುಕುವ ಕಲೆ ಎಲ್ಲವನ್ನೂ ಮಕ್ಕಳು ಕಲಿಯುತ್ತಾರೆ. ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಹೇಳಿದರು. ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ತಂದೆಗೆ ಗೌರವ ಸಲ್ಲಿಸುವ ವಿನೂತನ “ಪಿತೃ ದೇವೋಭವ” ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಮಾತನಾಡಿ, ತಂದೆಯೇ ನನಗೆ ದೇವರು. ತಂದೆಯೇ ನನ್ನ ಖುಷಿ, ಸಂತಸ ಎಲ್ಲವೂ ಆಗಿದ್ದಾರೆ. ಅವರ ಮಮತೆ, ಮಾರ್ಗದರ್ಶನ ಮತ್ತು ತಾಳ್ಮೆ ನನ್ನ ಜೀವನವನ್ನು ಬೆಳಗಿಸುತ್ತಿವೆ. ಅವರು ಬೋಧಿಸಿದ ಪ್ರತೀ ಪಾಠ, ತೋರಿಸಿದ ಪ್ರತೀ ದಾರಿಯಲ್ಲಿ ನಾ ನನ್ನ ಕನಸುಗಳನ್ನು ಸಾಕಾರಗೊಳಿಸಿಕೊಂಡು ಸಾಗುತ್ತಿದ್ದೇನೆ. ನನ್ನ ಕನಸುಗಳಿಗೆ ಚೆನ್ನಾಗಿ ನಿಂತು ನಾ ಓಡಿದಾಗ ಹಿಂದೆಯೇ ಓಡಿ ನೀಡಿದ ಆಶೀರ್ವಾದಗಳ ನೆರಳನ್ನು ನಾನು ಇಂದಿಗೂ ಅನುಭವಿಸುತ್ತಿದ್ದೇನೆ. ತಂದೆ ಮಕ್ಕಳ ನಡುವಿನ ಪ್ರೀತಿ, ಒಲುಮೆ, ಭಾಂದವ್ಯ ಎಂದಿಗೂ ಮರೆಯಲಾಗದು. ಮಕ್ಕಳಾದ ನಾವು ನಮ್ಮ ತಂದೆಯ ನೋವು-ನಲಿವುಗಳೆಲ್ಲವೂ ತಿಳಿದಿರಬೇಕು. ಅವರ ಪ್ರತೀ ಹೆಜ್ಜೆಯಲ್ಲಿಯೂ ನಾವೂ ಅವರ ಜೊತೆಯಾಗಿರಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳವರ ತಂದೆ ಹಾಗೂ ಟ್ರಸ್ಟಿಯೂ ಆಗಿರುವ ಕೆ. ರಾಜರತ್ನ ಜೈನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಬಿ. ಪಿ. ಸಂಪತ್ ಕುಮಾರ್, ಮುಖ್ಯೋಪಾಧ್ಯಾ ಯರಾದ ಶಿವಪ್ರಸಾದ್ ಭಟ್, ಉಪ ಮುಖ್ಯೋಪಾಧ್ಯಾಯ ಜಯ ಶೀಲ, ಕಾರ್ಕಳದ ಸೂಪರ್ ಮಾರ್ಕೆಟ್‌ನ ಮಾಲಿಕರಾದ ರೂಪೇಶ್ ಉಪಸ್ಥಿತರಿದ್ದರು. ನಂತರ ತಂದೆಯ ಮಹತ್ವವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳಾದ ಧನುಷ್ ನಿರೂಪಿಸಿದರು. ಸಾನ್ವಿ ಸ್ವಾಗತಿಸಿದರು. ವರುಣ್ ವಂದಿಸಿದರು.