ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಶಿಕ್ಷಕರ ದಿನಾಚರಣೆ
Published Date: 07-Sep-2026
ಮೂಡುಬಿದಿರೆ: ಒಂದು ಪೀಳಿಗೆಗೆ ಪಾಠ ಹೇಳುವವರು ಶಿಕ್ಷಕರಲ್ಲ; ಒಂದು ಪೀಳಿಗೆಯ ಬದುಕಿನ ದಿಕ್ಕನ್ನೇ ರೂಪಿಸುವವರು. ತರಗತಿಯ ನಾಲ್ಕು ಗೋಡೆಗಳೊಳಗೆ ನಡೆಯುವ ಬೋಧನೆ, ನಾಳಿನ ಸಮಾಜದ ನಿರ್ಮಾಣಕ್ಕೆ ಹಾಕುವ ಭದ್ರ ಬುನಾದಿ. ಜ್ಞಾನಕ್ಕೆ ವಿವೇಕದ ಸ್ಪರ್ಶ ನೀಡಿ, ಪ್ರತಿಭೆಗೆ ರೆಕ್ಕೆ ಕಟ್ಟಿ, ವ್ಯಕ್ತಿತ್ವಕ್ಕೆ ಮೌಲ್ಯದ ರೂಪ ನೀಡುವ ಶಿಕ್ಷಕರು ಭವ್ಯ ಭವಿಷ್ಯ ದಿನ ಭದ್ರ ರೂವಾರಿಗಳು ಅವರಿಗೆ ಕೃತಜ್ಞತೆಯ ನಮನ ಸಲ್ಲಿಸುವ ಶಿಕ್ಷಕರ ದಿನಾಚರಣೆ ವಿದ್ಯಾರ್ಥಿಗಳ ಪಾಲಿಗೆ ನಿಜ ಅರ್ಥದ ಯಜ್ಞ ಎಂದು ಕರ್ನಾಟಕ ಸರ್ಕಾರದ ಮಾಜಿ ಸಚಿವರು ,ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷ ಅಭಯಚಂದ್ರ ಜೈನ್ ಹೇಳಿದರು. ಅವರು ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಸಂಭ್ರಮ, ಗೌರವ ಹಾಗೂ ಅರ್ಥಪೂರ್ಣತೆಯಿಂದ ನಡೆದ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ದೇಶ ಕಂಡ ಶ್ರೇಷ್ಠ ಶಿಕ್ಷಕ, ತತ್ವಜ್ಞಾನಿ ಹಾಗೂ ಭಾರತದ ಮಾಜಿ ರಾಷ್ಟ್ರಪತಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜೀವನಾದರ್ಶಗಳು ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರೇರಣೆಯಾಗಬೇಕು ಎಂದರು. ಶಿಕ್ಷಕ ಕೇವಲ ಪಠ್ಯ ಬೋಧಿಸುವ ವ್ಯಕ್ತಿಯಲ್ಲ; ವಿದ್ಯಾರ್ಥಿಯೊಳಗಿನ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ದಿಕ್ಕು ತೋರಿಸಿ, ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಶಿಲ್ಪಿ. ಶಿಕ್ಷಕ ವೃತ್ತಿಯ ಘನತೆ ಮತ್ತು ಶಿಕ್ಷಣದ ಮಹತ್ವವನ್ನು ರಾಧಾಕೃಷ್ಣನ್ ಅವರ ಬದುಕಿನಿಂದ ಅರಿತುಕೊಂಡು, ಶಿಕ್ಷಕರ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ. ಕಾಲೇಜು ಉಜಿರೆಯ ನಿವೃತ್ತ ಎಂ.ಸಿ.ಜೆ. ವಿಭಾಗದ ಮುಖ್ಯಸ್ಥ ಭಾಸ್ಕರ್ ಹೆಗ್ಡೆ, ಪುತ್ತೂರು ವಿವೇಕಾನಂದ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಹರೀಶ್ ಶಾಸ್ತ್ರಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಿರಂಜನ್ ಎ., ಉಡುಪಿಯ ಶಾರದಾ ವಸತಿ ಶಾಲೆಯ ಪ್ರಾಂಶುಪಾಲ ವಿನ್ಸೆಂಟ್ ಹಾಗೂ ಬೆಳ್ತಂಗಡಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಅಧ್ಯಾಪಕಿ ಪೂರ್ಣಿಮಾ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಸನ್ಮಾನಿತರು, ಶಿಕ್ಷಕ ವೃತ್ತಿ ಸಮಾಜದ ಭವಿಷ್ಯ ರೂಪಿಸುವ ಅತ್ಯಂತ ಜವಾಬ್ದಾರಿಯುತ ವೃತ್ತಿಯಾಗಿದ್ದು, ಜ್ಞಾನದ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಶಿಸ್ತು, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಬೇಕು ಎಂದರು. ಅಂಕಗಳ ಸಾಧನೆಯಷ್ಟೇ ಮುಖ್ಯವಲ್ಲ; ಪ್ರಶ್ನಿಸುವ ಮನೋಭಾವ, ವಿಷಯವನ್ನು ಅರ್ಥೈಸಿಕೊಂಡು ಕಲಿಯುವ ಆಸಕ್ತಿ, ವೈಜ್ಞಾನಿಕ ಚಿಂತನೆ ಹಾಗೂ ನಿರಂತರ ಪರಿಶ್ರಮ ವಿದ್ಯಾರ್ಥಿಗಳ ಯಶಸ್ಸಿನ ಬುನಾದಿಯಾಗಬೇಕು ಎಂದು ಸಲಹೆ ನೀಡಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪಷ್ಟ ಗುರಿ ಹೊಂದಿ ಸಮಯದ ಸದುಪಯೋಗಪಡಿಸಿಕೊಂಡು, ಶಿಕ್ಷಕರ ಮಾರ್ಗದರ್ಶನವನ್ನು ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು ಎಂದರು. ಶಿಕ್ಷಣದ ಗುರಿ ಕೇವಲ ಉದ್ಯೋಗವಲ್ಲ, ಉತ್ತಮ ಚಿಂತನೆ ಮತ್ತು ಗುಣನಡತೆಯುಳ್ಳ ವ್ಯಕ್ತಿಗಳನ್ನು ರೂಪಿಸುವುದಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತು ಆತ್ಮವಿಶ್ವಾಸದಿಂದ ಮುನ್ನಡೆದರೆ ಯಾವುದೇ ಗುರಿಯನ್ನೂ ಸಾಧಿಸಬಹುದು ಎಂದು ಪ್ರೇರೇಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಸಂಸ್ಥೆಯ ಶೈಕ್ಷಣಿಕ ಪ್ರಗತಿಯ ಹಿಂದೆ ಶಿಕ್ಷಕರ ಸಮರ್ಪಣೆ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಮಹತ್ತರ ಪಾತ್ರ ವಹಿಸಿದೆ ಎಂದರು. “ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಶಿಕ್ಷಕರು ಸದಾ ನೆನಪಿನ ಅಂಗಳದಲ್ಲಿ ಉಳಿಯುತ್ತಾರೆ. ಸಂಸ್ಥೆಯ ಯಶಸ್ಸು ಕಟ್ಟಡಗಳ ಎತ್ತರದಿಂದಲ್ಲ, ಅದನ್ನು ಕಟ್ಟುವ ಶಿಕ್ಷಕರ ಸಮರ್ಪಣೆ ಮತ್ತು ವಿದ್ಯಾರ್ಥಿಗಳ ಸಾಧನೆಯಿಂದ ನಿರ್ಧಾರವಾಗುತ್ತದೆ” ಎಂದ ಅವರು, ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು, ಗುರಿ ನಿಗದಿಪಡಿಸಬೇಕು ಹಾಗೂ ಅದನ್ನು ಸಾಧಿಸಲು ನಿರಂತರ ಶ್ರಮಿಸಬೇಕು ಎಂದು ಕರೆ ನೀಡಿದರು. ಶಿಕ್ಷಕರ ಮಾರ್ಗದರ್ಶನ, ಶಿಸ್ತು ಹಾಗೂ ಉತ್ತಮ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಂಸ್ಥೆ ಹಾಗೂ ಸಮಾಜಕ್ಕೆ ಹೆಮ್ಮೆ ತರುವ ವ್ಯಕ್ತಿಗಳಾಗಿ ಬೆಳೆಯುವಂತೆ ಹಾರೈಸಿದರು. ಇದೇ ಸಂದರ್ಭದಲ್ಲಿ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ವಿಷಯವಾರು ಶೇ.100ರಷ್ಟು ಫಲಿತಾಂಶ ಹಾಗೂ ನೂರಕ್ಕೆ ನೂರು ಅಂಕಗಳ ಸಾಧನೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ ವಿಷಯವಾರು ಅಧ್ಯಾಪಕರನ್ನು ಗೌರವಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪುಷ್ಪರಾಜ್, ಸುಖಪುರಂ ಪ್ರಾಂಶುಪಾಲ ಸುನಾದ್ ರಾಜ್, ತೇಜಸ್ವಿ ಭಟ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್, ಉಪಮುಖ್ಯೋಪಾಧ್ಯಾಯ ಜಯಶೀಲ, ಸಿಬಿಎಸ್‌ಇ ವಿಭಾಗದ ಉಪಪ್ರಾಂಶುಪಾಲೆ ವಿಮಲಾ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ರಶ್ಮಿತಾ ಶೆಟ್ಟಿ ಹಾಗೂ ಚಶ್ಮಿತಾ ಎ. ಯಾದವ್ ನಿರೂಪಿಸಿದರು.