ಆಳ್ವಾಸ್: ಎರಡನೇ ಆವೃತ್ತಿಯ ಅಭಿಜ್ಞ ವಿಜ್ಞಾನ ಕಾರ್ಯಾಗಾರ


Logo

Published Date: 03-Sep-2026

ಮೂಡುಬಿದಿರೆ: ವಿಜ್ಞಾನವನ್ನು ಪಠ್ಯಪುಸ್ತಕದ ಕಲಿಕೆಗೆ ಸೀಮಿತಗೊಳಿಸದೆ, ಪ್ರಯೋಗ, ಅನುಭವ ಮತ್ತು ಸಂಶೋಧನೆಯ ಮೂಲಕ ಅರ್ಥೈಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಉದ್ದೇಶದಿಂದ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗವು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಎರಡನೇ ಆವೃತ್ತಿಯ ‘ಅಭಿಜ್ಞ’ ವಿಜ್ಞಾನ ಕಾರ್ಯಾಗಾರವನ್ನು ಕುವೆಂಪು ಸಭಾಂಗಣದಲ್ಲಿ ಆಯೋಜಿಸಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ವಿಜ್ಞಾನವು ಕುತೂಹಲದಿಂದ ಕಲಿಯಬಹುದಾದ, ಪ್ರಯೋಗದ ಮೂಲಕ ಅರ್ಥಮಾಡಿಕೊಳ್ಳಬಹುದಾದ ಮತ್ತು ನೈಜ ಜೀವನದೊಂದಿಗೆ ಸಂಪರ್ಕ ಹೊಂದಿರುವ ಕ್ಷೇತ್ರವಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನ ವಿಭಾಗಗಳತ್ತ ಬರಬೇಕು. ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ಬಲಗೊಂಡಾಗ ದೇಶದ ಪ್ರಗತಿಗೂ ವೇಗ ದೊರೆಯುತ್ತದೆ. ವಿಜ್ಞಾನ ಬೆಳೆಯಬೇಕು, ದೇಶವೂ ಬೆಳೆಯಬೇಕು ಎಂದರು. ವಿಜ್ಞಾನ ಸೇರಿದಂತೆ ಯಾವುದೇ ಕ್ಷೇತ್ರವನ್ನು ಒತ್ತಾಯ ಅಥವಾ ಸಾಮಾಜಿಕ ಒತ್ತಡದಿಂದ ಆಯ್ಕೆ ಮಾಡಬಾರದು. ಆಸಕ್ತಿ ಮತ್ತು ಉತ್ಸಾಹ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಹೊಸತನವನ್ನು ಹುಡುಕಬಹುದು. ಸ್ಥಾಪಿತ ಮಾದರಿಯನ್ನೇ ಅನುಸರಿಸುತ್ತಾ ಹೋಗಬೇಡಿ. ನಿಮ್ಮದೇ ಆದ ದಾರಿಯನ್ನು ಕಂಡುಕೊಳ್ಳಿ. ಯಾವುದೇ ಕೋರ್ಸ್ ನಿಮಗೆ ಉದ್ಯೋಗವನ್ನು ಸೃಷ್ಟಿಸಿಕೊಡುವುದಿಲ್ಲ. ನೀವು ಕಲಿಯುವ ಕೋರ್ಸ್ ಗೆ ನಿಮ್ಮ ಜ್ಞಾನ, ಕೌಶಲ್ಯ ಮತ್ತು ಉದ್ದೇಶದ ಮೂಲಕ ಅರ್ಥ ನೀಡಬೇಕು. ಶಿಕ್ಷಣವು ಉದ್ದೇಶಪೂರ್ಣವಾಗಿರಬೇಕು ಎಂದರು. ಕಾರ್ಯಾಗಾರ ಮುಖ್ಯ ಸಂಪನ್ಮೂಲ ವ್ಯಕ್ತಿಯ ನೆಲೆಯಲ್ಲಿ ಮಾತನಾಡಿದ ಸುರತ್ಕಲ್‌ನ ಎನ್‌ಐಟಿಕೆಯ ರಸಾಯನಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಅರುಣ್ ಎಂ ಇಸ್ಲೂರ್, ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವು ಪ್ರಸ್ತುತ ಜಗತ್ತು ಎದುರಿಸುತ್ತಿರುವ ಪ್ರಮುಖ ಪರಿಸರ ಸವಾಲುಗಳಲ್ಲಿ ಒಂದಾಗಿದೆ. ಪರಿಸರದಲ್ಲಿ ಹೆಚ್ಚುತ್ತಿರುವ ಮೈಕ್ರೋಪ್ಲಾಸ್ಟಿಕ್‌ನ ಪರಿಣಾಮಗಳು ಮಾನವ ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ವೈಜ್ಞಾನಿಕ ಅಧ್ಯಯನ ಮತ್ತು ಜಾಗೃತಿ ಅಗತ್ಯವಿದೆ ಎಂದು ಹೇಳಿದರು. ವಿಜ್ಞಾನವು ಭವಿಷ್ಯ ರೂಪಿಸುವ ಅನೇಕ ಕ್ಷೇತ್ರಗಳಿಗೆ ದಾರಿ ಮಾಡಿಕೊಡುವುದರಿಂದ ವಿದ್ಯಾರ್ಥಿಗಳು ವಿಜ್ಞಾನವನ್ನು ಭಯದಿಂದ, ಒತ್ತಾಯದಿಂದ ಅಥವಾ ಇತರರನ್ನು ಅನುಸರಿಸಿ ಆಯ್ಕೆ ಮಾಡದೆ, ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಭವಿಷ್ಯದ ಅವಕಾಶಗಳನ್ನು ಅರಿತುಕೊಂಡು ಆಯ್ಕೆ ಮಾಡಬೇಕು ಎಂದರು. ಒಂಬತ್ತು ವಿಜ್ಞಾನ ವಿಭಾಗಗಳಲ್ಲಿ ಪ್ರಾಯೋಗಿಕ ಕಲಿಕೆ ಕಾರ್ಯಾಗಾರದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಳ್ವಾಸ್ ಕಾಲೇಜಿನ ವಿವಿಧ ವಿಜ್ಞಾನ ವಿಭಾಗಗಳಲ್ಲಿ ಹ್ಯಾಂಡ್ಸ್-ಆನ್ ತರಬೇತಿ ನೀಡಲಾಯಿತು. ಜೈವಿಕ ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ ಹಾಗೂ ಸಂಖ್ಯಾಶಾಸ್ತ್ರ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಕಾರ್ಯಗಾರದಲ್ಲಿ ಅವಿಭಜಿತ ದಕ್ಷಿಣ ಕನ್ನಡದ ವಿವಿಧ ಶಿಕ್ಷಣ ಸಂಸ್ಥೆಗಳಿಂದ 212 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ವಿಜ್ಞಾನ ವಿಭಾಗದ ಡೀನ್ ರಮ್ಯಾ ರೈ ವಿದ್ಯಾರ್ಥಿ ಸಂಯೋಜಕರಾದ ತೇಜಸ್ ಡಿ. ಪೂಜಾರಿ ಹಾಗೂ ಗಣೇಶ್ ಹೆಗಡೆ ಉಪಸ್ಥಿತರಿದ್ದರು. ಉಪನ್ಯಾಸಕರಾದ ಪವಿತ್ರಾ ಹಾಗೂ ನಿಶಾ ಕೆ. ಎಂ ಕಾರ್ಯಕ್ರಮ ಸಂಯೋಜಿಸಿದರು. ತೇಜಸ್ ಡಿ. ಪೂಜಾರಿ ಸ್ವಾಗತಿಸಿ, ಖುಷಿ ಮಣ್ಣೂರು ನಿರೂಪಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img