ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ವತಿಯಿಂದ ಸ್ಕಾಲರ್ ಶಿಪ್ ವಿತರಣೆ
ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಂಸ್ಥೆಗಳು ರೋಟರಿ ಕ್ಲಬ್ ಬೆಂಗಳೂರು ಇಂದಿರಾ ನಗರ ಹಾಗೂ ರೋಟರಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ತಾಲೂಕಿನ ಒಟ್ಟು 151 ವಿದ್ಯಾರ್ಥಿಗಳಿಗೆ ರೂ. 10,000ದಂತೆ ಒಟ್ಟು ರೂ. 15,10,000 ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸುತ್ತಿದೆ. ಬೆಳ್ತಂಗಡಿಯಲ್ಲಿರುವ ರೋಟರಿ ಸಭಾಭವನದಲ್ಲಿ ಇದೇ ಸೆಪ್ಟೆಂಬರ್ 21 ರಂದು ಶನಿವಾರ ಮಧ್ಯಾಹ್ನ 2:30ಕ್ಕೆ ಸರಿಯಾಗಿ ಈ ಸಮಾರಂಭ ನಡೆಯಲಿದೆ. ಬೆಳ್ತಂಗಡಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳಾದ ಎಸ್.ಡಿ.ಎಂ, ವಾಣಿ ಮತ್ತು ಅನುಗ್ರಹ ಪದವಿಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಶೇಕಡಾ 90ಕ್ಕಿಂತ ಅಧಿಕ ಅಂಕ ಗಳಿಸಿರುವ, ಆರ್ಥಿಕವಾಗಿ ಅವಶ್ಯಕವಿರುವ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಈ ಸ್ಕಾಲರ್ ಶಿಪ್‌ನ ಪ್ರಯೋಜನ ದೊರೆಯಲಿದೆ. ಇದರಿಂದ ಆರ್ಥಿಕವಾಗಿ ಅಗತ್ಯವಿರುವ ವಿದ್ಯಾ ರ್ಥಿಗಳಿಗೆ ಸಹಾಯವಾಗಲಿದೆ. ಪ್ರತಿಷ್ಠಿತ ಹೌಸಿಂಗ್ ಫೈನಾನ್ಸ್ ಕಂಪನಿಯಾದ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್‌ನ ಮೂಲಕ ಬೆಳ್ತಂಗಡಿ ಪರಿಸರದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಮೊತ್ತವನ್ನು ದೇಣಿಗೆಯಾಗಿ ನೀಡಲಾಗುತ್ತಿದೆ. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಂಸ್ಥೆಯ ಉಪಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಜೋಶಿ ಪಾಲ್ಗೊಳ್ಳಲಿದ್ದಾರೆ. ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ರೋ. ವಿಕ್ರಮದತ್ತ, ರೋಟರಿ ಕ್ಲಬ್ ಬೆಂಗಳೂರು ಇಂದಿರಾ ನಗರ ರೋ. ಪಿಯೂಶ್ ಜೈನ್, ರೋ. ಜಗದೀಶ್ ಮುಗಳಿ, ರೋ. ಮೊಹಮ್ಮದ್ ವಲವೂರ್, ರೋ. ಮನೋರಮಾ ಭಟ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಬೆಳ್ತಂಗಡಿ ರೋಟರಿ ಕ್ಲಬ್ ಕಳೆದ ಅನೇಕ ವರ್ಷಗಳಿಂದ ಈ ಸ್ಕಾಲರ್ಶಿಪ್ ವಿತರಣೆ ಮಾಡುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯದಲ್ಲಿ ನಿರತವಾಗಿದೆ. ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಪೂರನ್ ವರ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
