ಎಕ್ಸಲೆಂಟ್: ಸಂಸ್ಕೃತ ಉತ್ಸವ


Logo

Published Date: 08-Sep-2026

ಮೂಡುಬಿದಿರೆ: ಭಾರತೀಯ ಸಂಸ್ಕೃತಿಯ ಜೀವನಾಡಿಯಾಗಿ, ಜ್ಞಾನದ ಅನಂತ ಸೆಲೆಯಾಗಿ, ಸಾವಿರಾರು ವರ್ಷಗಳ ಚಿಂತನೆ–ಚೈತನ್ಯವನ್ನು ತನ್ನ ಒಡಲಲ್ಲಿ ಪೋಷಿಸಿಕೊಂಡು ಬಂದಿರುವ ಸಂಸ್ಕೃತವೆಂದರೆ ಕೇವಲ ಒಂದು ಭಾಷೆಯಲ್ಲ; ಅದು ಭಾರತದ ಸಾಂಸ್ಕೃತಿಕ ಸ್ಮೃತಿಯ ಅಮೂಲ್ಯ ನಿಧಿ. ವೇದಗಳಿಂದ ಉಪನಿಷತ್ತುಗಳವರೆಗೆ, ರಾಮಾಯಣ–ಮಹಾಭಾರತಗಳಿಂದ ಕಾಳಿದಾಸನ ಕಾವ್ಯಗಳವರೆಗೆ, ಭಾರತೀಯ ಜ್ಞಾನ ಪರಂಪರೆಯ ಹೆಜ್ಜೆ ಗುರುತಿನೊಂದಿಗೆ ಸಂಸ್ಕೃತದೊಂದಿಗೆ ಸಂಸ್ಕೃತಿ ಎಕ್ಸಲೆಂಟ್ ನಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ನಿರಂತರ ಹರಿಯುತ್ತಿದೆ ಎಂದು ಆಳ್ವಾಸ್ ಸ್ವಾಯತ್ತ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ವಿದ್ವಾನ್ ಗಾಳಿಮನೆ ವಿನಾಯಕ ಭಟ್ಟ ಅವರು ಹೇಳಿದರು. ಅವರು ಮೂಡುಬಿದರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಂಸ್ಕೃತ ಉತ್ಸವ ಉದ್ಘಾಟಿಸಿ ಮಾತನಾಡಿದರು. ಸಂಸ್ಕೃತ ಭಾಷೆಯ ವೈಶಿಷ್ಟ್ಯ, ಅದರ ವೈಜ್ಞಾನಿಕತೆ, ಸಾಹಿತ್ಯಿಕ ಶ್ರೀಮಂತಿಕೆ ಹಾಗೂ ಭಾರತೀಯ ಜೀವನಪದ್ಧತಿಯೊಂದಿಗಿನ ಅದರ ಅವಿನಾಭಾವ ಸಂಬಂಧವನ್ನು ವಿವರಿಸಿದರು. ಸಂಸ್ಕೃತದ ಅಧ್ಯಯನವು ಕೇವಲ ಭಾಷೆಯ ಕಲಿಕೆಯಾಗದೆ, ಭಾರತೀಯ ಜ್ಞಾನಪರಂಪರೆಯ ಆಳಕ್ಕೆ ಇಳಿಯುವ ಒಂದು ಸುಂದರ ಯಾತ್ರೆ. ಸಂಸ್ಕೃತದ ಪ್ರತಿಯೊಂದು ಪದದಲ್ಲಿಯೂ ಒಂದು ಪರಂಪರೆಯ ಉಸಿರಿದೆ; ಪ್ರತಿಯೊಂದು ಶ್ಲೋಕದಲ್ಲಿಯೂ ಒಂದು ಜೀವನದರ್ಶನವಿದೆ. ಇಂತಹ ಭಾಷೆಯ ಅಧ್ಯಯನವು ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೌಢಿಮೆಯ ಜೊತೆಗೆ ಸಂಸ್ಕೃತಿ, ಮೌಲ್ಯ ಮತ್ತು ಚಿಂತನೆಯ ಆಳವನ್ನು ಬೆಳೆಸುತ್ತದೆ ಎಂಬ ಸಂದೇಶವನ್ನು ಅವರು ವಿದ್ಯಾರ್ಥಿಗಳಿಗೆ ನೀಡಿದರು. ವಿದ್ಯೆಯ ನೆಲದಲ್ಲಿ ಸಂಸ್ಕೃತಿಯ ಬೀಜ ಬಿತ್ತುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮನದಲ್ಲಿ ತಮ್ಮ ಪರಂಪರೆಯ ಕುರಿತು ಹೆಮ್ಮೆ, ಭಾಷೆಯ ಕುರಿತು ಪ್ರೀತಿ ಹಾಗೂ ಭಾರತೀಯ ಜ್ಞಾನಸಂಪತ್ತಿನ ಕುರಿತು ಕುತೂಹಲವನ್ನು ಮೂಡಿಸುತ್ತವೆ. ಅಂಕಗಳಾಚೆಗಿನ ಬದುಕಿನ ಅರ್ಥವನ್ನು ಅರಿಯುವ ಶಿಕ್ಷಣಕ್ಕೆ ಇಂತಹ ಸಂಸ್ಕೃತೋತ್ಸವಗಳು ಸುಂದರ ಸೇತುವೆಯಾಗಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ರಶ್ಮಿತಾ ಜೈನ್ ಅವರು ಜ್ಞಾನ, ಸಂಸ್ಕೃತಿ ಮತ್ತು ಪರಂಪರೆಯ ಅಮೂಲ್ಯ ನಿಧಿ ಸಂಸ್ಕೃತ. ಭಾರತೀಯ ಆಚಾರ-ವಿಚಾರ, ಮೌಲ್ಯಗಳು ಜೀವನ ಪಥದರ್ಶಕ ಚಿಂತನೆಗಳು ಸಂಸ್ಕೃತದಲ್ಲಿ. ಏಕಾಗ್ರತೆ, ತಾರ್ಕಿಕ ಚಿಂತನೆ, ಭಾಷಾ ಕೌಶಲ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕೃತ ಸಹಕಾರಿ. ಭಾಷೆಗಳಿಗೆ ಮಾತೆ, ಸಂಸ್ಕೃತಿಯ ಬೇರು ಸಂಸ್ಕೃತ. ಸಂಸ್ಕೃತ ದೇವಭಾಷೆ ಮಾತ್ರವಲ್ಲ ಅದು ನಮ್ಮ ಭಾವನೆಗಳಿಗೆ ಅಭಿವ್ಯಕ್ತಿಯಾಗಿ ಹೃದಯವನ್ನು ಸ್ಪರ್ಶಿಸುವ ಭಾವ ಭಾಷೆಯೂ ಹೌದು ಎಂದರು. ಇದೇ ಸಂದರ್ಭದಲ್ಲಿ ಕಳೆದ ವರ್ಷ ಸಂಸ್ಕೃತ ಭಾಷೆಯಲ್ಲಿ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಸ್ಮರಣಕ್ಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಸುನಾದ್ ರಾಜ್ ಜೈನ್, ತೇಜಸ್ವಿ ಭಟ್ಟ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಿವಪ್ರಸಾದಭಟ್ಟ ಹಾಗೂ ಅಧ್ಯಾಪಕರಾದ ಪಾರ್ಶ್ವನಾಥ ಜೈನ್ ಉಪಸ್ಥಿತರಿದ್ದರು. ಹಿಮಾನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img