ಪ್ರೋ. ಪದ್ಮಾಶೇಖರ್ ಅವರಿಗೆ ಸಿದ್ಧಾಂತಕೀರ್ತಿ ಪ್ರಶಸ್ತಿ
Published Date: 15-Mar-2025
ಹೊಂಬುಜ ಜೈನ ಮಠದಿಂದ ನೀಡುವ 2025ನೇ ಸಾಲಿನ ಸಿದ್ಧಾಂತಕೀರ್ತಿ ಪ್ರಶಸ್ತಿಯನ್ನು ವಿಶ್ರಾಂತ ಕುಲಪತಿ, ಸಾಹಿತಿ, ಪ್ರೋ. ಪದ್ಮಾಶೇಖರ್ ಅವರಿಗೆ ವಾರ್ಷಿಕ ಮಹಾರಥೋತ್ಸವ ಮುನ್ನಾ ದಿನವಾದ ಮಾ.21 ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ತಿಳಿಸಿದ್ದಾರೆ. ಈ ಪ್ರಶಸ್ತಿಯು 51 ಸಾವಿರ ರೂ. ನಗದು ಒಳಗೊಂಡಿದೆ. ಕವಯತ್ರಿ, ಲೇಖಕಿ, ಸಂಶೋಧಕಿ, ಪ್ರಾಧ್ಯಾಪಕಿ, ಆಡಳಿತಗಾರ್ತಿ, ವಿಮರ್ಶಕಿ ಹಾಗೂ ಮಹಿಳಾ ಪರ ಹೋರಾಟಗಾರ್ತಿಯಾಗಿ ಪ್ರೊ. ಪದ್ಮಾ ಶೇಖರ್ ಬಹುಮುಖ ಸಾಧನೆ ಮಾಡಿದ್ದಾರೆ. ವಿಮರ್ಶೆ, ಸಂಶೋಧನೆ, ಕಾವ್ಯ, ಜೀವನಚರಿತ್ರೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಪಿಎಚ್.ಡಿ ಸಂಶೋಧಕರಿಗೆ ಮಾರ್ಗದರ್ಶನ ಮಾಡಿದ್ದಾರೆ. ಇವರ ನೇತೃತ್ವದಲ್ಲಿ ಆರು ಸಾವಿರಕ್ಕೂ ಹೆಚ್ಚು ಪ್ರಾಚೀನ ತಾಳೆಪತ್ರಗಳನ್ನು ಡಿಜಟಲೀಕರಣ ಮಾಡಲಾಗಿದೆ. ಈಗಾಗಲೇ ಇವರಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ವಿಠಲಾನುಗ್ರಹ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಆದರ್ಶ ಮಹಿಳಾ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ. ಪ್ರಸ್ತುತ ಇವರು ಮೈಸೂರಿನಲ್ಲಿ ನೆಲೆಸಿರುತ್ತಾರೆ.